ಡ್ರೋನ್ ಬಳಕೆಗೆ 1 ತಿಂಗಳು ನಿಷೇಧ ವಿಧಿಸಿದ ಯುಎಇ
ಅಬುಧಾಬಿ, ಜ.23: ಅಬುಧಾಬಿಯ ಮೇಲೆ ಯೆಮನ್‌ನ ಹೌತಿ ಬಂಡುಗೋರರು ನಡೆಸಿದ ಮಾರಣಾಂತಿಕ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಹಿನ್ನೆಲೆಯಲ್ಲಿ ಡ್ರೋನ್ ಬಳಕೆಗೆ 1 ತಿಂಗಳು ನಿಷೇಧ ವಿಧಿಸಿರುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಹೇಳಿದೆ.
ಡ್ರೋನ್ ಮತ್ತು ಲಘು ಕ್ರೀಡಾ ವಿಮಾನ , ಹವ್ಯಾಸಕ್ಕೆ ಡ್ರೋನ್ ಹಾರಾಟ ಸೇರಿದಂತೆ, ಎಲ್ಲಾ ರೀತಿಯ ಹಾರಾಟ ಕಾರ್ಯಾಚರಣೆಯನ್ನು ಆಂತರಿಕ ಸಚಿವಾಲಯ ಒಂದು ತಿಂಗಳ ಮಟ್ಟಿಗೆ ನಿಷೇಧಿಸಿದೆ. ನಿಯಮ ಉಲ್ಲಂಘಿಸಿ ಈ ಅವಧಿಯಲ್ಲಿ ಇಂತಹ ಚಟುವಟಿಕೆ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಯುಎಇಯ ಸರಕಾರಿ ಸ್ವಾಮ್ಯದ ಡಬ್ಲ್ಯೂಎಎಮ್ ಸುದ್ಧಿಸಂಸ್ಥೆ ವರದಿ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಡ್ರೋನ್ ಹಾರಾಟದ ಅವಕಾಶವನ್ನು ದುರ್ಬಳಕೆ ಮಾಡಿಕೊಂಡಿರುವುದು ಪತ್ತೆಯಾಗಿದ್ದು ಡ್ರೋನ್ ಬಳಕೆದಾರರು ನಿಷೇಧಿತ ವಲಯದಲ್ಲೂ ಡ್ರೋನ್ ಹಾರಿಸಿರುವ ಹಲವು ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಈ ನಿಷೇಧ ವಿಧಿಸಲಾಗಿದೆ . ಕೆಲಸ ನಡೆಸಲು ಡ್ರೋನ್ ಬಳಕೆ ಅಗತ್ಯವಿರುವವರು ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಅನುಮತಿ ಪತ್ರ ಪಡೆದುಕೊಳ್ಳಬೇಕು ಎಂದು ಸಚಿವಾಲಯದ ಆದೇಶ ತಿಳಿಸಿದೆ.
ಜನವರಿ 17ರಂದು ಯುಎಇ ರಾಜಧಾನಿ ಅಬುಧಾಬಿಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿರುವುದಾಗಿ ಹೌದಿ ಬಂಡುಗೋರರು ಹೇಳಿದ್ದರು. ಈ ದಾಳಿಯಿಂದ ವಿಮಾನ ನಿಲ್ದಾಣದ ಬಳಿಯಿದ್ದ ತೈಲ ಸಂಗ್ರಹಾಗಾರಕ್ಕೆ ಹಾನಿಯಾಗಿತ್ತು ಮತ್ತು ಇಬ್ಬರು ಭಾರತೀಯರ ಸಹಿತ 3 ಮಂದಿ ಮೃತಪಟ್ಟಿದ್ದರು ಮತ್ತು 6 ಮಂದಿ ಗಾಯಗೊಂಡಿದ್ದರು. ಯೆಮನ್‌ನಲ್ಲಿ ಅಂತರಾಷ್ಟ್ರೀಯ ಸಮುದಾಯದ ಮಾನ್ಯತೆ ಪಡೆದಿರುವ ಸರಕಾರದ ಪಡೆ ಹಾಗೂ ಹೌತಿ ಬಂಡುಗೋರರ ಮಧ್ಯೆ ನಡೆಯುತ್ತಿರುವ ಸಂಘರ್ಷದಲ್ಲಿ ಯೆಮನ್ ಪಡೆಯನ್ನು ಬೆಂಬಲಿಸುತ್ತಿರುವ ಅರಬ್ ನೇತೃತ್ವದ ಮಿತ್ರರಾಷ್ಟ್ರಗಳ ಪಡೆಯಲ್ಲಿ ಯುಎಇ ಕೂಡಾ ಸೇರಿದೆ.