ರೈತ ಜನಸಮೂಹದ ಮಿತ್ರ ಟಿಪ್ಪು

Update: 2021-11-10 05:20 GMT

ಟಿಪ್ಪುಸುಲ್ತಾನ್‌ರನ್ನು ಅರ್ಥಮಾಡಿಕೊಳ್ಳಬೇಕಾದರೆ ಟಿಪ್ಪುವಿನ ವಸ್ತುನಿಷ್ಠ ಚಾರಿತ್ರಿಕ ಅವಲೋಕನ ಅವಶ್ಯ. ಟಿಪ್ಪುಕಾಲದಲ್ಲಿ ಸಮಾಜದ ಪುರೋಗಮನಕ್ಕೆ ಪ್ರಧಾನವಾಗಿ ಅಡ್ಡಿಯಾಗಿದ್ದ ವರ್ಗ ಎಂದರೆ ಪಾಳೆಯಗಾರರು. ದಕ್ಷಿಣ ಭಾರತದಲ್ಲಿ, ಅದರಲ್ಲೂ ವಿಶೇಷ ವಾಗಿ ಕರ್ನಾಟಕ ಭಾಗದಲ್ಲಿ ಈಗಿನ ಜಿಲ್ಲೆ ಅಥವಾ ತಾಲೂಕುಗಳ ಗಾತ್ರದಲ್ಲಿ ಈ ಪಾಳೆಗಾರ ಸಂಸ್ಥಾನಗಳಿದ್ದವು. ಈ ಪಾಳೆಗಾರರು ಬೃಹತ್ ಪ್ರಮಾಣದ ಭೂಮಿಗೆ ಒಡೆಯರಾಗಿದ್ದು ಅವುಗಳನ್ನು ಬಡ ರೈತರಿಗೆ ಗೇಣಿಗೆ ಕೊಟ್ಟಿದ್ದರು. ತಮ್ಮದೇ ಚಿಕ್ಕಪುಟ್ಟ ಸೈನ್ಯವನ್ನು ಹೊಂದಿದ್ದ ಇವರು ಸಮಾಜದ ಕೆಳವರ್ಗದ ಜನರನ್ನು ನಿರ್ದಯವಾಗಿ ಶೋಷಿಸುತ್ತಿದ್ದರು. ಜನಕಂಠಕವಾಗಿದ್ದ ಇಂತಹ ಪರಾವಲಂಬಿ ಪಾಳೆಗಾರರನ್ನು ನಿರ್ನಾಮ ಮಾಡುವ ಕೆಲಸವನ್ನು ಮೈಸೂರಿನ ದೊರೆ ಚಿಕ್ಕರಾಜ ಒಡೆಯರ್ ಆಗಲೇ ಪ್ರಾರಂಭಿಸಿದ್ದರಾದರೂ ಅದು ಪೂರ್ಣಗೊಂಡಿರಲಿಲ್ಲ. ಆ ಕೆಲಸವನ್ನು ಹೈದರ್ ಮತ್ತು ಟಿಪ್ಪುಸುಲ್ತಾನ್ ಇಬ್ಬರೂ ಪರಿಣಾಮಕಾರಿಯಾಗಿ ಮಾಡಿ ಮುಗಿಸಿದರು. ಚಿಕ್ಕದೇವರಾಜ ಒಡೆಯರು ಮಂಡ್ಯ, ಮೈಸೂರು ಮತ್ತು ಬೆಂಗಳೂರು ಭಾಗಗಳಲ್ಲಿನ ಪಾಳೆಗಾರರನ್ನು ನಿರ್ನಾಮ ಮಾಡಿದರೆ ಹೈದರ್ ಮತ್ತು ಟಿಪ್ಪು ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿತ್ರದುರ್ಗ, ರಾಯಚೂರು, ಬಳ್ಳಾರಿ, ಧಾರವಾಡ, ತುಮಕೂರು ಮತ್ತು ಕೋಲಾರ ಭಾಗದಲ್ಲಿದ್ದ ಸುಮಾರು 200 ಪಾಳೆಗಾರರನ್ನು ಧ್ವಂಸ ಮಾಡಿ ಇಡೀ ಭಾಗವನ್ನು ಮೈಸೂರು ಸಂಸ್ಥಾನಕ್ಕೆ ಸೇರಿಸಿದರು. ಪಾಳೆಗಾರರ ಒಡೆತನದಲ್ಲಿದ್ದ ಭೂಮಿಯನ್ನು ಉಳುವ ರೈತರಿಗೆ ಹಂಚಿದರು.

ಜಮೀನ್ದಾರಿ ಮತ್ತು ಜಾಗೀರ್ದಾರಿ ಪದ್ಧತಿಗಳನ್ನು ನಾಶಪಡಿಸುವುದಕ್ಕೆ ಟಿಪ್ಪುಸುಲ್ತಾನ್ ಬಹಳ ಉತ್ಸುಕನಾಗಿದ್ದ. ಯಾರು ಭೂಮಿಯನ್ನು ಊಳುತ್ತಾರೋ, ಜಾತಿ, ಮತ, ಧರ್ಮ ಯಾವುದೇ ಆಗಿದ್ದರೂ, ಅವರು ಮಾತ್ರವೇ ಭೂಮಿಯ ಒಡೆತನ ಹೊಂದಿರಬೇಕು ಎಂದು ಟಿಪ್ಪುಘೋಷಿಸಿದ್ದ ಎಂದು ಕಬೀರ್ ಕೌಸರ್ ದಾಖಲಿಸಿದ್ದಾರೆ. ಅಂತೆಯೇ ಪಾಳೆಗಾರರನ್ನು ನಿರ್ದಯವಾಗಿ ಹತ್ತಿಕ್ಕಿ ಅವರ ಒಡೆತನದ ಭೂಮಿಯನ್ನು ಉಳುವ ಗೇಣಿದಾರ ಜನಸಮೂಹಕ್ಕೆ ಹಂಚಿದ್ದು ಆಗಿನ ಕಾಲದಲ್ಲಿ ಕ್ರಾಂತಿಕಾರಕ ಬೆಳವಣಿಗೆಯೇ ಹೌದು. ನಿಜ ಹೇಳಬೇಕೆಂದರೆ ಚರಿತ್ರೆಯಲ್ಲಿ ದಲಿತರು ಮೊತ್ತ ಮೊದಲ ಬಾರಿಗೆ ಭೂಮಿಯ ಒಡೆತನದ ರುಚಿಯನ್ನು ಕಂಡಿದ್ದು ಹೈದರ್ ಮತ್ತು ಟಿಪ್ಪುಕಾಲದಲ್ಲೇ ಎಂದರೆ ಅತಿಶಯೋಕ್ತಿಯಾಗಲಾರದು! ಈ ವಿಚಾರದಲ್ಲಿ ಟಿಪ್ಪು ತನ್ನ ತಂದೆ ಹೈದರ್‌ಗಿಂತಲೂ ಒಂದು ಹೆಜ್ಜೆ ಮುಂದಿದ್ದ. ಬೃಹತ್ ದೇವಸ್ಥಾನಗಳು, ಬ್ರಾಹ್ಮಣ ಮಠಗಳು ನೂರಾರು ಎಕರೆ ಭೂಮಿಯ ಮೇಲೆ ಹೊಂದಿದ್ದ ‘ಮುಕ್ತ ಒಡೆತನದ ಹಕ್ಕಿಗೂ’ ಟಿಪ್ಪುಕತ್ತರಿ ಹಾಕಿದ್ದ. ಇನ್ನೂ ಕೆಲವು ಕಡೆ ಮಠಗಳ, ದೇವಾಲಯಗಳ ಬೃಹತ್ ಪ್ರಮಾಣದ ಜಮೀನನ್ನು ವಶಪಡಿಸಿಕೊಂಡು ಉಳುವ ಶೂದ್ರ ಸಮುದಾಯಕ್ಕೆ ಹಂಚಿದ್ದ! ಸರಕಾರಿ ಹಣ, ಭೂಮಿಗಳನ್ನು ತಮ್ಮ ಸ್ವಂತ ಆಸ್ತಿಯಂತೆ ಮಠ, ದೇವಾಲಯಗಳಿಗೆ ಹಂಚುವ ಮನಸ್ಸುಗಳು ಟಿಪ್ಪುವನ್ನು ವಿರೋಧಿಸುವುದು ಸಹಜ ಅಲ್ಲವೇ? ಈ ಪಾಳೆಗಾರ ವಿರೋಧಿ ಮಿಲಿಟರಿ ಅಭಿಯಾನದ ಪ್ರಕ್ರಿಯೆಯಲ್ಲಿಯೇ ಕರ್ನಾಟಕದ ಏಕೀಕರಣವೂ ದೊಡ್ಡ ಮಟ್ಟದಲ್ಲಿ ಆಯಿತು. ಬೆಳಗಾವಿ ಮತ್ತು ವಿಜಯಪುರದ ಕೆಲವು ಭಾಗಗಳು ಹಾಗೂ ಬೀದರ್ ಮತ್ತು ಕಲಬುರಗಿಗಳ ಸಂಪೂರ್ಣ ಭಾಗಗಳನ್ನು ಹೊರತುಪಡಿಸಿ ಇಡೀ ಕರ್ನಾಟಕ ಟಿಪ್ಪುಆಳ್ವಿಕೆಗೆ ಒಳಪಟ್ಟಿತ್ತು. ಆದರೆ ಈ ಐಕ್ಯ ಕರ್ನಾಟಕ ಕೇವಲ ನಲ್ವತ್ತು ವರ್ಷ ಮಾತ್ರ ಬಾಳಿ ಟಿಪ್ಪುಮರಣದ ನಂತರ ಮತ್ತೆ ಹರಿದು ಹಂಚಿಹೋಯಿತು ಎಂಬುದು ಬೇರೆ ವಿಷಯ.

ಈ ಭೂಸುಧಾರಣೆಯ ಜೊತೆಗೆ ಒಟ್ಟಾರೆ ಗ್ರಾಮೀಣ ಪ್ರದೇಶದ ಆಡಳಿತ ಯಂತ್ರಾಂಗವನ್ನೇ ಉಳುವ ಶೂದ್ರಪರವಾಗಿ ಪುನರ್‌ರೂಪಿಸಿದ್ದು ಟಿಪ್ಪು ಸುಲ್ತಾನನ ಮತ್ತೊಂದು ಕೊಡುಗೆ. ಜೊತೆಗೆ ಉಳುವ ಭೂಮಿಗೆ ನೀರಾವರಿ ಒದಗಿಸಲು ಸಾಕಷ್ಟು ಶ್ರಮಿಸಿದ್ದು ಇನ್ನೊಂದು ಸಾಧನೆ. ದಕ್ಷಿಣ ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ನಾವಿಂದು ಕಾಣುವ ಹತ್ತಾರು ಕರೆಕಟ್ಟೆಗಳು ನಿರ್ಮಾಣವಾಗಿದ್ದು ಟಿಪ್ಪು ಕಾಲದಲ್ಲೇ. ಅಂದಿನ ಮೈಸೂರು ರಾಜ್ಯದ ಒಟ್ಟು ಉಳುವ ಭೂಮಿಯಲ್ಲಿ ಶೇ.35ಕ್ಕೂ ಹೆಚ್ಚು ನೀರಾವರಿ ಸೌಲಭ್ಯಕ್ಕೊಳಪಟ್ಟಿತ್ತು ಎಂಬುದು ಸಾಮಾನ್ಯ ಸಾಧನೆಯಲ್ಲ. ಇಂದಿನ ಕರ್ನಾಟಕವೂ ಆ ಸಾಧನೆಯನ್ನು ಮಾಡಿಲ್ಲ ಎಂಬುದನು್ನ ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು.

ಅಲ್ಲದೆ ಟಿಪ್ಪುಸುಲ್ತಾನ್ ದುಡಿಯುವ ರೈತಾಪಿ ಜನಸಮುದಾಯಕ್ಕೆ ಬಡ್ಡಿರಹಿತ ಸಾಲ ಕೊಡುವ ವ್ಯವಸ್ಥೆ ಮಾಡಿದ್ದ! ಒಂದು ಸ್ವರೂಪದ ಸಾಲವನ್ನು ಎರಡು ವರ್ಷಗಳೊಳಗೆ ಹಾಗೂ ಇನ್ನೊಂದು ಸ್ವರೂಪದ ಸಾಲವನ್ನು ನಾಲ್ಕು ವರ್ಷಗಳ ಒಳಗೆ ತೀರಿಸುವ ಅವಕಾಶ ರೈತಾಪಿಗಿತ್ತು. ಪ್ರಾಯಶಃ ಟಿಪ್ಪುಗಿಂತ ಮುಂಚಿನ ಯಾವ ರಾಜನಾಗಲೀ ಅಥವಾ ಟಿಪ್ಪುನಂತರದಲ್ಲಿ ಇಂದಿನ ಸರಕಾರದ ತನಕವಾಗಲೀ ಈ ರೀತಿಯ ವ್ಯವಸ್ಥೆ ಮಾಡಿದ ಯಾವೊಂದು ಉದಾಹರಣೆಗಳೂ ನಮಗೆ ಸಿಗುವುದಿಲ್ಲ. ಅಂತೆಯೇ ಆಗಿನ ಕಾಲದಲ್ಲಿ ಇಡೀ ದೇಶಾದ್ಯಂತ ಅಷ್ಟೊಂದು ಜನಪ್ರಿಯವಾಗಿರದ ಹತ್ತು ಹಲವು ಬಗೆಯ ಕಾಳುಗಳು, ಎಣ್ಣೆ ಕಾಳುಗಳು, ಔಷಧೀಯ ಸಸ್ಯಗಳು, ತರಕಾರಿಗಳು, ಹಣ್ಣುಗಳು ಮುಂತಾದ ಬೆಳೆಗಳನ್ನು ಬೆಳೆಯುವುದಕ್ಕೆ ಟಿಪ್ಪುರೈತಾಪಿ ಸಮುದಾಯವನ್ನು ಪ್ರೇರೇಪಿಸಿದ. ಒಟ್ಟಾರೆಯಾಗಿ ಸಮಾಜವನ್ನು ಒಂದು ಹೆಜ್ಜೆ ಮುಂದಕ್ಕೊಯ್ಯುವ ಆತನ ದೂರದೃಷ್ಟಿ ನಿಜಕ್ಕೂ ಶ್ಲಾಘನೀಯ

ಒಟ್ಟಾರೆ ಭಾರತೀಯ ಸಮಾಜ ಹಳೆಯ ಜಮೀನ್ದಾರಿ ವ್ಯವಸ್ಥೆಯಿಂದ ಆಧುನಿಕ ಬಂಡವಾಳಶಾಹಿ ವ್ಯವಸ್ಥೆಯಡೆಗೆ ಪರಿವರ್ತನೆಯಾಗುತ್ತಿದ್ದ ಕಾಲಘಟ್ಟದಲ್ಲಿ ಹೈದರ್ ಮತ್ತು ಟಿಪ್ಪುಸುಲ್ತಾನ್ ಮೈಸೂರನ್ನು ಆಳುತ್ತಿದ್ದರು. ನಿಸ್ಸಂದೇಹವಾಗಿ ಅವರಿಬ್ಬರೂ ಹಳೆಯ ಊಳಿಗಮಾನ್ಯ ವ್ಯವಸ್ಥೆಗೆ ವಿರುದ್ಧವಾಗಿ ಹೊಸ ಬಂಡವಾಳಶಾಹಿ ವ್ಯವಸ್ಥೆಯ ಹರಿಕಾರರಾಗಿ ನಿಂತಿದ್ದರು. ಅಂದರೆ ಆ ನಿರ್ದಿಷ್ಟ ಚಾರಿತ್ರಿಕ ಘಟ್ಟದಲ್ಲಿ ಅವರು ಕ್ರಾಂತಿಕಾರಿಗಳೇ ಆಗಿದ್ದರು. ಈಗ ಬಂಡವಾಳಶಾಹಿ ವ್ಯವಸ್ಥೆಗಿಂತಲೂ ಇನ್ನೂ ಮುಂದೆ ಸಮಾಜವಾದಿ ವ್ಯವಸ್ಥೆಯೆಡೆಗೆ ಹೋಗುವುದು ಹೇಗೆ ಕ್ರಾಂತಿಕಾರಿ ಬೆಳವಣಿಗೆಯಾಗುತ್ತದೆಯೋ ಹಾಗೆ ಆ ಕಾಲಘಟ್ಟದಲ್ಲಿ ಊಳಿಗಮಾನ್ಯ ವ್ಯವಸ್ಥೆಯಿಂದ ಬಂಡವಾಳವಾದದೆಡೆಗೆ ಹೋಗುವುದೂ ಆ ಚಾರಿತ್ರಿಕ ಘಟ್ಟದಲ್ಲಿ ಕ್ರಾಂತಿಕಾರಕ ಬೆಳವಣಿಗೆಯಾಗುತ್ತದೆ. ಊಳಿಗಮಾನ್ಯ ವ್ಯವಸ್ಥೆಯನ್ನು ಪ್ರತಿನಿಧಿಸುತ್ತಿದ್ದ ಪಾಳೆಗಾರ-ಭೂಮಾಲಕ ವರ್ಗವನ್ನು ಟಿಪ್ಪು-ಹೈದರ್ ಇಬ್ಬರೂ ನಿರ್ನಾಮ ಮಾಡಿದ್ದು ಇದಕ್ಕೆ ಒಂದು ಉದಾಹರಣೆಯಾದರೆ ಹೊಸ ಬಂಡವಾಳಶಾಹಿ ವ್ಯವಸ್ಥೆಯ ಆಧಾರ ಸ್ತಂಬಗಳಾದ ವ್ಯಾಪಾರ ಮತ್ತು ಕೈಗಾರಿಕೆಗಳನ್ನು ಅಮೋಘವಾಗಿ ಪ್ರೋತ್ಸಾಹಿಸಿದ್ದು ಆ ಕ್ರಾಂತಿಕಾರಿ ಬೆಳವಣಿಗೆಗೆ ಇನ್ನೊಂದು ಉದಾಹರಣೆಯಾಗಿ ಕಾಣುತ್ತದೆ. ಬ್ರಿಟಿಷ್ ಚರಿತ್ರೆಕಾರರೇ ಬರೆದಿರುವಂತೆ ಅಂದಿನ ಮೈಸೂರು ರಾಜ್ಯದಲ್ಲಿ ಪ್ರತಿ ಮೂರು ಮೈಲಿಗಳಿಗೆ ಒಂದರಂತೆ ಸಾಪೇಕ್ಷ ದೊಡ್ಡ ಪಟ್ಟಣಗಳಲ್ಲಿ ಸಂತೆಗಳು ನಡೆಯುತ್ತಿದ್ದವು. ಅದಲ್ಲೂ ಗುಬ್ಬಿ ಮತ್ತು ಹರಿಹರ ಪಟ್ಟಣಗಳಂತೂ ಇಡೀ ಮೈಸೂರು ರಾಜ್ಯದ ಬೃಹತ್ ವ್ಯಾಪಾರಿ ಕೇಂದ್ರಗಳಾಗಿ ಮಾರ್ಪಟ್ಟಿದ್ದವು. ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲಾಗಿತ್ತು. ಬಂಡವಾಳಶಾಹಿ ವ್ಯವಸ್ಥೆಯ ಭ್ರೂಣ ರೂಪವಾಗಿ ಕೃಷಿಯೇತರ ವ್ಯಾಪಾರಿ ವರ್ಗವೊಂದು ಸದೃಢವಾಗಿ ಮೈದಳೆಯುತ್ತಿದ್ದುದು ನಿಜಕ್ಕೂ ಅಂದಿನ ಸಂಕ್ರಮಣ ಘಟ್ಟದಲ್ಲಿ ಕ್ರಾಂತಿಕಾರಕ ಬೆಳವಣಿಗೆಯೇ ಹೌದು. ಆಧುನಿಕ ಪ್ರಭುತ್ವದ ನಿರ್ಮಾಣ, ತಂತ್ರಜ್ಞಾನದ ಬೆಳವಣಿಗೆ, ವ್ಯಾಪಾರ- ವಾಣಿಜ್ಯದಲ್ಲಿ ಅಪಾರ ಪ್ರಗತಿ, ಕೃಷಿಯ ವಾಣಿಜ್ಯೀಕರಣ, ಕೈಗಾರಿಕಾ ಉತ್ಪಾದನೆಯಲ್ಲಿ ಜಿಗಿತ ಮುಂತಾದ ಎಲ್ಲಾ ಕ್ಷೇತ್ರಗಳಲ್ಲೂ ಬಂಡವಾಳಶಾಹಿ ಸಮಾಜದ ಬೀಜರೂಪಗಳು ಟಿಪ್ಪು ಸುಲ್ತಾನನ ಮೈಸೂರು ರಾಜ್ಯದಲ್ಲಿ ಕಾಣುತ್ತಿದ್ದವು. ನಿಜ ಹೇಳಬೇಕೆಂದರೆ ಅಂದಿನ ಯೂರೋಪಿಗಿಂತಲೂ ಟಿಪ್ಪುನೇತೃತ್ವದ ಅಂದಿನ ಮೈಸೂರು ರಾಜ್ಯ ಬಹಳಷ್ಟು ಮುಂದಿತ್ತು. ಬ್ರಿಟಿಷರು ಟಿಪ್ಪುವನ್ನು ಕೊಂದು, ಹಳೆಯ ಮೈಸೂರು ರಾಜರಿಗೆ ರಾಜ್ಯವನ್ನೊಪ್ಪಿಸಿ, ಪಾಳೆಗಾರ, ಭೂಮಾಲಕರಂತಹ ಹಳೆಯ ಊಳಿಗಮಾನ್ಯ ಪ್ರಭುಗಳನ್ನು ಗ್ರಾಮೀಣ ಪ್ರದೇಶದಲ್ಲಿ ಪ್ರತಿಷ್ಠಾಪಿಸಿ ಆಗ ತಾನೆ ಭ್ರೂಣಾವಸ್ಥೆಯಲ್ಲಿದ್ದ ಬಂಡವಾಳಶಾಹಿ ಬೆಳವಣಿಗೆಯನ್ನು ಹೊಸಕಿ ಹಾಕಿ ಹಳೆಯ ಊಳಿಗಮಾನ್ಯ ವ್ಯವಸ್ಥೆಯನ್ನು ಪುನರ್‌ಸ್ಥಾಪಿಸದೇ ಹೋಗಿದ್ದರೆ ಇಂದಿನ ಯೂರೋಪಿಗಿಂತಲೂ ಇಂದಿನ ಇಂಡಿಯಾ ಬಹಳ ಮುಂದಿರುತ್ತಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಹಾಗಾಗಿ, 1799ರ ಮೇ 4ರಂದು ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನನಿಗೆ ಉಂಟಾದ ಸೋಲು ಇಡೀ ಇಂಡಿಯಾದ ಸೋಲೇ ಆಗಿದೆ!

ಟಿಪ್ಪುಹಿಂದೂಗಳನ್ನು ಬಲವಂತವಾಗಿ ಇಸ್ಲಾಮಿಗೆ ಮತಾಂತರಿಸಿದ ಎಂಬುದು ಕೆಲವರ ಪ್ರಧಾನ ತಕರಾರು. ಟಿಪ್ಪುಕಾಲದಲ್ಲಿ ಮತಾಂತರ ಆಗಲೇ ಇಲ್ಲ ಎಂದು ಹೇಳುವುದು ಇನ್ನೊಂದು ತುದಿಯ ಅತಿರೇಕದ ವಾದವಷ್ಟೇ ಆಗುತ್ತದೆಯೇ ಹೊರತು ಅಂದಿನ ಕಾಲಘಟ್ಟದ ವಸ್ತುನಿಷ್ಠ ಚಿತ್ರಣವಾಗುವುದಿಲ್ಲ. ಹೌದು, ಆ ಕಾಲದ ಎಲ್ಲಾ ರಾಜರೂ ತಮ್ಮ ತಮ್ಮ ಧರ್ಮದಲ್ಲಿ ಶ್ರದ್ಧೆ ಇದ್ದಂತೆ, ಇಂದಿನ ಎಲ್ಲಾ ಮಂದಿಗೂ ತಮ್ಮ ತಮ್ಮ ಧರ್ಮದಲ್ಲಿ ಶ್ರದ್ಧೆ ಇರುವಂತೆ ಟಿಪ್ಪುಗೂ ಕೂಡ ಇಸ್ಲಾಮಿನಲ್ಲಿ ಅಪಾರ ಶ್ರದ್ಧೆ ಇತ್ತು. ಆತ ಇಸ್ಲಾಂ ಧರ್ಮದ ಪ್ರತಿಪಾದಕನಾಗಿದ್ದದ್ದೂ ನಿಜ. ಇಸ್ಲಾಂ ಧರ್ಮಕ್ಕೆ ಅನ್ಯ ಧರ್ಮೀಯರು ಮತಾಂತರಗೊಳ್ಳುವಂತೆ ಉತ್ತೇಜಿಸಿದ್ದೂ ನಿಜ. ಅಂತೆಯೇ ದೊಡ್ಡ ಸಂಖ್ಯೆಯ ಹಿಂದೂಗಳು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದೂ ನಿಜ. ಆದರೆ, ಅವು ಯಾವುವೂ ಬಲವಂತದ ಮತಾಂತರಗಳಾಗಿರಲಿಲ್ಲ. ಅವನ ಕಾಲದಲ್ಲಿ ದಲಿತರು, ಸಮಾಜದ ಇನ್ನಿತರ ದಮನಿತ ಶೂದ್ರ ತಳಸಮುದಾಯಗಳು ಹಿಂದೂ ಧರ್ಮದಲ್ಲಿನ ಉಸಿರು ಕಟ್ಟಿಸುವ ವಾತಾವರಣದಿಂದ ಹೊರಬರುವುದಕ್ಕೆ ಉತ್ಸುಕರಾಗಿದ್ದರು. ಅಸ್ಪಶ್ಯತೆಗಳಂತಹ ಅಮಾನವೀಯ ಆಚರಣೆಗಳ ಮೂಲಕ, ಶೋಷಣೆಯ ಮೂಲಕ ತಮ್ಮನ್ನು ಪ್ರಾಣಿಗಳಿಗಿಂತಲೂ ನಿಕೃಷ್ಟವಾಗಿ ಕಾಣುತ್ತಿದ್ದ ಹಿಂದೂ ಧರ್ಮದ ಪರಿಸರದಿಂದ ಹೊರಬರುವುದಕ್ಕೆ ತುದಿಗಾಲಲ್ಲಿ ನಿಂತಿದ್ದ ದಲಿತ ಮತ್ತಿತರ ತಳಸಮುದಾಯಗಳಿಗೆ ಟಿಪ್ಪುನ ನೀತಿಗಳು ಒಂದಿಷ್ಟು ಪ್ರಚೋದನೆ ನೀಡಿದವಷ್ಟೆ.

ಈ ಸ್ವಪ್ರೇರಿತ ಮತಾಂತರಗಳಲ್ಲದೇ ಅಲ್ಪ ಪ್ರಮಾಣದಲ್ಲಿ ‘ಒತ್ತಾಯದ ಮತಾಂತರ’ಗಳೂ ನಡೆದವು. ಭವಿಷ್ಯವಿಲ್ಲದೇ ನಿಕೃಷ್ಟ ಜೀವನ ಸಾಗಿಸುತ್ತಿದ್ದ ಕೈದಿಗಳು, ನಿರ್ಗತಿಕರು, ವೇಶ್ಯೆಯರು, ಭಿಕ್ಷುಕರು ಮುಂತಾದವರಿಗೆ ಉತ್ತಮ ಭವಿಷ್ಯದ ಭರವಸೆ ತೋರಿಸಿಯೂ ಮತಾಂತರ ಮಾಡಿಕೊಳ್ಳಲಾಯಿತು. ಹೀಗೆ ಮತಾಂತರಗೊಂಡವರು ಟಿಪ್ಪುನೇತೃತ್ವದ ಮೈಸೂರು ರಾಜ್ಯದಲ್ಲಿ ಅನೇಕ ಉದ್ಯೋಗಗಳನ್ನು ಪಡೆದುಕೊಂಡು ಭವಿಷ್ಯವನ್ನು ರೂಪಿಸಿಕೊಂಡರು. ವಾಸ್ತವದಲ್ಲಿ ಮೈಸೂರು ಸೈನ್ಯದ ಚೇಲಾ ಬೆಟಾಲಿಯನ್ ಇಂತಹ ಮತಾಂತರಗೊಂಡ ವರ್ಗಗಳ ಜನರಿಂದಲೇ ನಿರ್ಮಾಣವಾದ ಸೈನಿಕ ತುಕಡಿಯಾಗಿತ್ತು. ವಿಶೇಷ ಎಂದರೆ ಇದು ಮೈಸೂರು ಸೈನ್ಯದ ಅತ್ಯುತ್ತಮವಾಗಿ ತರಬೇತುಗೊಂಡ ನಿಷ್ಠ ಮತ್ತು ಧೈರ್ಯಶಾಲಿ ಸೈನಿಕ ತುಕಡಿ ಎಂಬ ಪ್ರಶಂಶೆಗೆ ಒಳಗಾಗಿತ್ತು! ಉತ್ತಮ ಬದುಕಿನ ಭರವಸೆಯ ‘ಆಮಿಷ’ ಒಡ್ಡಿ ನಡೆಸಲಾದ ಈ ‘ಬಲವಂತದ ಮತಾಂತರ’ವನ್ನು ವಿರೋಧಿಸುವಾಗಲೂ, ಈ ನಿರ್ಗತಿಕ ಜನವರ್ಗಗಳಿಗೆ ಪರ್ಯಾಯ ಆಯ್ಕೆಯೇನಾದರೂ ಇತ್ತೇ ಎಂಬ ೋನದಿಂದಲೂ ನೋಡಬೇಕಾಗುತ್ತದೆ

ಇನ್ನೊಂದು ವಿಷಯವನ್ನೂ ಇಲ್ಲಿ ಗಮನಿಸಿ. ಮುಸ್ಲಿಂ ರಾಜರಾದ ಹೈದರಾಬಾದಿನ ನಿಜಾಮರು ಆಳಿದ ಪ್ರದೇಶ ಮತ್ತು ಅದಕ್ಕೂ ಹಿಂದೆ ಮುಸ್ಲಿಂ ದೊರೆಗಳು ಆಳಿದ ಉತ್ತರ ಪ್ರದೇಶಗಳನ್ನು ಟಿಪ್ಪು ಮತ್ತು ಹೈದರ್ ಆಳಿದ ದಕ್ಷಿಣ ಕರ್ನಾಟಕದೊಂದಿಗೆ ಹೋಲಿಸಿ ನೋಡಿ. ನಿಜಾಮರು ಆಳಿದ ಹೈದರಾಬಾದ್ ಮತ್ತು ಮುಸ್ಲಿಂ ದೊರೆಗಳು ಆಳಿದ ಉತ್ತರ ಪ್ರದೇಶಗಳಲ್ಲಿ ಈಗಲೂ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿದ್ದರೆ ದಕ್ಷಿಣ ಕರ್ನಾಟಕದಲ್ಲಿ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿಲ್ಲ. ಟಿಪ್ಪು ಮತ್ತು ಹೈದರಾಲಿಗಳ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣ ಮತ್ತದರ ಸುತ್ತಮುತ್ತಲಿನ ಪ್ರದೇಶಗಳೂ ಈ ಕಟು ಸತ್ಯಕ್ಕೆ ಇಂದಿಗೂ ಸಾಕ್ಷಿಯಾಗಿ ನಿಂತಿವೆ. ಅದಕ್ಕೆ ಪ್ರಧಾನ ಕಾರಣ ಹೈದರ್ ಮತ್ತು ಟಿಪ್ಪುಅನ್ಯ ಧರ್ಮಿಯರನ್ನು ಬೃಹತ್ ಪ್ರಮಾಣದಲ್ಲಿ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡದಿರುವುದೇ ಆಗಿದೆ.

ಟಿಪ್ಪುಪರಧರ್ಮ ಸಹಿಷ್ಣು ಆಗಿದ್ದ ಎನ್ನುವುದಕ್ಕೆ ನಮ್ಮೆದುರು ಬೇಕಾದಷ್ಟು ನಿದರ್ಶನಗಳಿವೆ. ನೆನಪಿರಲಿ, ನಾವು ಯಾವ ಮರಾಠರನ್ನು ಹಿಂದೂಗಳು ಎಂದು ಕರೆಯುತ್ತೇವೆಯೋ ಅದೇ ಮರಾಠರು ಹಿಂದೂಗಳ ಪವಿತ್ರ ಸ್ಥಳವೆನಿಸಿದ ಶೃಂಗೇರಿಯ ಮೇಲೆ ದಾಳಿ ಮಾಡಿ ಶಾರದಾಪೀಠವನ್ನು ಧ್ವಂಸಗೊಳಿದರು. ಆದರೆ, ಮುಸ್ಲಿಂ ಆಗಿದ್ದ ಟಿಪ್ಪು ಶೃಂಗೇರಿ ರಕ್ಷಣೆಗೆ ವಿಫಲನಾಗಿದ್ದಕ್ಕೆ ಕ್ಷಮೆಯಾಚಿಸಿ ಶಾರದಾಪೀಠದ ಮರುಸ್ಥಾಪನೆಗೆ, ಅದರ ಜೀರ್ಣೋದ್ಧಾರಕ್ಕೆ ಅಪಾರ ನೆರವು ನೀಡಿದ ದಾಖಲೆಗು ಇಂದಿಗೂ ಶೃಂಗೇರಿ ಮಠದಲ್ಲಿವೆ.

ಅಷ್ಟೇ ಏಕೆ, ನಂಜನಗೂಡಿನ ದೇವಾಲಯದಲ್ಲಿ ಪಚ್ಚೆಲಿಂಗ ಸ್ಥಾಪನೆ, ದೇವನಹಳ್ಳಿಯ ಕೋಟೆಯ ವೇಣುಗೋಪಾಲಸ್ವಾಮಿ, ತಮಿಳುನಾಡಿನ ನಾಮಕಲ್ ಕೋಟೆಯಲ್ಲಿರುವ ರಂಗನಾಥಸ್ವಾಮಿ ಮತ್ತು ನರಸಿಂಹಸ್ವಾಮಿ, ಬಾದಾಮಿಯ ವಾತಾಪಿ, ಬೆಂಗಳೂರು ಕೋಟೆಯಲ್ಲಿರುವ ಗಣೇಶನ ದೇವಸ್ಥಾನ, ಮೇಲುಕೋಟೆಯ ದೇವಸ್ಥಾನ ಮುಂತಾದವುಗಳಿಗೆ ಆತ ನೀಡಿದ ಅಪಾರ ಹಣಕಾಸಿನ ನೆರವನ್ನು ಯಾರಾದರೂ ಮರೆಮಾಚಲಾದೀತೆ? ಅಷ್ಟೆಲ್ಲಾ ದೂರ ಹೋಗಬೇಡಿ. ಆತ ಮುಸ್ಲಿಂ ಮತಾಂಧನಾಗಿದ್ದರೆ, ಹಿಂದೂ ವಿರೋಧಿಯಾಗಿದ್ದರೆ ತನ್ನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲೇ ನೂರಾರು ವರ್ಷಗಳಿಂದ ತಲೆಯೆತ್ತಿ ನಿಂತಿದ್ದ ಶ್ರೀರಂಗನಾಥಸ್ವಾಮಿ ದೇವಸ್ಥಾನವನ್ನು ಯಾಕೆ ಕೆಡವಲಿಲ್ಲ? ಬದಲಿಗೆ ಅದಕ್ಕೆ ದಾನದತ್ತಿಗಳನ್ನು ಏಕೆ ಮಾಡಿದ? ಒಂದೆಡೆ ಮಸೀದಿಯಿಂದ ನಮಾಝ್, ಇನ್ನೊಂದೆಡೆ ಶ್ರೀರಂಗನಾಥಸ್ವಾಮಿ ದೇವಸ್ಥಾನದಿಂದ ಘಂಟಾನಾದ ಕೇಳುತ್ತಲೇ ಪ್ರಶಾಂತಚಿತ್ತದಿಂದ ಶ್ರೀರಂಗಪಟ್ಟಣದಲ್ಲಿ ಟಿಪ್ಪುನೆಲೆಸಿದ್ದಕ್ಕೆ ಬೇರೇನಾದರೂ ಕಾರಣಗಳಿದ್ದವೆ? ಬೆಂಗಳೂರಿನ ಕೋಟೆ ವೆಂಕಟರಮಣ ದೇವಾಸ್ಥಾನದ ಬಳಿಯಲ್ಲಿಯೇ ತನಗೊಂದು ಅರಮನೆಯನ್ನೇಕೆ ಕಟ್ಟಿಕೊಂಡ? ತನ್ನ ಕಾಲದಲ್ಲಿ ಚಾಲ್ತಿಯಲ್ಲಿದ್ದ ತ್ರಿಶೂಲ, ಲಕ್ಷ್ಮೀದೇವಿಯ ಕೆತ್ತನೆಗಳಿರುವ ನಾಣ್ಯಗಳನ್ನು ಹಿಂದೆಗೆದುಕೊಳ್ಳಲಿಲ್ಲ? ಅಷ್ಟೇ ಏಕೆ, ಆತ ಬೆರಳಿಗೆ ಹಾಕಿಕೊಂಡಿದ್ದ ಉಂಗುರದ ಮೇಲೆ ದೇವನಾಗರಿ ಲಿಪಿಯಲ್ಲಿ ‘ರಾಮ’ ಎಂದು ಕೆತ್ತಲಾಗಿತ್ತು! (ಟಿಪ್ಪು ಮರಣಾನಂತರ ಆತನ ಬಹಳಷ್ಟು ವಸ್ತುಗಳ ಜೊತೆ ಈ ಉಂಗುರವನ್ನೂ ಬ್ರಿಟಿಷರು ಒಯ್ದಿದ್ದರು. ಇದನ್ನು 2014ರಲ್ಲಿ ಇಂಗ್ಲೆಂಡಿನಲ್ಲಿ ಹರಾಜು ಹಾಕಲಾಯಿತು)

ಇನ್ನು ಹೈದರ್ ಮತ್ತು ಟಿಪ್ಪು ನಡೆಸಿದ ಬ್ರಿಟಿಷ್ ವಿರೋಧಿ ಯುದ್ಧಗಳು ಇಡೀ ಬ್ರಿಟಿಷ್ ಚಕ್ರಾಧಿಪತ್ಯವನ್ನೇ ಅಲುಗಾಡಿಸಿ ಬಿಟ್ಟಿದ್ದವು ಎಂಬ ಸತ್ಯವನ್ನು ಹೇಗೆ ಮರೆಯಲು ಸಾಧ್ಯ? ‘ನಮ್ಮವರೇ’ ಆದ ಮರಾಠರು, ನಿಜಾಮರು ಹೊರಗಿನ ಬ್ರಿಟಿಷ್ ವಸಾಹತುಶಾಹಿಗಳೊಂದಿಗೆ ಕೈಜೋಡಿಸಿದರೆ ಹೈದರ್ ಮತ್ತು ಟಿಪ್ಪು ಕೊನೆಯ ಉಸಿರಿರುವ ತನಕವೂ ಬ್ರಿಟಿಷರಿಗೆ ಶರಣಾಗದೇ ಧೀರೋದ್ಧಾತವಾಗಿ ಹೋರಾಡಿ ರಣರಂಗದಲ್ಲೇ ವೀರಮರಣವನ್ನಪ್ಪಿದವರು. ಸೈನ್ಯಾಧಿಕಾರಿಗಳ ನೇತೃತ್ವದಲ್ಲಿ ಬಡಸೈನಿಕರನ್ನು ಯುದ್ಧಭೂಮಿಗೆ ಕಳುಹಿಸಿ ಅಂತಃಪುರದಲ್ಲಿ ಆರಾಮಾಗಿರುವ ರಾಜರು ಭಾರತದ ಚರಿತ್ರೆಯಲ್ಲಿ ಪುಟಕ್ಕೊಬ್ಬರಂತೆ ಸಿಗುತ್ತಾರೆ. ಆದರೆ, ಒಬ್ಬ ಸಾಮಾನ್ಯ ಸೈನಿಕನಂತೆ ರಣರಂಗದಲ್ಲಿ ಕಾದಾಡಿ ಸಾಯುವ ಟಿಪ್ಪುನಂತಹ ರಾಜರು ಚರಿತ್ರೆಯಲ್ಲಿ ಕಾಣಸಿಗುವುು ಬಹಳ ಅಪರೂಪ.

ಹೈದರ್ ಮತ್ತು ಟಿಪ್ಪುಆಳಿದ್ದು 1761ರಿಂದ 1799ರ ತನಕ. ಈ ಮೂವತ್ತೆಂಟು ವರ್ಷಗಳಲ್ಲಿ ಅವರು ಯುದ್ಧ ಮಾಡದ ಒಂದೇ ಒಂದು ವರ್ಷವೂ ಇಲ್ಲ ಎಂಬುದು ನಂಬಲು ಕಷ್ಟವಾದರೂ ನಂಬಲೇಬೇಕಾದ ಸತ್ಯ. ಅವರು ಸಿಂಹಾಸನದ ಮೇಲೆ ಕುಳಿತು ಕಳೆದ ಸಮಯಕ್ಕಿಂತಲೂ ರಣರಂಗದಲ್ಲಿ ಕುದುರೆಯ ಮೇಲೆ ಕುಳಿತು ಕಳೆದ ಸಮಯವೇ ಹೆಚ್ಚು ಎಂದು ಚರಿತ್ರೆಕಾರರು ಬೊಟ್ಟುಮಾಡಿ ತೋರಿಸುತ್ತಾರೆ!

ಅದರಲ್ಲೂ ಬ್ರಿಟಿಷರ ವಿರುದ್ಧ ಅವರು ನಡೆಸಿದ ನಾಲ್ಕು ವಸಾಹತುಶಾಹಿ ವಿರೋಧಿ ಯುದ್ಧಗಳು ಅತ್ಯಂತ ಪ್ರಮುಖವಾಗಿವೆ. ಈ ಯುದ್ಧಗಳಲ್ಲೇ ಅವರು ಬರೋಬ್ಬರಿ ಒಂಭತ್ತು ವರ್ಷಗಳನ್ನು ಕಳೆದರು! ಯುದ್ಧಗಳ ನಡುವಿನ ಅವಧಿಯಲ್ಲಿ ಮುಂದಿನ ಯುದ್ಧಕ್ಕಾಗಿನ ಸಿದ್ಧತೆಗಳು! ಹೀಗಾಗಿ, ತಮ್ಮ ಮೂವತ್ತೆಂಟು ವರ್ಷಗಳ ಆಡಳಿತದುದ್ದಕ್ಕೂ ಅವರ ಪ್ರಧಾನ ಧ್ಯೇಯ ಅಂತ ಇದ್ದದ್ದು ಬ್ರಿಟಿಷರನ್ನು ಈ ನೆಲದಿಂದ ಒದ್ದೋಡಿಸಿ ಭರತಖಂಡವನ್ನು ಸ್ವತಂತ್ರಗೊಳಿಸುವುದೇ ಆಗಿತ್ತು. ಶಸ್ತ್ರಾಸ್ತ್ರಗಳ ತಯಾರಿಕೆಯಿರಲಿ ಅಥವಾ ಅವುಗಳ ಬಳಕೆಯಿರಲಿ, ಸೈನಿಕರ ನೇಮಕಾತಿಯಿರಲಿ ಅಥವಾ ಅವರ ನಿಯೋಜನೆಯಿರಲಿ, ತೆರಿಗೆ ಸಂಗ್ರಹವಿರಲಿ ಅಥವಾ ಅದರ ಉಪಯೋಗವಿರಲಿ - ಅವು ಏನೇ ಮಾಡಿದರೂ ಅದು ಬ್ರಿಟಿಷರನ್ನು ಸೋಲಿಸಿ ಸಾಗರದಾಚೆಗೆ ಎಸೆಯುವ ಪ್ರಧಾನ ಉದ್ದೇಶಕ್ಕೆ ನೆರವಾಗುವಂತೆ ಮಾಡುತ್ತಿದ್ದರು. ಬ್ರಿಟಿಷರನ್ನು ಶತಗತಾಯ ಈ ನೆಲದಿಂದ ಹೊರ ದಬ್ಬುವುದಕ್ಕಾಗಿಯೇ ಟಿಪ್ಪು ಸುಲ್ತಾನ್ ಶಿಸ್ತುಬದ್ಧ 1,43,000 ಸೈನಿಕರನ್ನು ಸಜ್ಜುಗೊಳಿಸಿದ್ದ! ಅಂದಿನ ಕರ್ನಾಟಕದ ಜನಸಂಖ್ಯೆಯೇ ಹೆಚ್ಚೆಂದರೆ 35 ಲಕ್ಷವಿತ್ತು. ರಾಜ್ಯದ ಪ್ರತೀ 40 ಪ್ರಜೆಗಳಿಗೊಬ್ಬರಂತೆ ರೆಗ್ಯೂಲರ್ ಮೈಸೂರು ಸೈನ್ಯದಲ್ಲಿ ಒಬ್ಬ ಸೈನಿಕನಿದ್ದ! 1979ರಲ್ಲಿ ಟಿಪ್ಪುಸತ್ತಾಗ ಬ್ರಿಟಿಷರಿಗೆ ಇಂದಿನ ಮದ್ದೂರಿನಲ್ಲಿ ಸಿಕ್ಕ ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ನೋಡಿ ಬ್ರಿಟಿಷರು ದಂಗಾಗಿ ಹೋಗಿದ್ದರು. ಆ ಕಾರಣಕ್ಕೇನೇ ಅದಕ್ಕೆ ಮದ್ದೂರು (ಮದ್ದುಗುಂಡುಗಳ ಊರು) ಅಂತ ಹೆಸರು ಬಂದಿದ್ದು!

ಇಡೀ ವಿಶ್ವದ ಚರಿತ್ರೆಯಲ್ಲೇ ಮೊತ್ತ ಮೊದಲ ಬಾರಿಗೆ ಕ್ಷಿಪಣಿಗಳನ್ನು ತಯಾರಿಸಿ ಬಳಸಿದವರು ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನ್. ವಿಶ್ವದ ಮೊತ್ತ ಮೊದಲ ಕ್ಷಿಪಣಿಗಳನ್ನು 1780ರಲ್ಲೇ ಬ್ರಿಟಿಷರ ವಿರುದ್ಧ ಹೈದರ್ ಬಳಸಿದ್ದ ಎಂಬುದನ್ನು ಹಾಗೂ ಅದನ್ನು ಅನುಕರಿಸಿ 1805ರಲ್ಲಿ ವಿಲಿಯಂ ಕಾಂಗ್ರೀವ್ ಎಂಬ ಬ್ರಿಟಿಷ್ ವಿಜ್ಞಾನಿ ಕ್ಷಿಪಣಿಗಳನ್ನು ರೂಪಿಸಿದ ಹಾಗೂ 1806ರ ಬೌಲೋಗ್ನ್ ಯುದ್ಧದಲ್ಲಿ ಅದನ್ನು ಬಳಸಲಾಯಿತು ಎಂದು ಕೆನೆತ್ ಮ್ಯಾಕ್ಸೆ ಅವರು ‘ಗಿನ್ನಿಸ್ ಹಿಸ್ಟರಿ ಆಫ್ ಲ್ಯಾಂಡ್ ವಾರ್‌ಫೇರ್’ ಪುಸ್ತಕದಲ್ಲಿ ಸ್ವಷ್ಟವಾಗಿ ದಾಖಲಿಸಿದ್ದಾನೆ. ಸುಮಾರು 1.4 ಕಿ.ಮೀ. ವರೆಗೆ ಚಿಮ್ಮಬಲ್ಲ ಈ ಕ್ಷಿಪಣಿ ತಂತ್ರಜ್ಞಾನದ ಬಗ್ಗೆ ಬ್ರಿಟಿಷರಿಗಿರಲಿ, ಇಡೀ ವಿಶ್ವಕ್ಕೇ ಗೊತ್ತಿರಲಿಲ್ಲ. ಹೈದರ್ ಅವುಗಳನ್ನು ಬಳಸಿದ ಬರೊಬ್ಬರಿ ಮೂವತ್ತೇಳು ವರ್ಷಗಳ ನಂತರವಷ್ಟೇ ಆ ತಂತ್ರಜ್ಞಾನವನ್ನು ಅರಿಯಲು ಬ್ರಿಟಿಷರಿಗೆ ಸಾಧ್ಯವಾಗಿದ್ದು. ಟಿಪ್ಪು ಮರಣದ ನಂತರವಷ್ಟೇ ಬ್ರಿಟಿಷರು ಶ್ರೀ�

Writer - ಕುಮಾರ್ ಬುರಡಿಕಟ್ಟಿ

contributor

Editor - ಕುಮಾರ್ ಬುರಡಿಕಟ್ಟಿ

contributor

Similar News