ಭ್ರಷ್ಟಾಚಾರದ ಕಬಂಧ ಬಾಹು ಮತ್ತು ನಾಗರಿಕ ಹಕ್ಕುಗಳು

Update: 2021-11-30 19:30 GMT

 ನವೆಂಬರ್ 24ರಂದು ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಾಜ್ಯಾದ್ಯಂತ ವಿಭಿನ್ನ ಸರಕಾರಿ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ಸೇವೆಯಿಂದ ನಿವೃತ್ತರಾದ ಅನೇಕ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿದ ವರದಿಗಳು ಬಂದಿವೆ. ಅಕ್ರಮವಾಗಿ ಸಂಪಾದಿಸಿದ ನೋಟುಗಳ ಕಂತೆಯೇ ಕೆಲವು ಅಧಿಕಾರಿಗಳ ಮನೆಗಳಲ್ಲಿ ಸಿಕ್ಕಿದೆ ಎಂದೂ ವರದಿಯಾಗಿದೆ. ಈ ಬೆಳವಣಿಗೆ ನಮ್ಮ ರಾಜ್ಯದ ಸಾರ್ವಜನಿಕ ಸೇವೆಗಳಲ್ಲಿ ಆಗುತ್ತಿರುವ ನೈತಿಕ ಅಧಃಪತನಕ್ಕೆ ಕನ್ನಡಿ ಹಿಡಿಯುತ್ತದೆ ಮಾತ್ರವಲ್ಲ, ರಾಜ್ಯದ ಹೆಸರಿಗೆ ತೀವ್ರವಾದ ಕಳಂಕವನ್ನು ತಂದಿದೆ. ಈ ಅಧಿಕಾರಿಗಳ ವರ್ತನೆಯಲ್ಲಿ ಹೊಸತೇನೂ ಇಲ್ಲ; ಇದು ಇಂದು ನಿನ್ನೆಯ ಬೆಳವಣಿಗೆಯೂ ಅಲ್ಲ; ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾದ ವಿಷಯವೂ ಅಲ್ಲ. ಪ್ರಾಯಶಃ ಸರಕಾರಿ ಕಚೇರಿಗಳಿಗೆ ಅಗತ್ಯ ಸೇವೆಗಳಿಗೆ ಹೋದ ಪ್ರತಿಯೊಬ್ಬ ನಾಗರಿಕನಿಗೂ ಒಂದಲ್ಲ ಒಂದು ಅನುಭವ ಆಗಿರುವುದು ನಿಸ್ಸಂಶಯ.

  ನನ್ನ ಹಾಗೂ ಆತ್ಮೀಯರ ಕೆಲವು ಅನುಭವಗಳನ್ನು ಈ ಸಂದರ್ಭದಲ್ಲಿ ಉದ್ಧರಿಸುವುದು ಸೂಕ್ತವಾಗುತ್ತದೆ. ಸುಮಾರು ಆರು ವರ್ಷ ಹಿಂದೆ ನನ್ನ ಮಕ್ಕಳ ಮದುವೆಯ ನೋಂದಣಿಗಾಗಿ ಪರಿಚಯದ ಒಬ್ಬ ಯುವ ವಕೀಲರ ಸಹಾಯವನ್ನು ಬಳಸಿಕೊಂಡಿದ್ದೆ. ಅವರ ಗೌರವಧನದ ಬಗ್ಗೆ ಕೇಳಿದಾಗ ಅದರಲ್ಲಿ ನೋಂದಣಿ ಶುಲ್ಕ, ತಮ್ಮ ಸೇವಾ ಶುಲ್ಕ ಮತ್ತು ‘ಇತರ’ ವೆಚ್ಚಗಳನ್ನು ತೋರಿಸಿದರು. ಇತರ ವೆಚ್ಚಗಳು ಸೇವಾ ಶುಲ್ಕಕ್ಕಿಂತ ಹೆಚ್ಚೇ ಇದ್ದವು. ಅದಕ್ಕೆ ಅವರು ಕೊಟ್ಟ ವಿವರಣೆ ಹೀಗಿತ್ತು: ‘‘ಅಲ್ಲಿ ಪ್ರತಿ ಒಬ್ಬರಿಗೂ ‘ಕಾಣಿಕೆ’ ಕೊಡದಿದ್ದರೆ ವಧೂವರರ ಭಾವಚಿತ್ರಗಳು ಸರಿಯಾಗಿಲ್ಲ ಎಂಬ ತಕರಾರು ಎಬ್ಬಿಸುತ್ತಾರೆ, ಅನೇಕ ದಿನ ಕಾಯಿಸುತ್ತಾರೆ.’’ ಭಾವಚಿತ್ರ ತೆಗೆದ ಅನೇಕ ವರ್ಷದಿಂದ ಪರಿಚಯವಿದ್ದ ಛಾಯಾಚಿತ್ರಕಾರರು ಕೆಲವು ದಿನ ಹಿಂದೆ ಹೇಳಿದ ಮಾತು ಇದಕ್ಕೆ ಪೂರಕವಾಗಿತ್ತು- ‘‘ನಾನು ಯಾವುದೇ ರೀತಿ ಫೋಟೊ ತೆಗೆದರೂ ನೋಂದಣಿ ಕಚೇರಿಯಲ್ಲಿ ‘ದಕ್ಷಿಣೆ’ ಕೊಡದಿದ್ದರೆ ‘ಪೋಸು’ ಸರಿ ಇಲ್ಲ ಎಂದು ಹೇಳುತ್ತಾರೆ.’’
ವಕೀಲರಿಗೆ ದುಡ್ಡು ಕೊಟ್ಟೆ, ಮರುದಿನವೇ ಕೆಲಸ ಆಯಿತು, ಮಕ್ಕಳು ತಮ್ಮ ತಮ್ಮ ಉದ್ಯೋಗಗಳಿಗೆ ಮರಳಿದರು.

ನಾಲ್ಕು ವರ್ಷದ ಹಿಂದೆ ನನ್ನ ಅಮ್ಮ ಕಾಲವಶರಾದರು. ಅವರ ನಿಧನದ ಕುರಿತಾದ ಪ್ರಮಾಣಪತ್ರಕ್ಕೆ ಮಂಗಳೂರು ಮಹಾನಗರಪಾಲಿಕೆಯಲ್ಲಿ ಅಗತ್ಯದ ಶುಲ್ಕವನ್ನು ತೆತ್ತು ಅರ್ಜಿ ಸಲ್ಲಿಸಿದೆ. 15 ದಿನ ಬಿಟ್ಟು ಬನ್ನಿ ಎಂಬ ಉತ್ತರ ಬಂತು. 21 ದಿನಗಳ ಬಳಿಕ ಹೋದೆ. ಪಾವತಿಯ ಚೀಟಿ ಕೈಯಲ್ಲಿ ಹಿಡಿದು ಒಂದನೇ ಕೌಂಟರಿನಲ್ಲಿ ಸರದಿಯಲ್ಲಿ ಕಾದೆ. ನನ್ನ ಸರದಿ ಬಂದಾಗ ಚೀಟಿ ನೋಡಿದ ಉದ್ಯೋಗಿ ‘‘ಎರಡನೇ ಕೌಂಟರಿಗೆ ಹೋಗಿ’’ ಎಂದರು. ಅಲ್ಲಿ ಮತ್ತೆ ಸರದಿಯಲ್ಲಿ ಕಾದೆ. ಅಲ್ಲಿನ ಉದ್ಯೋಗಿ ‘‘ಮೂರನೇ ಕೌಂಟರಿಗೆ ಹೋಗಿ’’ ಎಂದರು. ಮೂರನೆಯ ಕೌಂಟರಿನಲ್ಲಿ ಕಾದು ಸರದಿ ಬಂದಾಗ ಅಲ್ಲಿನವರು ನೀವು ಒಂದನೇ ಕೌಂಟರಿಗೆ ಹೋಗಿ ಎಂದರು. ಆಗಲೇ ತಾಳ್ಮೆ ಕಳೆದುಕೊಂಡಿದ್ದೆ. ರೇಗಿ ಧ್ವನಿ ಏರಿಸಿ ಪ್ರಶ್ನಿಸಿದೆ: ‘‘ಒಂದನೇ ಕೌಂಟರಿನವರು ಎರಡನೇ ಕೌಂಟರಿಗೆ ಹೋಗಿ ಎಂದರು; ಎರಡನೆಯವರು ಮೂರನೇ ಕೌಂಟರಿಗೆ ಹೋಗಿ ಎಂದರು. ನೀವು ಮತ್ತೆ ಒಂದನೇ ಕೌಂಟರಿನಲ್ಲಿ ವಿಚಾರಿಸಿ ಅಂತೀರಿ. ಎಲ್ಲಿ ಪ್ರಮಾಣ ಪತ್ರ ಸಿಗುತ್ತದೆ ಎಂದು ಖಡಾಖಂಡಿತವಾಗಿ ಹೇಳುವುದು ಬಿಟ್ಟು ಯಾಕೆ ನಮ್ಮನ್ನು ಹೀಗೆ ಕುಣಿಸ್ತೀರಾ?’’ ಸುತ್ತಮುತ್ತಲಿನ ನಾಗರಿಕರು ಆಶ್ಚರ್ಯದಿಂದ ನೋಡುತ್ತಿದ್ದಂತೆಯೇ ಎಲ್ಲಾ ಸಿಬ್ಬಂದಿಯೂ ನನ್ನನ್ನೇ ದಿಟ್ಟಿಸಿ ನೋಡಿದರು. ಒಳಗಿದ್ದ ಇನ್ನೊಬ್ಬ ಉದ್ಯೋಗಿ ಧಾವಿಸಿ ಬಂದು ಕೇಳಿದರು. ಪರಿಸ್ಥಿತಿ ಅರಿತು ತಕ್ಷಣವೇ ಗಣಕಯಂತ್ರದಲ್ಲಿ ಪರಿಶೀಲಿಸಿ ಅದಾಗಲೇ ತಯಾರಿದ್ದ ಪ್ರಮಾಣ ಪತ್ರವನ್ನು ಮುದ್ರಕದಲ್ಲಿ ಮುದ್ರಿಸಿ ಕೊಟ್ಟರು. ಆಗಲೇ ತಯಾರಾಗಿದ್ದ ಪ್ರಮಾಣ ಪತ್ರವನ್ನು ಕೊಡಲು ಇಷ್ಟೆಲ್ಲ ರಾದ್ಧಾಂತ ಬೇಕಿತ್ತೇ?

 2020ರ ಆರಂಭದಲ್ಲಿ ಬೆಂಗಳೂರಿನಲ್ಲಿ ನಡೆದ ಘಟನೆ. ಅಮೆರಿಕದಲ್ಲಿ ಉದ್ಯೋಗಿಯಾಗಿರುವ ನನ್ನ ಸಮೀಪದ ಬಂಧು, ಆಗಷ್ಟೇ ನಿಧನರಾದ ತನ್ನ ಅಮ್ಮನ ಮರಣಪ್ರಮಾಣ ಪತ್ರವನ್ನು ಅರ್ಜಿ ಸಲ್ಲಿಸಿ ಮೂರು ದಿನದಲ್ಲಿ ಪಡಕೊಂಡರು. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಅದು 30 ದಿನಗಳ ಬಳಿಕವೇ ಸಿಗುವುದು ಎಂದು ಅನೇಕ ಸ್ನೇಹಿತರು ಹೇಳಿದ್ದರು, ಆಕೆಯೂ ಹೇಳಿದ್ದರು. ಆಕೆಗೆ ಮೂರೇ ದಿನದಲ್ಲಿ ಸಿಕ್ಕಿದ ಪರಿ ಹೀಗಿತ್ತು: ಸಾಮಾನ್ಯವಾಗಿ ಅರ್ಜಿಗಳನ್ನು ತಾರೀಕಿಗೆ ಅನುಕ್ರಮವಾಗಿ ಒಂದರ ಕೆಳಗೆ ಇನ್ನೊಂದನ್ನು ಜೋಡಿಸಿ ಅಧಿಕಾರಗಳ ಸಹಿಗಾಗಿ ಕಡತದಲ್ಲಿ ಇಟ್ಟು ಅವರ ಮುಂದಿಡಲಾಗುತ್ತದೆ. ದಲ್ಲಾಳಿಗಳಿಗೆ ಕಾಣಿಕೆ ಕೊಟ್ಟು ಆ ಕ್ರಮವನ್ನು ತಪ್ಪಿಸಿ ಯಾವುದೇ ಅರ್ಜಿದಾರ ತನ್ನ ಅರ್ಜಿ ಮೇಲೆ ಬರುವಂತೆ ಮಾಡಲು ಸಾಧ್ಯ. ಆಕೆಗೆ ಅಮೆರಿಕಕ್ಕೆ ಅಗತ್ಯವಾಗಿ ಮರಳಬೇಕಾಗಿದ್ದುದರಿಂದ ಪ್ರಮಾಣಪತ್ರ ಬೇಗ ಪಡೆಯಲು ಅವರು ಅದೇ ದಾರಿಯನ್ನು ಹಿಡಿದಿದ್ದರು!

2020ರಲ್ಲಿ ರಾಜ್ಯ ಸರಕಾರವು ತನ್ನ ಪಿಂಚಣಿದಾರರು ಕರ್ನಾಟಕ ಮೂಲದ ಸರಕಾರಿ ಬ್ಯಾಂಕುಗಳ ಮೂಲಕವೇ ನಿವೃತ್ತಿ ವೇತನವನ್ನು ಪಡೆಯಬೇಕೆಂಬ ಅಧಿಸೂಚನೆಯನ್ನು ಹೊರಡಿಸಿತು. ಈಗಾಗಲೇ ಬೇರೆ ಬ್ಯಾಂಕುಗಳ ಮೂಲಕ ಪಿಂಚಣಿ ಪಡೆಯುತ್ತಿದ್ದ ಅನೇಕ ನಿವೃತ್ತ ಅಧ್ಯಾಪಕರು ಅಗತ್ಯದ ದಾಖಲೆಗಳನ್ನು ನಿಗದಿತ ಬ್ಯಾಂಕುಗಳ ಮೂಲಕ ಕೊಟ್ಟ ಮೇಲೆ ವಿಶ್ರಾಂತಿವೇತನ ಬರಲು ಮೂರರಿಂದ ಆರು ತಿಂಗಳು ಕಾಯಬೇಕಾಯಿತು. ಬ್ಯಾಂಕುಗಳು ಸ್ವೀಕರಿಸಿದ ಅರ್ಜಿಗಳು ಜಿಲ್ಲಾ ಖಜಾನೆಗಳ ಮೂಲಕ ಬೆಂಗಳೂರಿನ ಕೇಂದ್ರ ಪಿಂಚಣಿ ವಿಭಾಗಕ್ಕೆ ಹೋಗಲು ಎರಡು ದಾರಿ ಇದ್ದವು- ಮೇಲಾಧಿಕಾರಿಗಳ ಮೂಲಕ ಒತ್ತಡ, ಇಲ್ಲವೇ ‘ಕಮಿಶನ್’. ಆತ್ಮೀಯರಾದ ನಿವೃತ್ತ ಅಧ್ಯಾಪಕರೊಬ್ಬರು ನನ್ನ ಸಹಾಯ ಪಡೆದಾಗ ನಾನು, ಸಂಬಂಧಪಟ್ಟ ಬ್ಯಾಂಕುಗಳಲ್ಲಿ ಪರಿಚಿತರಿದ್ದ ಅಧಿಕಾರಿಗಳಲ್ಲಿ ಚರ್ಚಿಸುವಾಗ ಈ ವಿಚಾರ ತಿಳಿದು ಬಂತು. ತಮ್ಮದೇ ಉದ್ಯೋಗಿಗಳಾಗಿದ್ದ ನಿವೃತ್ತಿಹೊಂದಿದ ಹಿರಿಯ ನಾಗರಿಕರಿಗೂ ಈ ಕಾಟ ನೀಡಬೇಕೆ?
ಭ್ರಷ್ಟಾಚಾರ ನಿಗ್ರಹದಳದ ದಾಳಿಗಳ ಬಗ್ಗೆ ಕೆಲವು ವ್ಯಂಗ್ಯ ಚಿತ್ರಗಳನ್ನು ರಚಿಸಿದ - ಬೆಂಗಳೂರಿನಲ್ಲಿರುವ ನನ್ನ ಒಬ್ಬ ಸ್ನೇಹಿತರನ್ನು ಅಭಿನಂದಿಸಿ ಮಾತನಾಡಿದಾಗ ಅವರೊಂದು ಮಾಹಿತಿ ಕೊಟ್ಟರು: ‘‘ಬಿಬಿಎಂಪಿಯಲ್ಲಿ ಖಾತಾ ವರ್ಗಾವಣೆಗೆ ನಿಗದಿತ ಶುಲ್ಕ ಅಲ್ಲದೆ 6,000 ರೂಪಾಯಿ ದಲ್ಲಾಳಿಗೆ ಕೊಟ್ಟರೆ ನಿಮ್ಮ ಕೆಲಸ ಬೇಗನೇ ಆಗುತ್ತದೆ, ಸರ್.’’
ನಮ್ಮ ರಾಜ್ಯದ ಸಹಸ್ರಾರು ನಾಗರಿಕರ ಅನುಭವಗಳು ಇದೇ ತರಹದ್ದು ಎಂಬುದು ಉತ್ಪ್ರೇಕ್ಷೆಯಾಗಲಾರದು.

ಭ್ರಷ್ಟಾಚಾರದ ಕಬಂಧಬಾಹು ಎಷ್ಟು ವಿಸ್ತೃತವಾಗಿದೆ ಎಂದು ಯಾವ ಎಲ್ಲ ವಿಭಾಗದ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಿದೆ ಎಂಬುದರಿಂದ ಸ್ಪಷ್ಟವಾಗುತ್ತದೆ: ವರದಿಯಲ್ಲಿ ಬಂದ ಕೆಲವು ವಿಭಾಗಗಳು ಹೀಗಿವೆ: ಬೃಹನ್ ಬೆಂಗಳೂರು ಮಹಾನಗರ ಪಾಲಿಕೆ, ಮಂಗಳೂರು ಮಹಾ ನಗರಪಾಲಿಕೆ, ಡೈರಿ, ಆಸ್ಪತ್ರೆ, ಸಾರ್ವಜನಿಕ ಕಾಮಗಾರಿ, ಭೂ ನೋಂದಣಿ ಕಚೇರಿ, ವಿದ್ಯುನ್ಮಂಡಳಿ, ನಗರಾಭಿವೃದ್ಧಿ ಇಲಾಖೆ, ವಾಹನ ಇಲಾಖೆ, ಕಂದಾಯ ಇಲಾಖೆ, ನಿರ್ಮಿತಿ ಕೇಂದ್ರ ಮುಂತಾದವು. ಆಶ್ಚರ್ಯವೆಂದರೆ ನಾಗರಿಕರಿಗೆ ಕ್ಲಪ್ತ ಸಮಯಕ್ಕೆ ಸೇವೆ ಪಡೆಯಲು ಶಾಸನರೀತ್ಯಾ ಅನುವು ಮಾಡಿಕೊಡಲ್ಪಟ್ಟ ‘ಸಕಾಲ ಸೇವೆ’ ಒದಗಿಸುವ ವಿಭಾಗದ ಅಧಿಕಾರಿಗಳೂ ಈ ಅಕ್ರಮಗಳಲ್ಲಿ ತೊಡಗಿದ್ದಾರೆ! ವರದಿಯಾಗಿದ್ದು ಇಷ್ಟೇ, ಇನ್ನೂ ಉಳಿದಿರುವ ವಿಭಾಗಗಳು ಯಾವುದಿದೆ ಎಂದು ಕಾದು ನೋಡಬೇಕು.
ಈ ಅಕ್ರಮಗಳು ನಡೆಯುತ್ತಿದ್ದಾಗ ಹಿರಿಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಆಡಳಿತದ ಚುಕ್ಕಾಣಿ ಹಿಡಿದಿರುವ ಮಂತ್ರಿಗಳಿಗೆ ಅವುಗಳ ಅರಿವಿಲ್ಲದಾಗಿತ್ತೇ? ಅರಿವು ಇದ್ದಾಗಲೂ ದಿವ್ಯ ಮೌನ ಧರಿಸಿದರೇ? ಅಥವಾ ಅಕ್ರಮಗಳಲ್ಲಿ ಅವರಿಗೂ ಪಾಲಿತ್ತೇ?

ಇನ್ನೊಂದು ಬೆಳವಣಿಗೆ ಈ ಪ್ರಶ್ನೆಗಳಿಗೆೆ ಇಂಬು ನೀಡುತ್ತದೆ. ನವೆಂಬರ್ ಎರಡನೇ ವಾರದ ಪತ್ರಿಕಾ ವರದಿಗಳ ಪ್ರಕಾರ ಕರ್ನಾಟಕ ರಾಜ್ಯ ಗುತ್ತಿಗೆದಾರರ ಮಹಾಸಂಘವು ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದೆ: ಅಕ್ಟೋಬರ್ ಅಂತ್ಯದ ತನಕ ಸುಮಾರು ರೂ. 17,000 ಕೋಟಿಯಷ್ಟು ಮೌಲ್ಯದ ಬಿಲ್ಲುಗಳನ್ನು ರಾಜ್ಯ ಸರಕಾರ ಮಂಜೂರು ಮಾಡಿಲ್ಲ. ಮಂತ್ರಿಗಳು, ಚುನಾಯಿತ ಪ್ರತಿನಿಧಿಗಳು ಮತ್ತು ಪ್ರಭಾವಿ ಶಕ್ತಿಗಳು ಕಮಿಶನ್ ನೀಡಲು ಒತ್ತಡ ಹಾಕುತ್ತಿದ್ದಾರೆಂಬ ಆರೋಪವನ್ನು ಗುತ್ತಿಗೆದಾರರು ಮಾಡಿದ್ದಾರೆ. ಬಿಲ್ಲುಗಳ ಮೊಬಲಗಿನಿಂದ ಶೇ. 30-35ರ ತನಕ ಈ ಎಲ್ಲ ಮಹಾನುಭಾವರಿಗೆ ವಿಭಿನ್ನ ಹಂತಗಳಲ್ಲಿ ‘ಕಾಣಿಕೆ’ ನೀಡಬೇಕೆಂದು ಆರೋಪಿಸಿದ್ದಾರೆ. ಮೇ ತಿಂಗಳಲ್ಲಿ ಉತ್ತರ ಕರ್ನಾಟಕದ ಗುತ್ತಿಗೆದಾರರ ಸಂಘ ಇದೇ ವಿಷಯದ ಬಗ್ಗೆ ಪ್ರಧಾನಿಗೆ ಮನವಿ ಕಳುಹಿಸಿತ್ತು.

ಹಿಂದೊಮ್ಮೆ ನ್ಯಾ.ಸಂತೋಷ ಹೆಗ್ಡೆಯವರು ರಾಜ್ಯದ ಲೋಕಾಯುಕ್ತರಾಗಿದ್ದಾಗ ರಾಜಕೀಯದಲ್ಲಿ ಪ್ರಬಲರಾಗಿದ್ದ ವ್ಯಕ್ತಿಗಳ ಮೇಲೆ ಮೇಲ್ನೋಟಕ್ಕೆ ಪುರಾವೆಯಿದೆ ಎಂದು ವರದಿ ನೀಡಿ ಕಾನೂನು ರೀತ್ಯ ಕ್ರಮವನ್ನು ಕೈಗೊಳ್ಳಲು ಶಿಫಾರಸು ಮಾಡಿದ್ದರು. ಕೆಲವರು ಜೈಲಿಗೂ ಹೋಗಿ ಬಂದರು. ಆದರೆ ಆ ಬಳಿಕ ಬಂದ ಸರಕಾರಗಳಾಗಲೀ, ರಾಜಕೀಯ ಪಕ್ಷಗಳಾಗಲೀ ಈ ಬಗ್ಗೆ ಚಕಾರ ಶಬ್ದಗಳನ್ನೇ ಎತ್ತಲಿಲ್ಲ. ಜೈಲಿಗೆ ಹೋದವರು ಮತ್ತೆ ಅಧಿಕಾರಕ್ಕೆ ಬಂದರು; ಲೋಕಾಯುಕ್ತದ ಹಲ್ಲುಗಳನ್ನೇ ಉದುರಿಸಿದರೆಂಬ ವರದಿಯನ್ನು ಓದಿದ ನೆನಪು. 2010-13ರ ಅವಧಿಯಲ್ಲಿ ಯುಪಿಎ ಸರಕಾರದ ಎಗ್ಗಿಲ್ಲದ ಭ್ರಷ್ಟಾಚಾರದ ವಿರುದ್ಧ ರಾಷ್ಟ್ರಾದ್ಯಂತ ಅಣ್ಣಾ ಹಜಾರೆಯ ನೇತೃತ್ವದಲ್ಲಿ ಚಳವಳಿ ನಡೆದು, ಲೋಕಪಾಲ ಮಸೂದೆಯು ಕೇಂದ್ರ ಸಂಸತ್ತಿನಲ್ಲಿ ಮಂಜೂರಾಯಿತು. ಯುಪಿಎ ಸರಕಾರ ಸೋತು, ಭ್ರಷ್ಟಾಚಾರವನ್ನು ಹತೋಟಿಗೆ ತರುತ್ತೇವೆಂಬ ಆಶ್ವಾಸನೆ ನೀಡಿದ ಭಾರತೀಯ ಜನತಾ ಪಕ್ಷ ಗದ್ದುಗೆ ಹಿಡಿಯಿತು. ಆದರೆ ಕೇಂದ್ರದ ಲೋಕಪಾಲ ಸಂಸ್ಥೆಯು ಸ್ವತಂತ್ರವಾಗಿ ತನ್ನ ಉದ್ದೇಶಕ್ಕಾಗಿ ಕಾರ್ಯವೆಸಗುವ ವಾತಾವರಣವನ್ನು ಕೇಂದ್ರ ಸರಕಾರವು ಇನ್ನೂ ನಿರ್ಮಿಸಿಲ್ಲ. ಅದನ್ನೇ ರಾಜ್ಯಗಳೂ ಅನುಸರಿಸುತ್ತಿವೆ ಅನ್ನದೆ ಬೇರೆ ದಾರಿಯಿಲ್ಲ

ಸಮಾನತೆ, ಸಮಾನ ಅವಕಾಶ ಮತ್ತು ಸಮಾನ ಹಕ್ಕುಗಳು ಪ್ರಜಾತಂತ್ರದ ಗುರಿ. ಆದರೆ ನಮ್ಮ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಬದ್ಧತೆ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದೆ ಎಂಬುದು ಒಂದು ಕಟು ವಾಸ್ತವ

Writer - ಟಿ.ಆರ್. ಭಟ್

contributor

Editor - ಟಿ.ಆರ್. ಭಟ್

contributor

Similar News