ರೈತರ ಕೈಯಲ್ಲಿರುವ ಅಪಾಯಕಾರಿ ನೇಗಿಲುಗಳನ್ನು ಮುಟ್ಟುಗೋಲು ಹಾಕಬೇಕು!

Update: 2022-01-08 19:30 GMT

‘‘ದೇಶದಲ್ಲಿ ಬದುಕುವುದೇ ಕಷ್ಟವಾಗಿ ಬಿಟ್ಟಿದೆ’’ ಪತ್ರಕರ್ತ ಎಂಜಲು ಕಾಸಿ ಹೇಳಿದ್ದೇ, ಭಕ್ತ ಬಸ್ಯ ಸಿಟ್ಟಾದ ‘‘ನಿಂಗೆ ದೇಸದಲ್ಲಿ ಕಸ್ಟ ಆದ್ರೆ ಪಾಕಿಸ್ತಾನಕ್ಕೆ ಹೋಗಿ...ಇಲ್ಲಾ ಅಫ್ಘಾನಿಸ್ತಾನಕ್ಕೆ ಹೋಗಿ...’’ ಎಂದು ಎಗರಿ ಬಿದ್ದ.
ಕಾಸಿ ಕಂಗಾಲಾಗಿ ‘‘ಅರೆ, ಚೌಕೀದಾರರ ಕಷ್ಟದ ಬಗ್ಗೆ ಹೇಳಿದ್ದು. ಅವರ ಜೀವ ಉಳಿದದ್ದೇ ಪುಣ್ಯ ಅಂತ ಹೇಳಿಕೆ ನೀಡಿದ್ದಾರೆ...’’
ಬಸ್ಯ ಈಗ ಶಾಂತವಾದ ‘‘ನೋಡ್ರೀ...ಚೌಕೀದಾರರಾಗಿರುವುದರಿಂದ ಬಚಾವಾಗಿ ಬಂದ್ರು. ಬೇರೆ ಯಾರೇ ಆಗಿದ್ರು...’’ ಎಂದು ಆತ ರಾಗ ಎಳೆದ.
 ‘‘ಚೌಕೀದಾರರಿಗೆ ಈ ಸ್ಥಿತಿಯಾದರೆ, ಜನಸಾಮಾನ್ಯರ ಸ್ಥಿತಿ ಏನಾಗಬೇಕು? ’’ ಕಾಸಿ ಇನ್ನೊಂದು ಪ್ರಶ್ನೆ ಒಗೆದ.
‘‘ ಕೃಷಿ ಕಾಯ್ದೆ ಹಿಂದೆಗೆದಿರುವುದೇ ಮೋದಿಯವರ ಜೀವಕ್ಕೆ ಅಪಾಯ ಎದುರಾಗಲು ಕಾರಣ...’’ ಬಸ್ಯ ತನ್ನ ವಾಟ್ಸಪ್ ಜ್ಞಾನವನ್ನು ಹರಿಯ ಬಿಡತೊಡಗಿದ.
‘‘ಕೃಷಿ ಕಾಯ್ದೆಗೂ ಇದಕ್ಕೂ ಏನು ಕಾರಣ?’’ ಕಾಸಿ ಅರ್ಥವಾಗದೆ ಕೇಳಿದ.
‘‘ಜನಸಾಮಾನ್ಯರಿಗೆ ಕೃಷಿ ಕಾಯ್ದೆಗಳು ಬೇಕಾಗಿತ್ತು. ಆದರೆ ಖಾಲಿಸ್ತಾನಿಗಳ ಮಾತು ಕೇಳಿ ಚೌಕೀದಾರರು ಕೃಷಿ ಕಾಯ್ದೆ ಹಿಂದೆಗೆದಿರುವುದರಿಂದ ಜನರು ಸಿಟ್ಟಾಗಿ ಅವರ ಕಾರನ್ನು ತಡೆದಿದ್ದಾರೆ...’’
‘‘ಅಂದ್ರೆ...ಚೌಕೀದಾರರ ಜೀವ ಅಪಾಯಕ್ಕೆ ಸಿಲುಕಿ ಹಾಕಿಕೊಂಡಿರುವುದು ನಿಜವಾದ ರೈತರಿಂದ ಅಂತ ಹೇಳ್ತೀರಾ?’’ ಕಾಸಿ ಮರು ಪ್ರಶ್ನಿಸಿದ.
  ‘‘ಹಾಗಲ್ಲ, ಪ್ರತಿಭಟನೆ ನಡೆಸಿರುವುದು ರೈತರು. ಆದರೆ ಮೋದಿಯವರ ಕೊಲೆ ಯತ್ನ ನಡೆಸಿರುವುದು ಕಾಂಗ್ರೆಸ್. ಅವರು ಪಾಕಿಸ್ತಾನದ ಸಹಾಯ ಪಡೆದು ಮೋದಿಯವರ ಜೀವಕ್ಕೆ ಅಪಾಯವನ್ನು ಒಡ್ಡಿದರು. ಆ ಕೂಡಲೇ ದೇಶದ ಎಲ್ಲ ದೇವಸ್ಥಾನಗಳಲ್ಲಿ ತಕ್ಷಣ ಮೃತ್ಯುಂಜಯ ಹೋಮ ಮಾಡಿದ್ದರಿಂದ, ಅವರು ಅಪಾಯದಿಂದ ಪಾರಾದರು...’’ ಬಸ್ಯ ಓತಪ್ರೋತವಾಗಿ ತನ್ನ ವಾದ ಮಂಡಿಸಿದ.
‘‘ಚೌಕೀದಾರರು ಪ್ರಾಣ ಭಯದಿಂದ ರ್ಯಾಲಿಯನ್ನು ರದ್ದು ಪಡಿಸಿದರು ಎಂದು ಹೇಳುತ್ತಾರಲ್ಲ? ’’ ಕಾಸಿ ಮತ್ತೆ ಕೇಳಿದ. ಬಸ್ಯನಿಗೋ ಈ ಪ್ರಶ್ನೆಯಿಂದ ತೀವ್ರ ನೋವಾಯಿತು.
‘‘ಹಂಗೆಲ್ಲ ಹೇಳಿ ನಮ್ಮ ಹೊಟ್ಟೆಗೆ ಚೂರಿ ಹಾಕ್ಬೇಡ್ರಿ.ಚೌಕೀದಾರರು ರ್ಯಾಲಿ ರದ್ದು ಮಾಡಿರುವುದು ಕೊರೋನ ಮುಂಜಾಗೃತೆಗಾಗಿ. ರ್ಯಾಲಿಗೆ ಜನಸಮೂಹವೇ ಸೇರಿ, ಕೊರೋನ ಹರಡಿ ಜನರಿಗೆ ತೊಂದರೆ ಆಗುವುದು ಬೇಡ. ದೇಶದ ಹಿತಾಸಕ್ತಿ ಮುಖ್ಯ ಎಂದು ರ್ಯಾಲಿಯನ್ನು ರದ್ದು ಮಾಡಿದರು’’ ಬಸ್ಯ ವಿವರಿಸಿದ.
‘‘ಬರೇ ಏಳ್ನೂರು ಜನ ಸೇರಿದ್ದರಂತೆ ರ್ಯಾಲಿಯಲ್ಲಿ. ಖುರ್ಚಿಯೆಲ್ಲ ಖಾಲಿಯಿತ್ತಂತೆ...’’ ಕಾಸಿ ಪ್ರಶ್ನೆಯನ್ನು ಮುಂದುವರಿಸಿದ.
‘‘ಏಳು ಲಕ್ಷ ಜನ ಸೇರಬೇಕಾಗಿತ್ತು. ಯಾವಾಗ ಚೌಕೀದಾರರ ಪ್ರಾಣಕ್ಕೆ ಅಪಾಯವಿದೆಯೆಂದು ಗೊತ್ತಾಯಿತೋ ಸೇರಿದ ಜನರೆಲ್ಲ ವಿವಿಧ ದೇವಸ್ಥಾನಗಳ ಮುಂದೆ ನೆರೆದು ಮೋದಿಯವರ ಪ್ರಾಣ ರಕ್ಷಣೆಗಾಗಿ ಹೋಮ ಮಾಡತೊಡಗಿದರು. ಸಾಕ್ಷಾತ್ ಆಂಜನೇಯನೇ ಧರೆಗಿಳಿದು ಚೌಕೀದಾರರನ್ನು ರಕ್ಷಿಸಿ ವಿಮಾನ ನಿಲ್ದಾಣದವರೆಗೆ ತಲುಪಿಸಿದರು’’ ಬಸ್ಯ ಕಣ್ಣಾರೆ ಕಂಡವನಂತೆ ವಿವರಿಸಿದ.
‘‘ಚೌಕೀದಾರರನ್ನು ಕಾಯುವುದಕ್ಕೆ ಮಶಿನ್‌ಗನ್ ಹಿಡಿದು ಕಮಾಂಡೋಗಳು ಇದ್ದರಲ್ಲ...’’ ಕಾಸಿ ಕೇಳಿದ.
‘‘ಅವತಾರ ಪುರುಷನನ್ನು ಕಾವಲು ಕಾಯುವುದಕ್ಕಾಗಿ ಆಂಜನೇಯನೇ ಕಮಾಂಡೋಗಳ ರೂಪದಲ್ಲಿ ಅಲ್ಲಿದ್ದರು. ಚೌಕೀದಾರರು ಹಿಮಾಲಯದಲ್ಲಿ ತಪಸ್ಸು ಮಾಡುತ್ತಿರುವಾಗ ಅವರನ್ನು ಕಾಯುತ್ತಿದ್ದವರು ಇವರೇ?’’ ಬಸ್ಯ ತಿಳಿಸಿದ.

  ‘‘ಆದರೂ ಜುಜುಬಿ ನಿರಾಯುಧರಾಗಿರುವ ರೈತರಿಗೆ ಹೆದರಿ ಹಿಂದಕ್ಕೆ ಓಡುವುದು ಎಂದರೆ ಚೌಕೀದಾರರಿಗೆ ಅವಮಾನವಲ್ಲವೆ? ’’ ‘‘ಅವರು ನಿರಾಯುಧರು ಎಂದು ಯಾರು ಹೇಳಿರುವುದು? ರೈತರು ಅಪಾಯಕಾರಿಗಳು. ಅವರ ಕೈಯಲ್ಲಿ ನೇಗಿಲು, ಗುದ್ದಲಿ ಇತ್ಯಾದಿ ಮಾರಕ ಆಯುಧಗಳು ಯಾಕೆ ಇರಬೇಕು? ಅವುಗಳನ್ನೆಲ್ಲ ಸರಕಾರ ಮುಟ್ಟುಗೋಲು ಹಾಕಬೇಕು. ಅವುಗಳನ್ನೆಲ್ಲ ಇಟ್ಟುಕೊಂಡು ಅವರು ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ಮೊನ್ನೆ ಚೌಕೀದಾರರ ಪ್ರಾಣಕ್ಕೆ ಅಪಾಯವಾಗಿದ್ದರೆ ದೇಶದ ಗತಿಯೇನಾಗ ಬಹುದಿತ್ತು’’ ಬಸ್ಯ ಆತಂಕದಿಂದ ಕೇಳಿದ.
‘‘ಏನಾಗಬಹುದಿತ್ತು’’ ಕಾಸಿ ಮರು ಪ್ರಶ್ನಿಸಿದ.
‘‘ಏನಾಗಬಹುದಿತ್ತು ಅಂದರೆ? ಆಮೇಲೆ ದೇಶವನ್ನು ರಕ್ಷಿಸುವವರು ಯಾರು? ’’ ಬಸ್ಯ ಅಚ್ಚರಿಯಿಂದ ಕೇಳಿದ.
‘‘ಚೌಕೀದಾರರು ಪ್ರಧಾನಿಯಾಗಿ ಬರುವ ಮೊದಲು ದೇಶವನ್ನು ಯಾರು ರಕ್ಷಿಸಿದ್ದು?’’
 ‘‘ಆಗ ಭಾರತ ದೇಶ ಎಲ್ಲಿತ್ತು? ಚೌಕೀದಾರರು ಬಂದು ಚೀನಾದ ಕೈಯಲ್ಲಿದ್ದ ಲಡಾಖ್ ಅನ್ನು ಸೇರಿಸಿ, ಪಾಕಿಸ್ತಾನದ ಕೈಯಲ್ಲಿದ್ದ ಕಾಶ್ಮೀರವನ್ನು ಸೇರಿಸಿ ದೇಶ ಕಟ್ಟಿದ್ದು. ಮೊದಲೆಲ್ಲ ಸಿಕ್ಕಿ ಸಿಕ್ಕಿದವರೆಲ್ಲ ಪಬ್ಲಿಕ್ ಪ್ರಾಪರ್ಟಿ ಎಂದು ದೇಶವನ್ನು ಗಲೀಜು ಮಾಡಿ ಹಾಕಿದ್ದರು. ಈಗಾಗ ಪಬ್ಲಿಕ್ ಪ್ರಾಪರ್ಟಿಯನ್ನು ಅಂಬಾನಿ, ಅದಾನಿಗಳ ಕೈಗೆ ಕೊಟ್ಟು ಸೇಫಾಗಿಸಿದ್ದಾರೆ. ಮೊದಲು ಚೌಕೀದಾರರು ಹುಟ್ಟಿದ್ದು. ಆ ಬಳಿಕ ದೇಶ ಹುಟ್ಟಿದ್ದು...’’ ಬಸ್ಯ ಹೇಳಿದ.


‘‘ದೇಶ ಹುಟ್ಟಿದ ಬಳಿಕ ಅಂಬಾನಿ, ಅದಾನಿ ಹುಟ್ಟಿದರೆ...’’ ಕಾಸಿ ಕೆಣಕಿದ. ‘‘ಹಾಗಲ್ಲ, ಅಂಬಾನಿ ಅದಾನಿಯವರು ಮೊದಲು ಹುಟ್ಟಿದರು. ಆ ಬಳಿಕ ಅವರಿಂದ ಚೌಕೀದಾರರು ಹುಟ್ಟಿದರು. ಆ ಬಳಿಕ ದೇಶ ಹುಟ್ಟಿದ್ದು’’ ಬಸ್ಯ ತಿಳಿಸಿದ. ಭಾರತದ ಇತಿಹಾಸವನ್ನು ಬಸ್ಯನಿಂದ ಹೊಸದಾಗಿ ಬರೆಸುವ ಅಗತ್ಯವಿದೆ ಎಂದೆನಿಸಿತು ಕಾಸಿಗೆ. ‘‘ಇಷ್ಟೆಲ್ಲ ನೀನು ಇತಿಹಾಸ ಕಲಿತದ್ದು ಎಲ್ಲಿಂದ?’’ ಕಾಸಿ ಕುತೂಹಲದಿಂದ ಕೇಳಿದ.
ಬಸ್ಯ ತನ್ನ ಹಳದಿ ಹಲ್ಲುಗಳನ್ನು ಬಿಟ್ಟು, ಮೊಬೈಲ್‌ನಲ್ಲಿ ವಾಟ್ಸಪ್ ತೆರೆದು ತೋರಿಸಿದ.

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News