ಗಾಂಧೀಜಿ ನುಡಿಗಳನ್ನು ಭಾವಿ ಪೀಳಿಗೆಗೆ ಕಾಪಾಡಿದ ಸಾಧಕರು!

Update: 2021-12-03 19:30 GMT

ಪ್ರತಿಯೊಂದು ಸಂಪುಟವು ಒಳನೋಟವನ್ನು ಬೀರುವಂತಹ ಮುನ್ನುಡಿಯೊಂದಿಗೆ ಆರಂಭವಾಗುತ್ತಿದ್ದವು. ಪ್ರಸ್ತುತತೆಯಿರುವ ದಾಖಲೆಗಳ ವಿಷಯವಿವರಣೆ ಹಾಗೂ ವಿಷಯಾನುಕ್ರಮಣಿಕೆ ಮತ್ತು ಪುಟ ವಿವರಗಳನ್ನು ಪ್ರತಿಸಂಪುಟದ ಕೊನೆಯಲ್ಲಿ ನೀಡಲಾಗುತ್ತಿತ್ತು. ಇವೆಲ್ಲಕ್ಕೂ ಕಲಶವಿಟ್ಟಂತೆ ಬರೆಯಲಾದ ಶ್ರೀಮಂತ ಟಿಪ್ಪಣಿಗಳು ಮುಖ್ಯ ಬರಹದ ಪುಟಗಳಿಗೆ ಅಂದವಿಟ್ಟಿದೆೆ. ಇವೆಲ್ಲವೂ ಸ್ವಾಮಿನಾಥನ್ ಮತ್ತವರ ತಂಡದ ಸಾಧನೆಯನ್ನು ಗೌರವಿಸುವಂತೆ ಮತ್ತು ಮೆಚ್ಚಿಕೊಳ್ಳುವಂತೆ ಮಾಡಿದೆ.



ಕೆ.ಸ್ವಾಮಿನಾಥನ್ ಅವರು ನನಗೆ ತಿಳಿದಂತಹ ಅತ್ಯಂತ ಗಮನಾರ್ಹ ವ್ಯಕ್ತಿಯಾಗಿದ್ದಾರೆ. ಮದ್ರಾಸ್ ಮೂಲದ, ಸಾಹಿತ್ಯದ ಪ್ರೊಫೆಸರ್ ಆಗಿರುವ ಕೆ.ಸ್ವಾಮಿ ನಾಥನ್ ಅವರು ಮಹಾತ್ಮಾ ಗಾಂಧೀಜಿಯವರ ಬರಹಗಳ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. 1896ರ ಡಿಸೆಂಬರ್ 3ರಂದು ಸ್ವಾಮಿನಾಥನ್ ಅವರು ಪುದುಕೋಟ್ಟೈ ಪಟ್ಟಣದಲ್ಲಿ ಜನಿಸಿದ್ದರು. 1996ರಲ್ಲಿ ಅವರ ಜನ್ಮಶತಾಬ್ದಿ ಆಚರಣೆಯ ಸಂದರ್ಭದಲ್ಲಿ ನಾನು ‘ದಿ ಹಿಂದೂ’ ಪತ್ರಿಕೆಯಲ್ಲಿ ಅವರ ಜೀವನಚರಿತ್ರೆಯನ್ನು ಬರೆದಿದ್ದೆ. (ಈ ಲೇಖನವನ್ನು ನಾನು ನನ್ನ ಕೃತಿ ‘ದಿ ಅಂಥ್ರಾಪಲಾಜಿಸ್ಟ್ ಎಮಾಂಗ್ ದಿ ಮಾರ್ಕ್ಸಿಸ್ಟ್ಸ್ ಆ್ಯಂಡ್ ದಿ ಆದರ್ ಎಸ್ಸೇಸ್’ನಲ್ಲಿ ಪ್ರಕಟಿಸಿದ್ದೆ.) ಇದೀಗ, ಸುಮಾರು ಕಾಲು ಶತಮಾನದ ಆನಂತರ ನಾನು ಕೆ.ಸ್ವಾಮಿನಾಥನ್ ಜೀವನಸಾಧನೆಯ ಬೆಳಕು ಚೆಲ್ಲಲು ಅವರ ಜನ್ಮದಿನಾಚರಣೆಯ ಸಂದರ್ಭವನ್ನು

ಮಹಾತ್ಮಾಗಾಂಧೀಜಿಯವರ ಹತ್ಯೆಯಾದ ಬಳಿಕ ಕಾಂಗ್ರೆಸ್ ಪಕ್ಷದ ಕ್ರಿಯಾ ಸಮಿತಿಯು ಅವರ ಹೆಸರಿನಲ್ಲಿ ರಾಷ್ಟ್ರೀಯ ಸ್ಮಾರಕ ನಿಧಿಯನ್ನು ಸ್ಥಾಪಿಸಿತು. ಗಾಂಧೀಜಿಯವರಿಗೆ ಅತ್ಯಂತ ಆತ್ಮೀಯವೆನಿಸಿದ್ದ ಅಂತರ್‌ಧರ್ಮೀಯ ಸೌಹಾರ್ದ ಹಾಗೂ ರಚನಾತ್ಮಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುವ ಜೊತೆಗೆ ಅವರ ಎಲ್ಲಾ ಬರಹಗಳು ಹಾಗೂ ಬೋಧನೆಗಳನ್ನು ಸಂಗ್ರಹಿಸುವುದು, ಸಂರಕ್ಷಿಸುವುದು ಹಾಗೂ ವಿವಿಧ ಭಾಷೆಗಳಲ್ಲಿ ಪ್ರಕಟಿಸುವುದು ಹಾಗೂ ಗಾಂಧೀಜಿಗೆ ಸಂಬಂಧಿಸಿದ ಲೇಖನಗಳನ್ನು ಕಾಪಿಡಲು ಮ್ಯೂಸಿಯಂ ಒಂದನ್ನು ಸ್ಥಾಪಿಸುವ ಗುರಿಯನ್ನು ಅದು ಹೊಂದಿತ್ತು.

ಗಾಂಧಿ ಸ್ಮಾರಕ ನಿಧಿಯೆಂದೇ ಹೆಸರಾದ ಈ ಸ್ಮಾರಕವನ್ನು 1949ರಲ್ಲಿ ಸ್ಥಾಪಿಸಲಾಗಿತ್ತು. ಸಬರಮತಿ ಆಶ್ರಮದ ನೆರವಿನೊಂದಿಗೆ, ಅದು ಮೋಹನದಾಸ ಕರಮಚಂದ ಗಾಂಧೀಜಿಯವರ ವಿಭಿನ್ನ ಪ್ರಕಾರದ ಬರಹಗಳನ್ನು ಸಂಗ್ರಹಿಸಲು ಆರಂಭಿಸಿತು. ಇಂಗ್ಲಿಷ್, ಹಿಂದಿ ಅಲ್ಲದೆ ತನ್ನ ಮಾತೃಭಾಷೆಯಾದ ಗುಜರಾತಿಯಲ್ಲಿ ಮಹಾತ್ಮಾಗಾಂಧೀಜಿ ಬರೆದಿದ್ದ ಬಿಡಿಲೇಖನಗಳನ್ನು ಅದು ಸಂಗ್ರಹಿಸಲು ಆರಂಭಿಸಿತು. ಗಾಂಧೀಜಿಯವರು ಮೂರು ಪುಸ್ತಕಗಳು, ಹಲವಾರು ಕರಪತ್ರಗಳು, ಡಝನ್‌ಗಟ್ಟಲೆ ಅರ್ಜಿಗಳು, ನೂರಾರು ಸುದ್ದಿಪತ್ರಿಕೆ ಲೇಖನಗಳು, ಸಾವಿರಾರು ಪತ್ರಗಳು ಬರೆದಿದ್ದರು. ಅವರು ಹಲವಾರು ಸಂದರ್ಶನಗಳನ್ನು ನೀಡಿದ್ದರು ಹಾಗೂ ಅಸಂಖ್ಯ ಭಾಷಣಗಳನ್ನು ಮಾಡಿದ್ದರು. ಅವರು ತನ್ನದೇ ಆದ ಬರಹ ಪ್ರಕಾರವನ್ನು ಕಂಡುಕೊಂಡಿದ್ದರು. ಅವರ ಬರಹಗಳಲ್ಲಿ ಅನೇಕವು, ಅವರು ವಾರದಲ್ಲಿ ಒಂದು ಬಾರಿ ಮೌನವ್ರತವನ್ನು ಆಚರಿಸುತ್ತಿದ್ದ ದಿನವಾದ ಸೋಮವಾರದಂದು ಬರೆದದ್ದಾಗಿವೆ.

1956ರೊಳಗೆ ಗಾಂಧೀಜಿಯವರ ಸಮಗ್ರ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಸಾಕಾಗುವಷ್ಟು ಅವರ ಸಾಹಿತ್ಯ ಸಂಗ್ರಹಗಳು ಇರುವುದಾಗಿ ಗಾಂಧಿ ಸ್ಮಾರಕ ನಿಧಿಯು ನಿರ್ಧರಿಸಿತ್ತು. ಗಾಂಧೀಜಿ ಬರಹಗಳ ಸಂಗ್ರಹಕ್ಕಾಗಿ ಸಲಹಾ ಮಂಡಳಿಯೊಂದನ್ನು ರಚಿಸಲಾಯಿತು. ವಲ್ಲಭಬಾಯ್ ಪಟೇಲ್ ನಿಧನದ ಆನಂತರ ಆಗಿನ ಪ್ರಮುಖ ಗುಜರಾತಿ ಭಾಷೆಯ ಕಾಂಗ್ರೆಸಿಗರಾದ ಮೊರಾರ್ಜಿ ದೇಸಾಯಿ ಅವರು ಸಲಹಾ ಮಂಡಳಿಯ ಅಧ್ಯಕ್ಷತೆ ವಹಿಸಿದ್ದರು. ಗಾಂಧೀಜಿಯವರ ಬರಹಗಳ ಹಕ್ಕುಪ್ರತಿಯನ್ನು ಹೊಂದಿರುವ ನವಜೀವನ್ ಪ್ರೆಸ್‌ನ ಸಹಕಾರ ಅತ್ಯಂತ ಅಗತ್ಯವಾಗಿರುವುದರಿಂದ ಅದನ್ನು ಕೂಡಾ ಮಂಡಳಿಯಲ್ಲಿ ಸೇರ್ಪಡೆಗೊಳಿಸಲಾಯಿತು. ಗಾಂಧೀಜಿಯವರಿಗೆ ನಿಕಟವಾಗಿದ್ದ ಹಲವಾರು ಸಾಮಾಜಿಕ ಕಾರ್ಯಕರ್ತರು, ಮಹಾತ್ಮಾ ಗಾಂಧೀಜಿಯವರ ಕಿರಿಯಪುತ್ರ ದೇವದಾಸ್ ಅವರು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ಸಂಪಾದಕರಾಗಿದ್ದರು. ಮಹಾತ್ಮಾ ಗಾಂಧೀಜಿಯವರ ಜೀವನದ ಕುರಿತ ಸಾಕ್ಷಚಿತ್ರವನ್ನು ನಿರ್ಮಿಸುವಲ್ಲಿ ದೇವದಾಸ್ ಗಾಂಧಿ ಪ್ರಮುಖ ಪಾತ್ರ ವಹಿಸಿದ್ದರು. ಗಾಂಧೀಜಿ ಬರಹಗಳನ್ನು ಸಂರಕ್ಷಿಸುವ ಕಾರ್ಯದಲ್ಲಿಯೂ ಅವರು ಗಮನಾರ್ಹ ಸೇವೆಯನ್ನು ಸಲ್ಲಿಸಬೇಕಾಗಿ ಬಂತು.

ಗಾಂಧೀಜಿಯವರ ಸಮಗ್ರ ಬರಹಕೃತಿಗಳ ಮುಖ್ಯ ಸಂಪಾದಕರಾಗಿ ನೇಮಕಗೊಂಡ ಮೊದಲ ವ್ಯಕ್ತಿ ಭರತನ್ ಕುಮಾರಪ್ಪ ಅವರಾಗಿದ್ದಾರೆ. ಭರತನ್ ಅವರು ತತ್ವಶಾಸ್ತ್ರ ಹಾಗೂ ಧರ್ಮಶಾಸ್ತ್ರದ ವಿದ್ವಾಂಸರಾಗಿದ್ದರು. ಎಡಿನ್‌ಬರ್ಗ್ ಹಾಗೂ ಲಂಡನ್ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್ ಪ್ರಶಸ್ತಿಯನ್ನು ಪಡೆದ ಬಳಿಕ ಗ್ರಾಮೀಣ ಪ್ರದೇಶಗಳ ಪುನರ್‌ನಿರ್ಮಾಣದ ಕುರಿತಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಮಹಾತ್ಮಾ ಗಾಂಧೀಜಿಯವರ ಸಾವಿನ ಆನಂತರ ಅವರ ಬರಹಗಳ ಹಲವಾರು ಸಂಕಲನಗಳನ್ನು ಭರತನ್ ಸಂಪಾದಿಸಿದ್ದರು.

ಭರತನ್ ಕುಮಾರಪ್ಪ ಅವರು ಗಾಂಧೀಜಿಯವರ ಬರಹಗಳನ್ನು ಜೋಡಿಸುವ ಹಾಗೂ ಸಂಪಾದಿಸುವ ಕೆಲಸಕ್ಕೆ ಹೇಳಿ ಮಾಡಿಸಿದಂತಿದ್ದರು. ಆದಾಗ್ಯೂ, ಮೊದಲ ಸಂಪುಟವನ್ನು ಮುದ್ರಣಾಲಯಕ್ಕೆ ಕಳುಹಿಸಿದ ಬಳಿಕ ಅವರು 1957ರ ಜೂನ್‌ನಲ್ಲಿ ಅವರು ಹೃದಯಾಘಾತದಿಂದ ನಿಧನರಾದರು. ಅವರ ಸ್ಥಾನದಲ್ಲಿ ಮಾಜಿ ಸ್ವಾತಂತ್ರ ಹೋರಾಟಗಾರ ಜೈರಾಮದಾಸ್ ದೌಲತ್‌ರಾಮ್ ನೇಮಕಗೊಂಡರು.

 ಆದರೆ ಅವರಿಗೆ ಈ ಕೆಲಸದಲ್ಲಿ ತನ್ಮಯತೆ ಇರಲಿಲ್ಲ. ಅಸಂತುಷ್ಟತೆಯೊಂದಿಗೆ ಎರಡು ವರ್ಷಗಳ ಬಳಿಕ ಅವರು ರಾಜ್ಯಸಭಾ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಹುದ್ದೆಗೆ ರಾಜೀನಾಮೆ ನೀಡಿದರು. ದೌಲತ್ ರಾಮ್‌ರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕೆ.ಸ್ವಾಮಿನಾಥನ್ ಬಂದರು. ಈ ಹುದ್ದೆಗೆ ಸ್ವಾಮಿನಾಥನ್ ಅವರನ್ನು ನೇಮಿಸುವಂತೆ ವಿನೋಭಾಬಾವೆ ಅವರು ಪ್ರಬಲವಾಗಿ ಶಿಫಾರಸು ಮಾಡಿದ್ದರು. ಅಂದ ಹಾಗೆ ಭಗವದ್ಗೀತೆ ಕುರಿತು ವಿನೋಬಾ ಭಾವೆ ನೀಡಿದ ಉಪನ್ಯಾಸಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವಲ್ಲಿ ಸ್ವಾಮಿನಾಥನ್ ಪ್ರಮುಖ ಪಾತ್ರ ವಹಿಸಿದ್ದರು.

ತನ್ನ 63ನೇ ವಯಸ್ಸಿಗೆ ಕೆ.ಸ್ವಾಮಿನಾಥನ್ ದಿಲ್ಲಿಗೆ ಬಂದು ನೆಲೆಸಿದ್ದರು. ಸಾಹಿತ್ಯ ಶಿಕ್ಷಕರಾಗಿ ವೃತ್ತಿಯಲ್ಲಿ ಅವರು ಉತ್ಕೃಷ್ಟ ಸಾಧನೆ ಮಾಡಿದ್ದರು. ಅವರು ನೀಡುತ್ತಿದ್ದ ತರಬೇತಿ ಹಾಗೂ ಪ್ರೇರಣೆಯು, ಗಾಂಧೀಜಿ ಸಮಗ್ರ ಸಾಹಿತ್ಯ ಯೋಜನೆಯ ಪ್ರಥಮ ಸಂಪಾದಕ ಭರತನ್ ಕುಮಾರಪ್ಪ ಅವರನ್ನೇ ಹಲವು ವಿಧಗಳಲ್ಲಿ ಹೋಲುತ್ತಿತ್ತು. ಇವರಿಬ್ಬರ ಬೇರುಗಳು ತಮಿಳು ಪ್ರಾಂತದಲ್ಲಿದ್ದವು. ಇಬ್ಬರ ಮಾತೃಭಾಷೆ ಒಂದೇ ಆಗಿದ್ದವು. ಜಾಗತಿಕ ಮಟ್ಟದ ಬೌದ್ಧಿಕ ಕರೆನ್ಸಿ ಎಂದೇ ಪರಿಗಣಿಸಲಾಗುವ ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಪಡೆದಿದ್ದರು. ಧಾರ್ಮಿಕವಾಗಿಯೂ ಇವರಿಬ್ಬರು ಶ್ರದ್ಧಾವಂತರಾಗಿದ್ದರು. ಕ್ರೈಸ್ತ ಧರ್ಮೀಯರಾದ ಭರತನ್ ಅವರು ರಾಮಾನುಜಾಚಾರ್ಯ ಅವರ ಕುರಿತಾಗಿ ಪುಸ್ತಕವನ್ನು ಬರೆದಿದ್ದರೆ, ಹಿಂದೂ ಧರ್ಮೀಯರಾದ ಸ್ವಾಮಿನಾಥನ್ ಬೈಬಲ್ ಓದುವುದನ್ನು ಇಷ್ಟಪಡುತ್ತಿದ್ದರು.

ಮಂಡಳಿಯ ವರಿಷ್ಠನ ಹೊಣೆಗಾರಿಕೆಯನ್ನು ಹೊರಲು ಸ್ವಾಮಿನಾಥನ್ ಅವರಿಗಿದ್ದ ಅತ್ಯಂತ ಮಹತ್ವದ ಅರ್ಹತೆಯೆಂದರೆ ಜನರೊಂದಿಗೆ ಬೆರೆಯುವ ಸಾಮರ್ಥ್ಯ ಮತ್ತು ಅವರಿಂದ ಕೆಲಸವನ್ನು ಮಾಡಿಸಿಕೊಳ್ಳುವುದಾಗಿದೆ. ಮದ್ರಾಸ್‌ನ ಪ್ರೆಸಿಡೆನ್ಸಿ ಕಾಲೇಜ್‌ನ ಇಂಗ್ಲಿಷ್ ವಿಭಾಗದ ವರಿಷ್ಠರಾಗಿ ಅವರು ದೀರ್ಘ ಅವಧಿಯವರೆಗೆ ಸೇವೆಯನ್ನು ಸಲ್ಲಿಸಿದ್ದರು ಹಾಗೂ ಸರಕಾರಿ ಆರ್ಟ್ಸ್ ಕಾಲೇಜಿನ ಪ್ರಾಂಶುಪಾಲರಾಗಿ ಐದು ವರ್ಷಗಳವರೆಗೆ ಸೇವೆ ಸಲ್ಲಿಸಿದ್ದರು. ವಿಶ್ವವಿದ್ಯಾನಿಲಯದ ಉದ್ಯೋಗದಿಂದ ನಿವೃತ್ತರಾದ ಬಳಿಕ ಅವರು ಸಂಡೇ ಸ್ಟಾಂಡರ್ಡ್ ದಿನಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಅಲ್ಲಿ ಅವರು ವರದಿಗಾರರು ಮತ್ತು ಉಪಸಂಪಾದಕರು ಹಾಗೂ ಅಕ್ಷರ ಸಂಯೋಜರು ಹಾಗೂ ಪ್ರೂಫ್ ರೀಡರ್‌ಗಳ ದೊಡ್ಡ ಬಳಗದ ಉಸ್ತುವಾರಿ ನಿರ್ವಹಿಸಿದ್ದರು.

ಸಮಿತಿಗೆ ಸ್ವಾಮಿನಾಥನ್ ಅವರು ಪ್ರಪ್ರಥಮವಾಗಿ ಸಿ.ಎನ್. ಪಟೇಲ್ ಅವರನ್ನು ನೇಮಕಮಾಡಿದರು. ಅವರು ಕೂಡಾ ಇಂಗ್ಲಿಷ್ ಸಾಹಿತ್ಯದ ಪ್ರೊಫೆಸರ್ ಆಗಿದ್ದರು. ಗಾಂಧೀಜಿಯವರ ಹಾಗೆ ಅವರು ಕೂಡಾ ಗುಜರಾತಿ ಭಾಷಿಕರಾಗಿದ್ದು, ತಮ್ಮ ಬದುಕಿನ ಬಹುತೇಕ ಭಾಗವನ್ನು ಅಹ್ಮದಾಬಾದ್‌ನಲ್ಲಿಯೇ ಕಳೆದಿದ್ದರಾದರೂ ಸ್ವಾಮಿನಾಥನ್ ಜೊತೆಗೆ ಅವರು ನಿಕಟವಾಗಿ ಕೆಲಸ ಮಾಡಿದ್ದರು ಮತ್ತು ಈ ಯೋಜನೆಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದರು. ಅದರಲ್ಲೂ ಗಾಂಧೀಜಿಯವರ ವಿಸ್ತೃತವಾದ ಗುಜರಾತಿ ಬರಹಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸುವಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಸ್ವಾಮಿನಾಥನ್ ಅವರ ತಂಡದ ಇತರರಂತೆ ಅವರು ಕೂಡಾ ಈ ಕೆಲಸದಲ್ಲಿ ಗಾಢವಾದ ಬದ್ಧತೆಯನ್ನು ಹೊಂದಿದ್ದರು ಹಾಗೂ ಅತ್ಯುತ್ಕೃಷ್ಟವಾದ ಅರ್ಹತೆಯನ್ನು ಹೊಂದಿದ್ದರು. ಗಾಂಧೀಜಿಯವರ ಶಿಷ್ಯೆ ಮೀರಾಬೆನ್ ಅವರ ಜೊತೆ ಹಿಮಾಲಯದಲ್ಲಿ ಸೇವೆ ಸಲ್ಲಿಸಿದ್ದ ಜೆ.ಪಿ. ಉನಿಯಾಲ್ ಕೂಡಾ ಮಂಡಳಿಯಲ್ಲಿ ಒಳಗೊಂಡಿದ್ದರು. ಮೀರಾ ಬೆನ್ ಮೂಲಕ ಉನಿಯಾಲ್ ಅವರಿಗೆ ಮಹಾತ್ಮಾ ಗಾಂಧೀಜಿಯ ಬದುಕು ಮತ್ತು ಸಾಧನೆಯ ಬಗ್ಗೆ ಆಸಕ್ತಿ ಬೆಳೆದುಬಂದಿತ್ತು. ಆನಂತರ ಈ ತಂಡಕ್ಕೆ ಖ್ಯಾತ ಕವಿ ಭವಾನಿ ಪ್ರಸಾದ್ ಮಿಶ್ರಾ ಕೂಡಾ ಬಂದರು. ಅವರು ಗಾಂಧೀಜಿಯವರ ಬರಹ ಸಂಕಲನಗಳ ಹಿಂದಿ ಭಾಷಾಂತರದ ಉಸ್ತುವಾರಿ ಸಂಪಾದಕರಾಗಿ ಸೇರ್ಪಡೆಯಾಗಿದ್ದರು.

1964ರ ವೇಳೆಗೆ 9 ಸಂಪುಟಗಳು ಪ್ರಕಟವಾದವು. ಗಾಂಧೀಜಿಯವರ ಬಗ್ಗೆ ಅಧ್ಯಯನ ನಡೆಸುತ್ತಿದ್ದ ಅಮೆರಿಕನ್ ವಿದ್ವಾಂಸೆ ಜೊವಾನ್ ಬೊಂಡುರಾಂಟ್ ಅವರು ಗಾಂಧೀಜಿ ಬರಹಸಂಕಲನಗಳ ಕುರಿತಾಗಿ ‘ಜರ್ನಲ್ ಆಫ್ ಮಾಡರ್ನ್ ಹಿಸ್ಟರಿ’ಯಲ್ಲಿ ಲೇಖನವನ್ನು ಬರೆದಿದ್ದರು. ಈ ಯೋಜನೆಯು ಅತ್ಯುತ್ಕೃಷ್ಟವಾದ ಪ್ರಶಂಸೆಗೆ ಅರ್ಹವಾಗಿದೆ ಎಂದು ಆಕೆ ಬರೆದಿದ್ದರು. ಈ ಬರಹಗಳಲ್ಲಿ ಸಂಪಾದಕರು ಯಾರೂ ಹಸ್ತಕ್ಷೇಪ ನಡೆಸಿರುವ ಒಂದೇ ಒಂದು ನಿದರ್ಶನ ಇಲ್ಲ. ಆದಾಗ್ಯೂ, ಅವರು ಅಗಾಧ ಮಾಹಿತಿಯಿರುವ ಓದುಗರು ಪದೇ ಪದೇ ಕೇಳುತ್ತಿದ್ದ ವಿಷಯದ ಕುರಿತ ಪ್ರಶ್ನೆಗಳಿಗೆ ಸಮರ್ಪಕ ಉತ್ತರವನ್ನು ನೀಡುವಲ್ಲಿ ಸಫಲರಾಗಿದ್ದರು. ಮೂಲಗಳ ದೃಢೀಕರಣ, ಬರಹಗಳ ಯಥಾರ್ಥತೆ, ಬರಹಗಳಲ್ಲಿ ಉಲ್ಲೇಖಿಸಲ್ಪಟ್ಟ ಹೆಚ್ಚೇನೂ ಪ್ರಸಿದ್ಧರಲ್ಲದ ವ್ಯಕ್ತಿಗಳನ್ನು ಗುರುತಿಸಿ, ಓದುಗರ ಕುತೂಹಲವನ್ನು ನಿವಾರಿಸಿದ್ದರು.

ಈ ಮಾನದಂಡಗಳನ್ನು ಮುಂದಿನ ವರ್ಷಗಳಲ್ಲಿಯೂ ನಿಷ್ಠೆಯಿಂದ ಕಾದುಕೊಂಡು ಬರಲಾಯಿತು. ಆದಾಗ್ಯೂ 1975-77ರ ಅವಧಿಯಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದ ಅವಧಿಯಲ್ಲಿ ತುಸು ಸ್ಥಗಿತತೆ ಉಂಟಾಗಿದ್ದನ್ನು ಬಿಟ್ಟರೆ 50ಕ್ಕೂ ಅಧಿಕ ಸಂಪುಟಗಳು ಪ್ರಕಟವಾದವು. ಈ ಮಧ್ಯೆ ಪ್ರಧಾನಿ ಇಂದಿರಾ ಗಾಂಧೀಜಿಯವರ ಭಟ್ಟಂಗಿಗಳು ಸ್ವಾಮಿನಾಥನ್ ಅವರನ್ನು ಹುದ್ದೆಯಿಂದ ಕಿತ್ತುಹಾಕಲು ಬಯಸಿದ್ದರು. ಆಗ ಮಂಡಳಿಯ ಅಧ್ಯಕರಾಗಿದ್ದು, ತುರ್ತುಪರಿಸ್ಥಿತಿಯ ವೇಳೆ ಜೈಲಿನಲ್ಲಿದ್ದ ಮೊರಾರ್ಜಿದೇಸಾಯಿಯವರಿಗೆ ಸ್ವಾಮಿನಾಥನ್ ಅವರು ಗಾಂಧೀಜಿಯ ಸಂಪುಟಗಳನ್ನು ಒಂದರ ನಂತರ ಒಂದರಂತೆ ಕಳುಹಿಸುತ್ತಿದ್ದುದು ಇಂದಿರಾ ಅನುಯಾಯಿಗಳ ಕೆಂಗಣ್ಣಿಗೆ ಕಾರಣವಾ ಗಿತ್ತು. ಆದಾಗ್ಯೂ ಅದೃಷ್ಟವಶಾತ್ ವಿವೇಕಯುತವಾದ ನಿರ್ಧಾರವೇ ಗೆದ್ದುಬಿಟ್ಟಿತ್ತು. ಸ್ವಾಮಿನಾಥನ್ ಅವರು ಹಲವಾರು ವರ್ಷಗಳ ಕಾಲ ಮುಖ್ಯಸಂಪಾದಕರಾಗಿ ಉಳಿದುಕೊಂಡರು ಮತ್ತು ಗಾಂಧೀಜಿ ಬರಹಗಳ 90 ಸಂಪುಟಗಳು ಪೂರ್ಣಗೊಂಡ ಬಳಿಕ 1985ನೇ ಇಸವಿಯಲ್ಲಷ್ಟೇ ನಿವೃತ್ತಿಹೊಂದಿದರು. (ಆನಂತರ 7 ಪೂರಕ ಸಂಪುಟಗಳು ರಚನೆಯಾದವು).

ಸ್ವಾಮಿನಾಥನ್ ಅವರು ತನ್ನ ಸಹದ್ಯೋಗಿಗಳಿಂದ ಅಗಾಧವಾಗಿ ಪ್ರಶಂಸೆಗೊಳಗಾಗಿದ್ದರು. ಗುಜರಾತಿ ಬರಹಗಾರ ಹಸ್ಮುಖ್ ಶಾ ಅವರು ತನ್ನ ಮುಖ್ಯಸಂಪಾದಕರ (ಸ್ವಾಮಿನಾಥನ್) ಬಗ್ಗೆ ಬರೆಯುತ್ತಾ, ‘‘ಸ್ವಾಮಿನಾಥನ್ ಅವರು ಸಂಪಾದಕತ್ವ ಹಾಗೂ ಸಂಶೋಧನೆಯ ಅಗಾಧ ಹೊಣೆಗಾರಿಕೆಯನ್ನು ನಿಭಾಯಿಸಲು ಆ ಕೆಲಸದಲ್ಲಿ ಪರಿಷ್ಕರಣೆಗಳನ್ನು ನಡೆಸಿದರು. ತನ್ನ ತಂಡದ ಇತಿಮಿತಿಗಳು ಹಾಗೂ ವ್ಯಕ್ತಿತ್ವಗಳಲ್ಲಿರುವ ಪ್ರತಿಭೆಗಳನ್ನು ಕ್ಷಿಪ್ರವಾಗಿ ಅಂದಾಜಿಸುವವರಾಗಿದ್ದರು. ಅವರು ಧ್ವನಿಯೆತ್ತಿದ್ದನ್ನಾಗಲಿ ಅಥವಾ ಯಾರನ್ನಾದರೂ ಬೈದಿದ್ದನ್ನಾಗಲಿ ಯಾವತ್ತೂ ನಾನು ಕಂಡದ್ದಿಲ್ಲ. ಅವರ ಬದುಕು ಹಾಗೂ ಸಮರ್ಪಣಾಭಾವವು ಒಟ್ಟಾರೆಯಾಗಿ ಪುರಾತನ ಋಷಿ, ಮುನಿಗಳ ಇನ್ನೊಂದು ಯುಗದ ಪ್ರಮಾಣಕ ಮುದ್ರೆಗಳಂತಿದ್ದವು’’ ಎಂದಿದ್ದರು.

ಆರು ವರ್ಷಗಳ ಗಾಂಧೀಜಿ ಸಮಗ್ರ ಕೃತಿಗಳ ಸಂಪಾದನೆಯಲ್ಲಿ ಕೆಲಸ ಮಾಡಿದ ಬಳಿಕ ಹಸ್ಮುಖ್ ಶಾ ಅವರು ಮೊರಾರ್ಜಿ ದೇಸಾಯಿಯವರ ಖಾಸಗಿ ಕಾರ್ಯದರ್ಶಿಯಾಗಿ ಸೇರ್ಪಡೆಗೊಂಡರು. ಶಾ ಸಮಿತಿಯನ್ನು ತೊರೆದ ಬಳಿಕ ಲಲಿತಾ ಝಕಾರಿಯಾ ಅವರು ಈ ಯೋಜನೆಗೆ ನೇಮಕಗೊಂಡರು. ನಾನು ಮೊದಲು ಗಾಂಧೀಜಿಯವರ ಸಂಗ್ರಹ ಕೃತಿಗಳನ್ನು ದಶಕದ ಹಿಂದೆಯೇ ಒಂದು ಸಂಪುಟದಿಂದ ಇನ್ನೊಂದು ಸಂಪುಟವನ್ನು ಪುಟದಿಂದ ಪುಟಕ್ಕೆ ಚಾಚೂತಪ್ಪದಂತೆ ಓದಿದ್ದೆ. ಈಗ ಅವುಗಳನ್ನು ಮತ್ತೆ ಓದುವುದನ್ನು ಆರಂಭಿಸಿದ್ದೇನೆ. ಈ ಬಾರಿ ನಾನು ಪ್ರತಿ ಸಂಪುಟದಲ್ಲಿಯೂ ಮಾಡಲಾದ ಸಂಪಾದಕೀಯ ಕೆಲಸದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿದ್ದೇನೆ. ಹಿಂದಿನಂತೆ ಗಾಂಧೀಜಿಯವರ ಮಾತುಗಳ ಕುರಿತಾದ ಮೆಚ್ಚುಗೆ ನನಗೆ ಇನ್ನೂ ಹೆಚ್ಚಾಯಿತು. ಸಾಂದರ್ಭಿಕವಾಗಿ ಅವು ನನ್ನನ್ನು ಪ್ರೇರೇಪಿಸುತ್ತಿದ್ದವು ಹಾಗೂ ಕೆಲವೊಮ್ಮೆ ನನ್ನನ್ನು ಮುಜುಗರಕ್ಕೀಡು ಮಾಡುತ್ತಿದ್ದವು ಕೂಡಾ. ಗಾಂಧೀಜಿಯವರ ಮಾತುಗಳನ್ನು ಸಂಪೂರ್ಣವಾದ ಗ್ರಹಿಕೆಯೊಂದಿಗೆ ಅತ್ಯಂತ ಪರಿಣತಿಯೊಂದಿಗೆ ರೂಪಿಸಿದ ರೀತಿಯನ್ನು ನಾನು ಮೆಚ್ಚತೊಡಗಿದೆ. ಪ್ರತಿಯೊಂದು ಸಂಪುಟವು ಒಳನೋಟವನ್ನು ಬೀರುವಂತಹ ಮುನ್ನುಡಿಯೊಂದಿಗೆ ಆರಂಭವಾಗುತ್ತಿದ್ದವು. ಪ್ರಸ್ತುತತೆಯಿರುವ ದಾಖಲೆಗಳ ವಿಷಯವಿವರಣೆ ಹಾಗೂ ವಿಷಯಾನುಕ್ರಮಣಿಕೆ ಮತ್ತು ಪುಟ ವಿವರಗಳನ್ನು ಪ್ರತಿಸಂಪುಟದ ಕೊನೆಯಲ್ಲಿ ನೀಡಲಾಗುತ್ತಿತ್ತು. ಇವೆಲ್ಲಕ್ಕೂ ಕಲಶವಿಟ್ಟಂತೆ ಬರೆಯಲಾದ ಶ್ರೀಮಂತ ಟಿಪ್ಪಣಿಗಳು ಮುಖ್ಯ ಬರಹದ ಪುಟಗಳಿಗೆ ಅಂದವಿಟ್ಟಿದೆೆ. ಇವೆಲ್ಲವೂ ಸ್ವಾಮಿನಾಥನ್ ಮತ್ತವರ ತಂಡದ ಸಾಧನೆಯನ್ನು ಗೌರವಿಸುವಂತೆ ಮತ್ತು ಮೆಚ್ಚಿಕೊಳ್ಳುವಂತೆ ಮಾಡಿದೆ.

ನನ್ನ ಬಳಿ ಗಾಂಧೀಜಿ ಸಮಗ್ರ ಬರಹಗಳ ಮುದ್ರಿತ ಸಂಪುಟಗಳ ಪೂರ್ಣಸೆಟ್ ಅನ್ನು ನಾನು ಹೊಂದಿದ್ದೇನೆ. ಈಗ ಅವು ಆನ್‌ಲೈನ್‌ನಲ್ಲಿಯೂ ಲಭ್ಯವಿದೆ. ಆದರೆ ಗಾಂಧೀಜಿ ವೆಬ್‌ಸೈಟ್‌ಗಳ ಪೈಕಿ ಅಧಿಕಾರಾತ್ಮಕವಾಗಿರುವ ಗಾಂಧೀಜಿ ಹೆರಿಟೇಜ್ ಪೋರ್ಟಲ್ ಅನ್ನು ಸಬರಮತಿ ಆಶ್ರಮ ನಡೆಸುತ್ತಿದ್ದು, ಅದರಲ್ಲಿ ಅವರ ಸಾಹಿತ್ಯವನ್ನು ಅತ್ಯುತ್ತಮವಾಗಿ ಓದಬಹುದಾಗಿದೆ. ಈ ಪುಸ್ತಕ ಸರಣಿಗಳ ಆಧಾರದಲ್ಲಿ ಈವರೆಗೆ ಸಾವಿರಾರು ಪುಸ್ತಕಗಳು ಬರೆಯಲಾಗಿದೆ ಹಾಗೂ ವಿಶೇಷ ಉಪನ್ಯಾಸಗಳನ್ನು ನೀಡಲಾಗಿದೆ. ವಿದ್ವಾಂಸರ ತಂಡವೊಂದು ನಡೆಸಿದ ಸಾಮೂಹಿಕ ಹಾಗೂ ಅತ್ಯಮೋಘವಾದ ಕೃತಿ ಇವಾಗಿವೆ. ಇಂತಹ ಸಾಧನೆ ಭಾರತದಲ್ಲಿ ತೀರಾ ಅಪರೂಪದ್ದಾಗಿದೆ. ಅದರಲ್ಲೂ ಭಾರತ ಸರಕಾರದ ಆಶ್ರಯದಲ್ಲಿ ನಡೆಯುವುದಂತೂ ವಿರಾಳಾತಿವಿರಳವಾಗಿದೆ. ಇಂತಹ ಅಮೋಘ ಸಾಧನೆಗಾಗಿ ಇನ್ನೂ ತಾನೆ ಹುಟ್ಟಬೇಕಾಗಿರುವ ಭಾವೀ ವಿದ್ವಾಂಸರು ಹಾಗೂ ಭಾರತವಲ್ಲದೆ ಇತರ ದೇಶಗಳ ವಿದ್ವಾಂಸರು ಕೆ.ಸ್ವಾಮಿನಾಥನ್ ಅವರಿಗೆ ಹಾಗೂ ಅವರ ಅದ್ಭುತವಾದ ಪರಿಣತಿಯ ಸಂಪಾದಕರು ಹಾಗೂ ಅನುವಾದಕರ ತಂಡಕ್ಕೆ ಕೃತಜ್ಞರಾಗಬೇಕಾಗಿದೆ.

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News

ಸಂವಿಧಾನ -75