ಚಾರಿತ್ರಿಕ ರೈತಾಪಿ ಚಳವಳಿ ದೇಶಕ್ಕೆ ಹೇಳುತ್ತಿರುವ ಕ್ರಿಯಾತ್ಮಕ ಪಾಠಗಳು

Update: 2021-09-27 19:30 GMT
Photo source: PTI

ಬ್ರಿಟಿಷರು ಭಾರತ ಬಿಟ್ಟು ಹೋದ ನಂತರದಲ್ಲಿ ಈ ಮಟ್ಟದ, ಇಷ್ಟೊಂದು ವ್ಯಾಪ್ತಿಯ ರೈತಾಪಿ ಚಳವಳಿ ನಡೆದ ಉದಾಹರಣೆ ಇಲ್ಲ. ಬ್ರಿಟಿಷರ ಕಾಲದಲ್ಲೂ ವಿವಿಧ ವರ್ಗ, ಧರ್ಮ, ಜಾತಿಗಳ ಹಿನ್ನೆಲೆಯ ರೈತಾಪಿಗಳು ಒಂದೇ ವೇದಿಕೆಯಡಿ ಒಗ್ಗೂಡುತ್ತಾ ಒಂದೇ ರೀತಿಯ ಹಕ್ಕೊತ್ತಾಯಗಳೊಂದಿಗೆ ಹಲವಾರು ಹೊಸ ಹೊಸ ಕ್ರಿಯಾಶೀಲತೆಗಳೊಂದಿಗೆ ನಿರಂತರವಾಗಿ ಈ ಮಟ್ಟದಲ್ಲಿ ಸುದೀರ್ಘವಾದ ಚಳವಳಿ ನಡೆಸಿದ ಉದಾಹರಣೆಯೂ ಇಲ್ಲ.


ದೇಶವಷ್ಟೇ ಅಲ್ಲದೆ ಜಾಗತಿಕವಾಗಿಯೇ ಭಾರೀ ಸಂಚಲನವನ್ನು ಸೃಷ್ಟಿಸುತ್ತಿರುವ ಪಂಜಾಬ್, ದಿಲ್ಲಿ, ಉತ್ತರ ಪ್ರದೇಶ, ಹರ್ಯಾಣ, ಮಧ್ಯಪ್ರದೇಶ ಮೊದಲಾದ ರಾಜ್ಯಗಳಲ್ಲಿ ಮೊದಲ್ಗೊಂಡು ದೇಶಾದ್ಯಂತ ನಡೆಯುತ್ತಿರುವ ರೈತ ಚಳವಳಿಗೆ ಈಗ ಹತ್ತು ತಿಂಗಳಾಯಿತು. ಇದು ಸಾಮಾನ್ಯವಾದ ವಿಚಾರವಲ್ಲ. ಆಳುವ ಸರಕಾರದ ಅಂಗಗಳ ಎಡೆಬಿಡದ ಕಿರುಕುಳಗಳು, ಅಡ್ಡಿಗಳು, ಒಡೆದು ಹಾಕುವ ದುಷ್ಟತನಗಳು ಮತ್ತು ದಮನಗಳ ನಡುವೆ ಇಷ್ಟೊಂದು ಸುದೀರ್ಘವಾಗಿ ಮತ್ತು ನಿರಂತರವಾಗಿ ಜನಚಳವಳಿಯೊಂದು ನಡೆಯುತ್ತಾ ಬಂದಿರುವುದು ಮಹತ್ವಪೂರ್ಣ ಚಾರಿತ್ರಿಕ ವಿಚಾರವಾಗಿದೆ. ಈ ಚಳವಳಿಯ ನಾಯಕತ್ವ ದೇಶಾದ್ಯಂತ ಸಂಚರಿಸುತ್ತಾ ರೈತಾಪಿಗಳು ಮತ್ತಿತರ ಜನಸಮೂಹಗಳನ್ನು ಸಂಘಟಿಸುತ್ತಾ ಸಾಗುತ್ತಿದೆ. ಕರ್ನಾಟಕಕ್ಕೂ ಬಂದು ರಾಜ್ಯದ ಹಲವಾರು ಕಡೆಗಳಲ್ಲಿ ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಯ ವಿಚಾರಗಳನ್ನು ತಲುಪಿಸಿದೆ.

ದೇಶದ ಆಳುವ ಶಕ್ತಿಗಳು ಬ್ರಿಟಿಷರ ನಂತರದ ಎಪ್ಪತ್ತ ಮೂರು ವರ್ಷಗಳು ಮತ್ತು ಜಾಗತೀಕರಣದ ಮೂವತ್ತು ವರ್ಷಗಳಲ್ಲಿ ದೇಶದ ಇಡೀ ರೈತಸಮುದಾಯವನ್ನು ತಲುಪಿಸಿರುವ ದುಸ್ಥಿತಿಗಳಿಗೆ ಹಿಡಿದ ಕೈಗನ್ನಡಿಯೂ ಇದಾಗಿದೆ. ಬ್ರಿಟಿಷರು ಭಾರತ ಬಿಟ್ಟು ಹೋದ ನಂತರದಲ್ಲಿ ಈ ಮಟ್ಟದ, ಇಷ್ಟೊಂದು ವ್ಯಾಪ್ತಿಯ ರೈತಾಪಿ ಚಳವಳಿ ನಡೆದ ಉದಾಹರಣೆ ಇಲ್ಲ. ಬ್ರಿಟಿಷರ ಕಾಲದಲ್ಲೂ ವಿವಿಧ ವರ್ಗ, ಧರ್ಮ, ಜಾತಿಗಳ ಹಿನ್ನೆಲೆಯ ರೈತಾಪಿಗಳು ಒಂದೇ ವೇದಿಕೆಯಡಿ ಒಗ್ಗೂಡುತ್ತಾ ಒಂದೇ ರೀತಿಯ ಹಕ್ಕೊತ್ತಾಯಗಳೊಂದಿಗೆ ಹಲವಾರು ಹೊಸ ಹೊಸ ಕ್ರಿಯಾಶೀಲತೆಗಳೊಂದಿಗೆ ನಿರಂತರವಾಗಿ ಈ ಮಟ್ಟದಲ್ಲಿ ಸುದೀರ್ಘವಾದ ಚಳವಳಿ ನಡೆಸಿದ ಉದಾಹರಣೆಯೂ ಇಲ್ಲ. ಬಿಡಿಬಿಡಿ ಹೋರಾಟಗಳು, ಬಿಡಿಬಿಡಿ ಹಕ್ಕೊತ್ತಾಯಗಳೊಂದಿಗೆ ನಡೆಯುತ್ತಿದ್ದವು ಅಷ್ಟೇ. ಅವುಗಳ ನಿರಂತರತೆಯೂ ಅಲ್ಪಾವಧಿಯಾಗಿದ್ದವು. ಈಗ ನಡೆಯುತ್ತಿರುವ ರೈತಾಪಿ ಹೋರಾಟದ ಸಾಮೂಹಿಕ ನಾಯಕತ್ವ ಸ್ಪಷ್ಟ ರಾಜಕೀಯ ಹಾಗೂ ವೈಚಾರಿಕ ಗ್ರಹಿಕೆಯೊಂದಿಗೆ ಉನ್ನತ ಮಟ್ಟದ ಪ್ರಜಾತಾಂತ್ರಿಕತೆಯನ್ನು ಸಾಧಿಸುತ್ತಾ ದೇಶದ ರೈತಾಪಿ ಇನ್ನಿತರ ಎಲ್ಲಾ ಜನಪರ ಹಾಗೂ ದೇಶಪರ ಶಕ್ತಿಗಳನ್ನು ಒಳಗೊಳ್ಳುವ ಮತ್ತು ಒಳಗೊಳಿಸಿಕೊಳ್ಳುವ ಕಾರ್ಯಮಾಡುತ್ತಾ ಮುಂದೆ ಸಾಗುತ್ತಿರುವುದರಿಂದಾಗಿ ಇದು ಸಾಧ್ಯವಾಗಿದೆ. ಹಕ್ಕೊತ್ತಾಯಗಳ ಪ್ರಧಾನ ವಿಚಾರಗಳಲ್ಲಿ ಈ ಸಾಮೂಹಿಕ ನಾಯಕತ್ವದ ಚಳವಳಿ ಯಾವುದೇ ರಾಜಿಗೂ ತಯಾರಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕೊಟ್ಟಿದೆ. ಇವು ಬಹಳ ಪ್ರಧಾನವಾದ ವಿಚಾರವಾಗಿವೆ. ಜನಚಳವಳಿಗಳು ಕಲಿಯಬೇಕಾದ ಪ್ರಧಾನ ಪಾಠ ಇದಾಗಿದೆ. ಸಾಮೂಹಿಕತೆ ಇಲ್ಲದೇ ಕೇವಲ ವ್ಯಕ್ತಿ, ಗುಂಪು, ಜಾತಿ, ಧರ್ಮ, ಚುನಾವಣಾ ಕೇಂದ್ರಿತವಾಗಿ ಚಳವಳಿ ಉಳಿದರೆ ಅದಕ್ಕೆ ಶಕ್ತಿಯೂ ಇರದು, ಬಹಳ ಕಾಲವೂ ನಿಲ್ಲದು, ಕೊನೆಗದು ಬೇರೆ ದಾರಿ ಇಲ್ಲದೆ ಆಳುವವರ ತೆಕ್ಕೆಗಳಿಗೆ ಹೋಗಿ ಸೇರುತ್ತವೆ, ಸ್ವಾರ್ಥ ಸಾಧಕರ ಸಾಧನವಾಗಿ ಮಾರ್ಪಡುತ್ತದೆ, ಜನರಿಗೆ ಹಾಗೂ ದೇಶಕ್ಕೆ ಎಸಗುವ ದ್ರೋಹವಾಗಿ ಮಾರ್ಪಡುತ್ತವೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಅಂತಹವುಗಳ ಕೆಟ್ಟ ಫಲಗಳನ್ನು ನಾವು ಈಗ ಅನುಭವಿಸುತ್ತಲೂ ಇದ್ದೇವೆ. ಆದರೆ ಈಗ ನಡೆಯುತ್ತಿರುವ ರೈತಾಪಿ ಚಳವಳಿ ಆಳುವ ಶಕ್ತಿಗಳು ಮತ್ತವರ ರಾಜಕೀಯ ಪಕ್ಷಗಳ ಎಲ್ಲಾ ರೀತಿಯ ಕುತಂತ್ರಗಳನ್ನು ಎದುರಿಸುತ್ತಾ ಅವರ ಬಲೆಯೊಳಗೆ ಬೀಳದೆ ತನ್ನ ಸಂಘಟಿತ ಶಕ್ತಿಯನ್ನು ಹಾಗೂ ಸಂಘಟಿತ ಪ್ರಭಾವವನ್ನು ಅಭಿವೃದ್ಧಿಪಡಿಸುತ್ತಾ ಸಾಗುತ್ತಿದೆ. ಹಾಗಾಗಿ ದೇಶಾದ್ಯಂತ ರೈತಾಪಿಗಳನ್ನು ಮತ್ತು ಇತರ ಸಮುದಾಯಗಳನ್ನು ಹಾಗೆಯೇ ಸಮಾಜಮುಖಿ ಜನಸಮೂಹವನ್ನು ಒಗ್ಗೂಡಿಸುತ್ತಾ ಸಾಗುತ್ತಿದೆ. ಇಂದು ಚುನಾಯಿತ ರೂಪದಲ್ಲಿ ಮತ್ತು ಸಾಂವಿಧಾನಿಕ ವ್ಯವಸ್ಥೆಯ ಭಾಗವಾಗಿಯೇ ದೇಶ ಫ್ಯಾಶಿಸ್ಟ್ ಹಿಡಿತಕ್ಕೆ ಹೋಗತೊಡಗಿದೆ. ಇಂತಹ ಸಂದರ್ಭದಲ್ಲೂ ಆಳುವ ಶಕ್ತಿಗಳಿಗೆ ಪ್ರಬಲವಾಗಿ ಸೆಡ್ಡು ಹೊಡೆದು ನಿಲ್ಲಬಹುದು ಎಂಬುದನ್ನು ರೈತ ಹೋರಾಟ ತೋರಿಸಿಕೊಡತೊಡಗಿದೆ. ಸರಿಯಾದ ಪ್ರಜಾತಾಂತ್ರಿಕ ನೆಲೆಗಟ್ಟಿನ ಮೇಲೆ ನಿಂತಿರುವ ಜಾತಿ, ಧರ್ಮ, ಲಿಂಗಭೇದಗಳನ್ನು ಬದಿಗೊತ್ತಿ ಸಾಮೂಹಿಕ ನಾಯಕತ್ವದಲ್ಲಿ ನಡೆಯುವ ಚಳವಳಿಯೊಂದನ್ನು ಸುಲಭವಾಗಿ ದಮನಿಸಲಾಗದು ಎಂಬ ಪಾಠವನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತಿದೆ. ಲಕ್ಷಾಂತರ ರೈತಾಪಿಗಳನ್ನು ದೇಶದ ರಾಜಧಾನಿಯ ಸುತ್ತ ಅಣಿನೆರೆಸಿ ಬಿಸಿಲು, ಮಳೆ, ಚಳಿಗೆ ಮೈಯೊಡ್ಡಿ ಹತ್ತು ತಿಂಗಳುಗಳಿಂದ ಧರಣಿ ನಡೆಸುತ್ತಿರುವುದು, ಚಳವಳಿಯ ಭಾಗವಾಗಿದ್ದ ನೂರಾರು ರೈತಾಪಿಗಳು ತಮ್ಮ ಪ್ರಾಣಗಳನ್ನೇ ಕಳೆದುಕೊಳ್ಳಬೇಕಾಗಿ ಬಂದರೂ ದೃಢವಾಗಿ ಚಳವಳಿ ಮುಂದೆ ಸಾಗುತ್ತಿರುವುದು, ಹೋರಾಟ ನಿರತ ರೈತಾಪಿಗಳಿಗೆ ಆಹಾರ, ನೀರು, ವೈದ್ಯೋಪಚಾರ, ತಾತ್ಕಾಲಿಕ ಶೆಡ್, ಗ್ರಂಥಾಲಯ, ಹೋರಾಟದ ಸುದ್ದಿಗಳ ವಿನಿಮಯಕ್ಕಾಗಿಯೇ ಪರ್ಯಾಯ ಮಾಧ್ಯಮ ವ್ಯವಸ್ಥೆ ಇತ್ಯಾದಿ ಸೌಲಭ್ಯಗಳನ್ನು ಒದಗಿಸುತ್ತಿರುವುದು, ಅಗತ್ಯ ಬೆಂಬಲ ಹಾಗೂ ಸರಬರಾಜನ್ನು ಒದಗಿಸುತ್ತಿರುವ ಹಳ್ಳಿಗಳ ಹಾಗೂ ನಗರ ಪ್ರದೇಶದ ಜನರ ಸಕ್ರಿಯ ಪಾತ್ರಗಳು, ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳು, ಸಾಮಾಜಿಕ ರಾಜಕೀಯ, ಆರ್ಥಿಕ ಚರ್ಚೆಗಳು, ಸಂವಾದಗಳ ಚಟುವಟಿಕೆಗಳು, ದೇಶದ ನಾನಾ ಭಾಗಗಳಿಂದ ಬಂದು ಚಳವಳಿಯಲ್ಲಿ ಪಾಲ್ಗೊಳ್ಳುತ್ತಿರುವುದು. ಹಾಗೆ ಬಂದ ಎಲ್ಲರಿಗೂ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಿರುವ ಸ್ವಯಂಸೇವಕರು, ಜೊತೆಗೆ ಕೃಷಿ ಕೆಲಸಗಳನ್ನೂ ಸಹಕಾರಿ ತತ್ವದಡಿ ಪಾಳಿಗಳಲ್ಲಿ ಎಲ್ಲರೂ ಸೇರಿ ಪೂರೈಸಿ ಹೋರಾಟ ಪ್ರದೇಶದಲ್ಲಿ ಬಂದು ಸೇರುವುದು...ಹೀಗೆ ಈ ಹೋರಾಟ ಕೊಡುತ್ತಿರುವ ಹೊಸಹೊಸ ಕ್ರಿಯಾತ್ಮಕ ವಿಚಾರಗಳು ದೊಡ್ಡ ಅಧ್ಯಯನ ಬಯಸುವ ವಿಷಯವಾಗಿ ಹೊರಹೊಮ್ಮಿದೆ. ಸಮಾಜ ವಿಜ್ಞಾನದ ಮಹತ್ವದ ಪಾಠವಾಗಿವೆ.
 
ಒಕ್ಕೂಟ ಸರಕಾರ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಒಪ್ಪಂದಗಳ ಭಾಗವಾಗಿ ಜಾರಿಗೆ ತಂದಿರುವ ಕೃಷಿ ಮಸೂದೆಗಳು ಪ್ರಧಾನವಾಗಿ ಈ ದೇಶದ ರೈತಾಪಿಗಳ ಎಲ್ಲಾ ಭೂಮಿಗಳನ್ನು ಭಾರೀ ಅಂತರ್‌ರಾಷ್ಟ್ರೀಯ ಕಾರ್ಪೊರೇಟ್ ಕಂಪೆನಿಗಳಿಗೆ ಯಾವುದೇ ಅಡೆತಡೆಯಿಲ್ಲದೆ ವರ್ಗಾಯಿಸಲು ಅನುಕೂಲ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ. ಅದನ್ನು ಸಾಧಿಸಲು ರೈತರಿಗೆ ಜಾಗತಿಕ ಮಾರುಕಟ್ಟೆ, ಕಾರ್ಪೊರೇಟ್ ಗುತ್ತಿಗೆ ಕೃಷಿಯ ಪೂರ್ಣ ಲಾಭ ನೇರವಾಗಿ ರೈತರಿಗೆ, ತಾವು ಬೆಳೆದದ್ದನ್ನು ಎಲ್ಲಿ ಬೇಕಾದರೂ ಮಾರುವ ಸ್ವಾತಂತ್ರ್ಯ, ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಗಳ ಹಂಗು ತೊಡೆಯುವುದು, ಬೆಲೆಯ ಖಾತರಿ ಇತ್ಯಾದಿ ಆಕರ್ಷಕ ಪದಪುಂಜಗಳ ಮೂಲಕ ರೂಪಿಸಿರುವ ಈ ಮಸೂದೆಗಳು ಈಗ ಕೃಷಿ ಭೂಮಿಯ ಬಗ್ಗೆ ಗಮನ ಕೇಂದ್ರೀಕರಿಸಿದ್ದರೂ ವಾಸ್ತವದಲ್ಲಿ ವಸತಿಪ್ರದೇಶಗಳು, ವಾಣಿಜ್ಯ ನಿವೇಶನಗಳು ಸೇರಿದಂತೆ ಈ ದೇಶದ ಎಲ್ಲಾ ಭೂಸಂಪತ್ತಿನ ಮೇಲೆ ಕಾರ್ಪೊರೇಟ್‌ಗಳಿಗೆ ಕಾನೂನಾತ್ಮಕವಾಗಿಯೇ ನೇರ ಹಿಡಿತ ಸಾಧಿಸಲು ಅನುವು ಮಾಡಿಕೊಡುವಂತಹವುಗಳಾಗಿವೆ. ದೇಶದ ಎಲ್ಲವನ್ನೂ ಭಾರೀ ಜಾಗತಿಕ ಕಾರ್ಪೊರೇಟ್‌ಗಳಿಗೆ ಮುಕ್ತಗೊಳಿಸಿ ಇಟ್ಟುಬಿಡುವ ಅಂತಿಮ ಹಂತದ ಜಾಗತೀಕರಣ ಪ್ರಕ್ರಿಯೆಗಳ ಭಾಗವಾಗಿವೆ. ಇದರಲ್ಲಿ ಭೂಮಿ ಕಳೆದುಕೊಳ್ಳುವವರು ಕೇವಲ ಬಡ, ಮಧ್ಯಮ ಹಾಗೂ ಶ್ರೀಮಂತ ರೈತರು ಮಾತ್ರವಲ್ಲ ದೊಡ್ಡ ಭೂಮಾಲಕರೂ ಭೂಮಿ ಕಳೆದುಕೊಳ್ಳಬೇಕಾಗುತ್ತದೆ. ಭಾರೀ ಕಾರ್ಪೊರೇಟ್‌ಗಳು ದೇಶದ ಎಲ್ಲಾ ಭೂಮಿಯ ಮೇಲೆ ಹಿಡಿತ ಹೊಂದುತ್ತಾರೆ. ಯಾಕೆಂದರೆ ಕೃಷಿ ಭೂಮಿಗಳಿಗೆ ಇದುವರೆಗೂ ಇದ್ದ ಕಾನೂನಾತ್ಮಕ ರಕ್ಷಣೆಗಳನ್ನೇ ರದ್ದುಪಡಿಸುವ ಮಸೂದೆಗಳಾಗಿವೆ ಇವು. ಜೊತೆಗೆ ಕೃಷಿ ಉತ್ಪನ್ನಗಳ ಸಣ್ಣ, ಮಧ್ಯಮ ಮತ್ತು ದೊಡ್ಡ ವ್ಯಾಪಾರಸ್ಥರಿಗೂ ಈ ಮಸೂದೆಗಳು ಕಂಟಕವಾಗಿವೆ. ಅವರ ವ್ಯವಹಾರಗಳು ಸಂಪೂರ್ಣವಾಗಿ ನಿಂತುಹೋಗಿ ಭಾರೀ ಕಾರ್ಪೊರೇಟ್‌ಗಳ ದೊಡ್ಡ ದೊಡ್ಡ ಸೂಪರ್ ಮಾರುಕಟ್ಟೆ, ಮಾಲ್‌ಗಳ ಕೈಯಲ್ಲಿ ಆ ಎಲ್ಲಾ ವ್ಯಾಪಾರ, ವಹಿವಾಟುಗಳು ಕೇಂದ್ರೀಕೃತಗೊಳ್ಳುವಂತೆ ಮಾಡುತ್ತವೆ. ಇದು ಬಿತ್ತನೆ ಬೀಜ, ಕೃಷಿ ಸಲಕರಣೆಗಳ ವಿಚಾರದಲ್ಲೂ ನಡೆಯುತ್ತದೆ.
ಕೃಷಿ ಉತ್ಪನ್ನ ಮಾರುಕಟ್ಟೆಗಳು, ಕೃಷಿ ಸಹಕಾರ ಸಂಘಗಳು, ಭೂ ಸಹಕಾರ ಬ್ಯಾಂಕುಗಳು ಒಂದೋ ತಾವಾಗಿಯೇ ಮುಚ್ಚಿಹೋಗುವ ಸ್ಥಿತಿ ಬರುತ್ತದೆ. ಇಲ್ಲವೆಂದರೆ ದೊಡ್ಡ ಕಾರ್ಪೊರೇಟ್‌ಗಳ ತೆಕ್ಕೆಗೆ ಬೀಳುತ್ತವೆ. ಕೃಷಿ ಕ್ಷೇತ್ರದ ಮೇಲೆ ಈ ಮಟ್ಟದಲ್ಲಿ ನಡೆಯುತ್ತಿರುವ ದಾಳಿಗಳ ಪರಿಣಾಮವಾಗಿ ರೈತಾಪಿಗಳು ತಮ್ಮ ತಮ್ಮ ಸಹಕಾರಿಗಳನ್ನು ಕಟ್ಟಿಕೊಂಡು ಸಂಘಟಿತ ಮಾರುಕಟ್ಟೆ ವಲಯಗಳನ್ನು ತಾವಾಗಿಯೇ ಕಟ್ಟಿಕೊಳ್ಳುವ ಸಾಧ್ಯತೆಗಳಿರುವುದನ್ನು ಗ್ರಹಿಸಿಯೇ ರಾಜ್ಯ ಸರಕಾರಗಳ ಭಾಗವಾಗಿದ್ದ ಸಹಕಾರಿ ರಂಗದ ಮೇಲೂ ಈಗ ಒಕ್ಕೂಟ ಸರಕಾರ ತನ್ನ ಹಿಡಿತ ಸಾಧಿಸಲು ತೊಡಗಿದೆ. ಆ ಮೂಲಕ ಸಹಕಾರಿ ವಲಯವನ್ನೂ ಕೂಡ ಭಾರೀ ಕಾರ್ಪೊರೇಟ್‌ಗಳಿಗೆ ಅನುಕೂಲವಾಗುವಂತೆ ರೂಪಿಸಲು ಹೊರಟಿದೆ. ಒಕ್ಕೂಟ ಸರಕಾರ ಈಗ ಅದಕ್ಕಾಗಿಯೇ ಇದುವರೆಗೂ ಇಲ್ಲದ ಸಹಕಾರಿ ಖಾತೆಯನ್ನು ಸೃಷ್ಟಿಸಿ ದೇಶದ ಗೃಹ ಮಂತ್ರಿಗೆ ಅದರ ಜವಾಬ್ದಾರಿಯನ್ನು ಒಪ್ಪಿಸಿದೆ.
 ಪರೋಕ್ಷವಾಗಿ ಹಾಗೂ ನೇರವಾಗಿ ಅರಣ್ಯ ಭೂಮಿಗಳನ್ನು ಕೂಡ ಕಾರ್ಪೊರೇಟ್‌ಗಳಿಗೆ ವಹಿಸಿಕೊಡುವ ಕೆಲಸಗಳು ಹಾಗೂ ಅದಕ್ಕೆ ಬೇಕಾದ ಕಾನೂನು ಮಾರ್ಪಾಡುಗಳು ಆಗುತ್ತಿವೆ. ಅರಣ್ಯ ಬೆಳೆಸುವುದು, ನಿರ್ವಹಣೆ ಮಾಡುವುದು ಹಾಗೂ ಪರಿಸರ ರಕ್ಷಣೆ, ಪ್ರವಾಸೋದ್ದಿಮೆಯ ಕಾರ್ಯವನ್ನು ಖಾಸಗಿಯವರಿಗೆ ವಹಿಸುವ ನೀತಿಗಳನ್ನು ಈಗಾಗಲೇ ರೂಪಿಸಿ ಜಾರಿಗೊಳಿಸಲಾಗಿದೆ. ಖಾಸಗಿಯವರಿಗೆ ಎಂದಾಗ ಇಂದಿನ ಸಂದರ್ಭದಲ್ಲಿ ಭಾರೀ ಜಾಗತಿಕ ಕಾರ್ಪೊರೇಟ್‌ಗಳಿಗೆ ಎಂದೇ ಗ್ರಹಿಸಬೇಕು. ಪಶ್ಚಿಮ ಘಟ್ಟದ ರಕ್ಷಣೆ ಕುರಿತ ಕಸ್ತೂರಿ ರಂಗನ್ ವರದಿಯ ಪ್ರಧಾನಾಂಶ ಕೂಡ ಇದೇ ಆಗಿದೆ. ಹಾಗಾಗಿ ಯಾರು ಎಷ್ಟು ಬೇಕಾದರೂ ಯಾವುದೇ ಬಗೆಯ ಭೂಮಿಯನ್ನು ನೇರವಾಗಿ ಖರೀದಿಸಿಕೊಳ್ಳುವ ಮುಕ್ತ ಅವಕಾಶಗಳಿಗೆ ಈ ಕೃಷಿ ಮಸೂದೆಗಳು ದಾರಿಮಾಡಿಕೊಡುತ್ತವೆ. ಹಾಗೆ ಖರೀದಿಸಲಿಕ್ಕೆ ಈಗ ಸಾಧ್ಯವಾಗುವುದು ಕೇವಲ ಭಾರೀ ಕಾರ್ಪೊರೇಟುಗಳಿಗೆ ಮಾತ್ರ ಎಂಬ ಸತ್ಯವನ್ನು ಬಿಡಿಸಿಹೇಳಬೇಕಾದ ಅವಶ್ಯಕತೆ ಇಲ್ಲವೆನಿಸುತ್ತದೆ. ಲಾಭದಾಯಕ ಕೃಷಿಗಾಗಿ ‘ಕಾರ್ಪೊರೇಟ್ ಫಾರ್ಮಿಂಗ್’ ಎಂಬ ಪರಿಕಲ್ಪನೆಯ ಮುಖ್ಯಾಂಶ ಕೂಡ ಇದೇ ಆಗಿದೆ.
ನಮ್ಮ ದೇಶದ ರೈತಾಪಿಗಳಲ್ಲಿ ಶೇಕಡಾ 85ಕ್ಕೂ ಹೆಚ್ಚು ಭಾಗ ಎರಡು ಹೆಕ್ಟೇರ್‌ಗಳಿಗಿಂತಲೂ ಕಡಿಮೆ ಭೂಹಿಡುವಳಿ ಇರುವ ಸಣ್ಣ ರೈತರಾಗಿದ್ದಾರೆ. ಇವರ ಕೈಯಲ್ಲಿ ದೇಶದ ಶೇಕಡಾ 53ರಷ್ಟು ಕೃಷಿಭೂಮಿ ಇದೆ. ಉಳಿದ ಶೇಕಡಾ 47ರಷ್ಟು ಕೃಷಿ ಭೂಮಿಯು ಶೇಕಡಾ 15ರಷ್ಟಿರುವ ದೊಡ್ಡ ಭೂಮಾಲಕರು ಹಾಗೂ ಶ್ರೀಮಂತ ರೈತರು ಹಾಗೂ ಮಧ್ಯಮ ರೈತರ ಬಳಿ ಇದೆ. ಈ ಅಂಕಿ-ಅಂಶಗಳಲ್ಲಿ ಪ್ರದೇಶವಾರು ವ್ಯತ್ಯಾಸಗಳು ಕೂಡ ಇವೆಯಾದರೂ ದೇಶದ ಒಟ್ಟು ಭೂ ಹಿಡುವಳಿ ಹೊಂದಿರುವವರ ಸರಾಸರಿ ಪ್ರಮಾಣದ ಅಂದಾಜು ಇದಾಗಿದೆ. ಕೃಷಿ ಕಾಯ್ದೆಗಳು ಈ ಎಲ್ಲಾ ರೈತಾಪಿಗಳ ಭೂಮಿಯನ್ನು ಕಾರ್ಪೊರೇಟ್ ಫಾರ್ಮಿಂಗ್, ಗುತ್ತಿಗೆ ಕೃಷಿ, ಇಂಟೆನ್ಸೀವ್ ಫಾರ್ಮಿಂಗ್ ಇತ್ಯಾದಿ ಹೆಸರುಗಳಲ್ಲಿ ಯಾವುದೇ ತಡೆಯಿಲ್ಲದೆ ಭಾರೀ ಕಾರ್ಪೊರೇಟ್‌ಗಳು ಸುಲಭವಾಗಿ ವಶಪಡಿಸಿಕೊಳ್ಳುತ್ತವೆ. ಈಗಾಗಲೇ ದೇಶದ ಒಂದು ದೊಡ್ಡ ಪ್ರಮಾಣದ ಭೂಮಿ ಹತ್ತು ಹಲವು ನೆಪಗಳ ಮೂಲಕ ಭಾರೀ ಕಾರ್ಪೊರೇಟ್‌ವಶಕ್ಕೆ ಹೋಗಿದೆ.
ಅಷ್ಟೇ ಅಲ್ಲದೆ ಕೃಷಿ ಉತ್ಪನ್ನಗಳನ್ನು ಪಾನ್ ಕಾರ್ಡ್ ಹೊಂದಿರುವ ಯಾರು ಬೇಕಾದರೂ ಎಷ್ಟು ಬೇಕಾದರೂ ಸಂಗ್ರಹಿಸಿಟ್ಟುಕೊಳ್ಳಬಹುದು ಎಂಬುದು ಕೂಡ ಕೃಷಿ ಕಾಯ್ದೆಗಳ ಭಾಗವಾಗಿದೆ. ಅದಕ್ಕೆ ಪೂರಕವಾಗಿ ಅಗತ್ಯ ವಸ್ತುಗಳ ಪಟ್ಟಿಯಿಂದ ಅಗತ್ಯ ಆಹಾರ ಧಾನ್ಯಗಳೂ ಸೇರಿದಂತೆ ಹಲವಾರು ಕೃಷಿ ಉತ್ಪನ್ನಗಳನ್ನು ಹೊರಗಿರಿಸುವ ಕೆಲಸವನ್ನು ಈಗಿನ ಸರಕಾರ ಮಾಡಿದೆ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಸರಕಾರದ ಯಾವುದೇ ನಿಯಂತ್ರಣಗಳು ಇಲ್ಲದಂತಾಗುತ್ತದೆ. ಇದರಿಂದಾಗಿ ಭಾರೀ ಕಾರ್ಪೊರೇಟ್‌ಗಳು ಆಹಾರ ಧಾನ್ಯಗಳ ಲಭ್ಯತೆ ಹಾಗೂ ಅವುಗಳ ಬೆಲೆಗಳನ್ನು ನಿರ್ಧರಿಸುವಂತಾಗುತ್ತದೆಯೇ ಹೊರತು ರೈತರಿಗಾಗಲೀ ದೇಶದ ಜನಸಾಮಾನ್ಯರಿಗಾಗಲೀ ಯಾವುದೇ ಲಾಭ ಇರುವುದಿಲ್ಲ. ಬದಲಿಗೆ ಆಹಾರದ ಅಲಭ್ಯತೆ ಹಾಗೂ ವಿಪರೀತ ಬೆಲೆಯೇರಿಕೆಗಳು ಸಹಜವೆನ್ನುವ ಸ್ಥಿತಿಯಾಗುತ್ತದೆ. ಇದುವರೆಗೂ ಇದ್ದ ಪಡಿತರ ವ್ಯವಸ್ಥೆಯೇ ಸಹಜವಾಗಿ ರದ್ದಾಗಿಬಿಡುವುದರಲ್ಲಿ ಅನುಮಾನ ಬೇಕಿಲ್ಲ. ಅಂದರೆ ಕೃಷಿ ಮಸೂದೆಗಳು ಕೇವಲ ರೈತರಿಗೆ ಮಾತ್ರ ಸಂಬಂಧಿಸಿದ್ದಾಗಿರದೆ ದೇಶದ ಇಡೀ ಜನಸಮೂಹವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾರೀ ಸಂಕಷ್ಟಕ್ಕೆ ದೂಡುತ್ತದೆ ಎನ್ನುವುದನ್ನು ಗ್ರಹಿಸಬೇಕಾಗಿದೆ.
ಈಗಾಗಲೇ ಅಡುಗೆ ಅನಿಲವನ್ನು ಬ್ಯಾಂಕ್ ಖಾತೆಗಳಿಗೆ ನೇರ ಸಬ್ಸಿಡಿ ಎಂಬ ಆಕರ್ಷಕವಾದ ನಯವಂಚಕ ಮಾರ್ಗಗಳ ಮೂಲಕ ಮುಕ್ತಗೊಳಿಸಿದ್ದರ ಪರಿಣಾಮ ಬೆಲೆಯ ಹೆಚ್ಚಳದ ಬಿಸಿ ತಡೆಯಲಾರದಂತಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಮಾರುಕಟ್ಟೆಯನ್ನೂ ಕೂಡ ಹೆಚ್ಚೂ ಕಡಿಮೆ ಮುಕ್ತಗೊಳಿಸಿದಂತಾಗಿದೆ. ಅದರ ಬೆಲೆಯೇರಿಕೆಯ ಬಿಸಿಯೂ ಏರುತ್ತಲೇ ಇದೆ. ಇದಕ್ಕೆ ಕೇಂದ್ರೀಯ ತೆರಿಗೆ ಹಾಗೂ ಕೇಂದ್ರೀಯ ಸೆಸ್‌ನ ಕಾರಣ ಈಗ ಮೇಲ್ನೋಟಕ್ಕೆ ಕಾಣುತ್ತಿ ದ್ದರೂ ಅವುಗಳು ಈ ಎಲ್ಲಾ ಕ್ಷೇತ್ರಗಳನ್ನು ಪೂರ್ಣವಾಗಿ ದೊಡ್ಡ ದೊಡ್ಡ ಕಾರ್ಪೊರೇಟ್‌ಗಳಿಗೆ ಹಸ್ತಾಂತರಮಾಡುವ ಪ್ರಕ್ರಿಯೆಗಳ ಭಾಗವಾಗಿವೆ. ಇದರ ಭಾಗವಾಗಿಯೇ ಮೋದಿ ಸರಕಾರ ಸಾರ್ವಜನಿಕ ವಲಯಗಳನ್ನು ನಗದೀಕರಿಸಿ ಆರುಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ಸರಕಾರಿ ಖಜಾನೆಗೆ ಸೇರಿಸಿ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ಈಗಾಗಲೇ ಘೋಷಣೆ ಮಾಡಿರುವುದು. ಆದರೆ ಅಭಿವೃದ್ಧಿ ಯಾರದಾಗುತ್ತದೆ ಎಂಬುದು ಈಗಾಗಲೇ ಸಾಬೀತಾಗಿರುವ ಬಹಿರಂಗ ಸತ್ಯ ತಾನೇ.
ಇಂತಹ ಸ್ಥಿತಿಯಲ್ಲಿ ದೇಶದ ಜನಸಾಮಾನ್ಯರು, ವಿದ್ಯಾರ್ಥಿ ಯುವಜನರು ನಡೆಯುತ್ತಿರುವ ರೈತ ಚಳವಳಿಯ ಪಾಠಗಳನ್ನು ತಮ್ಮದಾಗಿಸಿಕೊಳ್ಳಬೇಕಾದ ಅಗತ್ಯ ಬಹಳ ಇದೆ.

ಮಿಂಚಂಚೆ: nandakumarnandana67@gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News