ಉದ್ಯೋಗ ಕಿತ್ತುಕೊಂಡವರಿಂದ ಉದ್ಯೋಗ ನೀತಿಯ ಭರವಸೆ!

Update: 2021-12-25 07:31 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯದಲ್ಲಿ ಸದ್ಯದಲ್ಲೇ ಉದ್ಯೋಗ ನೀತಿ ಜಾರಿಗೊಳಿಸಲಾಗುವುದು ಎಂದು ಬೆಳಗಾವಿಯ ಉದ್ಯೋಗ ಮೇಳದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅಧಿಕಾರಕ್ಕೇರಿದ ದಿನಗಳಿಂದ ಉದ್ಯೋಗ ನೀತಿಯ ಜಾರಿಯ ಕುರಿತಂತೆ ಮುಖ್ಯಮಂತ್ರಿ ಬೊಮ್ಮಾಯಿಯವರು ಬಣ್ಣ ಬಣ್ಣದ ಮಾತನಾಡುತ್ತಲೇ ಬಂದಿದ್ದಾರೆ ಮತ್ತು ಅದನ್ನು ಜಾರಿಗೊಳಿಸುವ ಮೊದಲ ರಾಜ್ಯ ಕರ್ನಾಟಕ ಎಂದೂ ಅವರು ಹೇಳುತ್ತಿದ್ದಾರೆ. ಕೈಗಾರಿಕಾ ನೀತಿ, ಸ್ಟಾರ್ಟ್‌ಅಪ್ ನೀತಿಯಂತೆಯೇ ಉದ್ಯೋಗ ನೀತಿ ಜಾರಿಗೊಳಿಸಲಿದ್ದು, ಇದರಲ್ಲಿ ಹೆಚ್ಚು ಉದ್ಯೋಗ ನೀಡುವ ಉದ್ಯೋಗ ದಾತರಿಗೆ ಸರಕಾರ ಪ್ರೋತ್ಸಾಹ ಧನವನ್ನು ನೀಡಲಿದೆಯಂತೆ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ದಿನದಿಂದ ಹತ್ತು ಹಲವು ಬಗೆ ಬಗೆಯ ನೀತಿಗಳು, ಸುಧಾರಣೆಗಳು ಜಾರಿಗೊಳ್ಳುತ್ತಿವೆಯಾದರೂ ಅರ್ಥವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಗಳು ಕಾಣುತ್ತಿಲ್ಲ. ಬದಲಿಗೆ ದಿನ ದಿನಕ್ಕೆ ಸಣ್ಣ ಕೈಗಾರಿಕೆಗಳು ಮುಚ್ಚಲ್ಪಡುತ್ತಿವೆ. ಉದ್ದಿಮೆದಾರರೇ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಮಾಲಕನೇ ಆತ್ಮಹತ್ಯೆ ಮಾಡಿಕೊಂಡ ಮೇಲೆ, ಆತನ ಉದ್ಯಮದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸ್ಥಿತಿಯೇನಾಗಿರಬಹುದು?

ನೋಟು ನಿಷೇಧದ ಬಳಿಕ ಈ ದೇಶದಲ್ಲಿ ಏಕಾಏಕಿ ನಿರುದ್ಯೋಗಗಳು ತಾಂಡವವಾಡತೊಡಗಿದವು. ದೇಶದ ಆರ್ಥಿಕತೆ ಇಬ್ಬರು ಅಥವಾ ಮೂವರು ಕಾರ್ಪೊರೇಟ್ ಶಕ್ತಿಗಳನ್ನು ಕೇಂದ್ರೀಕರಿಸಲ್ಪಟ್ಟಿತು. ಅವರ ಮೂಗಿನ ನೇರಕ್ಕೆ ಆರ್ಥಿಕ ನೀತಿಗಳು ಜಾರಿಗೊಳ್ಳತೊಡಗಿದವು. ಮಗದೊಂದೆಡೆ ಆತ್ಮನಿರ್ಭರ್, ಸ್ಟಾರ್ಟ್‌ಅಪ್ ಮೊದಲಾದ ಪದಗಳ ಮೂಲಕ ಸರಕಾರ ಯುವಕರಿಗೆ ಉದ್ಯೋಗಗಳನ್ನು ನೀಡಲು ಯೋಜನೆ ರೂಪಿಸಿದಂತೆ ನಟನೆ ಮಾಡತೊಡಗಿತು. ಸಾರ್ವಜನಿಕ ಸಂಸ್ಥೆಗಳು ಒಂದೊಂದಾಗಿ ಮಾರಾಟವಾದಂತೆಯೇ, ಉದ್ಯೋಗಿಗಳು ಬೀದಿಗೆ ಬೀಳತೊಡಗಿದ್ದರು. ಕಳೆದ ಆರು ವರ್ಷಗಳಲ್ಲಿ ಈ ದೇಶದಲ್ಲಿ ಹೊಸ ಉದ್ಯೋಗ ಸೃಷ್ಟಿಯಾಗುವುದು ಬಿಡಿ, ಇರುವ ಉದ್ಯೋಗಗಳನ್ನು ಕಳೆದುಕೊಂಡವರೇ ಅಧಿಕ. ಯಾವುದೇ ನೀತಿಗಳನ್ನು ಜಾರಿಗೊಳಿಸಿದರೂ ಉದ್ಯೋಗಗಳ ಸಂಖ್ಯೆ ಹೆಚ್ಚಳವಾಗಲಾರದು. ಮೊದಲು ಈ ದೇಶದ ಸಣ್ಣ ಉದ್ದಿಮೆಗಳು, ಕೈಗಾರಿಕೆಗಳನ್ನು ಮೇಲೆತ್ತುವುದಕ್ಕಾಗಿ ಸರಕಾರ ಯೋಜನೆಗಳನ್ನು ರೂಪಿಸಬೇಕು. ಅವುಗಳು ಲಾಭದಾಯಕವಾದಂತೆಯೇ ಅದು ಜನರಿಗೆ ಹೆಚ್ಚು ಹೆಚ್ಚು ಉದ್ಯೋಗಗಳನ್ನು ನೀಡುತ್ತಾ ಹೋಗುತ್ತದೆ. ಉದ್ಯೋಗದಾತರೇ ಆತ್ಮಹತ್ಯೆಯ ಹಾದಿ ಹಿಡಿದಿರುವಾಗ, ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದು ಹೇಗೆ ಸಾಧ್ಯ?

ಮುಖ್ಯವಾಗಿ ರಾಜ್ಯದಲ್ಲಿ ಕಳೆದ ಆರು ವರ್ಷಗಳಿಂದ ಮುಚ್ಚಲ್ಪಟ್ಟ ಕೈಗಾರಿಕೆಗ  ಳೆಷ್ಟು, ಅವು ಮುಚ್ಚಿದ್ದು ಯಾಕೆ?. ನಷ್ಟದಲ್ಲಿರುವ ಕೈಗಾರಿಕೆಗಳೆಷ್ಟು, ಅವು ಯಾಕೆ ನಷ್ಟದಲ್ಲಿವೆ? ಎನ್ನುವ ಪ್ರಶ್ನೆಗಳಿಗೆ ಸರಕಾರ ಉತ್ತರ ಕಂಡುಕೊಳ್ಳದೇ ಇದ್ದರೆ, ಯಾವ ಉದ್ಯೋಗ ನೀತಿಯೂ ರಾಜ್ಯದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದಿಲ್ಲ. ಯಾವ ಸಂಸ್ಥೆಯೂ ಸರಕಾರದ ಪ್ರೋತ್ಸಾಹ ಧನದ ಆಸೆಗಾಗಿ ಉದ್ಯೋಗಿಗಳನ್ನು ಪುಕ್ಕಟೆ ಇಟ್ಟು ಸಾಕುವುದಿಲ್ಲ. ಮೊತ್ತ ಮೊದಲು ಕೈಗಾರಿಕೆಗಳು, ಉದ್ಯಮಗಳು ಲಾಭದಲ್ಲಿರಬೇಕು ಮತ್ತು ಹೆಚ್ಚು ಹೆಚ್ಚು ಉತ್ಪಾದನೆಗಾಗಿ ಅನಿವಾರ್ಯವಾಗಿ ಉದ್ಯೋಗಿಗಳನ್ನು ಆಹ್ವಾನಿಸಬೇಕಾದ ಸ್ಥಿತಿ ನಿರ್ಮಾಣವಾಗಬೇಕು. ದೇಶದ ಆಟೋಮೊಬೈಲ್ ಕ್ಷೇತ್ರಗಳು ಎಷ್ಟರಮಟ್ಟಿಗೆ ಹೀನಾಯ ಸ್ಥಿತಿ ತಲುಪಿದೆ ಎಂದರೆ ಈ ದೇಶಾದ್ಯಂತ ಸಾವಿರಾರು ಶೋರೂಂಗಳು ಮುಚ್ಚಲ್ಪಟ್ಟಿವೆ. ಅದರಲ್ಲಿದ್ದ ಉದ್ಯೋಗಿಗಳೆಲ್ಲ ನಿರುದ್ಯೋಗಿಗಳಾಗಿ ಅಲೆಯುತ್ತಿದ್ದಾರೆ. ಈ ಸ್ಥಿತಿಗೆ ಕಾರಣ ಯಾರು? ಎನ್ನುವ ಆತ್ಮವಿಮರ್ಶೆಯನ್ನು ಸರಕಾರ ಮೊದಲು ಮಾಡಬೇಕು.

ಕಳೆದೆರಡು ವರ್ಷಗಳಿಂದ ಲಾಕ್‌ಡೌನ್‌ಗಳು ಅಳಿದುಳಿದ ಉದ್ಯಮಗಳನ್ನೂ ನಾಶ ಮಾಡಿವೆ. ಇದು ಬೊಮ್ಮಾಯಿಯವರಿಗೆ ತಿಳಿಯದಿರುವುದೇನೂ ಅಲ್ಲ. ಲಾಕ್‌ಡೌನ್‌ಗಳಿಗೆ ಹೆದರಿ, ಯಾರೂ ಯಾವುದೇ ಉದ್ಯಮಗಳಿಗೆ ಹೂಡಿಕೆ ಮಾಡಲು ಹೆದರುವ ಸನ್ನಿವೇಶ ನಿರ್ಮಾಣವಾಗಿದೆ. ಬೇರೆಲ್ಲ ಬಿಡಿ, ಹೊಟೇಲ್ ಉದ್ಯಮಗಳೇ ಇಂದು ಬಾಗಿಲು ಹಾಕಿ ಕೂತಿವೆ. ಹೂಡಿಕೆ ಮಾಡಿ, ಇನ್ನೇನೂ ಶುಭಾರಂಭವಾಗಬೇಕು ಎನ್ನುವಷ್ಟರಲ್ಲಿ ಸರಕಾರ ಏಕಾಏಕಿ ಲಾಕ್‌ಡೌನ್ ಘೋಷಿಸುತ್ತದೆ. ಜನಸಾಮಾನ್ಯರ ದೈನಂದಿನ ಅಗತ್ಯವಾಗಿರುವ ಹೊಟೇಲ್ ಉದ್ಯಮವೇ ಲಾಭದಾಯಕವಾಗಿಲ್ಲದ ಈ ಹೊತ್ತಿನಲ್ಲಿ, ಕೈಗಾರಿಕೆಗಳು ಹೆಚ್ಚು ಹೆಚ್ಚು ಉದ್ಯೋಗಗಳನ್ನು ಕೊಡಬೇಕು ಎಂದು ಬೊಮ್ಮಾಯಿ ಕರೆಕೊಡುವುದು, ಮುದಿ ಬಡಕಲು ದನದ ಮೊಲೆಯಿಂದ ಇನ್ನಷ್ಟು ಹಾಲು ಕರೆಯಲು ಕರೆಕೊಟ್ಟಂತಾಗುತ್ತದೆ.

‘ಆತ್ಮನಿರ್ಭರ್’ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಾರೆ. ಇದೇ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೈನೋದ್ಯಮಗಳನ್ನು ಮಾಡಿ ತಮ್ಮಷ್ಟಕ್ಕೆ ಬದುಕು ಕಟ್ಟಿಕೊಳ್ಳುತ್ತಿದ್ದ ರೈತರ ವಿರುದ್ಧ, ಜಾನುವಾರು ಮಾರಾಟ ವಿರೋಧಿ ಕಾನೂನನ್ನು ಜಾರಿಗೊಳಿಸಿ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ರೈತರ ಹೈನೋದ್ಯಮದ ಭಾಗವಾಗಿರುವ ಅನುಪಯುಕ್ತ ದನಗಳನ್ನು ಸರಕಾರ ಕಿತ್ತುಕೊಂಡು, ಅವುಗಳನ್ನು ಸಾಕುವುದಕ್ಕಾಗಿ ಗೋಶಾಲೆಗಳನ್ನು ತೆರೆದು ಜನಸಾಮಾನ್ಯರ ಹಣವನ್ನು ವ್ಯಯ ಮಾಡುತ್ತಿವೆ. ಇದರಿಂದ ಹಲವರು ಹೈನೋದ್ಯಮದಿಂದ ದೂರ ಸರಿಯುವ ಸ್ಥಿತಿ ನಿರ್ಮಾಣವಾಯಿತು. ಹೈನೋದ್ಯಮದಲ್ಲಿ ಮುಂದುವರಿಯುತ್ತಿರುವವರು ತೀವ್ರ ನಷ್ಟವನ್ನು ಅನುಭವಿಸುತ್ತಿದ್ದಾರೆ. ಸರಕಾರ ಉದ್ಯೋಗ ನೀಡುವುದು ಪಕ್ಕಕ್ಕಿರಲಿ, ಈಗಾಗಲೇ ತಮ್ಮ ತಮ್ಮ ದುಡಿಮೆಗಳ ಮೂಲಕ ಬದುಕುತ್ತಿರುವವರಿಗೆ ಕಿರುಕುಳ ನೀಡದೇ ಇದ್ದರೆ, ಅದುವೇ ದೊಡ್ಡ ಉಪಕಾರ ಎಂದು ಜನರು ಭಾವಿಸುವಂತಾಗಿದೆ.

ನೋಟು ನಿಷೇಧ ಮತ್ತು ಲಾಕ್‌ಡೌನ್ ಕಾರಣದಿಂದ ಉದ್ಯೋಗ ಕಳೆದುಕೊಂಡ ಸಹಸ್ರಾರು ಯುವಕರಿಗೆ ರಾಜ್ಯದ ನೂತನ ಉದ್ಯೋಗ ನೀತಿಯಲ್ಲಿ ಯಾವ ಕೊಡುಗೆ ಇದೆ ಎನ್ನುವುದನ್ನು ಬೊಮ್ಮಾಯಿವರು ಇನ್ನೂ ವಿವರಿಸಿಲ್ಲ. ಅವರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ ತಪ್ಪಿಗೆ ಪ್ರಾಯಶ್ಚಿತವಾಗಿ, ಸರಕಾರ ಮಾಸಿಕ ಉದ್ಯೋಗ ಭತ್ತೆಯನ್ನು ನೀಡಲಿದೆಯೆ? ಯುವಕರು ನೂತನ ಉದ್ಯೋಗ ನೀತಿಯಲ್ಲಿ ಈ ಭತ್ತೆಗಾಗಿ ಸರಕಾರವನ್ನು ಒತ್ತಾಯಿಸಬೇಕಾದ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75