ಸಲಗ: ಸಲಗ ನಡೆದಲ್ಲಿ ರಕ್ತದ್ದೇ ದಾರಿ..!
ಸಲಗ ಜೈಲಿನಲ್ಲಿರುವ ಒಬ್ಬ ಕೈದಿ. ಆದರೆ ಆತ ಒಳಗಿದ್ದುಕೊಂಡೇ ಹೊರಗಡೆ ಒಬ್ಬ ರೌಡಿಯ ಕೊಲೆ ಮಾಡಿಸುತ್ತಾನೆ. ರೌಡಿಯ ಕಡೆಯವರು ಸಲಗ ಜೈಲಿನಿಂದ ಬಿಡುಗಡೆಯಾಗುವುದನ್ನೇ ಕಾಯುತ್ತಿರುತ್ತಾರೆ. ಇದು ಚಿತ್ರದ ನಾಯಕ ಸಲಗನ ಪ್ರವೇಶಕ್ಕೂ ಮೊದಲು ದೃಶ್ಯಗಳು ಮೂಡಿಸುವ ’ಹೀರೋ ಬಿಲ್ಡಪ್’ ವಾತಾವರಣ. ಆದರೆ ತನ್ನ ಎಂಟ್ರಿಯಾಗುವಾಗ ಪುಟಗಟ್ಟಲೆ ಡೈಲಾಗ್ ಅಥವಾ ಮ್ಯಾನರಿಸಮ್‌ನಿಂದ ಯಾವುದೇ ಬಿಲ್ಡಪ್ ನೀಡದೆ ಕೃತ್ಯದ ಮೂಲಕವೇ ಗುರುತಿಸಲ್ಪಡುತ್ತಾನೆ ಸಲಗ. ಇದು ನಟ ದುನಿಯಾ ವಿಜಯ್ ನಿರ್ದೇಶಕ ವಿಜು ಕುಮಾರ್ ಆಗಿ ಬದಲಾಗಿರುವ ರೀತಿ.
ಒಬ್ಬ ವ್ಯಕ್ತಿ ರೌಡಿಸಂ ಮಾಡಲು ಏನು ಕಾರಣ ಇರಬಹುದು? ‘‘ಗತ್ತಿಗೆ, ಗಾಂಭೀರ್ಯಕ್ಕೆ, ಗಜ ಗಾಂಭೀರ್ಯಕ್ಕೆ ರೌಡಿಸಮ್ ಮಾಡಿದವನು ಸಲಗ’’ ಎನ್ನುವ ಸಂಭಾಷಣೆ ಕೇಳಿರಬಹುದು. ಆದರೆ ಚಿತ್ರ ನೋಡಿದಾಗ ಗತ್ತಿನಿಂದ, ಗಾಂಭೀರ್ಯದಿಂದ ರೌಡಿಸಮ್ ಮಾಡುವವನು ಸಲಗ ಎಂದು ಅರ್ಥವಾಗುತ್ತದೆ. ಯಾಕೆಂದರೆ ಆತ ರೌಡಿಸಮ್ ಮಾಡಲು ಕಾರಣ ಏನು ಎನ್ನುವುದನ್ನು ಫ್ಲ್ಯಾಶ್ ಬ್ಯಾಕ್ ಮೂಲಕ ತೋರಿಸಲಾಗಿದೆ. ಹಾಗಾಗಿ ಅದು ಒಂದು ಪ್ರತೀಕಾರದ ಕತೆ ಎನ್ನುವುದು ಅರ್ಥವಾಗುತ್ತದೆ.
ಮೊದಲ ಬಾರಿ ನಿರ್ದೇಶನ ಮಾಡುವವರು ಚಿತ್ರದಲ್ಲಿ ತುಂಬಾ ಹೇಳಲು ಹೋಗಿ ದೊಡ್ಡ ಕಾಲಾವಧಿಯ ಚಿತ್ರ ಮಾಡುವುದು ಸಾಮಾನ್ಯ. ಆದರೆ ಎರಡೇ ಗಂಟೆಗಳೊಳಗೆ ಚಿತ್ರ ಮುಗಿಸುವ ಮೂಲಕ ಆ ತಪ್ಪಿನಿಂದ ಪಾರಾಗಿದ್ದಾರೆ ವಿಜಯ್. ಅದರಲ್ಲಿಯೂ ಸ್ಟಾರ್ ನಟನೇ ನಿರ್ದೇಶಕನಾದಾಗ ತನ್ನ ಪಾತ್ರವನ್ನೇ ಮೊೆಸುವುದು ಸಾಮಾನ್ಯ. ಆದರೆ ಎಲ್ಲ ಪಾತ್ರಗಳಿಗೆ ಸರಿಯಾದ ಅವಕಾಶ ನೀಡಿ ತಮ್ಮ ಪಾತ್ರವನ್ನು ಕಲಶವಾಗಿಸಿದ್ದಾರೆ. ಅದರಲ್ಲಿಯೂ ಧನಂಜಯ್ ನಿರ್ವಹಿಸಿರುವ ಪೊಲೀಸ್ ಪಾತ್ರಕ್ಕೆ ತಮ್ಮ ನಿಜವಾದ ಪುತ್ರನ ಹೆಸರನ್ನೇ ಇರಿಸಿರುವುದು, ವಿಜಯ್ ತನ್ನ ಪ್ರತಿಸ್ಪರ್ಧಿ ಪಾತ್ರವನ್ನೂ ಪ್ರೀತಿಸಿರುವುದಕ್ಕೊಂದು ಸೂಚನೆ! ನಾಯಕನಾಗಿ ಕೂಡ ಅವರು ತಮ್ಮಲ್ಲಿನ ನಟನಿಗೊಂದು ಲಗಾಮು ಹಾಕಿಕೊಂಡಿರುವುದು ಎದ್ದು ಕಾಣುವಂತಿದೆ. ಧನಂಜಯ್ ತಮ್ಮ ಇಮೇಜ್ ಉಳಿಸಿಕೊಳ್ಳುವಂತಹ ಪಾತ್ರ ಮಾಡಿದ್ದಾರೆ. ನಾಯಕಿ ಸಂಜನಾ ಆನಂದ್ ಗಟ್ಟಿತನದ ಪ್ರದರ್ಶನಕ್ಕೆ ಒಂದಷ್ಟು ಬೈಗಳು ಮಾತನಾಡಿದ್ದು ಬಿಟ್ಟರೆ ಬೇರೇನಿಲ್ಲ. ರಾಕ್ಲೈನ್ ಸುಧಾಕರ್ ಸೇರಿದಂತೆ ಒಂದೆರಡು ದೃಶ್ಯಗಳಲ್ಲಿ ಮಾತ್ರ ಕಾಣಿಸುವ ಪಾತ್ರಗಳು ಕೂಡ ನೆನಪಲ್ಲಿ ಉಳಿಯಲು ಮಾಸ್ತಿಯ ಸಂಭಾಷಣೆಗಳೇ ಜಾಸ್ತಿ ಕಾರಣವಾಗಿವೆ ಎನ್ನಬಹುದು. ಎನ್‌ಕೌಂಟರ್ ಬಳಿಕ ಮಾಧ್ಯಮಗಳಿಗೆ ನೀಡಲಾಗುವ ಸುದ್ದಿಯ ಬಗ್ಗೆ ವ್ಯಂಗ್ಯವಾಗಿ ಡೈಲಾಗ್ ಹೊಡೆದು ಸಿಳ್ಳೆಗಿಟ್ಟಿಸಿರುವ ನವ ನಟ ನವೀನ್ ಅದಕ್ಕೊಂದು ಉದಾಹರಣೆ ಎನ್ನಬಹುದು. ಮಾತ್ರವಲ್ಲ, ರೌಡಿಗಳ ಜೊತೆಗಿದ್ದುಕೊಂಡೇ ಒಂದೇ ವಾಕ್ಯದಲ್ಲಿ ಅವರನ್ನು ಕೆಣಕುವ ಮಾತನಾಡಿ ನಗುವ ಮಲ್ಲನ ಪಾತ್ರ, ಅದೇ ರೀತಿ ಕೆಂಡ, ಸಾವಿತ್ರಿ ಮೊದಲಾದ ಪಾತ್ರಗಳ ಮ್ಯಾನರಿಸಮ್ಸ್ ಕೂಡ ದೃಶ್ಯಗಳಿಗೆ ಪೂರಕವಾಗಿ ಮೂಡಿ ಬಂದಿವೆ.
ಫ್ಲ್ಯಾಶ್‌ಬ್ಯಾಕ್ ದೃಶ್ಯದಲ್ಲಿ ವಿಜಯ್‌ನ ಬಾಲ್ಯದ ಪಾತ್ರವನ್ನು ನಿಭಾಯಿಸಿರುವ ರಂಗಭೂಮಿ ಪ್ರತಿಭೆ ಶ್ರೀಧರ್ ಮತ್ತು ತಂದೆಯ ಪಾತ್ರದಲ್ಲಿ ಅಭಿನಯಿಸಿರುವ ಸಂಪತ್ ಬಗ್ಗೆ ಕೂಡ ಇಲ್ಲಿ ಉಲ್ಲೇಖಿಸಲೇಬೇಕು. ಚಿತ್ರದಲ್ಲೂ ಶೆಟ್ಟಿ ಎನ್ನುವ ರೌಡಿ ಇಮೇಜ್‌ಗೆ ಬೇಕಾದ ಹೆಸರಿದ್ದರೂ ಯಶ್ ಶೆಟ್ಟಿಯನ್ನು ಪುಕ್ಕಲನಾಗಿ ತೋರಿಸುವಲ್ಲಿ ಪಾತ್ರದ ಕಟ್ಟುವಿಕೆ ಗೆದ್ದಿದೆ.
ವಿಜಯ್ ಅವರು ದುನಿಯಾ ಇಮೇಜ್‌ನಿಂದ ಪೂರ್ತಿ ಹೊರಬರುವ ರೀತಿಯಲ್ಲಿ ಮಾಡಿರುವ ಚಿತ್ರ ಇದು. ಆದರೆ ಚಿತ್ರದ ಆರಂಭದ ದೃಶ್ಯಗಳನ್ನು ಹೆಣೆದ ರೀತಿ ಮತ್ತೆ ಸೂರಿ ಸಿನೆಮಾಗಳನ್ನು ನೆನಪಿಸುವಂತಿದೆ. ನಾಯಕನ ಎಂಟ್ರಿಯನ್ನು ತೋರಿಸುವ ರೀತಿ ರಜನಿಕಾಂತ್ ಅವರ ‘ಕಬಾಲಿ’ಯನ್ನು ನೆನಪಿಸುತ್ತದೆ. ಆದರೆ ಇಲ್ಲಿನ ಪ್ರತೀಕಾರದ ಕತೆ ತೀರ ವೈಯಕ್ತಿಕವಾಗಿರುವಂತಹದ್ದು. ಹಾಗಿದ್ದರೂ ಸಲಗನ ಜೊತೆಗೆ ಒಂದು ಬಳಗ ಇರಲು ಹೇಗೆ ಸಾಧ್ಯವಾಯಿತು ಎನ್ನುವುದಕ್ಕೆ ಕತೆಯಲ್ಲಿ ಉತ್ತರವಿಲ್ಲ. ದೃಶ್ಯದಲ್ಲಿ ಪರಿಹಾರ ಸಿಗದ ಎಷ್ಟೋ ಸಂದೇಹಗಳಿವೆ. ಅವುಗಳಿಗೆ ಸಾಧ್ಯವಾದಷ್ಟು ಸಂಭಾಷಣೆಯಿಂದಲೇ ಉತ್ತರ ನೀಡಲು ಪ್ರಯತ್ನಿಸಿದ್ದಾರೆ ಚಿತ್ರದ ಚಿತ್ರಕತೆಯಲ್ಲಿಯೂ ಕೈ ಜೋಡಿಸಿರುವ ಮಾಸ್ತಿ.
ಜನಪ್ರಿಯ ಹಾಡುಗಳಿದ್ದರೂ ಅವುಗಳನ್ನು ಅಗತ್ಯಕ್ಕೆ ಬೇಕಾದಷ್ಟೇ ಬಳಸಿರುವ ನಿರ್ದೇಶಕ ವಿಜಯ್, ಬೆಂಗಳೂರಿನ ಕೃಷ್ಣ ರಾಜೇಂದ್ರ ಮಾರುಕಟ್ಟೆಯನ್ನು ಕೂಡ ಹಿಂದೆಂದೂ ನೋಡಿರದಂತೆ ತೋರಿಸಿರುವ ಛಾಯಾಗ್ರಾಹಕ ಶಿವಸೇನ, ಹಿನ್ನೆಲೆ ಸಂಗೀತದ ಮೂಲಕ ದೃಶ್ಯಗಳಲ್ಲಿ ತಲ್ಲೀನಗೊಳ್ಳುವಂತೆ ಮಾಡಿರುವ ಚರಣ್ ರಾಜ್ ಒಟ್ಟು ಚಿತ್ರದ ಗುಣಮಟ್ಟ ಉತ್ತಮಗೊಳಿಸಿದ್ದಾರೆ. ಆದರೆ ಸಂಭಾಷಣೆ ಮತ್ತು ರಕ್ತಪಾತದ ಮೂಲಕ ವಯಸ್ಕರಷ್ಟೇ ಚಿತ್ರ ನೋಡುವಂತೆ ಮಾಡಿರುವುದೊಂದೇ ಬೇಸರದ ವಿಚಾರ.
ನಿರ್ದೇಶನ: ದುನಿಯಾ ವಿಜಯ್
ನಿರ್ಮಾಣ: ವೀನಸ್ ಎಂಟರ್ಟೇನರ್
ತಾರಾಗಣ: ದುನಿಯಾ ವಿಜಯ್, ಸಂಜನಾ ಆನಂದ್, ಧನಂಜಯ್