ಎರಡು ಭಾರತಗಳ ನಡುವಿನ ಅಂತರ
ಒಂದೇ ಭಾರತ, ಒಂದೇ ಧರ್ಮ, ಒಂದೇ ಭಾಷೆ ಎಂದೆಲ್ಲ ಆಳುವ ವರ್ಗ ಏನೇ ಹೇಳಿಕೊಳ್ಳಲಿ. ಎಷ್ಟೇ ಭ್ರಮಾಲೋಕವನ್ನು ಸೃಷ್ಟಿಸಲಿ. ವಾಸ್ತವವಾಗಿ ನಮ್ಮಲ್ಲಿರುವುದು ಎರಡು ಭಾರತಗಳು. ಬಹುತ್ವ ಭಾರತದ ಆತ್ಮ ಎಂಬುದನ್ನು ಒಪ್ಪಿಕೊಳ್ಳುತ್ತಲೇ ನಾವೇ ಅಂದರೆ ನಮ್ಮ ಪ್ರಭುತ್ವದ ಆಸರೆಯಲ್ಲಿ ರೂಪುಗೊಂಡ ಎರಡು ಭಾರತಗಳ ಚಿತ್ರ ಬಿಚ್ಚಿಡುವ ಸತ್ಯಗಳು ಭಯಾನಕವಾಗಿವೆ.
ಒಂದು ಹೊತ್ತಿನ ಊಟಕ್ಕೆ ಲಕ್ಷಾಂತರ ಜನ ಪರದಾಡುವ ಈ ಭಾರತ ಒಂದೆಡೆಗಿದ್ದರೆ, ನಿತ್ಯ ಒಂದು ಸಾವಿರ ಕೋಟಿ ರೂಪಾಯಿ ಆದಾಯ ಹೊಂದಿರುವ ಅದಾನಿ ಮತ್ತು ಅಂಬಾನಿಗಳ ಭಾರತ ಇನ್ನೊಂದೆಡೆ ಇದೆ.
ಒಂದು ಭಾರತದಲ್ಲಿ ಸಂಭ್ರಮ, ಸಂತಸ, ಮನೆ ಮಾಡಿದೆ.
ಇನ್ನೊಂದು ಭಾರತದಲ್ಲಿ ನರಳಿಕೆ, ಯಾತನೆ, ಹಸಿವು ನೆಲೆ ನಿಂತಿದೆ. ಭಾರತೀಯರೆಲ್ಲ ಕಾನೂನಿನ ದೃಷ್ಟಿಯಿಂದ ಒಂದೆ. ಆದರೆ, ಎಲ್ಲ ಭಾರತೀಯರ ಬದುಕು ಒಂದೇ ಅಲ್ಲ. ಈ ಘನಘೋರ ಕಂದಕ ಮುಚ್ಚಿ ಹಾಕಲು ಒಂದೇ ಭಾರತ, ಒಂದೇ ಭಾರತ ಎಂಬ ತಿಪ್ಪೆ ಸಾರಿಸುವ ಕೆಲಸ ಅವ್ಯಾಹತವಾಗಿ ನಡೆದಿದೆ.
ನೋಟು ಅಮಾನ್ಯೀಕರಣ, ಜಿಎಸ್‌ಟಿಹಾಗೂ ನಂತರ ಬಂದೆರಗಿದ ಕೊರೋನ ಬಿಕ್ಕಟ್ಟಿನ ಪರಿಣಾಮವಾಗಿ ಭಾರತದ ಆರ್ಥಿಕ ವ್ಯವಸ್ಥೆ ಕುಸಿದು ಪಾತಾಳ ಸೇರಿದೆ. ಲಕ್ಷ ಲಕ್ಷ ಭಾರತೀಯರ ಬದುಕು ಹರಿದು ಚಿಂದಿ ಚಿಂದಿಯಾಗಿದೆ.
ಆದರೆ, ಇದು ಎಲ್ಲ ಭಾರತೀಯರ ಕತೆಯಲ್ಲ . ಇನ್ನೂ ಕೆಲ ಭಾರತೀಯರಿದ್ದಾರೆ. ಅವರಲ್ಲಿ ಐಶ್ವರ್ಯ ಲಕ್ಷ್ಮ್ಮ್ಮಿ ಕಾಲು ಮುರಿದುಕೊಂಡು ಬಿದ್ದಿದ್ದಾಳೆ. ಕೊರೋನದ ಕಳೆದ ಒಂದು ವರ್ಷದಲ್ಲಿ ಲಕ್ಷಾಂತರ ಭಾರತೀಯರು ಕೈಯಲ್ಲಿನ ಕೆಲಸ ಕಳೆದುಕೊಂಡು ಬೀದಿ ಪಾಲಾಗಿದ್ದರೆ, ಅದಾನಿ ಉದ್ಯಮ ಸಮೂಹದ ಮುಖ್ಯಸ್ಥ ಗೌತಮ ಅದಾನಿಯ ಸಂಪತ್ತು ಒಂದೇ ವರ್ಷದಲ್ಲಿ 3.65 ಲಕ್ಷ ಕೋಟಿ ರೂಪಾಯಿಯಷ್ಟು ಹೆಚ್ಚಾಗಿದೆ
. ಅಂದರೆ, ಅದಾನಿಯ ನಿತ್ಯದ ಆದಾಯ ಒಂದು ಸಾವಿರ ಕೋಟಿ ರೂಪಾಯಿ. ಇದು ಹರೂನ್ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳ ವರದಿ.
ಅದಾನಿ ಮನೆಗೆ ಈ ಪರಿ ಸಂಪತ್ತು ಹರಿದು ಬಂದರೆ ಇನ್ನೊಂದೆಡೆ 7.18 ಲಕ್ಷ ಕೋಟಿ ರೂಪಾಯಿ ಸಂಪತ್ತಿನ ಒಡೆತನ ಹೊಂದಿರುವ ಮುಖೇಶ್ ಅಂಬಾನಿ ಈಗಲೂ ಭಾರತದ ನಂ.1 ಶ್ರೀಮಂತ. ಎರಡನೇ ಸ್ಥಾನದಲ್ಲಿ ಗೌತಮ ಅದಾನಿ ವಿಜೃಂಭಿಸುತ್ತಿದ್ದಾರೆ. ದೇಶದ 135 ಕೋಟಿ ಜನರಿಗೆ ಸೇರಬೇಕಾದ ಸಂಪತ್ತನ್ನು ಇವೆರಡು ಮನೆಗೆ ತುಂಬಿದವರು ಯಾರೆಂದು ಬಿಡಿಸಿ ಹೇಳಬೇಕಾಗಿಲ್ಲ.
ನರೇಂದ್ರ ಮೋದಿ ಯವರು ಪ್ರಧಾನಿ ಯಾಗಿ ಅಧಿಕಾರ ವಹಿಸಿಕೊಂಡ ಕಳೆದ 7 ವರ್ಷಗಳಲ್ಲಿ ದೇಶ ಎಲ್ಲಿಗೆ ಬಂದು ನಿಂತಿದೆ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿಯಾಗಿವೆ. ಕಳೆದ ಒಂದು ವರ್ಷದಲ್ಲಿ 179 ಭಾರತೀಯರು ಭಾರಿ ಶ್ರೀಮಂತರಾಗಿ ಹೊರ ಹೊಮ್ಮಿದ್ದಾರೆ. ಹಿಂದಿನ ವರ್ಷ 1.40 ಲಕ್ಷ ಕೋಟಿ ರೂಪಾಯಿಯಷ್ಟಿದ್ದ ಅದಾನಿ ಕುಟುಂಬದ ಆಸ್ತಿ ಈ ವರ್ಷ 5.09 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿದೆ . ನಿತ್ಯ 1 ಸಾವಿರ ಕೋಟಿ ರೂಪಾಯಿ ಆದಾಯದ ಜೊತೆಗೆ ಅಜಮಾಸು ಒಂದು ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ವೌಲ್ಯದ 5 ಕಂಪೆನಿಗಳನ್ನು ಹೊಂದಿರುವ ಏಕೈಕ ಭಾರತೀಯ ಎಂಬ ಹಿರಿಮೆಗೆ ಪ್ರಧಾನಿ ಮೋದಿಯವರ ಮಿತ್ರ ಅದಾನಿ ಪಾತ್ರರಾಗಿದ್ದಾರೆ.
2014ರಿಂದ ಹಿಡಿದು ಪ್ರತಿ ಲೋಕಸಭಾ ಚುನಾವಣೆಯಲ್ಲಿ ತಮಗೆ ಓಡಾಡಲು ವಿಮಾನ ಸೇವೆ ಒದಗಿಸಿದ ಗೌತಮ ಅದಾನಿಯ ಸಂಪತ್ತನ್ನು ಸಾವಿರ ಪಟ್ಟು ಹೆಚ್ಚಿಸಲು ಮೋದಿಯವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಸ್ವಾತಂತ್ರಾ ನಂತರ ಕಷ್ಟಪಟ್ಟು ಸಂಪಾದಿಸಿದ ಸಾರ್ವಜನಿಕ ಸೊತ್ತನ್ನು ಅದಾನಿ ಮತ್ತು ಅಂಬಾನಿಯವರಿಗೆ ಧಾರೆ ಎರೆದು ಕೊಡುವ ಅವರ ಸಾಧನೆ ಅಗಾಧ.ಸಾರ್ವಜನಿಕ ಆಸ್ತಿಯ ಪರಭಾರೆಯ ಹೆಸರಿನಲ್ಲಿ ನಮ್ಮ ರಸ್ತೆಗಳು,ನದಿಗಳು ,ಅಣೆಕಟ್ಟುಗಳು,ಅಮೂಲ್ಯ (ಔಷಧಿ ಸೇರಿ )ಸಸ್ಯ ಸಂಪತ್ತಿನ ಕಾಡುಗಳು, ವಿಮಾನ ನಿಲ್ದಾಣಗಳು, ರೈಲು ಮಾರ್ಗಗಳು, ನಿಲ್ದಾಣಗಳು ಹೀಗೆ ಭಾರತ ಕಳೆದ ಎಪ್ಪತ್ತು ವರ್ಷಗಳಲ್ಲಿ ಗಳಿಸಿದ್ದನ್ನು ಈ ಸಂಪತ್ತಿನ ನಿಜವಾದ ಮಾಲಕರಾದ ಭಾರತದ ಪ್ರಜೆಗಳನ್ನು ಕೇಳದೆ ಅಗ್ಗದ ಬೆಲೆಗೆ ಹಸ್ತಾಂತರ ಮಾಡಿದ ಪರಿಣಾಮವಾಗಿ ಅದಾನಿ,ಅಂಬಾನಿಯಂತಹ ಕೆಲವರು ಸಂಪತ್ತಿನ ಉಪ್ಪರಿಗೆ ಏರಿ ಕುಳಿತಿದ್ದಾರೆ.
ಇದರಿಂದ ಭಾರತ ಒಂದೇ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕಮ್ಯುನಿಸ್ಟ್ ನಾಯಕ ಸೀತಾರಾಮ ಯೆಚೂರಿಯವರು ಭಾರತವನ್ನು ಐಪಿಎಲ್ ಭಾರತ, ಬಿಪಿಎಲ್ ಭಾರತ ಎಂದು ಹಿಂದೊಮ್ಮೆ ವಿಂಗಡಿಸಿದ್ದರು. ಈ ದೇಶದಲ್ಲಿ ಐಷಾರಾಮಿ ಸರಕುಗಳ ಮಾರುಕಟ್ಟೆ ಮೌಲ್ಯ. 40 ಸಾವಿರ ಕೋಟಿ ರೂಪಾಯಿ ದಾಟುತ್ತದೆ. ನೂರು ರೂಪಾಯಿ ವಾಚುಗಳಿಂದ ಹಿಡಿದು ಒಂದೂವರೆ ಲಕ್ಷ ರೂಪಾಯಿ ವಾಚುಗಳು ಇಲ್ಲಿ ಸಿಗುತ್ತವೆ. ಅವರವರ ಹಣಕಾಸಿನ ಖರೀದಿ ಸಾಮರ್ಥ್ಯವನ್ನು ಇದು ಅವಲಂಬಿಸಿದೆ.ಇನ್ನೊಂದೆಡೆ ಭಾರತದ ಬಡ ಕುಟುಂಬಗಳಲ್ಲಿ ಜನಿಸಿದವರು ದೇಶದ ಕನಿಷ್ಠ ಆದಾಯದ ಪಟ್ಟಿಯಲ್ಲಿ ಸೇರಬೇಕೆಂದರೂ ಏಳು ತಲೆಮಾರುಗಳ ಕಾಲ ಕಾಯಬೇಕು.
ಒಂದೆಡೆ ಬಡವರು ತಮ್ಮ ಮಕ್ಕಳ ಮದುವೆ ಮಾಡಲು ಪರದಾಡಿದರೆ ಸಿರಿವಂತರ ಮಕ್ಕಳ ಮದುವೆಯ ಗಮ್ಮತ್ತು ತರಾವರಿ. ಸಹಾರಾ ಉದ್ಯಮ ಸಮೂಹದ ಮಾಲಕ ಸುಬ್ರತೊ ರಾಯ್ ತನ್ನ ಇಬ್ಬರು ಪುತ್ರರ ಮದುವೆಗೆ ಮಾಡಿದ ಖರ್ಚು ಕೋಟ್ಯಂತರ ರೂಪಾಯಿ. ಮದುವೆಗೆ ಬರುವ ಹತ್ತು ಸಾವಿರ ಮಂದಿ ಅತಿಥಿಗಳಿಗಾಗಿ ಸುಮಾರು 200 ಮರ್ಸಿಡಿಸ್ ಬೆಂಜ್ ಕಾರುಗಳನ್ನು ಏರ್ಪಾಡು ಮಾಡಿದ್ದರು.ಬ್ರಿಟನ್‌ನಿಂದ 110 ಮಂದಿಯ ಆರ್ಕೆಸ್ಟ್ರಾ ತಂಡ ಬಂದಿತ್ತು.ಮದುವೆಗೆ ಮಾಡಿದ ಖರ್ಚು 140 ಕೋಟಿ ರೂಪಾಯಿ. ಅದೇ ವರ್ಷ ಉಕ್ಕು ಉದ್ಯಮಿ ಲಕ್ಷ್ಮ್ಮಿ ಮಿತ್ತಲರ ಮಗಳ ಮದುವೆಗೆ ಇದರ ದುಪ್ಪಟ್ಟು ಖರ್ಚು ಮಾಡಲಾಗಿತ್ತು. ಮಿತ್ತಲ್ಮಕ್ಕಳ ಮದುವೆಯ ಆಮಂತ್ರಣ ಇಪ್ಪತ್ತು ಪುಟಗಳಷ್ಟಿತ್ತು.ಅದನ್ನು ಬೆಳಿ್ಳಯ ಬಾಕ್ಸ್‌ನಲ್ಲಿ ಇಟ್ಟು ಹಂಚಲಾಗಿತ್ತು.
ಭಾರತದಲ್ಲಿ ತುತ್ತು ಅನ್ನಕ್ಕಾಗಿ ಹಗಲು ರಾತ್ರಿ ದುಡಿದು ದಣಿವನ್ನು ತಣಿಸಲು ಕಳಪೆ ದರ್ಜೆಯ ಕಂಟ್ರಿ ಸಾರಾಯಿ ಕುಡಿಯುವ ಲಕ್ಷಾಂತರ ಜನರಿರುವ ಈ ಭಾರತದ ಮಹಾನಗರಗಳ ಪಂಚತಾರಾ ಹೊಟೇಲ್ಗಳಲ್ಲಿ ಐವತ್ತು ವರ್ಷಗಳಷ್ಟು ಹಳೆಯದಾದ ಗ್ಲೆನ್‌ಪಿಡಕ್ ವಿಸ್ಕಿಯ ಒಂದು ಬಾಟಲಿಯ ಬೆಲೆ 15 ಲಕ್ಷ ರೂಪಾಯಿ. ಇದನ್ನು ಜಿಂದಾಲ್‌ಗಳು ಮಿತ್ತಲ್‌ಗಳು ನಿತ್ಯವೂ ಕುಡಿಯುತ್ತಾರೆ.
ಒಂದೆಡೆ ಸಾರ್ವಜನಿಕ ಸಂಪತ್ತು ಕೆಲವೇ ಕೆಲವರ ಒಡೆತನಕ್ಕೆ ಸೇರಿದೆ. ಇನ್ನೊಂದೆಡೆ ಸಂಪತ್ತಿನ ನಿರ್ಮಾಪಕರಾದ ಕೋಟಿ, ಕೋಟಿ ಜನ ಬೀದಿಗೆ ಬಿದ್ದಿದ್ದಾರೆ.ಹದಿನಾರು ಕೋಟಿ ರೂಪಾಯಿ ಬೆಲೆಯ ಬುಗಾಟಿ ವೇರಾನ್ ಕಾರು ಭಾರತದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುತ್ತದೆ. ರೋಲ್ಸ್ ರಾಯ್ ಕಾರು ಹೊಂದಿದವರು ಅದನ್ನು ಬಿಟ್ಟು ಇದನ್ನು ಖರೀದಿಸಲು ಮುಗಿಬೀಳುತ್ತಾರೆ.
ಹೀಗೆ ಅಸಮಾನತೆಯ ಕಂದಕ ಅಗಲವಾಗುತ್ತಲೇ ಇದೆ. ಇಂಥ ವಿಷಯಗಳ ಬಗ್ಗೆ ಜನ ಮಾತಾಡಬಾರದೆಂದು ಅವರನ್ನು ಮಂದಿರ ನಿರ್ಮಾಣ, ಮತಾಂತರ ,ಗೊಹತ್ಯೆ ನಿಷೇಧದಂಥ ಭಾವನಾತ್ಮಕ ಭ್ರಮಾಲೋಕಕ್ಕೆ ತಳ್ಳಲಾಗುತ್ತಿದೆ.
ಒಂದೂವರೆ ವರ್ಷದ ಹಿಂದೆ ಕೊರೋನ ಬರುವ ಮುಂಚೆ ಮುಂಬೈಗೆ ಹೋಗಿದೆ. ಅಲ್ಲಿ ಮುಖೇಶ್ ಅಂಬಾನಿಯ ಅಂಟೆಲ್ಲಾ ಎಂಬ ಹೆಸರಿನ ಐಷಾರಾಮಿ ಬಂಗಲೆಯನ್ನು ನೋಡಿ ದಂಗಾಗಿ ಹೋದೆ. 4,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಬೃಹತ್ ಬಂಗಲೆಯಲ್ಲಿ ಆರು ಜನ ಮಾತ್ರ ವಾಸಿಸುತ್ತಾರೆ. ಆದರೆ 600 ಮಂದಿ ನೌಕರರು ಕೆಲಸ ಮಾಡುತ್ತಾರೆ. ಈ ಬಂಗಲೆಯ ಮೊದಲ ಒಂದು ತಿಂಗಳಿನ ವಿದ್ಯುತ್ ಬಿಲ್ 71 ಲಕ್ಷ ರೂಪಾಯಿ. ಪ್ರಾಮಾಣಿಕವಾಗಿ ಬಿಲ್ ಕಟ್ಟಿದ್ದಕ್ಕೆ ಪುರಸ್ಕಾರವಾಗಿ 48,354 ರೂಪಾಯಿ ಡಿಸ್ಕೌಂಟ್ ಕೂಡ ಸಿಕ್ಕಿತು. ಅಂಬಾನಿ ಅವರ ಈ ಬಂಗಲೆಯ ಮೇಲೆ ಮೂರು ಹೆಲಿಪ್ಯಾಡ್‌ಗಳಿವೆ. ಒಂಭತ್ತು ಲಿಫ್ಟ್‌ಗಳಿವೆ. ಪಾರ್ಕಿಂಗ್ ಜಾಗದಲ್ಲಿ 160 ವಾಹನಗಳನ್ನು ನಿಲ್ಲಿಸಬಹುದಾಗಿದೆ. ೊತೆಗೆ ಮನೆಯಲ್ಲಿ ದುಬಾರಿ ಅಡುಗೆ ಸೆಟ್‌ಗಳಿವೆ.
ಒಂದು ಭಾರತದಲ್ಲಿ ಐಶ್ವರ್ಯದ ಉಪ್ಪರಿಗೆ ಏರಿ ಕುಳಿತ ಅಂಬಾನಿ, ಅದಾನಿ, ಮಿತ್ತಲ್‌ರಂಥ ಕೆಲವೇ ಕೆಲವು ಕೋಟ್ಯಧಿಪತಿಗಳಿದ್ದಾರೆ.ಇನ್ನೊಂದು ಭಾರತದಲ್ಲಿ ಕೊರೋನ ಪರಿಣಾಮವಾಗಿ ಲಾಕ್ ಡೌನ್ ,ಉದ್ಯಮ ನಷ್ಟ, ಬೆಲೆ ಏರಿಕೆ,ಖಾಲಿ ಕಿಸೆ, ಹಸಿದ ಹೊಟ್ಟೆ ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆ ಪರಿಣಾಮವಾಗಿ ಬೀದಿಗೆ ಬಿದ್ದಿರುವ ಕೋಟಿ , ಕೋಟಿ ಜನರಿದ್ದಾರೆ.ಜನಸಾಮಾನ್ಯರ ನೆರವಿಗೆ ಬರಬೇಕಾದ ಅಧಿಕಾರದಲ್ಲಿರುವವರು ಬೆಲೆ ಏರಿಕೆಯನ್ನು ಬಹಿರಂಗವಾಗಿ ಸಮರ್ಥಿಸುತ್ತಿದ್ದಾರ.
ಒಂದು ಲೀಟರ್ ಪೆಟ್ರೋಲ್‌ನ ಮೂಲ ಬೆಲೆ ರೂ. 36. ಇದಕ್ಕೆ ರೂ. 37.90 ರಾಜ್ಯಗಳು ವಿಧಿಸುವ ಅಬಕಾರಿ ಶುಲ್ಕ, ತೆರಿಗೆ ಮತ್ತು ಸಾಗಣೆ ವೆಚ್ಚ,ಸಂಸ್ಕರಣೆ, ಡೀಲರ್ ಕಮಿಶ ಸೇರಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ. 104 ಆಗಿದೆ.
ಇದರ ಬೆಲೆ ಏರಿಕೆಯಿಂದ ಉಳಿದ ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಳವಾಗಿ ಬಡವರು, ಮಧ್ಯಮವರ್ಗದ ಜನ ಬದುಕುವುದೇ ದುರ್ಬರವಾಗಿದೆ.
ಮುಖೇಶ್ ಅಂಬಾನಿ ಅವರು ತಮ್ಮ ಪುತ್ರಿಗಾಗಿ ಇನ್ನೊಂದು ಬೃಹತ್ ಬಂಗಲೆಯನ್ನು ಕಡಲ ತೀರದಲ್ಲಿ ನಿರ್ಮಿಸಿದ್ದಾರೆ. ಇದು ಒಬ್ಬ ಅಂಬಾನಿ ಕತೆ ಮಾತ್ರವಲ್ಲ ಕನಿಷ್ಠ ಇಂಥ ನೂರೈವತ್ತು ಜನ ಭಾರತದಲ್ಲಿ ಇದ್ದಾರೆ. ಇವರಿಗೆ ಈ ಸಂಪತ್ತು ಹೇಗೆ ಬಂತು? ಈ ಪ್ರಶ್ನೆಗೆ ಜನರು ಉತ್ತರ ಹುಡುಕಬಾರದೆಂದು ಅವರನ್ನು ಜಾತಿ,ಮತದ ಬಲೆಯಲ್ಲಿ ಕೆಡವಿ ಹಾಕಲಾಗಿದೆ. ಕರ್ಮ ಸಿದ್ಧಾಂತದ ಕತೆ ಕಟ್ಟಿ ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯದ ಫಲವಾಗಿ ಅಂಬಾನಿ, ಅದಾನಿಯವರಂಥ ಸಿರಿವಂತರು ಈ ಜನ್ಮದಲ್ಲಿ ಸುಖವಾಗಿ ಸಂಪತ್ತಿನ ಉಪ್ಪರಿಗೆಯ ಮೇಲಿದ್ದಾರೆ ಎಂದು ಅಮಾಯಕ ಜನರನ್ನು ನಂಬಿಸಲಾಗಿದೆ. ಈ ಕರ್ಮ ಸಿದ್ಧಾಂತದ ಬಲೆಯನ್ನು ಹರಿದೊಗೆಯುವ ವೈಚಾರಿಕ ಜಾಗೃತಿಗೆ ಹಿನ್ನಡೆಯಾಗಿದೆ. ಭಾರತದ ಚರಿತ್ರೆಯಲ್ಲೂ ಕರ್ಮ ಸಿದ್ಧಾಂತದ ಕಪಟತನವನ್ನು ವಿರೋಧಿಸಿದವರು ಭಾರೀ ಬೆಲೆ ತೆತ್ತಿದ್ದಾರೆ. ಇದಕ್ಕೆ ನಮ್ಮ ಅಣ್ಣ ಬಸವಣ್ಣನವರು ಒಂದು ಉದಾಹರಣೆಯಾಗಿದ್ದಾರೆ.
ಈಗ ಚರ್ಚೆ ಆಗಬೇಕಾಗಿರುವುದು, ಜನ ಪ್ರಶ್ನಿಸಬೇಕಾಗಿರುವುದು ಮಂದಿರ, ಮಸೀದಿ ವಿಷಯವನ್ನಲ್ಲ. ಮತಾಂತರ, ಗೋ ಹತ್ಯೆಗಳ ಬಗೆಗಲ್ಲ. ಸಂಪತ್ತಿನ ಸಮಾನ ಹಂಚಿಕೆಯ ಬಗ್ಗೆ ಜನ ಪ್ರಶ್ನಿಸಬೇಕಾಗಿದೆ. ಅದಾನಿ, ಅಂಬಾನಿಗಳ ಸಂಪತ್ತು ಒಮ್ಮಿಂದೊಮ್ಮೆಲೆ ಸಾವಿರಾರು ಪಟ್ಟು ಹೇಗೆ ಹೆಚ್ಚಾಯಿತು ಎಂಬ ಬಗ್ಗೆ ಅಧಿಕಾರದಲ್ಲಿರುವವರನ್ನು ಪ್ರಶ್ನಿಸಬೇಕಾಗಿದೆ.
ಎಲ್ಲ ನಮ್ಮ ಹಣೆ ಬರಹ ಎಂದು ಬಾಯಿ ಮುಚ್ಚಿ ಕುಳಿತರೆ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ.
ಕಳೆದ ಒಂದು ವರ್ಷದಲ್ಲಿ 179 ಭಾರತೀಯರು ಭಾರಿ ಶ್ರೀಮಂತರಾಗಿ ಹೊರ ಹೊಮ್ಮಿದ್ದಾರೆ. ಹಿಂದಿನ ವರ್ಷ 1.40 ಲಕ್ಷ ಕೋಟಿ ರೂಪಾಯಿಯಷ್ಟಿದ್ದ ಅದಾನಿ ಕುಟುಂಬದ ಆಸ್ತಿ ಈ ವರ್ಷ 5.09 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿ. ನಿತ್ಯ 1 ಸಾವಿರ ಕೋಟಿ ರೂಪಾಯಿ ಆದಾಯದ ಜೊತೆಗೆ ಅಜಮಾಸು ಒಂದು ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ವೌಲ್ಯದ 5 ಕಂಪೆನಿಗಳನ್ನು ಹೊಂದಿರುವ ಏಕೈಕ ಭಾರತೀಯ ಎಂಬ ಹಿರಿಮೆಗೆ ಪ್ರಧಾನಿ ಮೋದಿಯವರ ಮಿತ್ರ ಅದಾನಿ ಪಾತ್ರರಾಗಿದ್ದಾರೆ.