ಥ್ರೀ ಗಾರ್ಜಸ್ ಅಣೆಕಟ್ಟು ತುಂಬಿಕೊಂಡರೆ ಭೂಮಿಯ ಅಕ್ಷ, ಪರಿಭ್ರಮಣಕ್ಕೆ ಧಕ್ಕೆ!

Update: 2021-12-18 19:30 GMT

ಈ ಯೋಜನೆಯಲ್ಲಿ 32 ಜನರೇಟರ್‌ಗಳಿದ್ದು ಪ್ರತಿಯೊಂದರಲ್ಲೂ 50 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಎಲ್ಲಾ ಜನರೇಟರ್‌ಗಳಿಂದ ಒಟ್ಟು 22.5 ದಶಲಕ್ಷ ಕಿಲೋವ್ಯಾಟ್ (22,500 ಮೆಗಾವ್ಯಾಟ್) ಶಕ್ತಿಗೆ ಸಮನಾಗಿದ್ದು ಸಹಜವಾಗಿ ಇದು 15 ಪರಮಾಣು ರಿಯಾಕ್ಟರುಗಳು ಉತ್ಪಾದಿಸುವ ವಿದ್ಯುತ್‌ಗೆ ಸಮವಾಗಿದೆ. ಈ ಅಣೆಕಟ್ಟೆಯಿಂದ ಒಂದು ಉಪಯೋಗವಾಗಿದೆ ಎಂದರೆ ಪ್ರತಿ ವರ್ಷ ಹರಿದು ಬರುವ ನೆರೆಯನ್ನು ತಡೆದಿರುವುದು. 1931ರ ಒಂದೇ ವರ್ಷದಲ್ಲಿ ಉಂಟಾದ ಪ್ರವಾಹದಿಂದ 30 ಲಕ್ಷ ಜನರು ಸಾವು-ನೋವು, ಹಸಿವು ಮತ್ತು ಯಾತನೆಗೆ ಸಿಲುಕಿಕೊಂಡಿದ್ದರು.


ಈ ಅಣೆಕಟ್ಟನ್ನು ನಿರ್ಮಿಸುವ ಮುನ್ನ ಜಗತ್ತೇ ವಿರೋಧ ವ್ಯಕ್ತಪಡಿಸಿದರೂ ಚೀನಾ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಈಗ ಅಣೆಕಟ್ಟನ್ನು ಕಟ್ಟಿ ಮುಗಿಸಿದ ಮೇಲೆ ಚೀನಾ ದೇಶಕ್ಕೆ ಮಾತ್ರವಲ್ಲ ಜಗತ್ತಿಗೂ ವಿಪತ್ತು ಕಾದಿದೆ ಎನ್ನಲಾಗಿದೆ. ಈ ಅಣೆಕಟ್ಟು ಭೂಮಿಯ ಪರಿಭ್ರಮಣದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್ ಎರಡೂ ಧ್ರುವಗಳ ಸ್ಥಾನಗಳು ತುಸು ಸರಿಯುತ್ತವೆ ಎನ್ನಲಾಗಿದೆ. ಯಾಂಗ್ಟ್ಜ್ ನದಿಯನ್ನು ದಾಟುವ ಚೀನಾದ ಹುಬೆ ಪ್ರಾಂತ್ಯದಲ್ಲಿ ನಿರ್ಮಿಸಲಾದ ಥ್ರೀ ಗಾರ್ಜಸ್ ಅಣೆಕಟ್ಟು ವಿಶ್ವದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾಗಿದ್ದು ಒಟ್ಟು 22,500 ಮೆಗಾವ್ಯಾಟ್ ಸಾಮರ್ಥ್ಯವನ್ನು ಹೊಂದಿದೆ. ನೀರಿನ ಮಟ್ಟ ನದಿ ಮಟ್ಟದಿಂದ 299 ಅಡಿ ಎತ್ತರ ನಿಲ್ಲಲಿದ್ದು (ಸಮುದ್ರ ಮಟ್ಟದಿಂದ 574 ಅಡಿ) ಜಲಾಶಯದ ಸುತ್ತಳತೆ 660 ಕಿ.ಮೀ.ಗಳು. ಅಣೆಕಟ್ಟಿನ ಉದ್ದ 1.12 ಕಿ.ಮೀ ಇದ್ದು ಅಣೆಕಟ್ಟೆಯ ದಪ್ಪ 700 ಮೀಟರುಗಳು. ಜಲಾಶಯದ ಒಟ್ಟು ಮೇಲ್ಮೈ ಪ್ರದೇಶ 1,045 ಚ.ಕಿ.ಮೀ ಇದ್ದು ಜಲಾಶಯದಲ್ಲಿ ಸುಮಾರು 39.3 ಘನ ಕಿ.ಮೀ. ನೀರು ನಿಲ್ಲುತ್ತದೆ. ಈ ನೀರಿನ ತೂಕ 39 ಟ್ರಿಲಿಯನ್ ಕಿಲೋಗ್ರಾಂಗಿಂತ ಹೆಚ್ಚಿರುತ್ತದೆ. ಇದರ ನಿರ್ಮಾಣಕ್ಕೆ 28 ದಶಲಕ್ಷ ಘನ ಮೀ. ಕಾಂಕ್ರೀಟ್ 4,63,000 ಮೆಟ್ರಿಕ್ ಟನ್ ಉಕ್ಕು ಬಳಸಲಾಗಿದೆ. ಜಗತ್ತಿನ ವಿರೋಧವನ್ನು ನಿರ್ಲಕ್ಷಿಸಿದ ಚೀನಾ ಈ ಅಣೆಕಟ್ಟನ್ನು 30 ಬಿಲಿಯನ್ ಯುಎಸ್ ಡಾಲರ್ ವೆಚ್ಚದಲ್ಲಿ ನಿರ್ಮಿಸಿದೆ. ಇದರಿಂದ 13 ಲಕ್ಷ ಜನರನ್ನು ತಮ್ಮ ಮೂಲ ಆವಾಸ ಸ್ಥಾನದಿಂದ ಬೇರೆ ಕಡೆಗೆ ಸ್ಥಳಾಂತರಿಸಿದೆ.

ತಜ್ಞರ ಪ್ರಕಾರ ಈ ಅಣೆಕಟ್ಟಿನಿಂದ ಪ್ರಪಂಚ ಪರಿಸರದ ವ್ಯವಸ್ಥೆಗೆ ಸಾಕಷ್ಟು ಹಾನಿಯಾಗಿದೆ ಮತ್ತು ಅಳಿವಿನಂಚಿನಲ್ಲಿದ್ದ ಅನೇಕ ವನ್ಯ ಪ್ರಾಣಿಗಳಿಗೂ ಧಕ್ಕೆಯಾಗಿದೆ. ಇದು ಜಗತ್ತಿನ ಅತಿದೊಡ್ಡ ಜಲವಿದ್ಯುತ್ ಯೋಜನೆಯಾಗಿದ್ದು 39 ಟ್ರಿಲಿಯನ್ ಕಿಲೋಗ್ರಾಂಗಳಷ್ಟು ನೀರನ್ನು 175 ಮೀಟರುಗಳ ಎತ್ತರಕ್ಕೆ ಕೊಂಡೊಯ್ಯಲಾಗುತ್ತದೆ. ಇದರಿಂದ ಭೂಮಿಯ ಜಡತ್ವದ (ನೀರಿನ ಅವೇಗ ಸಂರಕ್ಷಣೆ) ಮೇಲೆ ಪರಿಣಾಮ ಬೀರುವುದರೊಂದಿಗೆ ಭೂಮಿಯ ಪರಿಭ್ರಮಣವನ್ನು ನಿಧಾನಗೊಳಿಸುತ್ತದೆ ಎನ್ನಲಾಗಿದೆ. ನಾಸಾ ವಿಜ್ಞಾನಿಗಳ ಪ್ರಕಾರ, ಭೂಮಿಯ ಪರಿಭ್ರಮಣವು ಒಂದು ದಿನದ ಅವಧಿಯಲ್ಲಿ 0.06 ಮೈಕ್ರೋ ಸೆಕೆಂಡ್‌ಗಳಿಗಿಂತ ಕಡಿಮೆಯಾಗಿದೆ ಮತ್ತು ಎರಡೂ ಧ್ರುವಗಳು 2 ಸೆ.ಮೀ.ನಷ್ಟು ಸರಿದಿವೆ. ಒಂದು ದಿನಕ್ಕೆ ಸಂಬಂಧಿಸಿದಂತೆ ಅದು ದಿನವನ್ನು ಸೆಕೆಂಡಿನ 60 ಬಿಲಿಯನ್‌ನಷ್ಟು ವಿಸ್ತರಿಸುತ್ತದೆ. ಈ ಅಣೆಕಟ್ಟನ್ನು ರಿಕ್ಟರ್ ಮಾಪಕದಲ್ಲಿ 7.0ರವರೆಗೆ ಭೂಕಂಪನವನ್ನು ತಡೆದುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇತ್ತೀಚಿನ ದಶಕಗಳಲ್ಲಿ ಈ ವಲಯದಲ್ಲಿ ರಿಕ್ಟರ್ ಮಾಪಕದಲ್ಲಿ 6.0ಕ್ಕಿಂತ ಹೆಚ್ಚು ಭೂಕಂಪನಗಳು ಸಂಭವಿಸಿಲ್ಲ. ಅಣೆಕಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ತುಂಬಿಕೊಂಡರೆ (ಮಹಾರಾಷ್ತ್ರದ ಕೊಹಿನಾ ಅಣೆಕಟ್ಟು ತುಂಬಿದಾಗ 1967ರಲ್ಲಿ ಭೂಕಂಪ ಸಂಭವಿಸಿತ್ತು). ನೀರಿನ ಒತ್ತಡ ಮತ್ತು ಪ್ರಮಾಣದಿಂದ 6ರಿಂದ 6.5ರ ಮಧ್ಯದ ಭೂಕಂಪನಗಳು ಸಂಭವಿಸಬಹುದು ಮತ್ತು ಅಣೆಕಟ್ಟಿನಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ. 2012ರಲ್ಲಿ ಕಟ್ಟಿ ಮುಗಿಸಿದ ಜಲಾಶಯ ತೀರದ 91 ಸ್ಥಳಗಳಲ್ಲಿ (36 ಕಿಲೋಮೀಟರ್ ಉದ್ದದಲ್ಲಿ) ಕುಸಿತಗಳು ಕಾಣಿಸಿಕೊಂಡಿದೆ. ಈ ಕುಸಿತಗಳು ಸಂಭವಿಸಿದಾಗ 50 ಮೀ.ಗಳಿಗಿಂತ ಎತ್ತರದ ಅಲೆಗಳು ಉಂಟಾಗಿವೆ. ಇದೇ ವರ್ಷ ಜುಲೈನಲ್ಲಿ ಯಾಂಗ್ಟ್ಜ್ ಉಪನದಿಯ ಪಕ್ಕದಲ್ಲಿದ್ದ ಪರ್ವತ ಒಂದು ಕುಸಿದು 13 ರೈತರು ಮತ್ತು 11 ಮೀನುಗಾರರನ್ನು ಬಲಿ ತೆಗೆದುಕೊಂಡಿತು. ಈಗ ಚೀನಾ ದೇಶದ ಜನರು ಮತ್ತು ಜಗತ್ತಿನ ಪರಿಸರವಾದಿಗಳು ಈ ಅಣೆಕಟ್ಟು ಮುರಿದರೆ ಏನಾಗುತ್ತದೆ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಅದಕ್ಕೆ ಉತ್ತರ ಹೀಗಿದೆ.

2004ರಲ್ಲಿ ಸುನಾಮಿ ಸಂಭವಿಸಿದಾಗ ಭೂಮಿಯ ಅಕ್ಷ ಮತ್ತು ಪರಿಭ್ರಮಣ ನಿಧಾನಗೊಂಡಂತೆ ಅಣೆಕಟ್ಟು ಹೊಡೆದಾಗಲೂ ಆಗಬಹುದು! ಅಣೆಕಟ್ಟು ಮುರಿದು ನೀರು ಕೆಳಗಡೆಗೆ ನುಗ್ಗಿದರೆ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಅದು ಬರೀ ಚೀನಾ ದೇಶಕ್ಕೆ ಮಾತ್ರವಲ್ಲ, ಜಗತ್ತಿನ ಸಂಕಟಕ್ಕೂ ಕಾರಣವಾಗಲಿದೆ. ಈ ಯೋಜನೆಯಲ್ಲಿ 32 ಜನರೇಟರ್‌ಗಳಿದ್ದು ಪ್ರತಿಯೊಂದರಲ್ಲೂ 50 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಎಲ್ಲಾ ಜನರೇಟರ್‌ಗಳಿಂದ ಒಟ್ಟು 22.5 ದಶಲಕ್ಷ ಕಿಲೋವ್ಯಾಟ್ (22,500 ಮೆಗಾವ್ಯಾಟ್) ಶಕ್ತಿಗೆ ಸಮನಾಗಿದ್ದು ಸಹಜವಾಗಿ ಇದು 15 ಪರಮಾಣು ರಿಯಾಕ್ಟರುಗಳು ಉತ್ಪಾದಿಸುವ ವಿದ್ಯುತ್‌ಗೆ ಸಮವಾಗಿದೆ. ಈ ಅಣೆಕಟ್ಟೆಯಿಂದ ಒಂದು ಉಪಯೋಗವಾಗಿದೆ ಎಂದರೆ ಪ್ರತಿ ವರ್ಷ ಹರಿದು ಬರುವ ನೆರೆಯನ್ನು ತಡೆದಿರುವುದು. 1931ರ ಒಂದೇ ವರ್ಷದಲ್ಲಿ ಉಂಟಾದ ಪ್ರವಾಹದಿಂದ 30 ಲಕ್ಷ ಜನರು ಸಾವು-ನೋವು, ಹಸಿವು ಮತ್ತು ಯಾತನೆಗೆ ಸಿಲುಕಿಕೊಂಡಿದ್ದರು. ಯಾಂಗ್ಟ್ಜ್ ಅಥವಾ ಯಾಂಗ್ಜಿ ಏಶ್ಯದ ಅತಿ ಉದ್ದನೆಯ ಮತ್ತು ವಿಶ್ವದ ಮೂರನೇ ಅತಿ ಉದ್ದ ನದಿಯಾಗಿದೆ. ಈ ನದಿ ಒಂದೇ ದೇಶದಲ್ಲಿ ಹರಿಯುವ ಅತಿ ಉದ್ದದ ನದಿಯೂ ಆಗಿದೆ. ಈ ನದಿ 6300 ಕಿ.ಮೀ ದೂರ ಹರಿದು ಪೂರ್ವ ಚೀನಾ ಸಮುದ್ರ ಸೇರಿಕೊಳ್ಳುತ್ತದೆ. ಥ್ರೀ ಗಾರ್ಜಸ್ ಅಣೆಕಟ್ಟು ಯಾಂಗ್ಟ್ಜ್‌ನ ಮೇಲ್ಭಾಗದಲ್ಲಿರುವ 19 ಉದ್ದೇಶಿತ ಅಣೆಕಟ್ಟುಗಳಲ್ಲಿ ಒಂದಾಗಿದ್ದು ಅದರ ಉಪನದಿಗಳ ಮೇಲೆ 200 ಅಣೆಕಟ್ಟುಗಳನ್ನು ಕಟ್ಟುತ್ತಿದೆ. ಈಗಾಗಲೇ ಹಲವು ಅಣೆಕಟ್ಟುಗಳನ್ನು ಕಟ್ಟಿ ಮುಗಿಸಿದೆ.

ಚೀನಾ ಒಟ್ಟು 26,000 ಸ್ಥಳಗಳಲ್ಲಿ ಜಲವಿದ್ಯುತ್ ಅಣೆಕಟ್ಟುಗಳನ್ನು ಕಟ್ಟುತ್ತಿದೆ. ಈ ನದಿಯ ಅಕ್ಕಪಕ್ಕ ಹೊಸ ಆರ್ಥಿಕ ವಲಯವನ್ನು ರಚಿಸಲು ರಸ್ತೆಗಳು, ರೈಲ್ವೆ ರಸ್ತೆಗಳು ಮತ್ತು ವಿಮಾನ ನಿಲ್ದಾಣಗಳನ್ನು ಒಳಗೊಂಡಂತೆ ಬಹುಹಂತಗಳ ಸಾರಿಗೆ ಜಾಲವನ್ನು ಬಿಚ್ಚಿದೆ. ಈ ನದಿಯ ಜಲಾನಯನದಿಂದ ಚೀನಾದ 20% ಜಿಡಿಪಿ ಬೆಳೆಯಲು ಸಹಾಯವಾಗಿದೆ ಎಂದು ಹೇಳಿಕೊಂಡಿದೆ. ಹಲವು ಪರಿಸರ ವ್ಯವಸ್ಥೆಗಳಿರುವ ನದಿಯ ಉದ್ದಕ್ಕೂ ಅನೇಕ ಜೀವಸಂಕುಲಗಳು ಅಳಿವಿನ ಅಂಚಿನಲ್ಲಿ ಸಿಲುಕಿಕೊಂಡಿವೆ. ಚೀನಿ ಅಲಿಗೇಟರ್, ಫಿನ್ಲೆಸ್ ಪೋರ್ಪೋಯಿಸ್ ಮೀನು ಮತ್ತು ಸ್ಟರ್ಜನ್ ಮೀನು ಸೇರಿದಂತೆ ಡಾಲ್ಫಿನ್ ಮತ್ತು ಚೈನಿಸ್ ಪ್ಯಾಡಲ್ ಮೀನುಗಳು ಇವೆ. ಇತ್ತೀಚಿನ ವರ್ಷಗಳಲ್ಲಿ ನದಿ ಕೈಗಾರಿಕಾ ಮಾಲಿನ್ಯ, ಕೃಷಿ ಹರಿವು, ಪ್ಲಾಸ್ಟಿಕ್ ಮಾಲಿನ್ಯ ಮತ್ತು ಪ್ರವಾಹಗಳಿಂದ ತತ್ತರಿಸಿಹೋಗಿದೆ. ನದಿಯ ಕೆಲವು ಭಾಗಗಳನ್ನು ಈಗ ಪ್ರಕೃತಿ ಮೀಸಲು ಪ್ರದೇಶಗಳಾಗಿ ರಕ್ಷಿಸಲಾಗಿದೆ. ಪಶ್ಚಿಮ ಯುನ್ನಾನ್‌ನಲ್ಲಿರುವ ಆಳವಾದ ಕಂದರಗಳ ಮೂಲಕ ಹರಿಯುವ ಯಾಂಗ್ಟ್ಜ್ ನದಿಯ ಮೇಲ್ಮುಖ ವಿಸ್ತಾರವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಈ ನದಿಯ ಹರಿವು ಅಪರೂಪ, ಅನನ್ಯ ಮತ್ತು ಸುಂದರ ದೃಶ್ಯಗಳಿಂದ ಕೂಡಿದೆ.

ಈ ಆಧುನಿಕ ಅಭಿವೃದ್ಧಿ ಹೆಸರಿನ ದೈತ್ಯ ಯೋಜನೆಗಳು ಮನುಷ್ಯ ಜಾತಿಗೆ ವರವಾಗಲು ಸಾಧ್ಯವೇ ಇಲ್ಲ. ಎಲ್ಲವೂ ಶಾಪವೇ ಆಗಲಿದೆ. ಈಗಿನ ಜಾಗತಿಕ ತಾಪಮಾನ-ಚಂಡಮಾರುತಗಳನ್ನು ಗಮನಿಸಿದರೆ ಬಹಳ ಬೇಗನೆ ಸಮುದ್ರಮಟ್ಟ ಹೆಚ್ಚಿ ದಡಗಳಲ್ಲಿರುವ ಬೃಹತ್ ಕಟ್ಟಡಗಳ ಮಹಾನಗರಗಳೆಲ್ಲ ಸಮುದ್ರದ ಪಾಲಾಗಲಿವೆ. 2000 ದಿಂದ 2009ರ ಮಧ್ಯೆ ಜಗತ್ತಿನಾದ್ಯಂತ 200 ದೊಡ್ಡ ಅಣೆಕಟ್ಟುಗಳು ಒಡೆದುಹೋಗಿವೆ. ಅಮೆರಿಕಾ 1912 ರಿಂದ 2020ರವರೆಗೂ 1797 ಅಣೆಕಟ್ಟುಗಳನ್ನು ಒಡೆದುಹಾಕಿ ಪರಿಸರವನ್ನು ಕಾಪಾಡಿಕೊಳ್ಳಲು ಸರಾಗವಾಗಿ ಹರಿಯಲು ಬಿಟ್ಟಿರುವುದಾಗಿ ಹೇಳಿಕೊಂಡಿದೆ. ಒಟ್ಟಿನಲ್ಲಿ ಚೀನಾದಂತೆ ಯಾವುದೇ ದೇಶ ಬೃಹತ್ ಸ್ಮಾರಕ/ಅಣೆಕಟ್ಟುಗಳನ್ನು ಕಟ್ಟಿದರೆ ಭೂಮಿಗೆ ತೊಂದರೆಯಾಗಲಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ, ಹಾಗೇ ಜಗತ್ತಿಗೆ ಕೂಡಾ.

Writer - ಡಾ.ಎಂ.ವೆಂಕಟಸ್ವಾಮಿ

contributor

Editor - ಡಾ.ಎಂ.ವೆಂಕಟಸ್ವಾಮಿ

contributor

Similar News