ಲಸಿಕೆ ಹಾಕದಿದ್ದಲ್ಲಿ ಪೌರತ್ವ ಕಿತ್ತುಕೊಳ್ಳಲಾಗುವುದು!
ಆಧಾರ್ ಕಾರ್ಡ್ ಇಲ್ಲದೆ ಇದ್ದರೆ ಏನೂ ಇಲ್ಲ ಎನ್ನುವುದರ ಬದಲಾಗಿ, ‘ಲಸಿಕೆ ಪಡೆಯದೆ ಇದ್ದರೆ ಏನು ಕೊಡುವುದಿಲ್ಲ’ ಎಂದು ಸರಕಾರ ಹೇಳುತ್ತಿರುವುದು ಕೇಳಿ ಪತ್ರಕರ್ತ ಎಂಜಲು ಕಾಸಿಗೆ ಭಯ ಶುರುವಾಯಿತು. ಅವನು ತನ್ನ ಜೋಳಿಗೆ ಸಮೇತ ವಿಧಾನಸೌಧಕ್ಕೆ ನುಗ್ಗಿದ. ಅಲ್ಲಿ ದಂಕಾಯ ಸಚಿವ ರಶೋಕ್ ಅವರು ಕೈಯಲ್ಲಿ ಲಸಿಕೆ ಹಿಡಿದು ನಿಂತಿದ್ದರು. ‘‘ಸಾರ್...ಆಧಾರ್ ಬದಲಿಗೆ ಲಸಿಕೆ ಕಡ್ಡಾಯ ಮಾಡಲಾಗುತ್ತದೆ ಯಂತೆ ಹೌದೇ?’’ ಕಾಸಿ ಕೇಳಿದ.
‘‘ಹೌದು....ಲಸಿಕೆ ಹಾಕದೇ ಇದ್ದರೆ ಏನೂ ಇಲ್ಲ. ನೀವು ಈ ದೇಶದ ಪೌರತ್ವ ಹೊಂದಬೇಕಾದರೂ ಲಸಿಕೆ ಅಗತ್ಯ ಎನ್ನುವ ಕಾಯ್ದೆಯನ್ನು ಶೀಘ್ರದಲ್ಲೇ ಜಾರಿಗೊಳಿಸಲಿದ್ದೇವೆ...’’
‘‘ಸಾರ್...ಹಾಗಾದರೆ ಲಸಿಕೆ ಹಾಕದೇ ಸಾರ್ವಜನಿಕವಾಗಿ ಓಡಾಡುವಂತೆಯೇ ಇಲ್ಲವೇ?’’
‘‘ಸಾರ್ವಜನಿಕ ಶೌಚಾಲಯಕ್ಕೆ ಪ್ರವೇಶಿಸಬೇಕಾದರೂ ಲಸಿಕೆ ಹಾಕಿರುವ ದಾಖಲೆಗಳನ್ನು ತೋರಿಸಲೇ ಬೇಕು’’ ದಂಕಾಯ ಸಚಿವರು ಕಡ್ಡಿ ಮುರಿದಂತೆ ಹೇಳಿದರು.
‘‘ಲಸಿಕೆ ಹಾಕದ ಪೋಷಕರು ಈಗ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಇಲ್ಲವೇ?’’
‘‘ಸಾಧ್ಯವೇ ಇಲ್ಲ. ಮೊದಲು ಪೋಷಕರು ಲಸಿಕೆ ಪಡೆದುಕೊಳ್ಳಬೇಕು. ಬಳಿಕ ಮಕ್ಕಳಿಗೆ ಶಿಕ್ಷಣ. ನಮಗೆ ಲಸಿಕೆ ಖಾಲಿಯಾಗುವುದು ಮುಖ್ಯ. ಮಕ್ಕಳು ಶಿಕ್ಷಣ ಕಲಿತರೆ ಅವರು ಮುಂದೆ ಬೀದಿಯಲ್ಲಿ ನಿಂತು ಲಸಿಕೆಯನ್ನು ಪ್ರಶ್ನಿಸಲು ಶುರು ಮಾಡುತ್ತಾರೆ. ಆದುದರಿಂದ ಮಕ್ಕಳನ್ನು ಆದಷ್ಟು ಶಿಕ್ಷಣದಿಂದ ದೂರ ಇರಿಸಿ, ದೇಶವನ್ನು ಉಗ್ರವಾದಿಗಳಿಂದ, ಭಯೋತ್ಪಾದಕರಿಂದ ರಕ್ಷಿಸಲು ಹೊರಟಿದ್ದೇವೆ....’’
‘‘ಅಂದರೆ ಮಕ್ಕಳನ್ನು ಶಿಕ್ಷಣದಿಂದ ದೂರ ಇರುವುದಕ್ಕಾಗಿಯೇ ಲಸಿಕೆ ಕಡ್ಡಾಯ ಮಾಡಲಾಗಿದೆಯೇ?’’ ಕಾಸಿ ಪ್ರಶ್ನಿಸಿದ.
‘‘ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಇನ್ನಷ್ಟು ಲಸಿಕೆಗಳನ್ನು ಭಾರತ ಉತ್ಪಾದಿಸಿ ನಮ್ಮ ಚೌಕೀದಾರರನ್ನು ವಿಶ್ವ ಮಾನ್ಯಗೊಳಿಸಲಿದೆ. ಆ ಲಸಿಕೆಗಳನ್ನು ದಿನಕ್ಕೊಂದರಂತೆ ಪ್ರತಿ ಪೋಷಕರು ತೆಗೆದುಕೊಳ್ಳಬೇಕು ಎಂದು ಮಾರ್ಗಸೂಚಿ ತರುವ ಉದ್ದೇಶವೂ ಇದೆ. ದಿನಕ್ಕೊಂದು ಲಸಿಕೆ ಯಶಸ್ವಿಯಾದರೆ, ಅದನ್ನು ಬೆಳಗ್ಗೆ, ಮಧ್ಯಾಹ್ನ, ರಾತ್ರಿಗೂ ನೀಡುವುದಕ್ಕೆ ಆದೇಶ ನೀಡಲಿದ್ದೇವೆ....ಇದರಿಂದ ದಾಖಲೆ ಮಟ್ಟದ ಲಸಿಕೆ ನೀಡಿದ ಹೆಗ್ಗಳಿಕೆ ನಮ್ಮ ಚೌಕೀದಾರರದ್ದಾಗುತ್ತದೆ’’ ದಂಕಾಯ ಸಚಿವರು ವಿವರಿಸಿದರು.
‘‘ದಿನಕ್ಕೆ ಮೂರು ಲಸಿಕೆಯನ್ನು ಕೊಡುವುದು ಕಷ್ಟವಲ್ಲವೇ?’’
‘‘ಯಾರೆಲ್ಲ ದಿನಕ್ಕೆ ಮೂರು ಬಾರಿ ಲಸಿಕೆ ತೆಗೆದುಕೊಂಡು ಅದರ ದಾಖಲೆ ತೋರಿಸುವುದಿಲ್ಲವೋ ಅವರೆಲ್ಲರ ಮಕ್ಕಳನ್ನು ಶಾಲೆಯಿಂದ ಹೊರ ಹಾಕಿ, ಅವರನ್ನು ಸಂಘಪರಿವಾರದ ಸಂಸ್ಕೃತಿ ರಕ್ಷಣೆಗೆ ಬಳಸಲಾಗುವುದು. ಹಾಗೆಯೇ ಮೂರು ಬಾರಿ ಲಸಿಕೆ ತೆಗೆದುಕೊಳ್ಳದವರನ್ನು ಗುರುತಿಸಿ ಅವರ ರೇಷನ್ ಕಾರ್ಡ್‌ನ್ನು ಹರಿದು ಹಾಕಲಾಗುವುದು. ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ನಿರಾಕರಿಸಲಾಗುವುದು. ಅವರಿಂದ ಪೌರತ್ವವನ್ನು ಕಿತ್ತುಕೊಂಡು ಅವರನ್ನು ಡಿಟೆನ್ಶನ್ ಕೇಂದ್ರದಲ್ಲಿ ಇಡಲಾಗುವುದು...’’
‘‘ಸಾರ್ ಲಸಿಕೆ ಹಾಕಿದವರಿಗೇ ಒಮೈಕ್ರಾನ್ ಬಂದಿದೆಯಲ್ಲ....’’ ಕಾಸಿ ಹೊಸ ವಾದ ಮುಂದಿಟ್ಚ.
‘‘ಲಸಿಕೆಗೂ ಒಮೈಕ್ರಾನ್‌ಗೂ ಸಂಬಂಧವಿಲ್ಲ. ಹೆಚ್ಚು ಹೆಚ್ಚು ಲಸಿಕೆ ಹಾಕಿಸಿಕೊಂಡರೆ ಭಾರತ ವಿಶ್ವಗುರುವಾಗುತ್ತದೆ. ಆದುದರಿಂದ, ಹೆಚ್ಚು ಹೆಚ್ಚು ಲಸಿಕೆಗಳನ್ನು ಉತ್ಪಾದಿಸಿ ಅದನ್ನು ಹೆಚ್ಚು ಹೆಚ್ಚು ಜನರಿಗೆ ನೀಡಿ, ಭಾರತದ ವರ್ಚಸ್ಸನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸುವುದು ಚೌಕೀದಾರರ ಮುಖ್ಯ ಗುರಿಯಾಗಿದೆ’’
‘‘ಬರೇ ಲಸಿಕೆಯಿಂದಲೇ ಜನರ ಹೊಟ್ಟೆ ತುಂಬುತ್ತದೆಯೆ? ಅವರಿಗೆ ಆಹಾರದ ವ್ಯವಸ್ಥೆ ಮಾಡುವ ಏನಾದರೂ ಯೋಜನೆಯಿದೆಯೇ?’’ ಕಾಸಿ ಕೇಳಿದ.
‘‘ಇಂದು ಜನರು ಕೇಳುತ್ತಿರುವುದು ಆಹಾರವಲ್ಲ, ಲಸಿಕೆ. ಅದನ್ನು ಈಗಾಗಲೇ ಪುಕ್ಕಟೆ ನೀಡಲಾಗುತ್ತಿದೆ. ಆಹಾರವನ್ನು ಜನರು ಸೇವಿಸುವುದು ಕಡಿಮೆ ಮಾಡುವುದರಿಂದ ಕೊರೋನ ಇಳಿಕೆಯಾಗುತ್ತದೆ ಎಂದು ನಮ್ಮ ವಿಜ್ಞಾನಿಗಳು ಈಗಾಗಲೇ ಸಂಶೋಧನೆ ನಡೆಸಿದ್ದಾರೆ.’’
‘‘ಅದು ಹೇಗೆ ಸಾರ್?’’ ಕಾಸಿಗೆ ಅರ್ಥವಾಗಲಿಲ್ಲ.
‘‘ಹೇಗೆ ಅಂದರೆ ತಿಂಗಳಿಗೊಮ್ಮೆ ಆಹಾರ ಸೇವಿಸಿದರೆ ಆಯಿತು. ನಿಧಾನಕ್ಕೆ ಜನರ ಸಂಖ್ಯೆಯಲ್ಲಿ ಇಳಿಕೆಯಾಗುತ್ತದೆ. ಜನರ ಸಂಖ್ಯೆಯಲ್ಲಿ ಇಳಿಕೆಯಾದರೆ ಕೊರೋನದಲ್ಲೂ ಇಳಿಕೆಯಾಗುತ್ತದೆ....’’ ದಂಕಾಯ ಸಚಿವರು ರಹಸ್ಯ ಸ್ಫೋಟಿಸಿದರು.
‘‘ಸಾರ್...ನೀವು ಲಸಿಕೆ ಹಾಕಿಸಿಕೊಂಡಿದ್ದೀರಾ...?’’
‘‘ನಾವೇಕೆ ಹಾಕಿಸಿಕೊಳ್ಳಬೇಕು...ವೈದ್ಯರು ಹೇಳಿದ್ದಾರೆ ವೈರಸ್‌ಗಳಿಗೆ ವೈರಸ್‌ಗಳು ದಾಳಿ ನಡೆಸುವುದಿಲ್ಲ ಎಂದು. ಆದುದರಿಂದ ರಾಜಕಾರಣಿಗಳು ಲಸಿಕೆ ತೆಗೆದುಕೊಳ್ಳುವ ಅಗತ್ಯವೇ ಇಲ್ಲ....’’
ಕಾಸಿಗೆ ಇದೊಂದು ಸರಿ ಅನ್ನಿಸಿತು. ‘‘ಸರಿ ಬರುತ್ತೇನೆ ಸರ್...’’
‘‘ಹೇಗೂ ಬಂದಿದ್ದೀರಿ. ಅಲ್ಲಿ ಗೋದಾಮಿನಲ್ಲಿ ಲಸಿಕೆ ಬಿದ್ದುಕೊಂಡಿವೆ. ಒಂದಿಷ್ಟು ಖಾಲಿ ಮಾಡಿ ಹೋಗಿ....’’ ದಂಕಾಯ ಸಚಿವರು ಹೇಳುತ್ತಿದ್ದಂತೆಯೇ ಕಾಸಿ ಹಿಂದೆ ನೋಡದೆ ಒಂದೇ ಸಮನೆ ಓಡ ತೊಡಗಿದ.
chelayya@gmail.com