ದೆಹಲಿಯ ರಾಜಪಥದಲ್ಲಿ ಪ್ರದರ್ಶನಗೊಳ್ಳಲಿದೆ ಕಂಗೀಲು ನೃತ್ಯ
ಉಡುಪಿ, ಜ.22: ರಾಜಧಾನಿ ದೆಹಲಿಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರಾವಳಿಯ ಕಂಗೀಲು ನೃತ್ಯ ಪ್ರದರ್ಶನಗೊಳ್ಳಲಿದೆ.
ಉಡುಪಿಯ ಶಿಕ್ಷಣ ಸಂಸ್ಥೆಗಳಾದ ಎಂಜಿಎಂ ಕಾಲೇಜು ಹಾಗೂ ಪೂರ್ಣ ಪ್ರಜ್ಞ ಕಾಲೇಜಿನ 9 ವಿದ್ಶಾರ್ಥಿನಿಯರು ಮತ್ತು _ಇತರ 5 ಮಂದಿ ವಿದ್ಯಾರ್ಥಿ ಗಳನ್ನೊಳಗೊಂಡ ತಂಡವು ಗಣರಾಜ್ಯೋತ್ಸವದ ಪಥಸಂಚಲನದ ಸಂದರ್ಭದಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಂಗೀಲು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಈ ವಿದ್ಶಾರ್ಥಿಗಳು ‘ಉಡುಪಿ ಫೀಟ್ಸ್’ ಎಂಬ ಲಾಂಚನದಡಿಯಲ್ಲಿ ಭಾಗವಹಿಸುತ್ತಿದ್ದು, ತುಳುನಾಡಿನ ಜನಪದ ನೃತ್ಯ ಪ್ರಕಾರವನ್ನು ರಾಜಪಥದಲ್ಲಿ ಪ್ರದರ್ಶಿಸುವ ಅವಕಾಶ ಪಡೆದಿದ್ದಾರೆ. ಆಯ್ಕೆಯ ವಲಯ ಮಟ್ಟದ ಮೊದಲ ಪ್ರಕ್ರಿಯೆಯು ಡಿ.11ರಂದು ಬೆಂಗಳೂರಿನಲ್ಲಿ ನಡೆದಿದೆ.
ಕಿರಣ್ ಪಡುಬಿದ್ರಿ ಅವರ ತರಬೇತಿಯೊಂದಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಿ, ದೆಹಲಿಯಲ್ಲಿ ನಡೆಯಲಿರುವ ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಗೊಂಡಿದ್ದರು ಡಿ.18ರಂದು ದೆಹಲಿಯಲ್ಲಿ ನಡೆದ ಎರಡನೆಯ ಹಂತದ ಗ್ರಾಂಡ್ ಫೈನಲ್ ಮಟ್ಟದ ಆಯ್ಕೆಯಲ್ಲಿ 104 ತಂಡಗಳು ಭಾಗವಹಿಸಿದ್ದು, ಇದರಲ್ಲಿ ಉಡುಪಿ ಬೀಟ್ಸ್ ತಂಡವು ಮೊದಲ 4ನೆಯ ತಂಡವಾಗಿ ಆಯ್ಕೆಯಾಗಿದೆ ಎಂದು ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತಿ ವಸಂತ ಕುಮಾರ್ ತಿಳಿಸಿದ್ದಾರೆ.
ಗುರುಚರಣ್ ಪೊಲಿಪು ಅವರ ಮಾರ್ಗದರ್ಶನದೊಂದಿಗೆ ಈ ತಂಡವು ಸ್ಪರ್ಧಿಸಿದ್ದು, ಅಂತಿಮ ಆಯ್ಕೆಯ ಬಳಿಕ ತಂಡದ ಎಲ್ಲ ಸದಸ್ಯರೂ ಜ.7ರಂದು ದೆಹಲಿಗೆ ತೆರಳಿದ್ದು ಇದೀಗ ಅಂತಿಮ ಪ್ರದರ್ಶನದ ತಾಲೀಮಿನಲ್ಲಿ ಪ್ರತಿನಿತ್ಯ ಭಾಗವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.