ಮಥುರಾ: ಚಲಿಸುತ್ತಿದ್ದ ಕಾರಿನಲ್ಲಿ ಯುವತಿ ಮೇಲೆ ಅತ್ಯಾಚಾರ, ಓರ್ವನ ಬಂಧನ

Update: 2021-11-25 18:14 GMT

ಮಥುರಾ: ಆಗ್ರಾದಿಂದ ಹಿಂತಿರುಗುತ್ತಿದ್ದಾಗ ಚಲಿಸುತ್ತಿದ್ದ ಕಾರಿನಲ್ಲಿ ವ್ಯಕ್ತಿಯೊಬ್ಬ 21 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮಂಗಳವಾರ ಈ ಘಟನೆ ನಡೆದಿದ್ದು, ಸಬ್‌ಇನ್ಸ್‌ಪೆಕ್ಟರ್ ಪರೀಕ್ಷೆ ಬರೆಯಲು ಆಗ್ರಾಕ್ಕೆ ಯುವತಿಯೊಂದಿಗೆ ಆರೋಪಿ ತೆರಳಿದ್ದ. ಆರೋಪಿ ಆಗ್ರಾದಿಂದ ವಾಪಸ್ ಆಗುತ್ತಿದ್ದಾಗ  ಕಾರಿನೊಳಗೆ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೃತ್ಯದ ನಂತರ ಆರೋಪಿಯು ಯುವತಿಯನ್ನು ಮಥುರಾದ ಕೋಸಿ ಕಲಾನ್ ಪ್ರದೇಶದ ಹೊರವಲಯದಲ್ಲಿ ಬಿಟ್ಟುಹೋಗಿದ್ದಾನೆ.

ಪ್ರಮುಖ ಆರೋಪಿ ತೇಜ್‌ವೀರ್‌ನನ್ನು ಪೊಲೀಸರು ಗುರುವಾರ ಬಂಧಿಸಿದ್ದು, ಆತನ ಸಹಚರ ದಿಗಂಬರ್ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಶ್ರೀಶ್ ಚಂದ್ರ ತಿಳಿಸಿದ್ದಾರೆ.

ಇಬ್ಬರೂ ಆರೋಪಿಗಳು ಹರ್ಯಾಣದ ಪಲ್ವಾಲ್‌ನ ಮನ್‌ಪುರ್ ಗ್ರಾಮದವರಾಗಿದ್ದು ಎರಡನೇ ಆರೋಪಿಯನ್ನು ಬಂಧಿಸಲು ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

ಪೊಲೀಸರ ಪ್ರಕಾರ ತೇಜ್ವೀರ್ ಸಂತ್ರಸ್ತೆಯನ್ನು ಸಾಮಾಜಿಕ ಮಾಧ್ಯಮದ ಮೂಲಕ ಭೇಟಿಯಾಗಿ ಆಕೆಯ ವಿಶ್ವಾಸವನ್ನು ಗಳಿಸಿದ್ದನು.

ಯುವತಿಯ ಸಹೋದರ ಸಲ್ಲಿಸಿದ ಎಫ್‌ಐಆರ್ ಆಧಾರದ ಮೇಲೆ ಯುವತಿಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಯಿತು ಹಾಗೂ  ಭಾರತೀಯ ದಂಡ ಸಂಹಿತೆಯ ಸೆಕ್ಷನ್ 161 ರ ಅಡಿಯಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಬಳಸಿದ್ದ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಬ್ಬರೂ 22-25 ವರ್ಷ ವಯಸ್ಸಿನವರು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News