ಗಾಂಧಿ ಜಯಂತಿಯಂದು ಆಗಬೇಕಾದ ಆತ್ಮಾವಲೋಕನ

Update: 2021-10-01 19:30 GMT

ಉದಾತ್ತ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಮಾನವ ಕುಲಕ್ಕೆ ದಾರಿ ತೋರಿಸಿದ ಬಾಪೂಜಿಯವರ ಕೊಲೆಯನ್ನು ವೈಭವೀಕರಿಸುವ ಮತ್ತು ಅವರ ಹಂತಕನನ್ನು ದೇಶಭಕ್ತನೆಂದು ಹೊಗಳುವ ಪ್ರಭೃತಿಗಳು, ಆಳುವ ಪಕ್ಷದ ಅಂಗಸಂಸ್ಥೆಗಳ ಸಕ್ರಿಯ ಸದಸ್ಯರೆಂಬುದು ವಿಷಾದನೀಯ ಬೆಳವಣಿಗೆ. ಇಂತಹ ಬೆಳವಣಿಗೆಗಳ ಬಗ್ಗೆ ರಾಷ್ಟ್ರನಾಯಕರ ದಿವ್ಯ ಮೌನ ಮತ್ತಷ್ಟು ಆತಂಕವನ್ನು ಉಂಟುಮಾಡುತ್ತದೆ.
ಈಗ ಹೆಚ್ಚುತ್ತಿರುವ ಜಾತಿ ಮತ್ತು ಧರ್ಮಾಧಾರಿತ ವೈಷಮ್ಯಗಳ ಹಿನ್ನೆಲೆಯಲ್ಲಿ ಆಡಂಬರದ ಗಾಂಧಿ ಜಯಂತಿಯ ಬದಲಾಗಿ ನಾವು ಅವರು ತಮ್ಮ ಬದುಕು ಹಾಗೂ ಬಲಿದಾನದಲ್ಲಿ ತೋರಿಸಿದ ತತ್ವಗಳ ಅನುಷ್ಠಾನದ ಕುರಿತು ಆತ್ಮಾವಲೋಕನ ಅತೀ ಅಗತ್ಯ. 


ಈ ವರ್ಷ ಸ್ವಾತಂತ್ರ್ಯೋತ್ಸವದ ಅಮೃತವರ್ಷ ಎಂಬ ಹಿನ್ನೆಲೆಯಲ್ಲಿ ದೇಶವು ಗಾಂಧಿ ಜಯಂತಿಯನ್ನು ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲಿದೆ. ಗಾಂಧೀಜಿ ಅವರ ಪ್ರತಿಮೆಗಳು ಸ್ವಚ್ಛಗೊಳ್ಳಲಿವೆ, ಹೊಸ ಭಾವಚಿತ್ರಗಳು ಮುಂದೆ ಬರಲಿವೆ; ಅವರ ಕನ್ನಡಕ, ಊರುಗೋಲು, ಚರಕ, ಖಾದಿ ಮುಂತಾದ ವಸ್ತುಗಳು ವೃತ್ತಪತ್ರಿಕೆಗಳಲ್ಲಿ, ದೊಡ್ಡ ದೊಡ್ಡ ಭಿತ್ತಿಪತ್ರಗಳಲ್ಲಿ ಇಲ್ಲವೇ ಜಾಹೀರಾತುಗಳಲ್ಲಿ ರಾರಾಜಿಸಲಿವೆ. ಸರಕಾರಿ ಸ್ವಾಮ್ಯದ ಉದ್ದಿಮೆಗಳು ಗಾಂಧಿಯವರ ಹೆಸರನ್ನು ಉಪಯೋಗಿಸಿ ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಜಾಹೀರಾತುಗಳಿಗೋಸ್ಕರ ಕೋಟಿಗಟ್ಟಲೆ ರೂಪಾಯಿಗಳನ್ನು ವ್ಯಯಿಸಲಿವೆ. ರಾಜ್ಯಸರಕಾರಗಳ ಮಾಹಿತಿ ಮತ್ತು ಪ್ರಚಾರ ವಿಭಾಗಗಳಿಗೂ ಬಿಡುವಿಲ್ಲದ ಕೆಲಸ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಕೊಡುಗೆಯನ್ನು ಜನರಿಗೆ ನೆನಪಿಸಿಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳಿಗಾಗಿ ಬೇಕಾದ ಪ್ರಚಾರವನ್ನು ಮಾಡಲು. ಈ ಆಚರಣೆಯಲ್ಲಿ ಗಾಂಧೀಜಿಯವರು ತಾವೇ ಸ್ವತಃ ಮೈಗೂಡಿಸಿಕೊಂಡು ದೇಶಕ್ಕೆ ತೋರಿಸಿಕೊಟ್ಟ ತತ್ವಗಳು ನೇಪಥ್ಯಕ್ಕೆ ಸೇರುತ್ತಿವೆಯೇ ಎಂಬ ಭಾವನೆ ತೀವ್ರವಾಗಿ ನನ್ನನ್ನು ಕಾಡುತ್ತಿದೆ. ಕೆಲವು ಘಟನೆಗಳನ್ನು ಉಲ್ಲೇಖಿಸುತ್ತಾ ಈ ನನ್ನ ಅಭಿಪ್ರಾಯವನ್ನು ಓದುಗರ ಮುಂದಿಡಲು ನಾನು ಬಯಸುತ್ತೇನೆ.

ಅದೊಂದು ಗಾಂಧೀಜಿಯವರು ಹುತಾತ್ಮರಾದ ದಿನದ ಆಚರಣೆ. ಕೇಸರಿಬಣ್ಣದ ಉಡುಗೆ ಧರಿಸಿದ ಸ್ವಘೋಷಿತ ಸಾಧ್ವಿಯೊಬ್ಬಳು ತನ್ನ ಹಿಂಬಾಲಕರ ಸಮ್ಮುಖದಲ್ಲಿ ಗಾಂಧೀಜಿಯ ಭಾವಚಿತ್ರವನ್ನು ಇರಿಸಿ ಅದಕ್ಕೆ ಗುಂಡು ಹಾರಿಸಿ ಜನವರಿ 30, 1948ರ ಸಂಜೆ ಗೋಡ್ಸೆ ಮಾನವಕುಲಕ್ಕೆ ಮಾಡಿದ ಘೋರಕೃತ್ಯವನ್ನು ನಟಿಸಿದಳು. ಗುಂಡು ಹಾರುತ್ತಿದ್ದಂತೆಯೆ ಆಕೆಯ ಹಿಂಬಾಲಕರು ಜಯಕಾರವನ್ನು ಹೇಳಿದರು.

ಇನ್ನೋರ್ವ ಮಹಿಳೆ, ನಾಥುರಾಮ ಗೋಡ್ಸೆಗೆ ಅಪ್ರತಿಮ ದೇಶಭಕ್ತನೆಂಬ ಬಿರುದನ್ನು ನೀಡಿದಳು. ಆಕೆ ದೇಶದ ಸಂವಿಧಾನದಲ್ಲಿ ನೀಡಲಾದ ಪ್ರಕ್ರಿಯೆಯ ಮೂಲಕ ಜನಪ್ರತಿನಿಧಿಯಾಗಿ ಆಯ್ಕೆಯಾದ ‘ಸಾಧ್ವಿ’. ಉತ್ತರ ಪ್ರದೇಶದ ಮೈನಪುರಿಯ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯೊಂದರಲ್ಲಿ 80ರಲ್ಲಿ 60 ಮಕ್ಕಳು ದಲಿತರು. ಅಲ್ಲಿ ದಲಿತ ವಿದ್ಯಾರ್ಥಿಗಳಿಗೆ ಅಡುಗೆ ಮಾಡಿದ ಪಾತ್ರೆಗಳನ್ನು ಮತ್ತು ಊಟದ ಬಟ್ಟಲುಗಳನ್ನು ಅವರೇ ತೊಳೆಯಬೇಕು, ಮಾತ್ರವಲ್ಲ ಅವುಗಳನ್ನು ಇತರ ಮಕ್ಕಳ ಪಾತ್ರೆಗಳಿಂದ ದೂರವೇ ಇಡಬೇಕು. ಅಲ್ಲಿನ ಅಡುಗೆ ಮಾಡುವ ಹೆಣ್ಮಕ್ಕಳು ದಲಿತ ಮಕ್ಕಳಿಗೆ ಬೇಯಿಸಿಕೊಡಲು ತಾವು ತಯಾರಿಲ್ಲ ಎಂದಿದ್ದರು.

ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ಮೂರು ವರ್ಷದ ಅಮಾಯಕ ದಲಿತ ಎಳೆಯ ದೇವಸ್ಥಾನ ಪ್ರವೇಶಿಸಿದ; ಅವನ ಕುಟುಂಬದವರು ದೇವಸನ್ನಿಧಿಯನ್ನು ಶುದ್ಧಗೊಳಿಸುವ ಬಾಬ್ತು 25,000 ರೂಪಾಯಿ ಜುಲ್ಮಾನೆ ತೆರಬೇಕೆಂದು ಊರಿನ ಭಕ್ತಾದಿಗಳು ಫರ್ಮಾನು ಹೊರಡಿಸಿದರು.
 ಕರಟಗಿಯ ಲಕ್ಷ್ಮೀ ದೇವಾಲಯವನ್ನು ದಲಿತ ಯುವಕನೊಬ್ಬ ಪ್ರವೇಶಿಸಿದ. ಅವನಿಗೆ 11,000 ರೂಪಾಯಿ ದಂಡ ವಿಧಿಸಲಾಯಿತು. ಆ ಹಣದಿಂದ ದೇವಮಂದಿರವನ್ನು ಶುದ್ಧೀಕರಿಸಲಾಯಿತು.

2020 ಅಕ್ಟೋಬರ್ ತಿಂಗಳಿನಲ್ಲಿ ಖುದಾಯಿ ಖಿದ್ಮತ್ಗಾರ್ ಸಂಘದ ಕಾರ್ಯಕರ್ತರಾದ ಫೈಸಲ್ ಖಾನ್, ಚಾಂದ್ ಮುಹಮ್ಮದ್, ಅಲೋಕ ರತನ್ ಮತ್ತು ನೀಲೇಶ ಗುಪ್ತ ತಮ್ಮ 84 ಕಿಲೋಮೀಟರು ದೂರದ ‘ಬ್ರಜ ಪರಿಕ್ರಮ’ (ಅರ್ಥಾತ್ ಕೃಷ್ಣ ಮಂದಿರಗಳ ಯಾತ್ರೆ)ಯನ್ನು ಮುಗಿಸಿ ಕೊನೆಗೆ ಮಥುರೆಯ ನಂದಬಾಬ ಮಂದಿರಕ್ಕೆ ಬಂದು ಅಲ್ಲಿನ ಅರ್ಚಕರೊಂದಿಗೆ ಸಂಭಾಷಿಸಿದರು; ಫೈಸಲ್ ತುಳಸಿದಾಸರ ರಾಮಚರಿತಮಾನಸದ ಶ್ಲೋಕಗಳನ್ನು ಮಧುರವಾಗಿ ಭಜಿಸಿ ದೇವರ ಪ್ರಸಾದವನ್ನೂ ಸ್ವೀಕರಿಸಿದರು. ಆ ಬಳಿಕ ನಮಾಝ್‌ನ ಸಮಯ ಬರಲು ಹತ್ತಿರದ ಮಸೀದಿಗೆ ಹೊರಡಲು ಅನುವಾದಾಗ ಅರ್ಚಕರು ದೇವರು ಎಲ್ಲೆಡೆಯಲ್ಲೂ ಇರುವುದರಿಂದ ನಿಮಗೆ ಆಕ್ಷೇಪವಿಲ್ಲವಾದರೆ ದೇವಾಲಯದ ಹೊರಾಂಗಣದಲ್ಲಿ ನಮಾಝ್ ಮಾಡಬಹುದೆಂದು ಸಲಹೆಯಿತ್ತರು. ಆ ಪ್ರಕಾರ ಫೈಸಲ್ ನಮಾಝ್ ಮುಗಿಸಿ ಹೊರಟಾಗ ಅರ್ಚಕರೂ ಉಳಿದವರೂ ಆತ್ಮೀಯವಾಗಿ ಬೀಳ್ಕೊಟ್ಟರು. ಆದರೆ ದಿಲ್ಲಿಗೆ ಮರಳಿದ ಮೂರು ದಿನಗಳಲ್ಲಿ ಫೈಸಲ್ ಅವರನ್ನು ಉತ್ತರ ಪ್ರದೇಶದ ಪೊಲೀಸರು ದೇವಾಲಯದ ಪಾವಿತ್ರ್ಯವನ್ನು ಹಾಳುಗೆಡವಿದರೆಂಬ ಆಪಾದನೆಯಲ್ಲಿ ಬಂಧಿಸಿದರು. ಸುಮಾರು ಒಂದು ತಿಂಗಳ ಸೆರೆಮನೆವಾಸದ ಬಳಿಕ ಅಲ್ಲಹಾಬಾದ್ ಉಚ್ಚ ನ್ಯಾಯಾಲಯ ಅವರನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಲು ಆದೇಶವನ್ನು ನೀಡಿತು.

ಫೈಸಲ್ ಖಾನ್ ಅವರು ಮಹಾತ್ಮಾ ಗಾಂಧಿಯವರ ಸಹಚರರಾಗಿದ್ದ ಬಾದಶಾಹ ಖಾನ್ (ಗಡಿನಾಡ ಗಾಂಧಿ) ಮುನ್ನಡೆಸುತ್ತಿದ್ದ ‘ಖುದಾಯಿ ಖಿದ್ಮತ್ಗಾರ್’ (‘ಭಗವಂತನ ಸೇವಕರು’) ಸಂಸ್ಥೆಯನ್ನು 2011 ರಲ್ಲಿ ಪುನರಾರಂಭಿಸಿ ಸರ್ವಧರ್ಮಸಮಭಾವವನ್ನು ಬೆಳೆಸುವಲ್ಲಿ ಗಣನೀಯ ಪಾತ್ರವನ್ನು ವಹಿಸುತ್ತಿರುವ ಸಾಮಾಜಿಕ ಕಾರ್ಯಕರ್ತರು. ಹಿಂದೂಗಳ ಪುರಾಣಗಳು ಅದರಲ್ಲಿಯೂ ಮುಖ್ಯವಾಗಿ ತುಳಸಿದಾಸರ ರಾಮಚರಿತಮಾನಸದ ಬಗ್ಗೆ ವಿಶೇಷ ಅಧ್ಯಯನ ಮಾಡಿ ಅದನ್ನು ಮಧುರವಾಗಿ ಹಾಡುವುದನ್ನು ಕರಗತಗೊಳಿಸಿದ್ದರು. 2018 ರಲ್ಲಿ, ರಾಮಚರಿತಮಾನಸದ ಪ್ರವಚನಕ್ಕೆ ಹೆಸರುವಾಸಿಯಾದ ಗುಜರಾತಿನ ಮೊರಾರಿ ಬಾಪು ಅವರು ಫೈಸಲ್ ಖಾನರು ಹಾಡಿದ ತುಳಸಿರಾಮಾಯಣವನ್ನು ಆಲಿಸಿ ಸನ್ಮಾನಿಸಿದ್ದರು. ಈ ತರದ ಘಟನೆಗಳು ದೇಶದಲ್ಲಿ ಆಗಾಗ ಸಂಭವಿಸುತ್ತಲೇ ಇರುತ್ತವೆ. ಕೆಲವು ವರದಿಯಾಗಿ ನಮ್ಮನ್ನು ಬೆಚ್ಚಿಬೀಳಿಸುತ್ತವೆ, ಇನ್ನು ಅನೇಕ ದುಷ್ಕರ್ಮಗಳು ಮುನ್ನೆಲೆಗೆ ಬರುವುದೇ ಇಲ್ಲ. ಇವುಗಳೆಲ್ಲ ಗಾಂಧಿಯವರ ಜೀವನದ ಸಂದೇಶವನ್ನು ಅಣಕಿಸುವ ಉದಾಹರಣೆಗಳು. ಸಾಮಾಜಿಕ ಅಸಮಾನತೆ ಮತ್ತು ಧರ್ಮಾಧರಿತ ವೈಷಮ್ಯಗಳನ್ನು ನಿವಾರಿಸುವ ನೀತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರು ಬಾಪು ಎಂದು ಒತ್ತಿ ಹೇಳಬೇಕಾಗಿಲ್ಲ. ಅವರ ಆಶ್ರಮಗಳ ವ್ಯವಸ್ಥೆಗಳು ಮತ್ತು ಅಲ್ಲಿನ ವಾತಾವರಣ ಈ ನೀತಿಯನ್ನು ಕಾರ್ಯರೂಪಕ್ಕೆ ತರುವಲ್ಲಿ ಮಾದರಿಯನ್ನು ಹಾಕಿದ್ದವು. ಅವರ ಆತ್ಮಚರಿತ್ರೆಯಲ್ಲಿ ಕಾಣಬರುವ ಅನೇಕ ಘಟನೆಗಳು ಅವರ ದೃಷ್ಟಿಕೋನವನ್ನು ಸ್ಪಷ್ಟಗೊಳಿಸುತ್ತವೆ. ಅವುಗಳಲ್ಲಿ ಬರುವ ಎರಡು ಸನ್ನಿವೇಶಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ.

 1898ರ ಒಂದು ಘಟನೆ. ದಕ್ಷಿಣ ಆಫ್ರಿಕದ ಆಶ್ರಮದಲ್ಲಿ ವಿಭಿನ್ನ ಜಾತಿಯ ಮತ್ತು ಧರ್ಮಗಳ ನಿವಾಸಿಗಳಿದ್ದರು. ಅಂದಿನ ಕಾಲದಲ್ಲಿ ನಿವಾಸಿಗಳು ತಮ್ಮ ತಮ್ಮ ಕೊಠಡಿಗಳಲ್ಲಿಟ್ಟಿದ್ದ ಮಡಿಕೆಗಳಲ್ಲಿ ಮಲವಿಸರ್ಜನೆ ಮಾಡಿ ಆ ಮಡಿಕೆಗಳನ್ನು ತಾವೇ ಶುದ್ಧಿಗೊಳಿಸುವ ಪದ್ಧತಿಯನ್ನು ಗಾಂಧೀಜಿ ಅನುಸರಿಸುತ್ತಿದ್ದರು. ಆಶ್ರಮಕ್ಕೆ ಹೊಸತಾಗಿ ಸೇರಿದ ಪಂಚಮನೊಬ್ಬನಿಗೆ ಈ ನಿಯಮ ಗೊತ್ತಿರಲಿಲ್ಲ. ಆಗ ತಮ್ಮ ಹೆಂಡತಿ ಕಸ್ತೂರಿ ಬಾಯಿ ಅವರಲ್ಲಿ ತಮ್ಮ ಮಡಿಕೆಯ ಜೊತೆಗೆ ಪಂಚಮನ ಮಡಿಕೆಯನ್ನು ಶುದ್ಧೀಕರಿಸಲು ಹೇಳುತ್ತಾರೆ. ಅವನು ಪಂಚಮನಾದುದರಿಂದ ಅವನ ಮಡಿಕೆಯನ್ನು ತಾನು ಮುಟ್ಟಲಾರೆ ಎಂದು ಕಸ್ತೂರಿ ಬಾಯಿ ಗಾಂಧಿಯವರ ಮಾತನ್ನು ಆರಂಭದಲ್ಲಿ ಉಲ್ಲಂಘಿಸುತ್ತಾರೆ. ಆ ನಂತರ ಕೋಪದಿಂದ ಮಡಿಕೆಯನ್ನು ಎತ್ತಿಕೊಂಡು ಹೋಗುತ್ತಾರೆ. ಆಕೆಯ ವರ್ತನೆಗೆ ಮುನಿದ ಗಾಂಧಿ ‘‘ನನ್ನ ಮನೆಯಲ್ಲಿ ಈ ಅವಿವೇಕವೆಲ್ಲ ನಡೆಯುವುದಿಲ್ಲ’’ ಎಂದು ಗದರಿಸುತ್ತಾರೆ. ಈ ಗದರಿಕೆಯಿಂದ ಗಂಡಹೆಂಡಿರ ಮಧ್ಯೆ ದೊಡ್ಡ ರಾದ್ಧಾಂತವೇ ಸಂಭವಿಸಿ ಆ ಬಳಿಕ ಶಾಂತಿ ಮೂಡುತ್ತದೆ. ಗಾಂಧೀಜಿಯವರು ತಮ್ಮ ಬದುಕಿನಲ್ಲಿಯೂ ಜಾತಿಭೇದಕ್ಕೆ ಅವಕಾಶನೀಡುತ್ತಿರಲಿಲ್ಲ ಎಂಬುದಕ್ಕೆ ಇದು ಒಂದು ಉದಾಹರಣೆ. (ಪುಟ 292*)
ಇನ್ನೊಂದು ಕಡೆ ಗಾಂಧಿ ತಾವು ಆಫ್ರಿಕಾದ ವರ್ಣದ್ವೇಷದ ಜ್ವಾಲೆಯಿಂದಾಗಿ ತಾವು ಪಟ್ಟ ಪಾಡಿಗೆ ಸ್ಪಂದಿಸುತ್ತಾ ಹೇಳುತ್ತಾರೆ: ‘‘ನಮ್ಮ ದೇಶದಲ್ಲಿ ಅಸ್ಪಶ್ಯ ಬಂಧುಗಳಿಗೆ ಕ್ಷೌರ ಮಾಡಲು ಅವಕಾಶ ಕೊಡುವುದಿಲ್ಲ. ನನಗೆ ಇದಕ್ಕಾಗಿ ದ.ಆಫ್ರಿಕಾದಲ್ಲಿ ಒಂದು ಸಲವಲ್ಲ ಅನೇಕ ಸಲ ತಕ್ಕ ಶಿಕ್ಷೆ ದೊರಕಿತು.’’ (ಪು.227)
ಎಲ್ಲ ಧರ್ಮೀಯರೂ ಸಮಾನರೆಂಬ ಭಾವನೆಗೆ ಗಾಂಧಿಯವರು ಸದಾ ಬದ್ಧರಾಗಿದ್ದರು, ಮಾತ್ರವಲ್ಲ ತಮ್ಮ ಆಶ್ರಮಗಳಲ್ಲಿಯೂ ಭಾವೈಕ್ಯಕ್ಕೆ ಆದ್ಯತೆಯನ್ನು ನೀಡುತ್ತಿದ್ದರು. ಅವರಿದ್ದ ಟಾಲ್‌ಸ್ಟಾಯ್ ಆಶ್ರಮದ ಜೀವನ ಕ್ರಮ ಇದಕ್ಕೆ ಉದಾಹರಣೆ. ‘‘ಆಶ್ರಮದಲ್ಲಿ ಅನೇಕ ಸತ್ಯಾಗ್ರಹಿಗಳ ಸಂಸಾರಗಳಿದ್ದವು. ನಾಲ್ಕೈದು ಮುಸಲ್ಮಾನರಿರುತ್ತಿದ್ದರು. ನಮ್ಮ ಧಾರ್ಮಿಕ ಆಚರಣೆಗಳನ್ನು ನಡೆಸಲು ನಾನು ಅವರಿಗೆ ಉತ್ತೇಜನ ನೀಡುತ್ತಿದ್ದೆನು. ಅವರು ತಮ್ಮ ನಿತ್ಯದ ಪ್ರಾರ್ಥನೆ (ನಮಾಝ್) ಮಾಡುವಂತೆ ನಾನು ಎಚ್ಚರದಿಂದ ನೋಡಿಕೊಳ್ಳುತ್ತಿದ್ದೆನು. ನಮ್ಮ ಜತೆ ಕ್ರೈಸ್ತ, ಪಾರಸೀ ಹುಡುಗರೂ ಇದ್ದರು. ಅವರು ತಮ್ಮ ಧಾರ್ಮಿಕ ಆಚರಣೆಗಳನ್ನು ಅನುಸರಿಸುವಂತೆ ಪ್ರೋತ್ಸಾಹಿಸುವುದು ನನ್ನ ಕರ್ತವ್ಯವೆಂದು ನಾನು ಭಾವಿಸಿದ್ದೆನು. ರಮಝಾನ್ ಸಮಯದಲ್ಲಿ ಶ್ರಾವಣ ಮಾಸದ ಪ್ರದೋಷ ಉಪವಾಸವನ್ನು ಆಚರಿಸುವಂತೆ ಉಳಿದವರಿಗೆ ಪ್ರೇರೇಪಿಸಿದೆ; ಮುಸ್ಲಿಮರಿಗೆ ಉಪವಾಸ ಮುಗಿಯುವಾಗ ಅಡಿಗೆ ಮಾಡಿ ಆಶ್ರಮದ ಹಿಂದೂ ನಿವಾಸಿಗಳು ಬಡಿಸುತ್ತಿದ್ದರು. ಎಲ್ಲರಲ್ಲಿಯೂ ಏಕತಾ ಭಾವನೆ ಬೆಳೆಯಿತು.’’ (ಪು. 346-7)

ಸಾಮಾಜಿಕ ಏಕತೆಯೊಂದಿಗೆ ಮೂಲಭೂತವಾದ ಭಿನ್ನತೆಯನ್ನೂ ಅವರು ಗೌರವಿಸುತ್ತಿದ್ದರು. ಅವರು ಹೇಳುತ್ತಾರೆ, ‘‘ಧಾರ್ಮಿಕ ವಿಷಯಗಳಲ್ಲಿ ಒಬ್ಬೊಬ್ಬರದು ಒಂದೊಂದು ನಂಬಿಕೆ. ಪ್ರತಿಯೊಬ್ಬನಿಗೂ ಅವನವನ ನಂಬಿಕೆಯೇ ಸರ್ವೋತ್ಕೃಷ್ಟ. ಎಲ್ಲ ವಿಷಯಗಳಲ್ಲಿಯೂ ಎಲ್ಲರಿಗೂ ಒಂದೇ ಅಭಿಪ್ರಾಯವಿದ್ದರೆ ಆಗ ಜಗತ್ತಿನಲ್ಲಿ ಒಂದೇ ಧರ್ಮವಿರುತ್ತಿದ್ದಿತು’’(ಪು.461).
ಈ ಉದಾತ್ತ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಮಾನವ ಕುಲಕ್ಕೆ ದಾರಿ ತೋರಿಸಿದ ಬಾಪೂಜಿಯವರ ಕೊಲೆಯನ್ನು ವೈಭವೀಕರಿಸುವ ಮತ್ತು ಅವರ ಹಂತಕನನ್ನು ದೇಶಭಕ್ತನೆಂದು ಹೊಗಳುವ ಪ್ರಭೃತಿಗಳು, ಆಳುವ ಪಕ್ಷದ ಅಂಗಸಂಸ್ಥೆಗಳ ಸಕ್ರಿಯ ಸದಸ್ಯರೆಂಬುದು ವಿಷಾದನೀಯ ಬೆಳವಣಿಗೆ. ಇಂತಹ ಬೆಳವಣಿಗೆಗಳ ಬಗ್ಗೆ ರಾಷ್ಟ್ರನಾಯಕರ ದಿವ್ಯ ಮೌನ ಮತ್ತಷ್ಟು ಆತಂಕವನ್ನು ಉಂಟುಮಾಡುತ್ತದೆ.
ಈಗ ಹೆಚ್ಚುತ್ತಿರುವ ಜಾತಿ ಮತ್ತು ಧರ್ಮಾಧಾರಿತ ವೈಷಮ್ಯಗಳ ಹಿನ್ನೆಲೆಯಲ್ಲಿ ಆಡಂಬರದ ಗಾಂಧಿ ಜಯಂತಿಯ ಬದಲಾಗಿ ನಾವು ಅವರು ತಮ್ಮ ಬದುಕು ಹಾಗೂ ಬಲಿದಾನದಲ್ಲಿ ತೋರಿಸಿದ ತತ್ವಗಳ ಅನುಷ್ಠಾನದ ಕುರಿತು ಆತ್ಮಾವಲೋಕನ ಅತೀ ಅಗತ್ಯ.


*ಉದ್ಧತ ವಾಕ್ಯಗಳನ್ನು ನವಜೀವನ ಟ್ರಸ್ಟ್ ಪ್ರಕಾಶಿಸಿದ, ಗೋರೂರು ರಾಮಸ್ವಾಮಿ ಅಯ್ಯಂಗಾರರು ಅನುವಾದಿಸಿದ ‘ಗಾಂಧೀಜಿಯ ಆತ್ಮಕಥೆ’ ಗ್ರಂಥದಿಂದ ಆರಿಸಿಕೊಂಡಿದ್ದೇನೆ. ಕಂಸದಲ್ಲಿ ಪುಟ ಸಂಖ್ಯೆಯನ್ನೂ ಕೊಟ್ಟಿದ್ದೇನೆ-ಲೇ.

Writer - ಟಿ. ಆರ್. ಭಟ್

contributor

Editor - ಟಿ. ಆರ್. ಭಟ್

contributor

Similar News