ನಹೀ ಖಾನೇ ದೂಂಗಾ...ಘೋಷಣೆ ಜಾರಿಯಾಗಿದೆ...!

Update: 2021-10-17 07:40 GMT

‘‘ಸರ್...ದೇಶದಲ್ಲಿ ಹಸಿವು ಹೆಚ್ಚಿದೆಯಂತಲ್ಲ....’’ ಪತ್ರಕರ್ತ ಎಂಜಲು ಕಾಸಿ, ಚೌಕೀದಾರರನ್ನು ಕೆಣಕಿದ.

‘‘ನಹೀ ಖಾನೇ ದೂಂಗಾ....ತಿನ್ನೋಕೆ ಬಿಡೋಲ್ಲ ಎನ್ನುವ ನನ್ನ ಘೋಷಣೆಯನ್ನು ನಿಜ ಮಾಡಿ ತೋರಿಸಿದ್ದೇನೆ....’’ ಚೌಕೀದಾರರು ಗಡ್ಡ ಸವರಿ ನಕ್ಕು ಹೇಳಿದರು.

‘‘ನಹೀ ಖಾನೇ ದೂಂಗಾ ಎಂದು ನೀವು ಭ್ರಷ್ಟಾಚಾರಿಗಳಿಗೆ ತಾನೇ ಹೇಳಿದ್ದು?’’ ಕಾಸಿ ಪ್ರಶ್ನಿಸಿದ.

‘‘ನೋಡಿ....ನೀವು ತಪ್ಪು ತಿಳಿದುದಕ್ಕೆ ನಾನೇನು ಮಾಡಲಿ. ರೇಷನ್ ಅಂಗಡಿಯಲ್ಲಿ ಹಸಿರು ಕಾರ್ಡ್ ಅಕ್ಕಿದಾರರು ಪುಕ್ಕಟೆ ಅಕ್ಕಿ ಕೊಂಡು ಹೋಗುವುದನ್ನು ತಡೆದು ಎಲ್ಲರಿಗೂ ಸಮಾನ ನ್ಯಾಯ ನೀಡುವ ಉದ್ದೇಶದಿಂದ ಆ ಘೋಷಣೆ ಮಾಡಿದ್ದೆ....ಆಗ ನೀವು ಚಪ್ಪಾಳೆ ತಟ್ಟಿದಿರಿ. ಈಗ ಹಸಿವು ಹೆಚ್ಚಾಗಿದೆ ಎಂದು ಟೀಕೆ ಮಾಡ್ತೀರಿ?’’

‘‘ಸಾರ್, ನೀವು ಹೇಳಿದ್ದು ನಹೀ ಖಾವುಂಗಾ, ನಹೀ ಖಾನೇ ದೂಂಗಾ ಎಂದು. ಆದರೆ ನಿಮ್ಮನ್ನು ನೋಡಿದರೆ ಊಟ ಮಾಡದವರ ಹಾಗೆ ಇಲ್ವಲ್ಲ ....’’ ಚೌಕೀದಾರರನ್ನು ಕಾಸಿ ಕೆಣಕಿದ.

‘‘ನೋಟು ನಿಷೇಧದ ಬಳಿಕ ನಾನು ಊಟಾನೇ ಮಾಡಿಲ್ಲ...ಬೇಕಾದರೆ ಅನಿಲ್ ಅಂಬಾನಿ, ಅದಾನಿ ಅವರಲ್ಲಿ ಕೇಳಿ....’’

‘‘ಸರ್...ನಹೀ ಖಾನೇ ದೂಂಗಾ ಹೇಳಿಕೆಯಿಂದ ದೇಶಕ್ಕೆ ಯಾವ ರೀತಿಯಲ್ಲಿ ಲಾಭವಾಗಿದೆ?’’ ಕಾಸಿ ಅರ್ಥವಾಗದೆ ಕೇಳಿದ.

‘‘ನೋಡಿ...ಮೊದಲು ದೇಶದಲ್ಲಿ ಅಸಮಾನತೆ ಇತ್ತು. ಬಡವರಿಗೊಂದು ನ್ಯಾಯ. ಶ್ರೀಮಂತರಿಗೊಂದು ನ್ಯಾಯ. ಈಗ ಎಲ್ಲರೂ ಸಮಾನ ನ್ಯಾಯವನ್ನು ಪಡೆಯುತ್ತಿದ್ದಾರೆ....’’

‘‘ಅಂದ್ರೆ....?’’ ಕಾಸಿ ಅರ್ಥವಾಗದೆ ಕೇಳಿದ.

‘‘ಅಂದ್ರೆ....ಬಡವರಿಗೆ ಪುಕ್ಕಟೆ ಅಕ್ಕಿ, ಶ್ರೀಮಂತರಿಗೆ ದುಡ್ಡಿನ ಅಕ್ಕಿ ಎಂದಿಲ್ಲ. ಎಲ್ಲರೂ ದುಡ್ಡು ಕೊಟ್ಟೇ ಕೊಂಡು ಕೊಳ್ಳಬೇಕು. ಇದರಿಂದಾಗಿ ಶ್ರೀಮಂತರಿಗೆ ಆಗುತ್ತಿದ್ದ ಅನ್ಯಾಯವನ್ನು ತಡೆದಿದ್ದೇನೆ....’’

‘‘ಆದರೆ ಬಡವರಲ್ಲಿ ಹಸಿವು ಹೆಚಾ್ಚಗಿದೆಯಂತಲ್ಲ....’’ ಕಾಸಿ ಪ್ರಶ್ನಿಸಿದ.

‘‘ಆ ವರದಿಗೆ ಬಳಸಿದ ಮಾನದಂಡ ಸರಿಯಿಲ್ಲ. ಭಾರತೀಯರ ದೇಹ ಪ್ರಕೃತಿಗೂ ವಿದೇಶಿಯರ ದೇಹ ಪ್ರಕೃತಿಗೂ ವ್ಯತ್ಯಾಸವಿದೆ. ಭಾರತೀಯರು ಹಸಿವನ್ನು ಸಹಿಸಿಕೊಳ್ಳಬಲ್ಲರು. ಎರಡು ಮೂರು ದಿನ ಹಸಿವಿನಿಂದ ಇರುವುದು ಅವರಿಗೆ ಅಭ್ಯಾಸ. ಆದುದರಿಂದ ಭಾರತದ ಹಸಿವನ್ನು ವಿದೇಶದ ಹಸಿವಿಗೆ ಹೋಲಿಸುವುದು ಸರಿಯಲ್ಲ.....’’ ಚೌಕೀದಾರರು ವಿವರಿಸಿದರು.

‘‘ಅಂದರೆ ಭಾರತದಲ್ಲಿ ಹಸಿವೇ ಇಲ್ಲ ಅಂತೀರಾ?’’ ಹೊಟ್ಟೆ ಚುರ್‌ಗುಟ್ಟಿತ್ತಿದ್ದರೂ, ಕಾಸಿ ಸಹಿಸಿಕೊಂಡು ಕೇಳಿದ.

‘‘ಇಲ್ವೇ ಇಲ್ಲ. ಬೇಕಾದರೆ ಅದಾನಿ, ಅಂಬಾನಿಯವರನ್ನು ಕೇಳಿ. ಅವರು ಹೇಳ್ತಾರೆ....ಅವರು ಏನಾದರೂ ಹಸಿವಾಗತ್ತೆ ಎಂದು ಹೇಳಿದ್ರೆ ಅದನ್ನು ನಾವು ನಂಬಬಹುದು...ಇದೆಲ್ಲ ಕಾಂಗ್ರೆಸ್‌ನೋರ ಹುನ್ನಾರ. ತಮಗೆ ತಿನ್ನೋಕೆ ಆಗ್ತಾ ಇಲ್ಲ ಎಂದು ಅವರು ಆರೋಪ ಮಾಡ್ತಾ ಇದ್ದಾರೆ....ನಿಜ ನೋಡಿದರೆ ಕಾಂಗ್ರೆಸ್‌ನೋರು ಹಸಿವಿನಲ್ಲಿದ್ದಾರೆ . ಆದುದರಿಂದ ಭಾರತದಲ್ಲಿ ಹಸಿವು ಹೆಚ್ಚಿದೆ ಎಂದು ವರದಿ ಹೇಳಿದೆ. ಅದನ್ನೇ ಮಾಧ್ಯಮಗಳು ತಿರುಚಿವೆ...’’ ಚೌಕೀದಾರರು ನಿಜವನ್ನು ಬಹಿರಂಗಪಡಿಸಿದವರು.

ಅಷ್ಟರಲ್ಲಿ ಸೇವಕನೊಬ್ಬ ಬಂದು ‘‘ಸಾರ್....ಅಣಬೆ ಪಲ್ಯ ಮತ್ತು ಊಟ ಸಿದ್ಧವಿದೆ...’’ ಎಂದು ಘೋಷಿಸಿದ. ಚೌಕೀದಾರರು ಕಾಸಿಯ ಉಪಸ್ಥಿತಿಯನ್ನು ಮರೆತು ಡೈನಿಂಗ್ ಟೇಬಲ್‌ಗೆ ಧಾವಿಸಿದರು. ಕಾಸಿಯ ಹೊಟ್ಟೆ ಚುರ್ರ್‌ ಎಂದು ಅಲ್ಲಿಂದ ಧಾವಿಸಿದವನೇ ಬೀದಿ ಬದಿಯಲ್ಲಿರುವ ಗಂಜಿ ಹೊಟೇಲನ್ನು ಹುಡುಕತೊಡಗಿದ.

ಚೇಳಯ್ಯ

chelayya@gmail.com

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News