ಯೋಧನ ಮಡದಿಯ ಅನುಭವ ಕಥನ
ಸೈನಿಕನ ಪತ್ನಿಯಾದ ಎಸ್. ಭಾಗ್ಯ ತನ್ನ ಭಾವಬಂಧುರತೆಯ ಎಲ್ಲಾ ಪದರುಗಳನ್ನೂ ನಿರ್ಮಲ ಚಿತ್ರ ನಿರ್ವ್ಯಾಮೋಹ ಚಿತ್ತದಿಂದ ಹೊರಗೆಡಹಿದ್ದಾರೆ. ಗಂಡನಿಲ್ಲದ ನೀರವತೆಯ ಚಿತ್ರಗಳು, ಗಂಡ ಆಗಾಗ ಬರುವ ಸಂಭ್ರಮದ ಚಿತ್ರಗಳು, ಗಂಡನಿಲ್ಲದ ದಿನಗಳಲ್ಲಿ ಅತ್ತೆ-ಮಾವ ಅದರಲ್ಲೂ ಅತ್ತೆ ಎಂಬ ಸ್ವಜಾತೀಯ ಖಳನಾಯಕಿಯ ಬಗ್ಗೆಯೂ ತೆರೆದಿಡುವ ದಿಟ್ಟತನ ಮೆರೆದಿದ್ದಾರೆ. ಒಬ್ಬ ಸೈನಿಕನ ಹೆಂಡತಿ ಹೊರಗಡೆ ಗಂಡ ದೇಶಸೇವೆಗೆ ಹೋರಾಡಿದರೆ ಅವನ ಪತ್ನಿ ಅವನಿಲ್ಲದ ಅವನದ್ದೇ ಕುಟುಂಬದಲ್ಲಿ ಅವನ ಹೆತ್ತವರ ವಿಕ್ಷಿಪ್ತವೂ, ಅಮಾನುಷವೂ, ಕ್ರೂರವೂ ಆದ ಮನೋಭಾವದೊಂದಿಗೆ ಹೇಗೆ ನಿತ್ಯವೂ ಹೋರಾಡಬೇಕಾಗುತ್ತದೆ ಅನ್ನುವುದನ್ನೂ ಬಹಳ ತಾರ್ಕಿಕವಾಗಿ, ನಾಜೂಕಾಗಿ ತೆರೆದಿಟ್ಟಿದ್ದಾರೆ.
ಈ ಕಿರುಹೊತ್ತಿಗೆ ಒಂದು ಕೃತಿಯಾಗಿ ಎಷ್ಟು ಸಾಫಲ್ಯ ಪಡೆದಿದೆ ಅನ್ನುವ ಪ್ರಶ್ನೆ ಎದುರಾದಾಗ ಇಲ್ಲಿನ ಭಾಷೆ, ಆ ಭಾಷೆ ಅಭಿವ್ಯಕ್ತಿಯಲ್ಲಿ ಹರಿದು ಹರಳುಗಟ್ಟಿದ ಪರಿ, ಅನುಭವ ಕೃತಿಯಾಗುವಲ್ಲಿನ ಬಂಧ, ಒಬ್ಬ ಸೈನಿಕನ ಹೆಂಡತಿಯ ಒಡಲ ಆ ಒಂಟಿತನದ ನೆಲೆಯ ಒಟ್ಟು ಅಭಿವ್ಯಕ್ತಿಯ ಆರ್ದ್ರತೆ ಇವೆಲ್ಲವನ್ನೂ ದೃಷ್ಟಿಯಲ್ಲಿ ನೋಡಿದರೆ ‘ವೈಫ್ ಆಫ್ ಸೋಲ್ಜರ್’ ಮೊದಲ ದರ್ಜೆಯ ಕೃತಿಯಲ್ಲಿ ಶ್ರೇಷ್ಠ ಕೃತಿಯಲ್ಲ. ಉದ್ಧಾಮವೂ ಆಗಲಾರದು. ಆದರೆ ಒಬ್ಬ ಸಾಮಾನ್ಯ ಗೃಹಿಣಿ, ಬರವಣಿಗೆ ತನ್ನ ವೃತ್ತಿ ಬಿಡಿ ಹವ್ಯಾಸವೂ ಅಲ್ಲದ ದಿಢೀರ್ ಲೇಖಕಿಯೊಬ್ಬಳ ತೊದಲು, ಚೊಚ್ಚಲ ಕೃತಿಯಿದು ಎಂಬ ಪರಿವೆ, ಪರಿಜ್ಞಾನದಲ್ಲಿ ನೋಡಿದರೆ, ಪರಿಭಾವಿಸಿದರೆ ನಿಜಕ್ಕೂ ಯಾವುದೇ ಕನ್ನಡದ ಮಹತ್ವದ ಲೇಖಕರ ಕೃತಿಗಳಿ ಗಿಂತ ಈ ಕೃತಿ ನನಗೆ ಮುಖ್ಯವಾಗಿ ಮೇಲ್ಮಟ್ಟದ್ದಾಗಿ ಕಾಣಿಸುತ್ತದೆ.
ಪುಸ್ತಕ: ವೈಫ್ ಆಫ್ ಸೋಲ್ಜರ್‌ಲೇಖಕರು: ಎಸ್. ಭಾಗ್ಯ
ಮುಖಬೆಲೆ: 80 ರೂ. ಪ್ರಕಾಶಕರು: ಕೆಗ್ಗೆರೆ ಪ್ರಕಾಶನ, ನಂ:15/375, ಸ್ನೇಹ ಕಾರಂಜಿ, ಕೆಂಪೇಗೌಡ ನಗರ, 1ನೇ ಮೈನ್, 8ನೇ ಕ್ರಾಸ್, ಮಾಗಡಿ ಮುಖ್ಯರಸ್ತೆ, ವಿಶ್ವನೀದಂ ಅಂಚೆ, ಬೆಂಗಳೂರು-560 091