ಅಧಿಕಾರದ ಮದಕ್ಕೆ ರೈತರ ಅಂಕುಶ

Update: 2021-11-20 05:57 GMT

ಕೃಷಿ ಕಾನೂನುಗಳ ಹಿಂದೆಗೆತವು ಅಹಂಕಾರ ಮತ್ತು ಅಧಿಕಾರದ ಮದದ ವಿರುದ್ಧ ಸತ್ಯಾಗ್ರಹದ, ಸತ್ಯದ ಶಕ್ತಿಯ ವಿಜಯವಾಗಿದೆ. ಇದೊಂದು ಅಪರೂಪದ, ಭಾಗಶಃ ಹಾಗೂ ಪ್ರಾಯಶಃ ಹಿಂಪಡೆಯಬಹುದಾದ ಗೆಲುವಾಗಿದೆ. ಆದರೆ ಗೆಲುವು ಹೇಗಿದ್ದರೂ ಗೆಲುವೇ ತಾನೇ.


ದೇಶದ ಆದಾಯ ಹಾಗೂ ಉತ್ಪಾದನಾಶೀಲತೆಯನ್ನು ಹೆಚ್ಚಿಸುತ್ತವೆ ಎಂಬ ನಂಬಿಕೆಯಿಂದ ಕೆಲವು ಮಾರುಕಟ್ಟೆ ಅರ್ಥಶಾಸ್ತ್ರಜ್ಞರು ಈಗ ಮೋದಿ ಸರಕಾರ ಹಿಂದೆಗೆದುಕೊಂಡಿರುವ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಬೆಂಬಲಿಸಿದ್ದರು. ಆದರೆ ಎಡಪಂಥೀಯ ಒಲವುಳ್ಳ ಅರ್ಥಶಾಸ್ತ್ರಜ್ಞರು ಈ ಕಾಯ್ದೆಗಳು ದೊಡ್ಡ ಉದ್ಯಮ ಕುಳಗಳ ಕಳ್ಳಾಟಗಳಿಗೆ ಕೃಷಿಕರನ್ನು ಬಲಿಪಶುಗಳಾಗಿ ಮಾಡುತ್ತವೆಯೆಂದು ಗ್ರಹಿಸಿ ಅವುಗಳನ್ನು ವಿರೋಧಿಸಿದ್ದರು. ಆದರೆ ಈ ಲೇಖಕನಿಗೆ ಕೃಷಿ ಕಾನೂನುಗಳಲ್ಲಿರುವ ವಿಷಯಗಳ ಬಗ್ಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಈ ಕಾಯ್ದೆಗಳ ಕರಡನ್ನು ರೂಪಿಸುವಲ್ಲಿ ಹಾಗೂ ಅವುಗಳನ್ನು ಸಂಸತ್‌ನಲ್ಲಿ ಕೃತ್ರಿಮ ರೀತಿಯಲ್ಲಿ ಜಾರಿಗೊಳಿಸಿದ್ದರ ಬಗ್ಗೆ ವಿರೋಧವಿದೆ. ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೊಳಿಸುವುದನ್ನು ವಿರೋಧಿಸಿ ರೈತರು ನಡೆಸಿದ ಪ್ರತಿಭಟನೆಗಳನ್ನು ನಿರ್ದಯವಾಗಿ ಹತ್ತಿಕ್ಕುವ ಮೂಲಕ ಕೇಂದ್ರ ಸರಕಾರವು ಪ್ರಜಾತಾಂತ್ರಿಕ ಕಾರ್ಯವಿಧಾನದ ಘೋರ ಉಲ್ಲಂಘನೆಯನ್ನು ಮಾಡಲಾಗಿದೆ.

ಕೃಷಿಯು ರಾಜ್ಯ ಸರಕಾರಕ್ಕೆ ಸಂಬಂಧಿಸಿದ ವಿಷಯವೆಂದು ಭಾರತೀಯ ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಆದಾಗ್ಯೂ, ಬಿಜೆಪಿ ಆಡಳಿತವಿರುವ ರಾಜ್ಯಗಳು ಸೇರಿದಂತೆ ಯಾವುದೇ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸದೆ ಈ ಮೂರು ಕೃಷಿ ಕಾನೂನುಗಳ ಕರಡನ್ನು ರಚಿಸಲಾಗಿತ್ತು. ಕೇಂದ್ರ ಸಂಪುಟ ಸಚಿವರಿಗೆ ಅಲ್ಪಸ್ವಲ್ಪ ಅಥವಾ ಯಾವುದೇ ಮಾಹಿತಿ ನೀಡದೆಯೇ ಅಷ್ಟೇಕೆ ಕೇಂದ್ರ ಕೃಷಿ ಸಚಿವರ ಜೊತೆಗೂ ಸಮಾಲೋಚಿಸದೆಯೇ ಪ್ರಧಾನಿ ಕಾರ್ಯಾಲಯವು ಕೃಷಿ ಕಾಯ್ದೆಯ ಕರಡನ್ನು ತಯಾರಿಸಿರುವ ಸಾಧ್ಯತೆಯಿದೆ.

 2014ರ ಮೇ ತಿಂಗಳಲ್ಲಿ ಮೋದಿ ಸರಕಾರವು ಅಧಿಕಾರಕ್ಕೇರಿದ ದಿನದಿಂದಲೇ ಕೋಟ್ಯಂತರ ಭಾರತೀಯರ ಬದುಕಿನ ಮೇಲೆ ಪರಿಣಾಮ ಬೀರುವಂತಹ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುವುದು ಅದರ ಹಾಲ್‌ಮಾರ್ಕ್ ಆಗಿದೆ. ಭಾರತದಂತಹ ಅಗಾಧವಾದ ಪಾರಿಸಾರಿಕ ವೈವಿಧ್ಯತೆಯನ್ನು ಪರಿಗಣನೆಗೆ ತೆಗೆದುಕೊಂಡರೆ ವಿಶೇಷವಾಗಿ ಕೃಷಿಯಂತಹ ಕ್ಷೇತ್ರದಲ್ಲಿ ಎಲ್ಲರಿಗೂ, ಎಲ್ಲಾ ಕಡೆಗಳಿಗೂ ಹೊಂದಿಕೊಳ್ಳುವಂತಹ ಕಾರ್ಯಚೌಕಟ್ಟನ್ನು ರೂಪಿಸುವುದು ವಿವೇಕಯುತವಾದುದಲ್ಲ. ಮಣ್ಣಿನ ವಿಧಗಳು, ನೀರಾವರಿ ವ್ಯವಸ್ಥೆ, ಬೆಳೆ ಪದ್ಧತಿ ಹಾಗೂ ಭೂ ಅಧಿಕಾರಾವಧಿಯ ಇತಿಹಾಸಗಳು ರಾಜ್ಯದೊಳಗೆ ಹಾಗೂ ರಾಜ್ಯಗಳ ನಡುವೆ ಬದಲಾಗುತ್ತಿರುತ್ತವೆ. ಎಲ್ಲಾ ರಾಜ್ಯಗಳೊಂದಿಗೆ ಚರ್ಚೆ ನಡೆಸದೆಯೇ ಇಂತಹ ವಿವಾದಾತ್ಮಕ ಕ್ರಮದೊಂದಿಗೆ ಪ್ರಧಾನಿಯವರು ಹೇಗೆ ಮುಂದುವರಿಯಲು ಸಾಧ್ಯವಿದೆ?

ಕೃಷಿ ಕಾನೂನುಗಳನ್ನು ಕೇಂದ್ರ ಸರಕಾರವು ಸಂಸತ್‌ನಲ್ಲಿ ಮಂಡಿಸಿದ ರೀತಿಯನ್ನು ನೋಡಿದರೆ, ಅದಕ್ಕೆ ಪ್ರಜಾತಾಂತ್ರಿಕ ವೌಲ್ಯಗಳ ಮೇಲೆ ತೀರಾ ಕಡಿಮೆ ಗೌರವಾದರಗಳಿರುವುದು ವ್ಯಕ್ತವಾಗುತ್ತದೆ. ಈ ಕೃಷಿಕಾಯ್ದೆಗಳು ದೂರಗಾಮಿ ಪರಿಣಾಮವನ್ನು ಹೊಂದಿರುವ ಕಾರಣ ಈ ಕಾನೂನುಗಳನ್ನು ಸಂಸದೀಯ ಸಮಿತಿಯ ಪರಿಶೀಲನೆಗೆ ಒಪ್ಪಿಸಬಹುದಾಗಿತ್ತು. ಅದು ಪರಿಣಿತರ ಜೊತೆ ಕೃಷಿ ಕಾಯ್ದೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿ, ಅವುಗಳನ್ನು ಪರಿಷ್ಕರಿಸಲು ಹಾಗೂ ಸುಧಾರಿಸಲು ಸಮಿತಿಯ ನೆರವು ಪಡೆದುಕೊಳ್ಳಬಹುದಾಗಿತ್ತು. ಆದರೆ ಈ ಮುಂಜಾಗರೂಕತಾ ಕ್ರಮವನ್ನು ಕೈಗೊಳ್ಳದೆ ಇರುವುದು ಈ ಆಡಳಿತದ ಇನ್ನೊಂದು ಗುಣಲಕ್ಷಣವಾಗಿದೆ.
  ಲೋಕಸಭೆಯಲ್ಲಿ ಬಿಜೆಪಿಯು ಸಮಾಧಾನಕರ ಬಹುಮತವನ್ನು ಹೊಂದಿರುವುದರಿಂದ ಸದನದಲ್ಲಿ ಕೃಷಿ ಕಾಯ್ದೆಯನ್ನು ಸುಲಭವಾಗಿ ಅಂಗೀಕರಿಸಲು ಅದಕ್ಕೆ ಸಾಧ್ಯವಾಗಿತ್ತು. ಆದರೆ ತನಗೆ ಬಹುಮತವಿಲ್ಲದಿರುವ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಗೊಳ್ಳುವ ಬಗ್ಗೆ ಬಿಜೆಪಿಗೆ ಖಾತರಿಯಿರಲಿಲ್ಲ. ಆದರೆ ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ಉತ್ತಮ ಪ್ರಾತಿನಿಧ್ಯವನ್ನು ಹೊಂದಿರುವುದರಿಂದ ಕೃಷಿ ತಿದ್ದುಪಡಿ ವಿಧೇಯಕದ ಕುರಿತಾಗಿ ಸಮಗ್ರವಾದ ಚರ್ಚೆ ನಡೆಸುವ ಬಗ್ಗೆ ಅವು ಭರವಸೆಯನ್ನು ಹೊಂದಿದ್ದವು. ಆದರೆ, ರಾಜ್ಯಸಭೆಯ ಉಪಸ್ಪೀಕರ್ ಹರಿವಂಶ್ ಅದನ್ನು ತಡೆದರು. ತನ್ನ ಹುದ್ದೆಗೆ ತಕ್ಕುದಲ್ಲದ ರೀತಿಯಲ್ಲಿ ನಡೆದುಕೊಂಡ ಉಪಸ್ಪೀಕರ್ ಅವರು ವಿಧೇಯಕದ ಕುರಿತಾಗಿ ನೈಜ ಮತದಾನದಕ್ಕೆ ಅನುಮತಿ ನೀಡಲಿಲ್ಲ. ಧ್ವನಿಮತದ ತಂತ್ರಗಾರಿಕೆಯನ್ನು ಬಳಸಿಕೊಂಡು, ಸದನದಲ್ಲಿ ವಿಧೇಯಕಕ್ಕೆ ಬಹುಮತದ ಬೆಂಬಲ ದೊರೆತಿರುವುದಾಗಿ ಘೋಷಿಸಿದ್ದರು.

ಈ ಕೃಷಿ ಕಾನೂನುಗಳ ಕರಡನ್ನು ಸಿದ್ಧಪಡಿಸಲು ಕೈಗೊಳ್ಳಲಾದ ಗೌಪ್ಯತೆ ಹಾಗೂ ಅವುಗಳನ್ನು ಅಂಗೀಕರಿಸಲು ಅವಸರವಸರವಾಗಿ ಕೈಗೊಳ್ಳಲಾದ ಕ್ರಮಗಳು ಉತ್ತರ ಭಾರತದ ರೈತರಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿವೆ. ಕೃಷಿ ಕಾಯ್ದೆಗಳ ಕರಡನ್ನು ರೂಪಿಸಲು ವಿವಿಧ ರಾಜ್ಯಗಳ ಕೃಷಿ ಸಚಿವರುಗಳ ಜೊತೆ ಪಾರದರ್ಶಕಯುತವಾದ ಚರ್ಚೆ ನಡೆಯುತ್ತಿದ್ದರೆ, ಸಂಬಂಧಪಟ್ಟ ಹಕ್ಕುದಾರರ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿದ್ದರೆ ಮತ್ತು ಸಂಸತ್ ಈ ವಿಷಯದ ಬಗ್ಗೆ ಜಾಗರೂಕತೆಯಿಂದ ಚರ್ಚಿಸಿರುತ್ತಿದ್ದರೆ ಪ್ರಾಯಶಃ ಅದರ ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಅಂಬಾನಿ ಹಾಗೂ ಅದಾನಿಯಂತಹ ಕಾರ್ಪೊರೇಟ್ ಸಂಸ್ಥೆಗಳು ಕೃಷಿ ವಲಯಕ್ಕೆ ಆಕ್ರಮಣಕಾರಿಯಾದ ರೀತಿಯಲ್ಲಿ ದಾಂಗುಡಿಯಿಡತೊಡಗಿದ್ದರಿಂದ ರೈತರ ಆತಂಕ ಇನ್ನಷ್ಟು ಉಲ್ಪಣಿಸಿತ್ತು. ಈ ವರ್ಷದ ಆರಂಭದಲ್ಲಿ ವಿಮರ್ಶಕರೊಬ್ಬರು ‘ಈ ಕೃಷಿ ಕಾನೂನುಗಳ ಸ್ವರೂಪವನ್ನು ಪರಿಗಣನೆಗೆ ತೆಗೆದುಕೊಂಡರೆ ಅವುಗಳ ಪ್ರಯೋಜನವನ್ನು ಪಡೆಯಲು ಅದಾನಿ ಸಮೂಹವು ಉತ್ತಮ ಸ್ಥಿತಿಯಲ್ಲಿದೆ ’ ಎಂದು ಬರೆದಿದ್ದರು. (ಹರ್‌ತೋಶ್ ಸಿಂಗ್ ಬಾಲ್, ‘ಮಂಡಿ, ಮಾರ್ಕೆಟ್ ಮತ್ತು ಮೋದಿ’, ದಿ ಕ್ಯಾರವಾನ್, ಮಾರ್ಚ್ 2021).

ಕೃಷಿ ಕಾನೂನುಗಳ ಅಂಗೀಕಾರವು ಭಾರತದ ಗಣತಂತ್ರದ ಒಕ್ಕೂಟ ವ್ಯವಸ್ಥೆ ಹಾಗೂ ಸ್ವತಃ ಸಂಸತ್ ಬಗ್ಗೆ ಮೋದಿ ಸರಕಾರವು ಅವಿಧೇಯತೆ ಹೊಂದಿರುವುದರ ದ್ಯೋತಕವಾಗಿದೆ. ಪ್ರಧಾನಿಯವರು ಪ್ರಜಾತಾಂತ್ರಿಕ ಪ್ರಾತಿನಿಧ್ಯತೆಯ ಸಾಮಾನ್ಯ ವಾಹಿನಿಗಳನ್ನು ಸಂಪೂರ್ಣವಾಗಿ ಮೀರಿ ಹೋದಾಗ ಜಾಗೃತಗೊಂಡ ರೈತರು ಸತ್ಯಾಗ್ರಹದ ಹಾದಿಯನ್ನು ಹಿಡಿದರು. ದೇಶದ ರಾಜಧಾನಿ ಹೊಸದಿಲ್ಲಿಯ ಗಡಿಗಳ ಹೊರಗೆ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ತೆರೆದ ಬಯಲಿನಲ್ಲಿ ಅವರು ಮಲಗಿದರು ಹಾಗೂ ಮಳೆ,ಗಾಳಿ, ಚಳಿಯನ್ನು ಎದುರಿಸಿದರು.

 ಈ ಪ್ರತಿಭಟನೆಗಳು ಪ್ರಶಂಸನೀಯವಾದ ರೀತಿಯಲ್ಲಿ ಅಹಿಂಸಾತ್ಮಕ ವಾಗಿತ್ತಾದರೂ, ಕೇಂದ್ರ ಸರಕಾರ ಅವರ ವಿರುದ್ಧ ಬರ್ಬರವಾಗಿ ನಡೆದುಕೊಂಡಿತು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದವರ ಮೇಲೆ ಜಲಫಿರಂಗಿಗಳನ್ನು ಪ್ರಯೋಗಿಸಲಾಯಿತು. ಪ್ರತಿಭಟನಾನಿರತ ರೈತರ ಟ್ರಕ್‌ಗಳು, ವಾಹನಗಳನ್ನು ತಡೆಯಲು ರಸ್ತೆಗಳಲ್ಲಿ ಮೊಳೆಗಳನ್ನು ಇರಿಸಲಾಯಿತು ಹಾಗೂ ಇಂಟರ್‌ನೆಟ್ ಶಟ್‌ಡೌನ್ ಮಾಡಲಾಗಿತ್ತು. ಇದೇ ವೇಳೆ ಪ್ರತಿಭಟನಾನಿರತ ರೈತರನ್ನು ಮಾರುವೇಷದ ಖಲಿಸ್ತಾನಿಗಳೆಂದು ‘ಗೋದಿ ಮೆಡಿಯಾಗಳು’ ಬಣ್ಣಿಸುವ ಮೂಲಕ ಕೇಂದ್ರ ಸರಕಾರದ ದಮನಕಾರ್ಯಾಚರಣೆಗೆ ಪೂರಕವಾಗಿ ವರ್ತಿಸಿದವು.

ಆದರೆ ರೈತ ಸತ್ಯಾಗ್ರಹಿಗಳು ಹಿಮ್ಮೆಟ್ಟಲಿಲ್ಲ. ಈ ಹೋರಾಟದ ಅವಧಿಯಲ್ಲಿ ನೂರಾರು ರೈತರು ಅನಾರೋಗ್ಯಕ್ಕೀಡಾಗಿ ಕೊನೆಯುಸಿರೆಳೆದರು. ಆದಾಗ್ಯೂ ಧೃತಿಗೆಡದ ರೈತರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಪ್ರಧಾನಿ ಯವರು ಪಾಲ್ಗೊಳ್ಳದೆ ಇದ್ದರೂ ಕೇಂದ್ರ ಸರಕಾರವು ರೈತ ನಾಯಕರು ಹಾಗೂ ಕೇಂದ್ರ ಸಚಿವರ ನಡುವೆ ಸರಣಿ ಮಾತುಕತೆಗಳನ್ನು ನಡೆಸಬೇಕಾಗಿ ಬಂದಿತು.

 ಈ ವರ್ಷದುದ್ದಕ್ಕೂ ಅವರು ರಾಷ್ಟ್ರದ ರಾಜಧಾನಿ ಹೊರಭಾಗದಲ್ಲಿ ಛಲಬಿಡದೆ ಧರಣಿ ಕುಳಿತರು. ಸತ್ಯಾಗ್ರಹಿಗಳನ್ನು ಸಂಸತ್‌ನಲ್ಲಿ ಅಣಕಿಸುವುದು ಬಿಟ್ಟರೆ ಮೋದಿ ಅವರು ಬಹಿರಂಗವಾಗಿ ಅವರ ಬಗ್ಗೆ ಪ್ರಸ್ತಾವ ಮಾಡಿದ್ದುದು ತೀರಾ ಕಡಿಮೆ. ಪ್ರತಿಭಟನೆಗಳು ಕ್ರಮೇಣ ಕರಗಬಹುದೆಂದು ಅವರು ಭಾವಿಸಿರಲೂಬಹುದು. ಆದರೆ ಹಾಗಾಗಲಿಲ್ಲ. ಇದೇ ವೇಳೆ, ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಘೋಷಣೆಯಾದವು. ಈ ಪೈಕಿ ಹಲವು ರಾಜ್ಯಗಳಲ್ಲಿ ಬಿಜೆಪಿಯ ಸ್ಥಿತಿ ದುರ್ಬಲವಾಗಿದೆ. ನವೆಂಬರ್ 19ರ ಶುಕ್ರವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಯವರು ತನ್ನ ಹದಿನೇಳು ನಿಮಿಷಗಳ ಭಾಷಣದ ಮುನ್ನುಡಿಯಾಗಿ ತನ್ನ ಐದು ದಶಕಗಳ ಸಾರ್ವಜನಿಕ ಬದುಕಿನ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಪ್ರಧಾನಿಯವರು ಎಲ್ಲಕ್ಕಿಂತಲೂ ಹೆಚ್ಚಾಗಿ ರೈತರ ಧ್ಯೇಯೋದ್ದೇಶಗಳಿಗೆ ತನ್ನ ಪರಿಶ್ರಮದ ಬಗ್ಗೆ ಮಾತನಾಡಲು ಹೆಚ್ಚಿನ ಆದ್ಯತೆ ನೀಡಿದರು. ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳುವ ನಿರ್ಧಾರವನ್ನು ಅವರು ಘೋಷಿಸಿರುವುದು ಮಹತ್ವದ್ದಾಗಿದೆ. ತನ್ನ ಸರಕಾರದ ಕ್ರಮಗಳಿಂದಾಗಿ ಇತರ ಜನರು ಬಾಧಿತರಾದುದ್ದಕ್ಕೆ ಅವರು ವಿಷಾದವನ್ನು ವ್ಯಕ್ತಪಡಿಸಿರುವುದು ಪ್ರಾಯಶಃ ಇದೇ ಮೊದಲ ಸಲವಾಗಿದೆ.

2002ರ ಗುಜರಾತ್ ಗಲಭೆಯು ಆಗ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಗಮನಕ್ಕೆ ಬಂದೇ ನಡೆದುದನ್ನು ಗಮನಿಸೋಣ. ಆ ಸಮಯದಲ್ಲಿ ನರೇಂದ್ರ ಮೋದಿಯವರು ಹಿಂಸಾಚಾರ ನಡೆದುದ್ದಕ್ಕೆ ಕಿಂಚಿತ್ತಾದರೂ ಪಶ್ಚಾತ್ತಾಪವನ್ನು ವ್ಯಕ್ತಪಡಿಸಲಿಲ್ಲ. ಹಲವಾರು ವರ್ಷಗಳ ಆನಂತರ ವಿದೇಶಿ ಪತ್ರಕರ್ತನೊಬ್ಬ ಈ ವಿಷಯವಾಗಿ ಅವರನ್ನು ಮಾತನಾಡಿಸಿದ್ದ.ಆಗ ಮೋದಿಯವರು, ಗಲಭೆಯಲ್ಲಿ ಹಲವಾರು ಮಂದಿ ಮೃತಪಟ್ಟಿದ್ದುದನ್ನು ಆಕಸ್ಮಿಕವಾಗಿ ಕಾರಿನಡಿಗೆ ನಾಯಿಮರಿಯೊಂದು ಬಿದ್ದಿದ್ದಕ್ಕೆ ಹೋಲಿಸಿದ್ದರು.ಆನಂತರವೂ ದೇಶದ ಜನತೆ ಅನುಭವಿಸಿದ ವಿವಿಧ ಬವಣೆಗಳಿಗೆ ಮೋದಿಯವರು ನೇರ ಹೊಣೆಗಾರರಾದರೂ ಯಾವತ್ತೂ ಆ ಬಗ್ಗೆ ಕ್ಷಮೆಯಾಚಿಸಲಿಲ್ಲ. ಉದಾಹರಣೆಗೆ ಭಾರತೀಯ ಆರ್ಥಿಕತೆಯನ್ನು ಹಾನಿಗೀಡು ಮಾಡಿದ ಹಾಗೂ ಕೋಟ್ಯಂತರ ಜನರ ಬದುಕನ್ನು ಭಗ್ನಗೊಳಿಸಿದ 2016ರ ನೋಟು ನಿಷೇಧದ ಕ್ರಮಕ್ಕಾಗಿ ಅವರು ಕ್ಷಮೆಯಾಚಿಸಲಿಲ್ಲ. 2020ರ ಲಾಕ್‌ಡೌನ್‌ನಲ್ಲಿ ವಲಸೆ ಕಾರ್ಮಿಕರು ಅಪಾರವಾದ ಸಂಕಷ್ಟಕ್ಕೀಡಾದಾಗಲೂ ಮೋದಿ ಕ್ಷಮೆ ಕೋರಬೇಕಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಆದರೆ ಶುಕ್ರವಾರದ ಭಾಷಣದಲ್ಲಿ ಮಾತ್ರ ಅವರು ಮೈ ಕ್ಷಮಾ ಚಾಹತೀ ಹೂಂ ( ನಾನು ಕ್ಷಮೆಯಾಚಿ ಸುತ್ತಿದ್ದೇನೆ) ಎಂದವರು ಹೇಳಿದರು. ಇದರೊಂದಿಗೆ ಅವರು ತನ್ನ ಈ ಮೊದಲಿನ ನಿಲುವಿನಿಂದ ಅಭೂತಪೂರ್ವವಾದ ರೀತಿಯಲ್ಲಿ ಹಿಂದೆ ಸರಿದಂತಾಗಿದೆ.

ಐದು ವರ್ಷಗಳ ಹಿಂದೆ ನವೆಂಬರ್ ತಿಂಗಳಲ್ಲಿ ಪ್ರಧಾನಿಯವರು 500ರೂ. ಹಾಗೂ 1 ಸಾವಿರ ರೂ. ನೋಟುಗಳನ್ನು ಅಮಾನ್ಯಗೊಳಿಸಿದಾಗ ಕೆಲವು ವೀಕ್ಷಕರು ಈ ಕ್ರಮದ ಹಿಂದೆ ಅಘೋಷಿತ ರಾಜಕೀಯ ಉದ್ದೇಶವಿದೆ ಎಂದು ಸಂಶಯಿಸಿದ್ದರು. ದೇಶದ ಅತ್ಯಧಿಕ ಜನಸಂಖ್ಯೆಯಿರುವ ರಾಜ್ಯವಾದ ಉತ್ತರಪ್ರದೇಶದ ಚುನಾವಣೆಯಲ್ಲಿ ಬಿಜೆಪಿಗೆ ನೆರವಾಗುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದವರು ಊಹಿಸಿದ್ದರು. ಬಿಜೆಪಿಯನ್ನು ವಿರೋಧಿಸುವ ರಾಜಕೀಯ ಪಕ್ಷಗಳು ಕೂಡಿಟ್ಟಿರುವ ನಗದನ್ನು ನೋಟು ಅಮಾನ್ಯತೆಯ ಮೂಲಕ ನಾಶಪಡಿಸಬಹುದು ಎಂಬ ಉದ್ದೇಶ ಅದರದ್ದಾಗಿತ್ತು. ಈ ಶುಕ್ರವಾರ ಮೋದಿ ಮಾಡಿದ ಘೋಷಣೆ ಕೂಡಾ ಉತ್ತರಪ್ರದೇಶ ಸರಕಾರಕ್ಕೆ ನೆರವಾಗುವ ಉದ್ದೇಶದಿಂದ ಕೂಡಿರುವ ಸಾಧ್ಯತೆಗಳು ದಟ್ಟವಾಗಿವೆ. ಪಶ್ಚಿಮ ಉತ್ತರಪ್ರದೇಶದ ರೈತರು ಕೃಷಿ ಕಾಯ್ದೆ ವಿರುದ್ಧದ ಚಳವಳಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅವರ ಮತಗಳು ನಿರ್ಣಾಯಕವಾದ ಪಾತ್ರ ವಹಿಸಬಹುದಾಗಿದೆ.

ಕೃಷಿ ಕಾಯ್ದೆಗಳ ಹಿಂದೆಗೆತವು ದೇಶಕ್ಕೆ ಗಣನೀಯವಾದ ಹಿನ್ನಡೆಯಾಗಿದೆ ಎಂದು ಆ ಕಾನೂನುಗಳನ್ನು ಬೆಂಬಲಿಸುವ ಕೆಲವು ಉತ್ಸಾಹಿಗಳು ಗೊಣಗುತ್ತಿರುವುದನ್ನು ನನ್ನ ಟ್ವಿಟ್ಟರ್ ಖಾತೆಯಲ್ಲಿ ಕಂಡಿದ್ದೇನೆ. ಆದರೆ ಅವರ ಈ ತೀರ್ಪು ಅಪ್ರಬುದ್ಧವಾಗಿದೆ. ಈ ಕೃಷಿ ಕಾನೂನುಗಳ ಕರಡನ್ನು ಚೆನ್ನಾಗಿ ಅಥವಾ ಜಾಗರೂಕತೆಯಿಂದ ರೂಪಿಸಲಾಗಿದೆಯೇ ಎಂಬುದರ ಬಗ್ಗೆ ಅರ್ಥಶಾಸ್ತ್ರಜ್ಞರಲ್ಲಿ ಯಾವುದೇ ಸಹಮತವಿಲ್ಲ. ಈ ಕಾನೂನುಗಳನ್ನು ರೂಪಿಸಿದ ರೀತಿಯು ಗಣರಾಜ್ಯ ಸಿದ್ದಾಂತಕ್ಕೆ ಸಂಪೂರ್ಣವಾದ ಅಗೌರವವನ್ನು ತೋರ್ಪಡಿಸಿದೆ. ಈ ಕಾಯ್ದೆಗಳನ್ನು ಅಂಗೀಕರಿಸಿದ ರೀತಿಯು ಸಂಸತ್‌ನ ಪಾವಿತ್ರತೆಗೆ ಚ್ಯುತಿ ಬರುವ ರೀತಿಯಲ್ಲಿದೆ. ಶಾಂತಿಯುತವಾದ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದ ರೀತಿ ಹಾಗೂ ಅವರ ಮೇಲೆ ಕಳಂಕವನ್ನು ಹಚ್ಚಿರುವುದು ಗಣರಾಜ್ಯವು ಯಾವ ಸಿದ್ಧಾಂತದ ಮೇಲೆ ಸ್ಥಾಪನಯಾಗಿದೆಯೋ ಅದಕ್ಕೆ ಎಸಗಿದ ವಂಚನೆಯಾಗಿದೆ. ಕೃಷಿ ಕಾನೂನುಗಳ ಹಿಂದೆೆಗೆತವು ಅಹಂಕಾರ ಮತ್ತು ಅಧಿಕಾರದ ಮದದ ವಿರುದ್ಧ ಸತ್ಯಾಗ್ರಹದ, ಸತ್ಯದ ಶಕ್ತಿಯ ವಿಜಯವಾಗಿದೆ. ಇದೊಂದು ಅಪರೂಪದ, ಭಾಗಶಃ ಹಾಗೂ ಪ್ರಾಯಶಃ ಹಿಂಪಡೆಯಬಹುದಾದ ಗೆಲುವಾಗಿದೆ. ಆದರೆ ಗೆಲುವು ಹೇಗಿದ್ದರೂ ಗೆಲುವೇ ತಾನೇ

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News

ಸಂವಿಧಾನ -75