ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರಿಗೆ ರಾಜ್ಯವಾರು ಪರಿಹಾರ ನೀಡಿ: ರಾಕೇಶ್ ಟಿಕಾಯತ್
ಕೌಶಂಬಿ: ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡ ರೈತರ ಕುಟುಂಬಿಕರಿಗೆ ರಾಜ್ಯವಾರು ಪರಿಹಾರ ಹಾಗೂ ಉದ್ಯೋಗ ನೀಡುವಂತೆ ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ನಾಯಕ ರಾಕೇಶ್ ಟಿಕಾಯತ್ ಕರೆ ನೀಡಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾದ ನಿಗದಿತ ರವಿವಾರದ ಸಭೆಯ ಮುನ್ನಾ ದಿನವಾದ ಇಂದು ಟಿಕಾಯತ್, ‘‘ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎಂಬುದು ಕೇಂದ್ರ ಸರಕಾರದಲ್ಲಿ ನಮ್ಮ ಬೇಡಿಕೆ. ಮಾತಕತೆ ಈಗಷ್ಟೇ ಆರಂಭವಾಗಿದೆ. ಅದು ಹೇಗೆ ಮುಂದುವರಿಯುತ್ತದೆ ಎಂದು ನಾವು ನೋಡೋಣ. ನಾವು ಇಂದು ಯಾವುದೇ ತಂತ್ರವನ್ನು ರೂಪಿಸುವುದಿಲ್ಲ. ಚಳುವಳಿ ಹೇಗೆ ಮುಂದುವರಿಯಬೇಕು ಎಂಬ ಬಗ್ಗೆ ಮಾತ್ರ ನಾವು ಚರ್ಚೆ ನಡೆಸಲಿದ್ದೇವೆೆ’’ ಎಂದರು.
‘‘ಶುಕ್ರವಾರ ನಡೆಸಲಾಗಿದ್ದ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹಾಗೂ ರೈತರ ನಡುವಿನ ಮಾತುಕತೆ ಪೂರ್ಣಗೊಂಡಿಲ್ಲ. ಆದರೂ ರೈತರ ವಿರುದ್ಧ ದಾಖಲಿಸಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ಅವರು ಒಪ್ಪಿಕೊಂಡಿದ್ದಾರೆ. ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರಿಗೆ ರಾಜ್ಯವಾರು ಪರಿಹಾರ ಹಾಗೂ ಉದ್ಯೋಗ ನೀಡುವ ಅಗತ್ಯತೆ ಇದೆ’’ ಎಂದು ರಾಕೇಶ್ ಟಿಕಾಯತ್ ಹೇಳಿದರು.