ಹಿಂದುತ್ವ ಮತ್ತು ಅನೈತಿಕ ಪೊಲೀಸ್‌ಗಿರಿ

Update: 2021-10-24 19:30 GMT

ಕಾನೂನು ಆಡಳಿತ ಒಮ್ಮೆ ಸಡಿಲಗೊಂಡರೆ ‘ನಾವು ಗಾಂಧಿಯನ್ನೇ ಬಿಟ್ಟಿಲ್ಲ ನಿಮ್ಮನ್ನು ಬಿಡುತ್ತೇವೆಯೇ’ ಎಂದು ಮುಖ್ಯಮಂತ್ರಿಗಳಿಗೇ ಪತ್ರಿಕಾಗೋಷ್ಠಿಯಲ್ಲಿ ಬೆದರಿಕೆ ಹಾಕುವ ಶೂರಾದಿ ಶೂರರು ಹುಟ್ಟಿಕೊಳ್ಳುತ್ತಾರೆ.


ಕರಾವಳಿಯ ಕೆಲವೆಡೆ ನಡೆಯುತ್ತಿರುವ ಕೋಮು ಗೂಂಡಾಗಿರಿಯ ಬಗ್ಗೆ ಕ್ರಿಯೆಗೆ ಪ್ರತಿಕ್ರಿಯೆಗಳು ಇದ್ದೇ ಇರುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆಡಿರುವ ಮಾತು ಸಹಜವಾಗಿ ವಿವಾದದ ಅಲೆಯನ್ನೆಬ್ಬಿಸಿದೆ. ಧರ್ಮದ ಹೆಸರಿನಲ್ಲಿ ಕಾನೂನನ್ನು ಕೈಗೆ ತೆಗೆದುಕೊಂಡು ಬೀದಿ ಗೂಂಡಾಗಿರಿ ಮಾಡುವವರಿಗೆ ಇದರಿಂದ ಪ್ರಚೋದನೆ ದೊರಕಿದಂತಾಗಿದೆ. ನೇರವಾಗಿ ಆರೆಸ್ಸೆಸ್ ಶಾಖೆಯಿಂದ ಬಂದ ಯಡಿಯೂರಪ್ಪಕೂಡ ಇಂತಹ ಮಾತನ್ನು ಬಹಿರಂಗವಾಗಿ ಆಡಿರಲಿಲ್ಲ. ಆದರೆ, ಅಧಿಕಾರಕ್ಕಾಗಿ ಬಿಜೆಪಿ ಸೇರಿದ ಜನತಾ ಪರಿವಾರದ ಮೂಲದಿಂದ ಬಂದ ಬಸವರಾಜ ಬೊಮ್ಮಾಯಿ ಅವರ ಬಾಯಿಯಿಂದ ಈ ಮಾತು ಕೇಳಿ ಸಹಜವಾಗಿ ಅನೇಕರಿಗೆ ಅಚ್ಚರಿಯಾಗಿದೆ. ಬೊಮ್ಮಾಯಿ ಅವರಿಗೆ ಈಗ ಯಾವುದೇ ಸಿದ್ಧಾಂತ ಮತ್ತು ಮೌಲ್ಯಗಳು ಮುಖ್ಯವಲ್ಲ. ತಮ್ಮ ಕುರ್ಚಿಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಲು ಇಂತಹ ಮಾತನ್ನು ಆಡುವುದು ಬಹುಶಃ ಅವರಿಗೆ ಅನಿವಾರ್ಯ ಆಗಿರಬಹುದು.

ಇವೆಲ್ಲ ಆವೇಶದಲ್ಲಿ ಆಡಿದ ಮಾತುಗಳಲ್ಲ. ಈ ಮಾತುಗಳಿಗೆ ಯಾವುದೇ ಪ್ರಚೋದನೆ ಇಲ್ಲ. ಇವು ಅತ್ಯಂತ ಯೋಚಿಸಿ ರೂಪಿಸಲಾದ ಕಾರ್ಯತಂತ್ರದ ಭಾಗವಾಗಿ ಹೊರ ಬಂದ ಮಾತುಗಳು. ಹೀಗೆ ಮಾತಾಡಿ, ಪ್ರಚೋದಿಸಿ ಹಿಂದುತ್ವದ ಓಟ್ ಬ್ಯಾಂಕ್ ಬಲಿಷ್ಠಗೊಳಿಸುವುದು ಇದರ ಹಿಂದಿನ ಉದ್ದೇಶ.
 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ರೀತಿ ಅನೈತಿಕ ಪೊಲೀಸಗಿರಿಯನ್ನು ಬಹಿರಂಗವಾಗಿ ಸಮರ್ಥಿಸಿಕೊಂಡ ನಂತರ ತಮ್ಮ ಪರಿಕಲ್ಪನೆಯ ಧರ್ಮ ರಕ್ಷಣೆ ಮಾಡಲು ಹೊರಟವರಿಗೆ ಹೊಸ ಉತ್ಸಾಹ ಬಂದಿದೆ. ತುಮಕೂರಿನಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯೊಂದರಲ್ಲಿ ವಿಶ್ವ ಹಿಂದೂ ಪರಿಷತ್ತಿನ ನಾಯಕರೊಬ್ಬರು ‘ಹಿಂದೂಗಳ ಮೇಲೆ ನಡೆವ ಹಲ್ಲೆಗೆ ಪ್ರತಿಕ್ರಿಯೆ ನೀಡಲು ನಾವು ಕತ್ತಿ ಹಿಡಿದರೆ ನಿಮಗೆ ಶವ ಹೂಳಲೂ ಜಾಗ ಸಿಗುವುದಿಲ್ಲ’ ಎಂದು ಬಹಿರಂಗ ಸಭೆಯಲ್ಲಿ ಬೆದರಿಕೆ ಹಾಕಿದ್ದಾರೆ.

ಅಷ್ಟೇ ಅಲ್ಲ, ಗೋ ಹತ್ಯೆ, ಲವ್ ಜಿಹಾದ್ ನಡೆಸಿದರೆ ಸುಮ್ಮನೆ ಬಿಡುವುದಿಲ್ಲ. ನಮ್ಮೆಂದಿಗೆ ಇರಬೇಕೆಂದರೆ ಹೇಳಿದಂತೆ ಕೇಳಿಕೊಂಡಿರಬೇಕು ಎಂದು ಅಬ್ಬರಿಸಿದ್ದಾರೆ. ಹಿಂದೂ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕಿದರೆ ನಿಮ್ಮ ಹೆಣ್ಣು ಮಕ್ಕಳು ಉಳಿಯುವುದಿಲ್ಲ ಎಂದು ಅರಚಾಡಿದ್ದಾರೆ.
ಧರ್ಮ ರಕ್ಷಣೆ ಮಾಡಲು ಹಿಂಸೆ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ. ಇಂತಹದೇ ಮಾತನ್ನು ಸಂಘ ಪರಿವಾರದ ಹೊರತಾಗಿ ಬೇರೆ ಯಾರೇ ಆಡಿದ್ದರೂ ಇಷ್ಟೊತ್ತಿಗೆ ಕೇಸು ಹಾಕಿಸಿಕೊಂಡು ಜೈಲು ಪಾಲಾಗಬೇಕಾಗುತ್ತಿತ್ತು.

ಮುಂದಿನ ಲೋಕಸಭಾ ಚುನಾವಣೆ 2024ರಲ್ಲಿ ನಡೆಯಲಿದೆ. ಕಳೆದ ಏಳು ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿಯ ನರೇಂದ್ರ ಮೋದಿಯವರಿಗೆ ಮತ್ತು ಅವರ ಪಕ್ಷದ ಇತರ ನಾಯಕರಿಗೆ ಜನರ ಮುಂದೆ ಮಾತಾಡಲು ಮುಖವಿಲ್ಲ.

ಕಳೆದ ಏಳು ವರ್ಷಗಳಲ್ಲಿ ವಿನಾಶಕಾರಿ ಆರ್ಥಿಕ, ಸಾಮಾಜಿಕ ನೀತಿಯ ಪರಿಣಾಮವಾಗಿ ಭಾರತದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದೆ. ಜೀವನಾವಶ್ಯಕ ಪದಾರ್ಥಗಳ ಬೆಲೆಗಳ ಏರಿಕೆಯಿಂದ ಜನಸಾಮಾನ್ಯರ ಬದುಕು ಚಿಂದಿ, ಚಿಂದಿಯಾಗಿದೆ. ಹೀಗಾಗಿ ಈ ಬಗ್ಗೆ ಜನರ ಗಮನವನ್ನು ಬೇರೆಡೆ ಸೆಳೆಯಲು ಮತ್ತೆ ಅವರ ಮೆದುಳಿಗೆ ಹಿಂದುತ್ವದ ವಿಷ ಲೇಪನ ಮಾಡಲಾಗುತ್ತಿದೆ.

ಈ ದೇಶದಲ್ಲಿ ಶೇ.80ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳಿದ್ದಾರೆ. ಅವರು ಸುರಕ್ಷಿತವಾಗಿದ್ದಾರೆ. ಆದರೆ, ಸಂಘಪರಿವಾರಕ್ಕೆ ಹಿಂದೂಗಳು ಬರೀ ಹಿಂದೂಗಳಾಗಿದ್ದರೆ ಸಾಲದು ಅವರು ಹಿಂದುತ್ವವಾದಿಗಳು ಆಗಬೇಕು. ಬಿಜೆಪಿಯ ಮತದಾರರಾಗಬೇಕು. ಬೆಲೆ ಏರಿಕೆ, ನಿರುದ್ಯೋಗ, ಅಸಮಾನತೆಯಂತಹ ಪ್ರಶ್ನೆಗಳನ್ನು ಕೇಳದೆ ಬರೀ ಲವ್ ಜಿಹಾದ್, ಗೋ ರಕ್ಷಣೆಯಂತಹ ಮಾತುಗಳನ್ನು ಆಡುತ್ತಾ ಕಮಲದ ಗುರುತಿಗೆ ಮತ ಹಾಕುತ್ತಿರಬೇಕು ಎಂಬುದು ಇವರ ಹೆಬ್ಬಯಕೆ.

ಆದರೆ ಭಾರತದಲ್ಲಿ ಜೈನರು, ಸಿಖ್ಖರು, ಲಿಂಗಾಯತರು ತಾವು ಪ್ರತ್ಯೇಕ ಧರ್ಮ ಎಂದು ಗುರುತಿಸಿಕೊಂಡರು. ಹಿಂದುತ್ವದ ಭಾಗವಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಲೇ ಬಂದರು. ಆದರೆ, ಇವರನ್ನೆಲ್ಲ ಹಿಂದುತ್ವದ ಬುಟ್ಟಿಗೆ ಹಾಕಿಕೊಂಡು ಹಿಂದೂ ರಾಷ್ಟ್ರದ ಮನುವಾದಿ ಗುರಿ ಸಾಧಿಸುವ ಹುನ್ನಾರ ನಡೆಯುತ್ತಲೇ ಇದೆ.

ವಾಸ್ತವವಾಗಿ ಹಿಂದುತ್ವ ಎಂಬುದು ವಸಾಹತು ಶಾಹಿಗಳ ಸೃಷ್ಟಿ. ಯುರೋಪಿನ ವ್ಯಾಪಾರಿಗಳಿಗೆ ಭಾರತದಲ್ಲಿ ಮಾರುಕಟ್ಟೆಯನ್ನು ನಿರ್ಮಿಸಿ ವಿಸ್ತರಿಸಲು ಹಿಂದೆ ಹಿಂದುತ್ವ ಎಂಬ ಧಾರ್ಮಿಕ ನಂಬಿಕೆಯನ್ನು ಹುಟ್ಟು ಹಾಕಲಾಯಿತು ಎಂದು ಆಂಧ್ರ ಪ್ರದೇಶದ ನಾಗಾರ್ಜುನ ವಿಶ್ವವಿದ್ಯಾನಿಲಯದ ಡಾ.ಎನ್.ಅಂಜಯ್ಯ ಒಂದೆಡೆ ಹೇಳಿದ್ದರು. ಧರ್ಮದ ವಿಷಯದಲ್ಲಿ ಭಾರತದಲ್ಲಿ ಎಲ್ಲರೂ ಹಿಂದೂಗಳು ಎಂದು ಹೇಳಿಕೊಂಡು ಬರಲಾಗುತ್ತಿದೆ. 18ನೇ ಶತಮಾನದವರೆಗೆ ಹಿಂದುತ್ವ ಎಂಬುದು ಧಾರ್ಮಿಕ ಅರ್ಥದಲ್ಲಿ ಇರಲಿಲ್ಲ. 1712ರಲ್ಲಿ ಮುಹಮ್ಮದ್ ಕಾಸೀಮ್ ಎಂಬಾತ ಹಿಂದೂ ಪದ ಬಳಕೆ ಮಾಡಿದ. ರಾಜ ತರಂಗಿಣಿ ಸೇರಿದಂತೆ ಅನೇಕ ಐತಿಹಾಸಿಕ ಗ್ರಂಥಗಳಲ್ಲಿ ಹಿಂದೂ ಪದ ಬಳಸಲಾಗಿದೆ. ಆದರೆ, ರಾಮಾಯಣ, ಮಹಾಭಾರತ, ಭಗವದ್ಗೀತೆಗಳಂತಹ ಗ್ರಂಥಗಳಲ್ಲಿ ಹಿಂದೂ ಪದ ಎಲ್ಲೂ ಕಾಣುವುದಿಲ್ಲ. ಬ್ರಿಟಿಷ್ ಆಡಳಿತದಲ್ಲಿ ಮುಸ್ಲಿಂ, ಕ್ರೈಸ್ತ, ಸಿಖ್, ಪಾರ್ಸಿ ಧರ್ಮಗಳನ್ನು ಅನುಸರಿಸದಿರುವವರನ್ನು ಹಿಂದೂಗಳು ಎಂದು ದಾಖಲಿಸಲಾಯಿತು. 1872ರಲ್ಲಿ ನಡೆದ ಮೊದಲ ಜನಗಣತಿಯ ಅಧಿಕೃತ ದಾಖಲೆಗಳಲ್ಲಿ ಇದನ್ನು ಸೇರಿಸಲಾಯಿತು. ಭಾರತದ ಬಹುಸಂಖ್ಯೆಯ ಜನರು ಹಿಂದೂಗಳು. ಈ ಭೂಮಿ ಹಿಂದೂಸ್ಥಾನ. ಇಲ್ಲಿನ ಭಾಷಿಕರು ಹಿಂದಿ ಭಾಷಿಕರು ಎಂದು ಬಿಂಬಿಸುವ ಮೂಲಕ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವಲ್ಲಿ ಯುರೋಪಿನ ವ್ಯಾಪಾರಿಗಳು ಯಶಸ್ವಿಯಾದರು. ವಸಾಹತುಶಾಹಿಗಳ ಈ ರಚನೆಯನ್ನು ಒಪ್ಪಿಕೊಳ್ಳದೇ ವಿರೋಧಿಸಿದರೆ ಇಂದು ದೇಶ ದ್ರೋಹಿ ಎಂದು ಕರೆಸಿಕೊಳ್ಳಬೇಕಾಗುತ್ತದೆ.

ಭಾರತದ ಸಾಂಸ್ಕೃತಿಕ ಇತಿಹಾಸವನ್ನು ಪುರಾತನ ಭಾರತ, ಮಧ್ಯಕಾಲೀನ ಮುಸ್ಲಿಂ ಆಳ್ವಿಕೆಯ ಭಾರತ ಹಾಗೂ ಆಧುನಿಕ ಬ್ರಿಟಿಷ್ ಭಾರತ ಎಂದು ವಿಂಗಡಿಸಲಾಗಿದೆ. ಮೊದಲ ಎರಡು ಭಾಗವನ್ನು ಧಾರ್ಮಿಕ ಆಧಾರದಲ್ಲಿ ವ್ಯಾಖ್ಯಾನಿಸಿದರೆ ಮೂರನೇ ಭಾಗವನ್ನು ಬ್ರಿಟಿಷ್ ಭಾರತ ಎಂದು ಕರೆಯಲಾಗಿದೆಯೇ ಹೊರತು ಕ್ರೈಸ್ತ ಭಾರತ ಎಂದು ಕರೆದಿಲ್ಲ ಎಂಬುದು ಗಮನಾರ್ಹ.

ಹೀಗೆ ಅಸ್ತಿತ್ವಕ್ಕೆ ಬಂದ ಹಿಂದುತ್ವ ನಾನಾ ರೂಪ ತಾಳಿ ಈಗ ಪ್ರಬಲ ರಾಜಕೀಯ ಶಕ್ತಿಯಾಗಿ ಹೊರ ಹೊಮ್ಮಿದೆ. ಅದಕ್ಕೆ ಎದುರಾಳಿಗಳೇ ಇಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಚುನಾವಣೆಯ ಮೂಲಕ ರಾಜಕೀಯ ಅಧಿಕಾರ ಸೂತ್ರ ಹಿಡಿದು ಭಿನ್ನ ವಿಚಾರ ಧಾರೆಗಳನ್ನು ಹೊಸಕಿ ಹಾಕಲು ಮಸಲತ್ತು ನಡೆಸಿದೆ. ಇಂತಹ ಸನ್ನಿವೇಶದಲ್ಲಿ ಕಾನೂನು ಪಾಲನೆಯ ಹೊಣೆ ಹೊತ್ತವರಿಂದ ಕಾನೂನು ಭಂಜಕರಿಗೆ ಪ್ರಚೋದನೆ ದೊರಕುತ್ತಿರುವುದು ಆತಂಕದ ಸಂಗತಿಯಾಗಿದೆ.

ಧರ್ಮಗುರುಗಳು ಅವರ ಕೆಲಸವನ್ನು ಅವರು ಮಾಡುತ್ತಾರೆ. ಆದರೆ ಸಂವಿಧಾನಾತ್ಮಕವಾಗಿ ಅಧಿಕಾರಕ್ಕೆ ಬಂದವರು ಕಾನೂನಿನ ಪರಿಪಾಲಕರಾಗಬೇಕು. ಯಾವುದೇ ಧರ್ಮದ ಪರವಾಗಿ ಅವರು ನಿಲ್ಲವುದು ಅವರ ಘನತೆಗೆ ತಕ್ಕುದಲ್ಲ. ಮುಖ್ಯಮಂತ್ರಿ ಇಲ್ಲವೇ ಯಾವುದೇ ಸಾಂವಿಧಾನಿಕ ಅಧಿಕಾರ ಸ್ಥಾನದಲ್ಲಿ ಇರುವವರ ನಿಷ್ಠೆ ಸಂವಿಧಾನಕ್ಕೆ ಇರಬೇಕೇ ಹೊರತು ಯಾವುದೇ ಧರ್ಮಕ್ಕೆ ಅಲ್ಲ.

ಧರ್ಮ ರಕ್ಷಣೆ ಮತ್ತು ಸಂಸ್ಕೃತಿಯ ಪರಿಪಾಲನೆಯ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಮುಗ್ಧ ಜನರ ಮೇಲೆ ಗೂಂಡಾಗಿರಿ ಮಾಡುವುದು ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿದೆ. ಅದಕ್ಕೆ ಪೊಲೀಸ್ ಇಲಾಖೆಯ ಕೆಲವರ ಪರೋಕ್ಷ ಕುಮ್ಮಕ್ಕೂ ಇದೆ. ಇದನ್ನು ಅಧಿಕಾರದಲ್ಲಿರುವವರು ಬೆಂಬಲಿಸಿದರೆ ರಾಜ್ಯದಲ್ಲಿ ಕಾನೂನು ಆಡಳಿತಕ್ಕೆ ಅರ್ಥವೇ ಇರುವುದಿಲ್ಲ.

  ಭಾರತ 1947ರಲ್ಲಿ ಸ್ವತಂತ್ರಾ ನಂತರ, 1956ರಲ್ಲಿ ಸಂವಿಧಾನ ಸ್ವೀಕರಿಸಿ ಪ್ರಜಾಪ್ರಭುತ್ವ ರಾಷ್ಟ್ರವಾದ ನಂತರ ಇಲ್ಲಿ ಪ್ರಜಾಪ್ರಭುತ್ವವೇ ಧರ್ಮ. ಸಂವಿಧಾನವೇ ಧರ್ಮಗ್ರಂಥ. ಧರ್ಮದ ಹೆಸರಿನಲ್ಲಿ ಸಂವಿಧಾನಕ್ಕೆ ಸವಾಲು ಹಾಕಲು ಯಾರಿಗೂ ಅವಕಾಶ ನೀಡಬಾರದು.

ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರ ನಿಷ್ಠೆ ಸಂವಿಧಾನಕ್ಕೆ ಇರಬೇಕೇ ಹೊರತು ಯಾವುದೇ ಧರ್ಮ, ಜಾತಿ, ಮಠ ಅಥವಾ ಪೀಠಕ್ಕೆ ಅಲ್ಲ.
 ಕಾನೂನು ಆಡಳಿತ ಒಮ್ಮೆ ಸಡಿಲಗೊಂಡರೆ ‘ನಾವು ಗಾಂಧಿಯನ್ನೇ ಬಿಟ್ಟಿಲ್ಲ ನಿಮ್ಮನ್ನು ಬಿಡುತ್ತೇವೆಯೇ’ ಎಂದು ಮುಖ್ಯಮಂತ್ರಿಗಳಿಗೇ ಪತ್ರಿಕಾಗೋಷ್ಠಿಯಲ್ಲಿ ಬೆದರಿಕೆ ಹಾಕುವ ಶೂರಾದಿ ಶೂರರು ಹುಟ್ಟಿಕೊಳ್ಳುತ್ತಾರೆ.
ಧಾರ್ಮಿಕ ಮೂಲಭೂತವಾದಿಗಳು ಮತಾಂಧರು, ಕೋಮುವಾದಿಗಳು ರಾಜ್ಯದ ಮುಖ್ಯಮಂತ್ರಿಗೆ ಬಹಿರಂಗವಾಗಿ ಪ್ರಾಣ ಬೆದರಿಕೆ ಹಾಕುವ ಪರಿಸ್ಥಿತಿ ನಿರ್ಮಾಣ ವಾದರೆ ಜನಸಾಮಾನ್ಯರ ದೈನಂದಿನ ಬದುಕು ಸುರಕ್ಷಿತವಾಗಿ ಇರಲು ಹೇಗೆ ಸಾಧ್ಯ?.

ಬಸವರಾಜ ಬೊಮ್ಮಾಯಿಯವರಿಗೆ ತಮ್ಮ ತಂದೆ ಎಸ್.ಆರ್. ಬೊಮ್ಮಾಯಿ ಅವರು ಆದರ್ಶವಾಗಬೇಕು. ರಾಜಕೀಯ ಕ್ಷೇತ್ರದಲ್ಲಿ ಇನ್ನೂ ಹಲವಾರು ವರ್ಷ ಇದ್ದು ಬೆಳೆಯಬೇಕಾದ ಅವರು ತಾತ್ಕಾಲಿಕ ಅನಿವಾರ್ಯತೆಗಾಗಿ ಅವಸರದ ಹೇಳಿಕೆಗಳನ್ನು ನೀಡಿ ತಮ್ಮ ಮುಂದಿನ ರಾಜಕೀಯ ಭವಿಷ್ಯಕ್ಕೆ ಕಲ್ಲು ಹಾಕಿ ಕೊಳ್ಳಬಾರದು.
ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರನ್ನು ಮುಖ್ಯ ವಾಹಿನಿಯಿಂದ ಪ್ರತ್ಯೇಕಿಸುವುದು ಆರೆಸ್ಸೆಸ್‌ಎರಡನೇ ಸರಸಂಘಚಾಲಕ ಗೋಳ್ವಾಲ್ಕರ್ ಸಿದ್ಧಾಂತ. ಅದನ್ನು ಅವರ ಸ್ವಯಂ ಸೇವಕರು ಈಗಲೂ ಪಾಲಿಸುತ್ತಿದ್ದಾರೆ.
ಕೊರೋನ ಎರಡೂ ಅಲೆ ಅಪ್ಪಳಿಸಿ ಶವಗಳನ್ನು ಅಂತ್ಯಕ್ರಿಯೆ ಮಾಡಲು ಸಮಸ್ಯೆಯಾದಾಗ ತುಮಕೂರು ಸೇರಿದಂತೆ ರಾಜ್ಯದ ನಾನಾ ಕಡೆ ಮುಸ್ಲಿಂ ಯುವಕರು ಹಿಂದೂ ಬಾಂಧವರ ಮೃತದೇಹಗಳನ್ನು ಅವರವರ ಧಾರ್ಮಿಕ ವಿಧಿಯ ಪ್ರಕಾರ ಅಂತ್ಯಕ್ರಿಯೆ ಮಾಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.
 ಅದೇ ತುಮಕೂರಿನಲ್ಲಿ ನಾವು ಕತ್ತಿ ಹಿಡಿದು ನಿಂತರೆ ನಿಮಗೆ ಶವ ಹೂಳಲು ಜಾಗ ಸಿಗದು ಎನ್ನುತ್ತಾರಲ್ಲ, ಅವರಿಗೆ ಏನೆಂದು ಹೇಳಬೇಕು?
ಅವರು ಬೆಂಕಿ ಹಚ್ಚುತ್ತಾ ಹೋಗಲಿ, ನಾವು ಆರಿಸುತ್ತಾ ಸಾಗೋಣ. ಅವರು ಕೆಡವುತ್ತ್ತಾ ಹೋಗಲಿ, ನಾವು ಕಟ್ಟುತ್ತಾ ಹೋಗೋಣ. ಅವರು ದೀಪ ಆರಿಸುತ್ತ್ತಾ ಹೋಗಲಿ, ನಾವು ದೀಪ ಬೆಳಗುತ್ತ್ತಾ ಹೋಗೋಣ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News