ಪುಷ್ಪದಲ್ಲಿ ಚಂದನವಿದೆ, ಗಂಧವಿಲ್ಲ..!

Update: 2021-12-18 19:30 GMT

  ಸಮಾಜದಿಂದ ನಿರ್ಲಕ್ಷಕ್ಕೆ ಒಳಗಾದ ಯುವಕನೋರ್ವ ಕಾಡುಗಳ ಚಂದನದ ಮರಗಳನ್ನು ಕಡಿದು ಶ್ರೀಮಂತನಾಗುವುದು ಪುಷ್ಪ ಚಿತ್ರದ ಕತೆ. ಇದರಲ್ಲಿ ಕತೆ ಏನು ಬಂತು ಎಂದು ನೀವು ಕೇಳಬಹುದು. ಆದರೆ ಕತೆಗಿಂತ ಅಲ್ಲು ಅರ್ಜುನ್ ಇಮೇಜ್ ಬದಲಾಯಿಸುವ ಮಾದರಿಯಲ್ಲಿರುವ ಒಂದು ಚಿತ್ರ, ಅಷ್ಟೇ ಈ ಸಿನೆಮಾದಲ್ಲಿರುವ ಪ್ರಮುಖ ಅಂಶ. ಬಹುಶ: ಚಿತ್ರದ ಅಂತ್ಯದಲ್ಲಿ ತೋರಿಸುವ ಹಾಗೆ ಈ ಎರಡನೇ ಭಾಗದಲ್ಲಿ ಬಂದಾಗ ಮಾತ್ರ, ಇದೊಂದು ಪರಿಪೂರ್ಣ ಕತೆಯಾಗಿ ಬದಲಾಗುವ ಸಾಧ್ಯತೆ ಇದೆ.

 ಶೇಷಾಚಲಂ ಎನ್ನುವ ಕಾಡು. ಅಲ್ಲಿ ಚಂದನ ಕಳ್ಳಸಾಗಣೆ ಮಾಡುವವರ ಜೊತೆಗೆ ಕಳ್ಳನಾಗಿ ಬಂದು ಸೇರ್ಪಡೆಗೊಳ್ಳುವವನು ಪುಷ್ಪ. ಬಳಿಕ ಕಳ್ಳದಂಧೆಗೆ ಮಾಲೀಕನಾಗುವತ್ತ್ತಾ ಸಾಗಿದಂತೆ ಜೊತೆಗಿದ್ದ ಕಳ್ಳರನ್ನು, ಪೊಲೀಸರನ್ನು ಕೂಡ ಎದುರು ಹಾಕಿಕೊಳ್ಳಬೇಕಾಗುತ್ತದೆ. ಪುಷ್ಪನಿಗೆ ಸರಿಯಾದ ಎದುರಾಳಿಯಾಗಿ ಸಿಗುವ ಪೊಲೀಸ್ ಅಧಿಕಾರಿಯೇ ಭನ್ವರ್ ಸಿಂಗ್ ಶೇಖಾವತ್. ಆದರೆ ಆತನೊಡನೆ ಮುಖಾಮುಖಿಗಳಲ್ಲಿ ಚಿತ್ರ ಮುಗಿಯುತ್ತದೆ.

ಪುಷ್ಪರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ಈ ಹಿಂದೆಂದಿಗಿಂತಲೂ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಲವ್ವರ್ ಬಾಯ್ ಪಾತ್ರದ ಮೂಲಕ ಆಕ್ಷನ್, ಡಾನ್ಸ್‌ಗಳಲ್ಲಿ ಸದಾ ಗುರುತಿಸಿಕೊಂಡವರು ಅಲ್ಲು ಅರ್ಜುನ್. ಈ ಚಿತ್ರದಲ್ಲಿ ಲವ್ವರ್ ಬಾಯ್ ಅಲ್ಲ. ಜೊತೆಗೆ ನೃತ್ಯದಲ್ಲಿ ಒಂದೆರಡು ಸಿಂಪಲ್ ಸಿಗ್ನೇಚರ್ ಸ್ಟೆಪ್ಸ್ ಮಾತ್ರ ಇವೆ. ಅದು ಬಿಟ್ಟರೆ ಆಕ್ಷನ್‌ಗೆ ಕೊರತೆ ಇಲ್ಲ. ಅಲ್ಲು ಅರ್ಜುನ್ ಮಾತ್ರವಲ್ಲ, ಚಿತ್ರದ ಮೂಲಕ ಹಲವು ಕಲಾವಿದರಿಗೆ ಹೊಸ ಇಮೇಜ್ ನೀಡುವಲ್ಲಿ ಗೆದ್ದಿದ್ದಾರೆ ನಿರ್ದೇಶಕ ಸುಕುಮಾರ್. ಆದರೆ ಚಿತ್ರದ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಪಾತ್ರ ಮಾತ್ರ ವಿಫಲವಾಗಿರುವುದು ಸತ್ಯ. ಅದಕ್ಕೆ ಕಾರಣ ಡಿಗ್ಲಾಮರೆಸ್ ಮಾಡಿದಾಗ ರಶ್ಮಿಕಾ ಮುಖದಲ್ಲಿ ನಾಯಕಿಗೆ ಬೇಕಾದ ಆಕರ್ಷಣೆಯಾಗಲಿ, ಭಾವವಾಗಲಿ ಕಾಣಿಸಿಲ್ಲ. ಅಷ್ಟಕ್ಕೂ ಮುಖದ ಬಣ್ಣ ಕಳೆಗುಂದುವಂತೆ ಮಾಡಿ ತುಂಡು ಬಟ್ಟೆಯಿಂದ ಅಂಗಾಂಗ ಪ್ರದರ್ಶನಗೊಳಿಸುವಂತೆ ಮಾಡಿದ ನಿರ್ದೇಶಕರ ಲಾಜಿಕ್ ನಮಗೆ ಅರ್ಥವಾಗುವುದಿಲ್ಲ. ಚಂದನದ ದಂಧೆ ನಡೆಸುವ ಇತರ ದರೋಡೆಕೋರರಾಗಿ ಡಾಲಿ ಧನಂಜಯ್ ಮತ್ತು ಸುನೀಲ್ ಮೊದಲಾದವರು ನಟಿಸಿದ್ದಾರೆ. ಹಾಸ್ಯನಟನಾಗಿ, ನಾಯಕನಾಗಿ ಗುರುತಿಸಿಕೊಂಡಿದ್ದ ಸುನೀಲ್‌ಇಲ್ಲಿ ಮಂಗಳಂ ಸೀನು ಎನ್ನುವ ಖಳನಾಗಿ ಭಯಪಡಿಸುವ ಅಭಿನಯ ನೀಡಿದ್ದಾರೆ. ಭನ್ವರ್ ಸಿಂಗ್ ಪಾತ್ರಕ್ಕೆ ಫಹದ್ ಜೀವ ನೀಡಿದ್ದಾರೆ. ಸಮಂತಾ ಒಂದು ಐಟಂ ಹಾಡಿನೊಂದಿಗೆ ಕಾಣಿಸಿದ್ದಾರೆ.

ಕನ್ನಡಿಗರಿಗೆ ಪುಷ್ಪಚಿತ್ರದ ಮೇಲೆ ಹಲವು ಕಾರಣಗಳಿಂದಾಗಿ ನಿರೀಕ್ಷೆಗಳಿದ್ದವು. ಮೊದಲನೆಯದಾಗಿ ಅಪರೂಪದಲ್ಲಿ ಬರುತ್ತಿರುವ ಅಲ್ಲು ಅರ್ಜುನ್ ಸಿನೆಮಾ ಎನ್ನುವುದು ಕಾರಣವಾಗಿತ್ತು. ಆದರೆ ಅವರ ನಿರೀಕ್ಷೆಯ ಅಲ್ಲು ಅರ್ಜುನ್ ಇಲ್ಲಿ ಕಾಣಿಸಿಲ್ಲ. ವೇದಂ ಚಿತ್ರದ ಹಾಗೆ ನೆಗೆಟಿವ್ ಪಾತ್ರ ಮಾಡುತ್ತಲೇ ಪಾಸಿಟಿವ್ ಆಗಿ ಬದಲಾಗುವ ನಾಯಕನೂ ಇಲ್ಲಿಲ್ಲ. ಬಹುಶಃ ಅಂತಹ ತಿರುವು ಎರಡನೇ ಭಾಗದಲ್ಲಿದ್ದರೂ ಇದನ್ನೊಂದು ಪ್ರತ್ಯೇಕ ಚಿತ್ರವಾಗಿ ಗಮನಿಸುವಾಗ ಯಾವ ಪಾಸಿಟಿವ್ ಸಂದೇಶಗಳಿಗೂ ಅವಕಾಶವಿಲ್ಲ. ಹಾಗಾಗಿ ಅಲ್ಲು ಅರ್ಜುನ್ ನಟಿಸಿದ್ದಾನೆ ಎನ್ನುವ ಕಾರಣಕ್ಕಾಗಿ ಚಂದನ ಕಳ್ಳನನ್ನು ಸಮರ್ಥಿಸಬೇಕಾದ ಪರಿಸ್ಥಿತಿ ಪ್ರೇಕ್ಷಕರದ್ದು! ನಾಯಕಿಯಾಗಿ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ ಎನ್ನುವುದು ಮತ್ತೊಂದು ಪ್ರಮುಖ ಅಂಶ. ಆದರೆ ಒಂದು ಗಟ್ಟಿ ಹೆಣ್ಣು ಪಾತ್ರವನ್ನು ನಿಭಾಯಿಸದೇ ಮೌಲ್ಯರಹಿತ ಹಾಸ್ಯದ ದೃಶ್ಯಗಳಿಗಷ್ಟೇ ಪೂರಕವಾಗಿದ್ದು ದುರಾದೃಷ್ಟ. ಇನ್ನು ಕನ್ನಡದ ನಾಯಕ ಡಾಲಿ ಧನಂಜಯ್ ನಟನೆಯ ‘ಜಾಲಿ ರೆಡ್ಡಿ’ ಪಾತ್ರವಂತೂ ಪರದೆಯ ಮೇಲೆ ನೋಡಿ ಸಾಕಾಗಿರುವಂತಹ ದರೋಡೆಕೋರನದ್ದು. ಮುಂದಿನಭಾಗದಲ್ಲಿ ನಾಯಕನ ಜೊತೆಗೆ ಧನಂಜಯ್ ಮತ್ತು ಫಹದ್ ಫಾಸಿಲ್ ನಟಿಸಿದ ಪಾತ್ರಗಳು ಇನ್ನಷ್ಟು ಅವಕಾಶ ಪಡೆಯಬಹುದೇನೋ ಎನ್ನುವ ಕಾಯುವಿಕೆಗೆ ಹೊರತಾಗಿ ಪುಷ್ಪ ಭಾಗ ಎರಡರ ಮೇಲೆಯೂ ನಿರೀಕ್ಷಿಸುವಂತಹ ಅಂಶಗಳೇನೂ ಇಲ್ಲ!

ಸಾಕಷ್ಟು ಕಾಲಾವಕಾಶ ಬಳಸಿಕೊಂಡಿರುವ ಪುಷ್ಪ ಸಿನೆಮಾದ ಕೊನೆಗೆ, ಮುಂದೆ ಭಾಗ ಎರಡು ಬರಲಿರುವ ಗ್ಯಾಪ್‌ಅನ್ನು ‘ಮತ್ತೊಂದು ಮಧ್ಯಂತರ’ ಎಂದು ಸೂಚಿಸಲಾಗಿದೆ. ಅಲ್ಲಿಗೆ ಭಾಗ ಎರಡರ ಬಗ್ಗೆಯೂ ನಿರೀಕ್ಷೆ ಬೇಕಿಲ್ಲ ಎಂದು ಅರ್ಥ ಮಾಡಿಕೊಳ್ಳಬಹುದು. ಪೇಜರ್ ಬಳಸುತ್ತಿದ್ದ ಕಾಲದಲ್ಲಿ ನಡೆದ ಕೆಂಪು ಚಂದನ, ರಕ್ತ ಚಂದನವೆಂದು ಕರೆಯಲ್ಪಡುವ ಮರಗಳ ಕಳ್ಳಸಾಗಣೆಯ ಕತೆ ಇದು. ಆದರೆ ಅಂತಹ ಚಂದನ ಮರಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳಿಲ್ಲ. ಒಂದು ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ಕೂಡ ಕತೆಯ ಬಗ್ಗೆ ಸರಿಯಾದ ಹಿನ್ನೆಲೆಯನ್ನಾಗಲಿ, ಗಟ್ಟಿಯಾದ ಪಾತ್ರಗಳನ್ನಾಗಲಿ ಕಟ್ಟಿಕೊಡಲಾಗಿಲ್ಲ ಎನ್ನುವುದು ವಿಪರ್ಯಾಸ. ಒಟ್ಟಿನಲ್ಲಿ ‘ಹತ್ತು ಕೆಜಿಎಫ್‌ನಂತಹ ಚಿತ್ರ ಇದು’ ಎಂದು ಚಿತ್ರ ತಂಡದವರೇ ಹೇಳಿರುವುದನ್ನು ಕೇಳಿ ಅಚ್ಚರಿಯಿಂದ ಕಾದಿದ್ದ ಪ್ರೇಕ್ಷಕರು ಇದು ಯಾವ ದೃಷ್ಟಿಯಿಂದಲೂ ಕೆಜಿಎಫ್ ಪಕ್ಕದಲ್ಲಿರಿಸಲು ಯೋಗ್ಯ ಸಿನೆಮಾ ಅಲ್ಲ ಎನ್ನುವುದನ್ನು ಹೇಳಿ ಬಿಟ್ಟಿದ್ದಾರೆ. ಚಿತ್ರ ನೋಡಿ ಮುಗಿಸಿದ ಬಳಿಕ ಅಲ್ಲು ಅರ್ಜುನ್ ಸೇರಿದಂತೆ ಒಂದಿಬ್ಬರು ಕಲಾವಿದರ ನಟನೆ, ಸಂಗೀತ ಮತ್ತು ಛಾಯಾಗ್ರಹಣದ ಹೊರತಾಗಿ ಯಾವ ಅಂಶಗಳೂ ನೆನಪಲ್ಲಿ ಉಳಿಯುವುದಿಲ್ಲ.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News