ಬಾಪುವಿನ ಬಾಲ್ಯದ ಲೀಲಾ ವಿಲಾಸ: ಮೋಹನದಾಸ

Update: 2021-10-02 19:30 GMT

ಪರಿವರ್ತನೆ ಜಗದ ನಿಯಮ ಎನ್ನುವ ಮಾತಿನಂತೆ ಕೆಟ್ಟ ಮನಸ್ಥಿತಿಯಿಂದ ಒಳ್ಳೆಯತನದ ಕಡೆಗೆ ಪರಿವರ್ತಿತರಾದವರು ಮಹಾತ್ಮಾಗಾಂಧಿ. ಅವರು ಬಾಲ್ಯದಲ್ಲಿ ಪೆನ್ಸಿಲ್ ಕದ್ದಿದ್ದರು, ಧೂಮಪಾನ ಮಾಡಿದ್ದರು ಬಳಿಕ ತಿದ್ದಿಕೊಂಡರು ಎಂದು ನಾವೆಲ್ಲ ಶಾಲಾ ದಿನಗಳಿಂದಲೇ ಕಲಿತಿದ್ದೇವೆ. ಅಂತಹ ತಪ್ಪುದಾರಿಯಲ್ಲಿದ್ದ ಗಾಂಧಿಯ ಬಾಲ್ಯದ ಬದುಕನ್ನೇ ‘ಮೋಹನದಾಸ’ದಲ್ಲಿ ತೋರಿಸಲಾಗಿದೆ.

ಕತೆಯ ವಿಚಾರಕ್ಕೆ ಬಂದರೆ ನಿರ್ದೇಶಕರು ಗಾಂಧಿಯ ಬದುಕನ್ನು ಹೆಚ್ಚು ವಾಸ್ತವದ ಆಧಾರದಲ್ಲೇ ಮಾಡಲು ನಿರ್ಧರಿಸಿರುವ ಕಾರಣ ಇಂದಿನ ಸಾಮಾನ್ಯ ಪ್ರೇಕ್ಷಕರ ಆಸಕ್ತಿಗೆ ಕುಮ್ಮಕ್ಕು ನೀಡುವ ಚಿತ್ರಕತೆಗಳಿಲ್ಲ. ಒಂದಷ್ಟು ಉಪಕತೆಗಳು ದೃಶ್ಯವಾಗಿ ಬಂದರೂ ಅವುಗಳು ಕೂಡ ವಾಸ್ತವದ ಗಡಿ ದಾಟುವುದಿಲ್ಲ. ಇಂದಿನ ಒಂದಷ್ಟು ಬಯೋಪಿಕ್‌ಗಳು ಸಾಧಕರ ಇಂದಿನ ಜನಪ್ರಿಯತೆಯನ್ನು ಗಮನದಲ್ಲಿರಿಸಿ ಬಾಲ್ಯದ ಅವರ ಬದುಕನ್ನು ‘ಬೆಳೆವ ಸಿರಿ ಮೊಳಕೆಯಲ್ಲೇ’ ಎಂದು ತೋರಿಸಲು ತಮ್ಮ ಕಾಲ್ಪನಿಕ ಸೃಷ್ಟಿಗಳನ್ನು ತುರುಕುವುದನ್ನು ಕಂಡಿದ್ದೇವೆ. ಆದರೆ ಗಾಂಧೀಜಿಯ ಬದುಕು ಅಂತಹವುಗಳಿಗೆ ವೈರುಧ್ಯವಾಗಿತ್ತೆನ್ನುವುದೇ ವಿಶೇಷತೆ. ಹಾಗಾಗಿ ಗಾಂಧಿ ಯಾಕೆ ಮಹಾತ್ಮನಾದರು ಎಂದು ಚೆನ್ನಾಗಿ ಅರ್ಥ ಮಾಡಿಕೊಂಡವರಷ್ಟೇ ಈ ಚಿತ್ರ ನೋಡಿದರೆ ಅರ್ಥಪೂರ್ಣ.
ಒಬ್ಬ ಮನುಷ್ಯನ ಒಳಗಿನ ತುಮುಲಗಳೇ ಬದಲಾವಣೆಗೆ ಕಾರಣವಾದರೆ ಅದನ್ನು ಸಮರ್ಥವಾಗಿ ತೋರಿಸಬಲ್ಲ ದೃಶ್ಯವೂ ಬೇಕಾಗುತ್ತದೆ. ಉದಾಹರಣೆಗೆ ಅಶೋಕನ ಪರಿವರ್ತನೆಗೆ ಯುದ್ಧ ಮುಗಿದ ಬಳಿಕ ಕಂಡ ರಣಭೂಮಿಯ ಭೀಕರತೆ ಕಾರಣವಾಗಿತ್ತು. ಆದರೆ ಇಲ್ಲಿ ಹಾಗಿಲ್ಲ, ಸುಳ್ಳು ಹೇಳುವುದಿಲ್ಲ ಎನ್ನುವ ತೀರ್ಮಾನ ತೆಗೆದುಕೊಂಡ ಬಾಲ್ಯದ ದೃಶ್ಯಗಳಿವೆ. ಆದರೆ ಯೌವನಕ್ಕೆ ಕಾಲಿಟ್ಟ ಮೇಲೆಯೂ ಸುಳ್ಳು ಮಾತನಾಡಿ ಅವುಗಳಿಗೆ ಸಮರ್ಥನೆ ನೀಡುತ್ತಾ ಹೋಗುತ್ತಾರೆ! ಶ್ರವಣ ಕುಮಾರನ ಕತೆ ಕೇಳಿ ತಂದೆ ತಾಯಿಯ ಮೇಲೆ ಅಗಾಧ ಪ್ರೀತಿ ತೋರಿಸುವ ನಿರ್ಧಾರ ಮಾಡುತ್ತಾರೆ. ಆದರೆ ಆ ಪ್ರೀತಿ ಹೇಗೆ ತೋರಿಸುತ್ತಾರೆ ಎನ್ನುವುದಕ್ಕಿಂತ ಅವರೊಂದಿಗೆ ಸತ್ಯವಂತನಾಗಿ ಮುಂದುವರಿಯಲಿಲ್ಲ ಎನ್ನುವುದನ್ನೇ ದೃಶ್ಯಗಳು ಹೇಳುತ್ತವೆ. ಮೊದಲು ಮಾಂಸಾಹಾರ ತಿನ್ನಲು ಅಸಹ್ಯವಾಯಿತು, ತಿಂದು ಅಭ್ಯಾಸವಾಗುತ್ತಿದ್ದಂತೆಯೇ ಮನೆಯಲ್ಲಿ ‘ಸೇವಿಸಿಲ್ಲ’ ಎಂದು ಸುಳ್ಳು ಹೇಳುವುದು ಕಷ್ಟವಾಯಿತು ಎನ್ನುವ ಕಾರಣಕ್ಕೆ ಮಾಂಸಾಹಾರ ತೊರೆದರೇ? ಅದಕ್ಕೂ ಸ್ಪಷ್ಟತೆಯಿಲ್ಲ. ಹಾಗಾಗಿ ಈ ಎಲ್ಲ ಘಟನೆಗಳ ಬಗ್ಗೆ ಅವರು ಆನಂತರಲ್ಲಿ ನೀಡಿದ ಹೇಳಿಕೆಗಳನ್ನು, ಸರಿಯಾಗಿ ಅರಿತ ಮೇಲೆ ಮಾತ್ರ ಈ ಚಿತ್ರ ನೋಡುವುದು ಸರಿ. ಉಳಿದಂತೆ ಬಾಲಗಾಂಧಿಯ ಕತೆ ಎನ್ನುವ ಕಾರಣಕ್ಕೆ ಬಾಲಕರನ್ನು ಕರೆದುಕೊಂಡು ಚಿತ್ರ ತೋರಿಸಿದರೆ ಇಂದಿನ ಮಕ್ಕಳು ತಾವು ಕೂಡ ಮೊದಲು ಇಂತಹ ಬಾಲ್ಯವನ್ನು ಅನುಭವಿಸಿದ ಮೇಲೆಯೇ ಮುಂದೊಮ್ಮೆ ಗಾಂಧಿಯಂತೆ ಪರಿವರ್ತನೆಯಾಗುತ್ತೇವೆ ಎಂದು ಹೇಳಿದರೆ ಅಚ್ಚರಿಯಿಲ್ಲ!

 ಗಾಂಧಿ ಪರಿವರ್ತನೆಯಾದ ಎನ್ನುವುದನ್ನು ತಂದೆ ಘೋಷಿಸುವುದು ಚಿತ್ರದ ಕ್ಲೈಮ್ಯಾಕ್ಸ್. ಆ ದೃಶ್ಯ ಮನೋಜ್ಞವಾಗಿ ಮೂಡಿಬಂದಿದೆ. ಅಲ್ಲಿಂದಾಚೆ ಗಾಂಧಿಯ ಬದುಕು ಹೇಗಿತ್ತು ಎಂದು ಅರಿಯಲು ಚಿತ್ರ ನೋಡಿದ ಎಲ್ಲರೂ ಗಾಂಧಿಯ ಆತ್ಮಕತೆಯನ್ನೊಮ್ಮೆ ಓದಿ ಮನದಟ್ಟು ಮಾಡುವುದು ಮುಖ್ಯ. ಪಾತ್ರಧಾರಿಗಳ ಆಯ್ಕೆಯಲ್ಲಿ ನಿರ್ದೇಶಕ ಪಿ. ಶೇಷಾದ್ರಿಯವರು ಎಂದಿನಂತೆ ಗೆದ್ದಿದ್ದಾರೆ. ನಾವೆಲ್ಲೋ ನೋಡಿದ ಬಾಲಕ ಗಾಂಧಿಯ ಕಪ್ಪುಬಿಳುಪು ಛಾಯಾಚಿತ್ರಗಳಿಗೆ ಜೀವಬಂದಂತೆ ಕಾಣಿಸುವ ಬಾಲ ಕಲಾವಿದರು ಚಿತ್ರದಲ್ಲಿದ್ದಾರೆ. ದೊಡ್ದ ಕಿವಿಯಷ್ಟೇ ಅಲ್ಲ, ಕಣ್ಣು ನೋಟಗಳಲ್ಲಿಯೂ ಮರಿಗಾಂಧಿ ಕಾಣಿಸುತ್ತಾರೆ. ಪುಟ್ಟ ಬಾಲಕನಾಗಿ ಪರಮಸ್ವಾಮಿ ಮತ್ತು ಯೌವನಕ್ಕೆ ಕಾಲಿಟ್ಟ ಮೋಹನದಾಸನಾಗಿ ಸಮರ್ಥ್ ಇಬ್ಬರಿಂದಲೂ ಸಮರ್ಥವೆನಿಸುವ ನಟನೆ ಹೊರತೆಗೆಯಲಾಗಿದೆ. ಮುಸ್ಲಿಂ ಸ್ನೇಹಿತನಾಗಿ ಸೂರ್ಯ ಸಾಥಿ, ಅಣ್ಣನಾಗಿ ಶ್ರೀರಾಮ್ ಎನ್ನುವ ಯುವ ಕಲಾವಿದರದ್ದು ಪಾತ್ರಕ್ಕೆ ತಕ್ಕ ಅಭಿನಯ. ತಂದೆ ಕರಮ್ ಚಂದ್ ಗಾಂಧಿಯಾಗಿ ಅನಂತ್ ಮಹಾದೇವನ್ ನಟಿಸಿದ್ದಾರೆ. ಪುತಲೀಬಾಯಿಯಾಗಿ ಶ್ರುತಿ ಸಿಕ್ಕ ಅವಕಾಶದಲ್ಲಿ ಹೃದಯಸ್ಪರ್ಶಿಯಾಗಿದ್ದಾರೆ. ತಲೆನೋವಿನ ದೃಶ್ಯವೊಂದರಲ್ಲಂತೂ ತಮ್ಮ ಜೀವನದ ಇದುವರೆಗಿನ ಎಲ್ಲ ಕಷ್ಟಗಳನ್ನು ನೆನಪಿಸಿಕೊಂಡಂತೆ ಚಡಪಡಿಸಿದ್ದಾರೆ. ಕೆಲವೇ ನಿಮಿಷಗಳ ಪಾತ್ರದಲ್ಲಿ ಬಂದರೂ ದತ್ತಣ್ಣ ಗಾಂಧಿಯ ಬದುಕಿನ ಒಂದು ಪ್ರಮುಖ ಘಟನೆಗೆ ಸಾಕ್ಷಿಯಾಗುತ್ತಾರೆ.

ಐತಿಹಾಸಿಕ ಘಟನೆಗಳನ್ನು ತೋರಿಸುವಾಗ ಆ ಕಾಲಘಟ್ಟದ ವಾತಾವರಣ ಸೃಷ್ಟಿಸುವುದೇ ಕಷ್ಟದ ವಿಚಾರ. ಆದರೆ ನಿಗದಿತ ಫ್ರೇಮಿನೊಳಗೆ ಅಂದಿನ ಬದುಕನ್ನು ಸಾಕ್ಷತ್ಕಾರಗೊಳಿಸಿದ ಕೀರ್ತಿ ನಿರ್ದೇಶಕ ಶೇಷಾದ್ರಿ ಮತ್ತು ಛಾಯಾಗ್ರಾಹಕ ಜಿ.ಎಸ್. ಭಾಸ್ಕರ್ ಅವರಿಗೆ ಸಲ್ಲುತ್ತದೆ. ವಸ್ತ್ರಶೈಲಿ, ಪ್ರವೀಣ್ ಗೋಡ್ಖಿಂಡಿಯವರ ಸಂಗೀತ ಕಾಲಘಟ್ಟಕ್ಕೆ ಪೂರಕವಾಗಿದೆ. ಸಂಕಲನಕಾರ ಬಿ.ಎಸ್. ಕೆಂಪರಾಜು ಒಂದು ಪುಟ್ಟ ಪಾತ್ರವನ್ನೂ ಮಾಡಿದ್ದಾರೆ.
ಒಟ್ಟಿನಲ್ಲಿ ಗಾಂಧಿಯನ್ನು ಅರಿತವರು ಇನ್ನಷ್ಟು ಅರಿಯಲು ಈ ಚಿತ್ರ ನೋಡಬಹುದು.

ತಾರಾಗಣ: ಸಮರ್ಥ್, ಶ್ರುತಿ
ನಿರ್ದೇಶನ: ಪಿ. ಶೇಷಾದ್ರಿ
ನಿರ್ಮಾಣ: ಮಿತ್ರ ಚಿತ್ರ

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News