ವಿಧಾನಪರಿಷತ್ ಈಗ ಕುಟುಂಬಸ್ಥ ಕಿರಿಯರ ಮೇಲ್ಮನೆ..!

Update: 2021-12-23 19:30 GMT

ಮೊದಲು ವಿಧಾನಸಭೆಯಲ್ಲಿ ಇರುತ್ತಿದ್ದ ಈ ಕುಟುಂಬಸ್ಥರ ಸದಸ್ಯರ ದರ್ಬಾರು ಇದೀಗ ನಿಧಾನವಾಗಿ ಮೇಲ್ಮನೆಯನ್ನೂ ಪ್ರವೇಶಿಸಿದೆ. ಕುಟುಂಬ ರಾಜಕಾರಣದ ವಿರುದ್ಧ ಎಲ್ಲಾ ಪಕ್ಷಗಳು ಮೈಕಿನ ಮುಂದೆ ಮಾತ್ರ ಮಾತನಾಡುತ್ತವೆ. ಆದರೆ ಅಮ್ಮ, ಮಗ, ಮಗಳು, ಸಹೋದರ, ಸಹೋದರಿ ಎಲ್ಲರಿಗೂ ಸಹ ರಾಜಕಾರಣದಲ್ಲಿ ಒಂದು ಸ್ಥಾನವನ್ನು ಭದ್ರಪಡಿಸಲು ಯತ್ನಿಸುತ್ತವೆ. ಅಲ್ಲಿಗೆ ಎಲ್ಲಾ ಪಕ್ಷಗಳ ಕಾರ್ಯಕರ್ತರು ಕೊನೆಯವರೆಗೂ ಕಾರ್ಯಕರ್ತರಾಗಿಯೇ ಕೆಲಸ ಮಾಡಬೇಕಾಗುತ್ತದೆ. ಇವರೆಲ್ಲರೂ ಒಂದು ರೀತಿಯಲ್ಲಿ ರಾಜಕೀಯ ಪಕ್ಷಗಳ ಅಘೋಷಿತ ಕಾರ್ಮಿಕರು!.



 ಬಹಳಷ್ಟು ಸಂದರ್ಭಗಳಲ್ಲಿ ವಿಧಾನಪರಿಷತ್ತನ್ನು ಉಳಿಸಿಕೊಳ್ಳಬೇಕೇ ಅಥವಾ ಬೇಡವೇ ಎನ್ನುವ ಚರ್ಚೆ 75 ವರ್ಷದ ಸ್ವಾತಂತ್ರ್ಯೋತ್ಸವ ರಾಜಕೀಯ ಇತಿಹಾಸದಲ್ಲಿ ಹಲವಾರು ಬಾರಿ ನಡೆದು ಹೋಗಿದೆ. ರಾಜ್ಯಸಭೆ ಮತ್ತು ವಿಧಾನಪರಿಷತ್‌ನಂತಹ ಮೇಲ್ಮನೆಗಳು ಮೂಲತಹ ಹಿರಿಯರ, ಅನುಭವಸ್ಥರ, ತಜ್ಞರ, ಅಪಾರ ತಿಳುವಳಿಕೆ ಉಳ್ಳವರು ಒಂದು ಅಪರೂಪದ ಸಂಗಮ. ಲೋಕಸಭೆ ಮತ್ತು ವಿಧಾನಸಭೆಯಲ್ಲಿ ನಡೆಯುವ ನೀತಿ ನಿರೂಪಣೆಗಳು ಮುಂದಿನ ಹಂತದಲ್ಲಿ ಮತ್ತಷ್ಟು ಆಳವಾಗಿ ವಿಮರ್ಶೆಗೆ ಒಳಪಡಲು, ಪರಿಶೀಲಿಸಲು ಮತ್ತು ಸಲಹೆ ನೀಡಲು ಒಂದು ಮೇಲ್ಮನೆಯ ಅವಶ್ಯಕತೆಯನ್ನು ವಿಶ್ವದ ಹಲವಾರು ಸಂವಿಧಾನಗಳು ಒಪ್ಪಿಕೊಂಡಿವೆ. ಹಾಗಾಗಿ ಭಾರತದ ಸಂವಿಧಾನರಚನೆಯ ಸಮಯದಲ್ಲಿ ರಾಜ್ಯಸಭೆ ಮತ್ತು ವಿಧಾನಪರಿಷತ್ ರಚನೆ, ಅಧಿಕಾರಾವಧಿ, ಸದಸ್ಯರ ಅರ್ಹತೆ ಇವುಗಳ ಕುರಿತು ಸುದೀರ್ಘವಾದ ಚರ್ಚೆಗಳು ನಡೆದಿರುವುದನ್ನು ದಾಖಲೆಗಳಲ್ಲಿ ನಾವು ಗಮನಿಸಬಹುದು. ಅಂದು ಕೆಲ ಸದಸ್ಯರು ಮೇಲ್ಮನೆ ರಚನೆ ಪರವಾಗಿ ಮತ್ತು ಇದರ ವಿರುದ್ಧವಾಗಿ ಮಾತನಾಡಿದ್ದಾರೆ. ರಾಜ್ಯಗಳ ವಿಷಯಕ್ಕೆ ಬಂದರೆ ಇಂದಿಗೂ ದೇಶದ ಹಲವು ರಾಜ್ಯಗಳಲ್ಲಿ ವಿಧಾನಪರಿಷತ್ ಇಲ್ಲ. ಯಾವ್ಯಾವ ರಾಜ್ಯಗಳಲ್ಲಿ ವಿಧಾನಪರಿಷತ್ ಇದೆಯೋ ಹೆಚ್ಚು ಕಡಿಮೆ ಎಲ್ಲಾ ವಿಧಾನಪರಿಷತ್‌ಗಳು ಇಂದು ಕುಟುಂಬಸ್ಥರು, ಪ್ರಭಾವಿಗಳು, ಮಂತ್ರಿಮಂಡಲದಲ್ಲಿ ಸ್ಥಾನ ಸಿಗದವರು, ಚುನಾವಣೆಯಲ್ಲಿ ಹಲವು ಬಾರಿ ಸೋತವರು, ಉದ್ಯಮಿಗಳಿಗೆ ಮತ್ತು ಸರಕಾರದ ವಿರುದ್ಧ ಬಂಡೆದ್ದವರ ಪುನರ್ವಸತಿ ಕೇಂದ್ರಗಳಾಗಿ ಪರಿವರ್ತನೆಯಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನಗಳು ಬೇಡ. ಈ ವಿಚಾರದಲ್ಲಿ ಹೆಚ್ಚಿನ ಬಾರಿ 171ನೇ ವಿಧಿಯನ್ನು ಸಂಪೂರ್ಣವಾಗಿ ಎಲ್ಲಾ ರಾಜಕೀಯ ಪಕ್ಷಗಳು ಸಾರಾಸಗಟಾಗಿ ಗಾಳಿಗೆ ತೂರಿವೆ.

ಕರ್ನಾಟಕದಲ್ಲಿ ಇದೀಗ ತಾನೇ ರಾಜ್ಯದ ಎಲ್ಲಾ ಪ್ರಮುಖ ಪಕ್ಷಗಳು ಹಣ-ಬಲ, ಜನ-ಬಲ ಎಲ್ಲವನ್ನು ಬಳಸಿ ಸುಸೂತ್ರವಾಗಿ ತಮ್ಮ-ತಮ್ಮ ಅಭ್ಯರ್ಥಿಗಳನ್ನು ಮೇಲ್ಮನೆಗೆ ಕಳುಹಿಸಿವೆ. ಇತ್ತೀಚಿನ ಒಂದು ವರದಿಯಂತೆ ಸಂಬಂಧಪಟ್ಟ ಮತದಾರರಿಂದ ಕೂದಲು ಮತ್ತು ಉಗುರನ್ನು ಬಳಸಿ ಅವುಗಳ ಮೇಲೆ ಪ್ರಮಾಣ ಮಾಡಿ ಹಣವನ್ನು ನೀಡಿ ಜಯಶಾಲಿಯಾಗಿದ್ದಾರೆ. ಈ ವಿಧಾನಪರಿಷತ್ ಚುನಾವಣೆಯಲ್ಲಿ ಆಯ್ಕೆಯಾದವರನ್ನು ಸೂಕ್ಷ್ಮವಾಗಿ ಗಮನಿಸಿದರೆ ಬೆಳಗಾವಿಯ ಒಂದು ಪ್ರಭಾವಿ ರಾಜಕೀಯ ಕುಟುಂಬದ ನಾಲ್ವರು ಸಹೋದರರು ಇಂದು ಶಾಸಕರಾಗಿದ್ದಾರೆ. ಆ ಕುಟುಂಬದ ನಾಲ್ಕನೆಯ ಕುಡಿ ಇದೀಗ ವಿಧಾನಪರಿಷತ್ ಮೆಟ್ಟಿಲು ಹತ್ತಿದೆ. ಅಲ್ಲದೆ ಮೂರೂ ಪಕ್ಷಗಳ ರಾಜಕಾರಣಿಗಳ ಹಲವು ಸಂಬಂಧಿಗಳು ಈ ಸಲ ವಿಧಾನಪರಿಷತ್ತು ಪ್ರವೇಶಿಸಿದ್ದಾರೆ. ಇನ್ನು ಇವರಲ್ಲಿ ಹೆಚ್ಚಿನವರಿಗೆ ಕೇವಲ 35-40ರ ಪ್ರಾಯ. ಮೊದಲು ವಿಧಾನಸಭೆಯಲ್ಲಿ ಇರುತ್ತಿದ್ದ ಈ ಕುಟುಂಬಸ್ಥರ ಸದಸ್ಯರ ದರ್ಬಾರು ಇದೀಗ ನಿಧಾನವಾಗಿ ಮೇಲ್ಮನೆಯನ್ನೂ ಪ್ರವೇಶಿಸಿದೆ. ಕುಟುಂಬ ರಾಜಕಾರಣದ ವಿರುದ್ಧ ಎಲ್ಲಾ ಪಕ್ಷಗಳು ಮೈಕಿನ ಮುಂದೆ ಮಾತ್ರ ಮಾತನಾಡುತ್ತವೆ. ಆದರೆ ಅಮ್ಮ, ಮಗ, ಮಗಳು, ಸಹೋದರ, ಸಹೋದರಿ ಎಲ್ಲರಿಗೂ ಸಹ ರಾಜಕಾರಣದಲ್ಲಿ ಒಂದು ಸ್ಥಾನವನ್ನು ಭದ್ರಪಡಿಸಲು ಯತ್ನಿಸುತ್ತವೆ. ಅಲ್ಲಿಗೆ ಎಲ್ಲಾ ಪಕ್ಷಗಳ ಕಾರ್ಯಕರ್ತರು ಕೊನೆಯವರೆಗೂ ಕಾರ್ಯಕರ್ತರಾಗಿಯೇ ಕೆಲಸ ಮಾಡಬೇಕಾಗುತ್ತದೆ. ಇವರೆಲ್ಲರೂ ಒಂದು ರೀತಿಯಲ್ಲಿ ರಾಜಕೀಯ ಪಕ್ಷಗಳ ಅಘೋಷಿತ ಕಾರ್ಮಿಕರು!. ಇಂತಹ ಒಂದು ಅಂದಾ ದರ್ಬಾರ್ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ. ದೇಶದ ಹೆಚ್ಚು-ಕಡಿಮೆ ಎಲ್ಲಾ ರಾಜ್ಯಗಳ ವಿಧಾನಸಭೆಗಳಲ್ಲಿ ಇದನ್ನು ಕಾಣಬಹುದು.

1947ರಿಂದ ಇಂದಿನವರೆಗೂ ಭಾರತದಲ್ಲಿ ಕುಟುಂಬ ರಾಜಕಾರಣದ ಮೇಲಾಟ ನಡೆಯುತ್ತಲೇ ಇದೆ. ಕೆಲವು ರಾಜ್ಯಗಳಲ್ಲಿ ತಂದೆ, ಮಗ, ಮೊಮ್ಮಗ ಮೂವರೂ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿರುವ ಉದಾಹರಣೆಗಳಿವೆ. ಮುಖ್ಯಮಂತ್ರಿ ಹುದ್ದೆಯನ್ನೇ ಪತ್ನಿಗೆ ಬಿಟ್ಟು ಕೊಟ್ಟ ಉದಾಹರಣೆಯಿದೆ. ಅಲ್ಲೆಲ್ಲ ಇದಕ್ಕೆ ಮತದಾರರೂ ಸಹಮತಿಯನ್ನು ನೀಡಿರುವುದು ನಿಜಕ್ಕೂ ಸೋಜಿಗದ ಸಂಗತಿ. ಅಲ್ಲೊಮ್ಮೆ ಇಲ್ಲೊಮ್ಮೆ ಕುಟುಂಬ ರಾಜಕಾರಣಕ್ಕೆ ಮತದಾರರು ಮತದ ಮೂಲಕ ಛಡಿಯೇಟು ನೀಡಿದರೂ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಸ್ಥರೇ ಆಯ್ಕೆಯಾಗುತ್ತಿರುವುದು ಪ್ರಜಾಪ್ರಭುತ್ವದಲ್ಲಿ ಒಂದು ರೀತಿಯ ಕಳವಳಕಾರಿ ಸಂಗತಿ. ತಂದೆ ಶಾಸಕ ಅಥವಾ ಮಂತ್ರಿಯಾಗಿದ್ದಾಗಲೇ ತಮ್ಮ ಮಕ್ಕಳಿಗೆ ಚುನಾವಣೆಯಲ್ಲಿ ಗೆಲ್ಲಬೇಕಾಗುವ ಪ್ರತಿ ವ್ಯವಸ್ಥೆಯನ್ನು ಮಾಡಿಯೇ ನಿವೃತ್ತರಾಗುತ್ತಿದ್ದಾರೆ. ಅಧಿಕಾರದಲ್ಲಿದ್ದಾಗಲೇ ಅಂತಹವರ ಮಕ್ಕಳು ಆ ಕ್ಷೇತ್ರವನ್ನು ಪರೋಕ್ಷವಾಗಿ ಅಳುತ್ತಿರುತ್ತಾರೆ. ಒಂದೊಮ್ಮೆ ಹಾಲಿ ಶಾಸಕರು ಮೃತ ಪಟ್ಟರೆ ಅನುಕಂಪದ ಹೆಸರಿನಲ್ಲಿ ಅವರ ಪತ್ನಿ/ಮಕ್ಕಳನ್ನು ಉಪಚುನಾವಣೆಯಲ್ಲಿ ನಿಲ್ಲಿಸಿ ಅವರನ್ನು ಗೆಲ್ಲುವಂತೆ ಮಾಡಲಾಗುತ್ತಿದೆ. ಹಾಗಾಗಿ ಇಂದು ಮತದಾರನಿಗೆ ಯಾವ ಆಯ್ಕೆಯೇ ಇಲ್ಲದಂತೆ ಆಗುತ್ತಿದೆ. ಇರುವ ಭ್ರಷ್ಟರಲ್ಲಿ ಸ್ವಲ್ಪಭ್ರಷ್ಟರನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ. ಬ್ರಿಟಿಷರು ಭಾರತವನ್ನು ಆಳ್ವಿಕೆ ಮಾಡುತ್ತಿದ್ದ 1919ರಲ್ಲಿ ಸಹ ಮೇಲ್ಮನೆಗೆ ಅತ್ಯಂತ ಶ್ರೀಮಂತರು, ಗಣ್ಯವ್ಯಕ್ತಿಗಳು, ಪ್ರಭಾವಿಗಳು ಮಾತ್ರ ಆಯ್ಕೆಯಾಗುತ್ತಿದ್ದರು. ಬ್ರಿಟಿಷರು ಭಾರತದ ರಾಜ್ಯಗಳಲ್ಲಿ ಮೇಲ್ಮನೆಯನ್ನು ಸೃಷ್ಟಿಸಿದ್ದೇ ಇವರಿಗಾಗಿ. ಇನ್ನೊಂದು ವಿಚಾರವೆಂದರೆ ಬ್ರಿಟಿಷರು ಮೇಲ್ಮನೆ ಸದಸ್ಯರಿಗೆ ವಿಟೋ ಅಧಿಕಾರವನ್ನು ಕೊಡುವ ಬಗ್ಗೆ ಚಿಂತಿಸಿದ್ದರು (ಬ್ರಿಟನ್ ದೇಶದಲ್ಲಿರುವಂತೆ). 1950ರಲ್ಲಿ ಭಾರತದ ರಾಜ್ಯಸಭೆಯ ಮೊದಲ ಮುಖ್ಯಸ್ಥರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮೇಲ್ಮನೆಯ ಸೃಷ್ಟಿಯ ಅವಶ್ಯಕತೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. ಆದರೆ ಇನ್ನೂ ಕೆಲವರು ಇದು ಪ್ರಗತಿಗೆ ಅಡ್ಡಗಾಲು ಆಗಬಹುದು ಎನ್ನುವುದು ಭಯವಾಗಿತ್ತು. ರಾಜ್ಯ ಮೇಲ್ಮನೆಗೆ ಅಪರೂಪಕ್ಕೊಮ್ಮೆ ಪರಿಣಿತರು ಆಯ್ಕೆಯಾಗಿದ್ದಾರೆ. ಇಂತಹ ಪ್ರತಿಭಾವಂತರು ಅಲಂಕರಿಸಿದ್ದ ಮೇಲ್ಮನೆಯ ಕುರ್ಚಿಗಳನ್ನು ಇಂದು ಈಗಾಗಲೇ ಅಧಿಕಾರದಲ್ಲಿರುವವರ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ಪತ್ನಿಯರು, ಖಾಸ ಸಂಬಂಧಿಗಳು, ರಕ್ತ ಸಂಬಂಧಿಗಳು ವಶಪಡಿಸಿಕೊಂಡಿದ್ದಾರೆ ಎಂದರೆ ಅದು ಅತಿಶಯೋಕ್ತಿಯಾಗಲಾರದು.
2/3 ವರ್ಷಗಳ ಹಿಂದೆ ಆಂಧ್ರಪ್ರದೇಶದಲ್ಲಿ ಮೂರು ರಾಜಧಾನಿಗಳ ರಚನೆಯ ವಿಚಾರದಲ್ಲಿ ವಿಧಾನಸಭೆ ಒಪ್ಪಿಗೆ ನೀಡಿದ್ದು ಅಲ್ಲಿ ಆಡಳಿತರೂಢ ವೈಆರ್‌ಎಸ್ ಕಾಂಗ್ರೆಸ್ ಸರಕಾರ ಬಹುಮತ ಹೊಂದಿದ್ದರಿಂದ ಬಹಳ ಸುಲಭವಾಗಿ ಬಿಲ್ ಕೆಳಮನೆಯಲ್ಲಿ ಪಾಸಾಯಿತು. ಆದರೆ ಅದೇ ಬಿಲ್ ಮೇಲ್ಮನೆಗೆ ಬಂದಾಗ ಎದುರಾಳಿ ಚಂದ್ರಬಾಬು ನಾಯ್ಡು ಅವರ ಪಕ್ಷ ಅತ್ಯಂತ ಹೆಚ್ಚಿನ ಬಹುಮತ ಹೊಂದಿದ್ದರಿಂದ ಬಿಲ್ಲನ್ನು ಒಪ್ಪಲಿಲ್ಲ. ಅದಕ್ಕೆ ಸಿಟ್ಟಿಗೆದ್ದ ಆಡಳಿತ ಪಕ್ಷ ಮೇಲ್ಮನೆಯನ್ನು ವಿಸರ್ಜಿಸುವ ಸಾಹಸಕ್ಕೆ ಕೈಹಾಕಿತು. ಆದರೆ ತೀವ್ರ ವಿರೋಧದಿಂದ ಅದನ್ನು ಕೊನೆಗೆ ಕೈ ಬಿಟ್ಟಿದ್ದು ಈಗ ಇತಿಹಾಸ.

ಹಾಗೆ ನೋಡಿದರೆ ಭಾರತದ ರಾಜ್ಯಗಳಾದ ಒಡಿಶಾ, ಮಧ್ಯಪ್ರದೇಶ, ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ಮೇಲ್ಮನೆ ಎಂಬುದೇ ಇಲ್ಲ. ಸಂಪೂರ್ಣ ದೇಶದಲ್ಲಿ ಕೇವಲ ಆರು ರಾಜ್ಯಗಳಲ್ಲಿ ಮಾತ್ರ ಮೇಲ್ಮನೆ ಇದೆ. ಸಾಮಾನ್ಯವಾಗಿ ಇಂದು ಯಾವ ರಾಜ್ಯದಲ್ಲೂ ಆಡಳಿತರೂಢ ಪಕ್ಷ ರಾಜ್ಯಸಭೆ ಅಥವಾ ವಿಧಾನಪರಿಷತ್ತಿನಲ್ಲಿ ಎರಡು ಕಡೆ ಹೆಚ್ಚಿನ ಬಹುಮತವನ್ನು ಏಕಕಾಲಕ್ಕೆ ಹೊಂದಿರುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಆಡಳಿತರೂಢ ಪಕ್ಷ ಕೆಳಮನೆಯಲ್ಲಿ ಬಹುಮತ ಹೊಂದಿದ್ದರೆ, ವಿರೋಧ ಪಕ್ಷ ಮೇಲ್ಮನೆಯಲ್ಲಿ ಬಲ ಹೊಂದಿರುತ್ತದೆ. ಅಂದರೆ ಒಬ್ಬರ ಜುಟ್ಟು ಇನ್ನೊಬ್ಬರ ಕೈಯಲ್ಲಿ ಇರುತ್ತದೆ. ಹಾಗಾಗಿ ಮೇಲ್ಮನೆಯನ್ನು ಸಂಪೂರ್ಣವಾಗಿ ವಿಸರ್ಜಿಸಲು ಯಾವುದೇ ಪಕ್ಷಗಳಿಗೆ ಸಂಪೂರ್ಣ ಮನಸ್ಸಿಲ್ಲ. ಅದಕ್ಕೆ ಇದು ಪುನರ್ವಸತಿ ಕೇಂದ್ರವಾಗಿ ಬದಲಾಗಿರುವುದು. ಯಾವುದೇ ಬಿಲ್‌ನಿಂದ ತನ್ನ ಮತಗಳಿಗೆ ಕುತ್ತು ಉಂಟಾಗುತ್ತದೆಂಬ ಭಾವನೆ ಮೇಲ್ಮನೆಯಲ್ಲಿ ಬಹುಮತ ಬಂದಿರುವ ಪಕ್ಷಕ್ಕೆ ಬಂದರೆ ಕೆಳಮನೆಯಲ್ಲಿ ಪಾಸಾದ ಬಿಲ್ಲು ಮೇಲ್ಮನೆಯಲ್ಲಿ ಪಾಸ್ ಆಗದಂತೆ ನೋಡಿಕೊಳ್ಳುತ್ತದೆ. ಒಟ್ಟಿನಲ್ಲಿ ರಾಜಕೀಯ ಪಕ್ಷಗಳಿಗೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮಾತ್ರ ಇಂದು ಮೇಲ್ಮನೆಯ ಅವಶ್ಯಕತೆ ಇದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಸಾರ್ವಜನಿಕ ನೀತಿ ನಿರೂಪಣೆ ವಿಚಾರದಲ್ಲಿ ಮೇಲ್ಮನೆಯ ಪಾತ್ರ ನಿಜಕ್ಕೂ ಅಂದುಕೊಳ್ಳುವಷ್ಟು ಉಪಯೋಗ ಆಗಿರುವ ಉದಾಹಣೆಗಳು ಬಹಳ ಕಡಿಮೆ. ರಾಜಕೀಯ ಪಕ್ಷಗಳು ತಮಗೆ ಬೇಕಾದವರನ್ನು ಮಾತ್ರ ಅಲ್ಲಿ ಆಯ್ಕೆ ಮಾಡುತ್ತವೆ. ಆಯ್ಕೆ ಮಾಡಿದಲ್ಲಿ ಯಾವುದೇ ತಪ್ಪಿಲ್ಲ. ಇದಕ್ಕೆ ಇನ್ನೂ ಇಂದು ಪರ್ಯಾಯ ವಾದವಿದೆ. ಅದೇನೆಂದರೆ ದೇಶ ಕಂಡ ಅತ್ಯಂತ ಉತ್ತಮ ಕ್ರೀಡಾಪಟುಗಳು, ಬಾಲಿವುಡ್ ನಟರು, ಸಾಹಿತಿಗಳು ಮತ್ತಿತರರು ಯಾರ್ಯಾರು ರಾಜಕೀಯ ಪಕ್ಷಗಳ ಕೃಪಾಕಟಾಕ್ಷದಿಂದ ಮೇಲ್ಮನೆಯನ್ನು ಪ್ರವೇಶಿಸಿದ್ದಾರೋ ಅವರಲ್ಲಿ ಯಾರೂ ಅಧಿವೇಶನದಲ್ಲಿ ಸರಿಯಾಗಿ ಪಾಲ್ಗೊಳ್ಳುವುದಿಲ್ಲ, ಚರ್ಚೆಯಲ್ಲಿ ಬಾಯಿಬಿಡುವುದಿಲ್ಲ ಮತ್ತು ಸರಕಾರದಿಂದ ಒಂದು ರೂಪಾಯಿಯನ್ನೂ ತಮ್ಮ ಕ್ಷೇತ್ರಕ್ಕೆ ಬಿಡುಗಡೆ ಮಾಡಿಸಲು ಪ್ರಯತ್ನಿಸುವುದಿಲ್ಲ ಎನ್ನುತ್ತವೆ ವರದಿಗಳು. ಯಾವುದೇ ಕ್ಷೇತ್ರದಲ್ಲೂ ಸರಿಯಾದ ಅನುಭವವಿಲ್ಲದವರು, ಸರಿಯಾಗಿ ಮಾತನಾಡಲು ಬರದವರು, ಭ್ರಷ್ಟರು, ಅವಿದ್ಯಾವಂತರು ಇತ್ಯಾದಿ ಜನರು ಕೇವಲ ತಮ್ಮ ಗಾಡ್‌ಫಾದರ್‌ಗಳ ಸಹಾಯದಿಂದ ಜಾತಿ ಬಲ, ಹಣ ಬಲ ಬಳಸಿ ಮೇಲ್ಮನೆಗೆ ಆಯ್ಕೆಯಾಗುವುದನ್ನು ಮೊದಲು ತಪ್ಪಿಸಬೇಕು ಎನ್ನುವುದು ಬಹು ಜನರ ಬಹುಮತ. ಚುನಾವಣೆಗಳಲ್ಲಿ ಯುವಕರು ಆಯ್ಕೆಯಾಗುವುದು ಸರಿ, ಆದರೆ ರಾಜಕಾರಣಿಗಳ ಕುಟುಂಬಸ್ಥರೇ ಯಾಕೆ?

Writer - ಡಾ. ಡಿ.ಸಿ. ನಂಜುಂಡ

contributor

Editor - ಡಾ. ಡಿ.ಸಿ. ನಂಜುಂಡ

contributor

Similar News