ಈ ಬಸ್ಸೊಳಗೆ ಕೂತು ಬುಲೆಟ್ ಟ್ರೈನೂ ಬಿಡಬಹುದು....

Update: 2022-01-25 05:43 GMT

ನಾವು ನಮ್ಮ ಪ್ರವಾಸ, ಪ್ರಯಾಸ ಒಟ್ಟು ಯಾವ ಹೆಸರಿನಿಂದಾದ್ರೂ ಕರೀರಿ, ಶುರು ಮಾಡ್ತಿದೀವಿ ಉತ್ತರ ಪ್ರದೇಶದಿಂದ... ಈ ಬಸ್ಸೊಳಗೆ ಕುಳಿತು, ನಾವು ಬರೀ ಶತಾಬ್ದಿ ಎಕ್ಸ್‍ಪ್ರೆಸ್ ಅಲ್ಲ, ಬುಲೆಟ್ ಟ್ರೈನೂ ಬಿಡಬಹುದು, ಸರ್ಜಿಕಲ್ ಸ್ಟ್ರೈಕೂ ಮಾಡಬಹುದು... ಹುಷಾರ್! ಇದು ಅಂತಿಂಥ ಬಸ್ಸು ಅಂದುಕೋಬೇಡ್ರೀ !  “ಟೈಮ್ಸ್ ನೌ ವಾಹಿನಿ”ಯ ಎಲೆಕ್ಷನ್ ನ್ಯೂಸ್ ಬಸ್ಸು ಕಣ್ರೀ!

ಊಂಊಂ... ಅಲ್ಲ, ಟಿವಿ ಚಾನೆಲ್ ಎಲೆಕ್ಷನ್ ನ್ಯೂಸ್ ಬಸ್ಸಿಗೆ ಯೋಗಿಮಾಮಾರು ಯಾಕೆ ಪತಾಕೆ ಬೀಸಿ ಹಸಿರು ನಿಶಾನೆ ತೋರಿಸಿದರು ಅಂತೆಲ್ಲ ಅಡ್ನಾಡಿ ಪ್ರಶ್ನೆ ಕೇಳಬೇಡಿ ಸಾ...ರ್!  ಹೆಂಗಿದ್ರೂ ಟೈಮ್ಸ್ ನೌ ವಾಹಿನಿಯ ಎಲೆಕ್ಷನ್ ಬಸ್ಸು ಹೋಗೋ ರಸ್ತೆ, ಡ್ರೈವರ್, ಎಂಜಿನ್ ಎಲ್ಲ ಯೋಗಿವರ್ಯರದೇ ಅನ್ನೋದ್ರಲ್ಲಿ ಯಾವ ಅನುಮಾನವೂ ಬೇಡ ನಿಮಗೆ...ಅದರಲ್ಲೂ ಒಂದಲ್ಲ, ಡಬಲ್ ಎಂಜಿನ್!

“ಅಲ್ಲರೀ... ನಾವು ಇಲ್ಲಿ ಏನೋ ಕದ್ದುಮುಚ್ಚಿ, ವಳಗೊಳಗೇ ಕಮಲಪುಷ್ಟ ಎದೆಯೊಳಗಿಟ್ಟುಕೊಂಡು, ಬೆಂಬಲ ಕೊಡ್ತಿದ್ರೆ, ಇವ್ರು ಇಷ್ಟ್ ರಾಜಾರೋಷವಾಗಿ ಮಾಡ್ತವರೆ” ಅಂತ ನಮ್ಮ ಕರುನಾಡಿನ ಟಿವಿ ವಾಹಿನಿಗಳ ಕೂಗುಮಾರಿಗಳು ಭಲೇ ಸಂಕಟದಿಂದ ನೊಂದುಕೊಳ್ಳುತ್ತಿದ್ದಾರೆ... ಅಕಟಕಟಾ!

ಅಂತೂ ಗೋದಿ ಮೀಡಿಯಾದ ಹೊಸ ಟ್ರೆಂಡ್ ಶುರು ಮಾಡಿದ ಟೈಮ್ಸ್ ನೌಗೆ ಭಲೇ ಭಲೇ ಎನ್ನಬೇಕು. ಆದರೆ ಈ ಇಡೀ ಚಿತ್ರದಲ್ಲಿ ಒಂದೇ ಮಿಸ್ಸಿಂಗ್ ಕಾಂಪೊನೆಂಟ್ ಅಂದರೆ...ಕಂಗನಾಕ್ಕ ಇಲ್ಲ! ಛೇ... ನೋಡಿ, ಯೋಗಿಮಾಮಾನ ಪಕ್ಕದಲ್ಲಿ ಕಂಗನಾ ರನೌಟ್ ಕೂಡ ನಿಂತು ಪತಾಕೆ ಹಾರಿಸಲು ಕೈಹಿಡಿದಿದ್ದರೆ ಈ ಚಿತ್ರ ಇನ್ನಷ್ಟು ಪರಿಪೂರ್ಣವಾಗಿರುತ್ತಿತ್ತು, ಗೋದಿ ಮೀಡಿಯಾ + ಗೋದಿ ಸಿನಿಆಕ್ಟರ್ಸ್ ಕೈಕೈಹಿಡಿದು ಸಬಕೆ ವಿಕಾಸ್ ಸಾಥ್ ಸಾಥ್ ಸಾಗುತ್ತಿದ್ದಾರೆ ಅಂತ ಅಗದಿ ಛಂದವಾಗಿ ಕಾಣುತ್ತಿತ್ತು!

“ಅಣ್ಣೋ... ಮೊನ್ನೆ ನಮ್ಮ ವಿಶ್ವಗುರುಗಳು ಅದೇನೋ ವಿಶ್ವಸಂಸ್ಥೆ ಭಾಷಣ ಮಾಡಬೇಕಿದ್ರೆ ಟೆಲಿಪ್ರಾಂಟರ್ ಕೈಕೊಟ್ಟಿತು ಅಂತ ತ್ತೆತ್ತೆತ್ತೆ ಬ್ಬೆಬ್ಬೆಬ್ಬೆ ಮಾಡಿದ್ರು ಅಂತ ಸುದ್ದಿಯಾಯಿತಲ್ಲ...ಅದೇನಣ್ಣೋ” 

“ಏನಣಾ... ಇದೂ ಒಂದು ಅಣಕಿಸೋ ವಿಷಯನಾ... ಅಲ್ಲರೀ... ಈ ಅಖಂಡ ಭೂಲೋಕದಲ್ಲಿ ಟೆಲಿಪ್ರಾಂಟರ್ ಇಲ್ಲದೇ ಯಾವ ನನ್ಮಗ ಪ್ರಧಾನಿ ಭಾಷಣ ಮಾಡ್ತಾರ್ರೀ... ಟಿವಿ ನಿರೂಪಕ, ಟಿವಿ ನ್ಯೂಸ್ ಓದೋರು ಎಲ್ಲಾ ಏನ್ ಕಂಠಪಾಠ ಮಾಡಿ ಉರುಹೊಡೆದು ಒಪ್ಪಿಸ್ತಾರೆ ಅಂದ್ಕಂಡ್ರೇನ್ರೀ... ಎಲ್ಲಾರೂ ಟೆಲಿಪ್ರಾಂಪ್ಟರ್ ಇಟ್ಕಂಡೇ ಭಾಷಣ ಮಾಡ್ತಾರ್ರೀ. ಅವತ್ ಒಂಚೂರು ಟೆಕ್ನಿಕಲ್ ಇಶ್ಯೂ ಆಗಿದ್ದನ್ನೇ ದೊಡ್ಡದು ಮಾಡಬೇಡಿ ಸಾರ್.”

“ಮನಹೋಹನ್‌ ಸಿಂಗ್‌ ಪ್ರಧಾನಿಯಾಗಿ ವಿದೇಶಗಳಿಗೆ ಭೇಟಿ ನೀಡಿದಾಗ ಅವರಿಗೆ ಗೌರವ ಸಿಗುತ್ತಿರಲಿಲ್ಲ. ಸ್ವಾಗತ ಕೋರಲು ಯಾರೂ ಬರುತ್ತಿರಲಿಲ್ಲ, ನಮಸ್ಕಾರ ಮಾಡುತ್ತಿರಲಿಲ್ಲ. ಅವರು ಕಾಂಗ್ರೆಸ್‌ನಿಂದ ಆಯ್ಕೆಯಾದ ಪ್ರಧಾನಿಯಾಗಿ ವಿದೇಶ ಪ್ರವಾಸ ಮಾಡುತ್ತಿರಲಿಲ್ಲ. ಕೇವಲ ಭಾರತದ ಪ್ರಧಾನಿಯಾಗಿ ಎಲ್ಲೋ ಒಂದು ಮೂಲೆಯಲ್ಲಿ ನಿಂತು ಬರುತ್ತಿದ್ದರು. ಆದರೆ ಮೋದಿ ಅವರು ವಿದೇಶ ಪ್ರವಾಸಕ್ಕೆ ತೆರಳಿದರೆ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುತ್ತದೆ’ ಅಂತ ನಮ್ಮ ಶೋಭಕ್ಕ ಎರಡು ಮೂರು ತಿಂಗಳ ಹಿಂದೆ ಹೇಳಿದ್ದು ನಿಮಗೆ ನೆನಪೈತಿ ಹೌದಿಲ್ಲೋ. ಅಲ್ಲವಾ ಮತ್ತೆ... ಮೋದಿಯವರು ವಿದೇಶಕ್ಕೆ ಹೊರಟರೆ ಎಲ್ಲರ ಚಿತ್ತ ಇತ್ತ ಕಡೆಗೇ... ಭಾಷಣ ಮಾಡಿದ್ರೆ ಎಲ್ಲರ ಕಿವಿನೂ ನೆಟ್ಟಗೆ... ಅಂತಾದ್ರಲ್ಲಿ ಒಂದ್ಸಲ ಟೆಲಿಪ್ರಾಂಟರ್ ಕೈಕೊಟ್ಟು ಚೂರು ತ್ತೆತ್ತೆತ್ತೆ ಬ್ಬೆಬ್ಬೆಬ್ಬೆ ಅಂದಿದ್ದೇ ಇಲಿ ಹೋಯಿತು ಅಂದ್ರೆ ಹುಲಿ ಹೋಯಿತು ಅಂದಂಗೆ ಮಾಡಬಾರದು ಕಣ್ರೀ!

ಆದ್ರೆ ಶೋಭಕ್ಕಂಗೆ ಗೊತ್ತಿಲ್ಲ ಕಾಣುತ್ತೆ, ಯಾವುದೇ ದೇಶದ ಪ್ರಧಾನಿ ಇನ್ನೊಂದು ದೇಶಕ್ಕೆ ಹೋದಾಗ ರಾಜತಾಂತ್ರಿಕ ಮರ್ಯಾದೆ ಇದ್ದೇ ಇರುತ್ತೆ, ಯಾರೂ ಮೂಲೇಲಿ ನಿಂತು ಬರೋದಿಲ್ಲ. ಪ್ರಧಾನಿಗಳ ವಿದೇಶ ಯಾತ್ರೆ ಅಂದರೆ ಯಾವುದಾದರೂ ಪ್ರತಿಷ್ಟಿತ ಸ್ಪರ್ಧೆಯಲ್ಲಿ ನಮ್ಮ ಹಳ್ಳಿ ಹುಡುಗ್ರು ಪಿಳಿಪಿಳಿ ಕಣ್ ಬಿಡ್ತಾ ಮೂಲೇಲಿ ನಿಲ್ಲೋ ಹಂಗೆ ಅಲ್ಲರೀ...  ಮತ್ತೆ ಮನಮೋಹನ್ ಸಿಂಗ್ ಪದವಿಗಳನ್ನು ಪಡೆದಿದ್ದು ವಾಟ್ಸಾಪ್ ವಿಶ್ವವಿದ್ಯಾಲಯಗಳಲ್ಲಿ ಅಲ್ಲಣ್ಣೋ. ಕೇಂಬ್ರಿಜ್, ಆಕ್ಸ್ ಫರ್ಡ್ ವಿವಿಯಲ್ಲಿ ಓದಿದ್ದು.  United Nations Conference on Trade and Development ನಲ್ಲಿ ಕೆಲಸ ಮಾಡಿದವ್ರು ಅವರು, ಅವರು ಹಿಂಗೆಲ್ಲ ಟೆಲಿಪ್ರಾಂಟರ್ ಇಲ್ಲದೇನೂ ಮಾತಾಡ್ತಿದ್ದರು.

ಸರಿಬಿಡಪ್ಪಾ... ಹಿಂದ್ಲುದು ವಿಷ್ಯ ಯಾಕೆ ತೆಗಿಯಣ... ನಮ್ಮ ಕರುನಾಡಿನ ಚಿಂತೆಯೇ ಎಮಗೆ ಹಾಸಲುಂಟು ಹೊದೆಯಲುಂಟು!

ಈಗ ನಮಗೆ ಎದುರಾಗಿರೋ ಯಕ್ಷಪ್ರಶ್ನೆ ಅಂದರೆ ತುಮಕೂರು ಯಾರಪ್ಪನ ಜಹಗೀರು ಅನ್ನಾದು! ತುಮಕೂರು ಜಿಲ್ಲೆ ಯಾರ ಜಹಗೀರು ಅಂತ ಕುಮಾರಣ್ಣ, ಸಿದ್ರಾಮಣ್ಣ ವಳ್ಳೆ ಕುಸ್ತಿ ಅಖಾಡಾದಾಗೆ ತೊಡೆತಟ್ಟಿ ಕೇಳಿದಂಗೆ ಕೇಳ್ತವರೆ. ಏ ಬಿಡ್ರಪೋ... ಯಾಕೆ ಸುಮ್ನೆ ಕಿತ್ಲಾಡ್ತೀರಿ... ಮುಂದಿನ ಚುನಾವಣೇಲಿ ನೋಡ್ರಿ... ಅದು ಯಾರ ಜಹಗೀರು ಅಂತ ಮೋದಿಅಲೆನೆ ಉತ್ತರ ಹೇಳತೈತಿ ಇಬ್ಬರ ಜಗಳ ನೋಡುತ್ತ ಮಜಾ ತೆಗೆದುಕೊಳ್ಳುತ್ತ ಬಿಜೆಪಿಗರು ಒಳಗೊಳಗೇ ಬೀಗುತ್ತಿದ್ದಾರಂತೆ ಅಂತ ಇನ್ನೊಂದು ಸುದ್ದಿ. ಆದರೆ ಈ ನಡುವೆ ನಮ್ಮ ಜಿಲ್ಲೆ ನಮ್ಮ ಜಹಗೀರಲ್ಲದೇ ಇನ್ನಾರಿದ್ದು ಅಂತ ಕೇಳೋದಕ್ಕೂ ದಮ್ಮಿಲ್ಲದ ಶ್ರೀಸಾಮಾನ್ಯರು ಬಸವಳಿದು ಕುಂತವರಂತೆ. ಪ್ರತಿಸಲ ಬೇಸಿಗೆ ಬಂದರೆ ನಾಕುನೂರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಹನಿನೀರಿಗೆ ತತ್ವಾರವಾಗಿ ಜನ ಒದ್ದಾಡತಾರೆ, ರಾಜಕಾರಣಿಗಳ ನಡುವಣ ಜಗಳದಲ್ಲಿ ಶ್ರೀಸಾಮಾನ್ಯ ಬಡವಾದ ಅಂತ ಹೊಸಗಾದೆ ಹೊಸೆಯಬಹುದು!

ನಾವು 40% ಲಂಚ ಕೊಡದಿದ್ದರೆ ಫೈಲು ಮುಂದೆ ಹೋಗಲ್ಲ ಅಂತ ನಮ್ಮ ಕರುನಾಡಿನ ಗುತ್ತಿಗೆದಾರರ ಸಂಘದವ್ರು ಹೋದ ತಿಂಗಳು ತೀರಾ ಮೇಲಿನ್ರಿಗೆ ಅಂದರೆ ನಮ್ಮ ವಿಶ್ವಗುರುಗಳಿಗೇ ಪತ್ರ ಬರೆದಿದ್ದರು ಅಂತ ಭಾರೀ ಸುದ್ದಿಯೇನೋ ಅಯಿತು. ಅವರೇನೋ “ನಾ ಕಾವೂಂಗಾ, ನಾ ಖಾನೆ ದೂಂಗಾ” ಅಂತ ಭಯಂಕರ ಪ್ರಚಂಡ ಘೋಷಣೆ ಮಾಡಿದ್ದರು...ನಾನೂ ತಿನ್ನೋದಿಲ್ಲ, ತಿನ್ನೋದಕ್ಕೂ ಬಿಡೋದಿಲ್ಲ ಅಂತ ಅಬ್ಬರಿಸಿದ್ದರು ... ಮತ್ತೆ ಈ 40% ತಿನ್ನದು ಯಾರು ಮಾರಾಯರೇ? ಗುತ್ತಿಗೆದಾರರ ಸಂಘದ ಆ ಪತ್ರದ ಗತಿ ಏನಾಯಿತು ಗೊತ್ತಿಲ್ಲ ... ಆದರೆ ನಿನ್ನೆ ಮೈಸೂರಿನ ಮೂವರು ಶಾಸಕರು ಪತ್ರಿಕಾಗೋಷ್ಟಿಯಲ್ಲಿ “ಅಯ್ಯೋ... ಶೇ. 40 ಅಲ್ಲಾರೀ, ಗುತ್ತಿಗೆದಾರರು ಶೇ. 50 ಕೊಡಬೇಕು. ಅಲ್ಲದೇ ನಮ್ಮ ಕ್ಷೇತ್ರಗಳ ಅನುದಾನವನ್ನು ಬೇರೆ ಕ್ಷೇತ್ರಕ್ಕೆ ರಿಡೈರೆಕ್ಟ್ ಮಾಡ್ತಿದಾರೆ” ಎಂದೆಲ್ಲ ಅಲವತ್ತುಕೊಂಡಿದಾರೆ. ಅಂದರೆ ಮೊದಲಿನಿಂದ ಶೇ. 50 ಲಂಚ ಇತ್ತೇ, ಗುತ್ತಿಗೆದಾರರು ಪಾಪ ಇರಲಿ ಎಂದು ಲೆಕ್ಕದಲ್ಲಿ ಸ್ವಲ್ಪ ಕಡಿಮೆ ತೋರಿಸಿದ್ದರೆ, ಅಥವಾ ಬೊಮ್ಮಾಯಿ ಅಂಕಲ್ ಆಡಳಿತದಲ್ಲಿ ಇನ್ನೂ 10 ಪರ್ಸೆಂಟ್ ಹೆಚ್ಚಾಯಿತೇ ಅಂತೆಲ್ಲ ಒಣಪ್ರಶ್ನೆಗಳನ್ನು ಕೇಳಿ ತಲೆ ತಿನ್ನಬೇಡಿ! ನಿಮ್ಮ ಈ ಪ್ರಶ್ನೆಗಳನ್ನೆಲ್ಲ  “ನಾ ಕಾವೂಂಗಾ, ನಾ ಖಾನೆ ದೂಂಗಾ” ಎಂದವರಿಗೇ ರಿಡೈರೆಕ್ಟ್ ಮಾಡಿ!! ಈ ಇಡೀ ಪ್ರಹಸನದಲ್ಲಿ ಎಲ್ಲಕ್ಕಿಂತ ಮಜಾ ಅಂದರೆ ಈ ತ್ರಿಮೂರ್ತಿ ಶಾಸಕರು “ನೀವೂ ತಿಂದಿಲ್ಲವಾ ಅಂತ ಕೇಳ್ತಾರೆ. ನಾವು ಒಣಗೊಬ್ಬರ ತಿಂದರೆ ನೀವು ಹಸಿ ಗೊಬ್ಬರವನ್ನೇ ತಿನ್ನುತ್ತಿದ್ದೀರಿ ಎಂದು ಹೇಳಬೇಕಾದ ಪರಿಸ್ಥಿತಿ ಬಂದಿದೆ” ಎಂದು ಘನಗಂಭೀರ ಆರೋಪ ಮಾಡಿರುವುದು.

ಪಾಯಿಂಟ್ ನಂಬರ್ 1 - ಅಂತೂ ಎಲ್ಲರೂ ಗೊಬ್ಬರ ತಿನ್ನುವವರೇ! ಗೊಬ್ಬರ ತಿನ್ನುವಿಕೆ ಒಂದು ಪಕ್ಷಾತೀತ (ಸಹಜ!)ಸಂಗತಿ!!

ಪಾಯಿಂಟ್ ನಂಬರ್ 2 - ಯಾವ ಗೊಬ್ಬರ - ಒಣ ಅಥವಾ ಹಸಿ? ಸಾವಯವ ಅಥವಾ ರಸಗೊಬ್ಬರ ಅಥವಾ ಹಸಿಸಗಣಿ? ಇದ್ರ ಮೇಲೆ ಪರ್ಸೆಂಟೇಜ್ ನಿರ್ಧಾರ!  

ಪಾಯಿಂಟ್ ನಂಬರ್ 3 - ಅಂದರೆ ಒಣಗೊಬ್ಬರ ತಿಂದರೆ ಪರ್ಸೆಂಟೇಜ್ ಕಡಿಮೆಯೇ?  

ಪಾಯಿಂಟ್ ನಂಬರ್ 4 - ಶಾಸಕರ ಆರೋಪ ಇರೋದು ಗೊಬ್ಬರ ತಿನ್ನುವ ಕುರಿತು ಅಲ್ಲವೇ ಅಲ್ಲ, ಕಮಲಕ್ಕನ ಮನೆಯವರು ಒಣಗೊಬ್ಬರ ತಿನ್ನೋದು ಬಿಟ್ಟು ಹಸಿ ಗೊಬ್ಬರ ತಿನ್ನುತ್ತ, ತಮಗೆ ಕನಿಷ್ಠ ಒಣಗೊಬ್ಬರವಾಗಬಲ್ಲ  ದರಕುಸೊಪ್ಪೂ ಸಿಗದಂತೆ ಮಾಡಿದ್ದಾರೆ ಅಂತ! ಅಕಟಕಟಾ!!!  

ಇರಲಿ ಅಷ್ಟೆಲ್ಲ ನೊಂದುಕೋಬೇಡಿ... ಈಗ ಕರುನಾಡಿನ ಖುಷಿಯ ಸುದ್ದಿಯನ್ನೂ ಕೇಳೋಣ... ಆಕ್ಷೀ... ಗೊರ್ ಗೊರ್ ಗಂಟಲುನೋವು.. ಮೈಕೈನೋವು... ಮೆಡಿಕಲ್ ಶಾಪಿನಲ್ಲಿ ಅತ್ತಿತ್ತ ನೋಡಿ, ಸಣ್ಣ ದನಿಯಲ್ಲಿ ‘ಡೋಲೋ ಒಂದ್ ಶೀಟ್ ಕೊಟ್ಟುಬಿಡಿ’ ಅನ್ನದಿದ್ದವರು ಯಾರಿದ್ದಾರೆ ಹೇಳಿ.... ಹೌದು ಅದೇ ಡೋಲೋ 650 ಮಾತ್ರೆ ತಯಾರಿಸೋ ಬೆಂಗಳೂರು ಮೂಲದ ಮೈಕ್ರೋ ಲ್ಯಾಬ್ಸ್ ಲಿಮಿಟೆಡ್ ಈ ಕೊರೊನಾ ಪಿಡುಗಿನ ಸಮಯದಲ್ಲಿ ಅಂದರೆ ಜನವರಿ 2020ರಿಂದ ಈಚೆಗೆ ಬರೋಬ್ಬರಿ 560 ಕೋಟಿ ರೂಪಾಯಿ ಟರ್ನೋವರ್ ಮಾಡಿದೆಯಂತೆ... ಬೇರೆ ಎಲ್ಲ ಪ್ಯಾರಸೆಟಮಾಲ್ ಮಾತ್ರೆಗಳಿಗಿಂತ ಇದು ಸುರಕ್ಷಿತ ಅಂತ ಆರೋಗ್ಯ ಕ್ಷೇತ್ರಗಳಲ್ಲಿ ಇರೋವ್ರಿಂದ ಸರ್ಟಿಫಿಕೇಟ್ ಬೇರೆ ಇದಕ್ಕಿದೆ!! ಮನೆಯಲ್ಲಿ ಏನಿರಲಿ ಬಿಡಲಿ, ಒಂಡು ಡೋಲೊ ಸ್ಟ್ರಿಪ್ ಇರಲಿ! ಅಷ್ಟಿದ್ದರೆ ಸಾಕು... ... ಆಕ್ಷೀ... ಗೊರ್ ಗೊರ್ ಗಂಟಲುನೋವು.. ಮೈಕೈನೋವು... ಇದೆಲ್ಲ ಶುರುವಾಗುತ್ತಿದ್ದಂತೆ ನೀವೂ ‘ದೀವಾರ್’ ಸಿನಿಮಾದಲ್ಲಿ ಶಶಿಕಪೂರ್ ‘ಮೇರೆ ಪಾಸ್ ಮಾ ಹೈ’ ಎಂದಂತೆ ‘ಮೇರೆ ಪಾಸ್ ಡೋಲೋ ಹೈ” ಎನ್ನಬಹುದು!!   

ಇನ್ನು ಹದಿನೈದು ದಿನದಲ್ಲಿ ಕೋವಿಡ್ ಗರಿಷ್ಠ ಮಟ್ಟ ತಲುಪಬಹುದು ಅಂತ ಮದ್ರಾಸ್ ಐಐಟಿ ಅಂದಾಜು ಮಾಡಿದೆ. ಈ ನಡುವೆ ಚುನಾವಣಾ ಆಯೋಗವು ಐದು ರಾಜ್ಯಗಳಲ್ಲಿ ರ್ಯಾಲಿ, ಬಹಿರಂಗ ಪ್ರಚಾರಕ್ಕೆ ಜನವರಿ 31ರವರೆಗೆ ನಿಷೇಧ ಹೇರಿದೆ... ಮನೆ ಮನೆ ಪ್ರಚಾರಕ್ಕೆ 10 ಜನ ಮಾತ್ರ ಒಟ್ಟಾಗಿ ಹೊಗಬಹುದು ಅಂದಿದೆ. ಆದರೆ ನೆನಪಿಡಿ, ಟರ್ಮ್ಸ್ & ಕಂಡೀಶನ್ಸ್ ಅಪ್ಲೈ! ನಮ್ಮ ದೇಶದ ಗೃಹಮಂತ್ರಿಗಳಿಗೆ ಮಾತ್ರ ನಿಷೇಧ, ಗಿಷೇಧಗಳು ಅನ್ವಯಿಸೋದಿಲ್ಲ... ಉತ್ತರಪ್ರದೇಶದ ಕೈರಾನದಲ್ಲಿ ನಮ್ಮ ಶಾ ಸಾಹೇಬರು ನೂರಾರು ಜನರೊಂದಿಗೆ ಮನೆಮನೆ ಭೇಟಿ ಮಾಡಿ ಪ್ರಚಾರ ಮಾಡಿದ್ರು... ಮಾಸ್ಕು, ಭೌತಿಕ ಅಂತರ...?? ಸ್ವಾಮಿ... ಅವೆಲ್ಲ ನಿಮಗೆ...! ನಮ್ಮ ಶಾ ಸಾಹೇಬರಿಗಲ್ಲ! ಅಂದಹಾಗೆ ಈ ವಿಡಿಯೋದಲ್ಲಿ ಮಾಸ್ಕ್ ಹಾಕಿಕೊಂಡ ನಾಲ್ಕಾರು ಜನ ಕಾಣ್ತವರೆ ಎಂದು ತೋರಿಸಿದ್ರಾ... ಹೌದು ಸ್ವಾಮಿ, ಮಾಸ್ಕ್ ಹಾಕಿಕೊಂಡವರು ಅವರ ಸೆಕ್ಯುರಿಟಿ ಅಧಿಕಾರಿಗಳು! ಜೊತೆಗಿರುವ ಜನರು, ಪಕ್ಷದ ಕಾರ್ಯಕರ್ತರು, ಸ್ವತಃ ಶಾ ಸಾಹೇಬರು ಮಾಸ್ಕಿಲ್ಲದೇ, ನುಗ್ಗುತ್ತಿದ್ದಾರೆ!! ಅದೇ ನೋಡಿ... ನ್ಯೂಜಿಲೆಂಡ್ ಪ್ರಧಾನಿ ಜೆಸಿಂದಾ ಆರ್ಡೆನ್ ತಮ್ಮ ಮದುವೆಯನ್ನೇ ಕೋವಿಡ್ ಕಾರಣದಿಂದ ಮುಂದೂಡಿದರಂತೆ... ನಮ್ಮ ರಾಜಕಾರಣಿಗಳು ಈ ವಿಷಯ ಕೇಳಿ ಬಿದ್ದು ಬಿದ್ದು ನಕ್ಕು, ಹುಚ್ಚಮ್ಮಾ ಎಂದಾರು!!

ಅಂದಹಾಗೆ ಓಲಂಪಿಕ್ಸಿನಲ್ಲಿ ಪಕ್ಷದಿಂದ ಪಕ್ಷಕ್ಕೆ ಜಿಗಿಯೋ ಸ್ಪರ್ಧೆ ಇಟ್ಟರೆ ಚಿನ್ನ, ಬೆಳ್ಳಿ, ಕಂಚು, ಇರೋಬರೋ ಪದಕಗಳು ಮಾತ್ರವಲ್ಲ, ಮೊದಲ ಐವತ್ತರ ಅಷ್ಟೂ ಸ್ಥಾನಗಳೂ ನಮ್ಮ ಭರತಖಂಡದ ಮಹಾಮಹಿಮ ರಾಜಕಾರಣಿಗೇ ಬರೋದು ಖಂಡಿತಾ! ಗೋವಾ ಮಾತ್ರ ದಾಖಲೆ ನಿರ್ಮಿಸಿದೆ, ಕಳೆದ ಐದು ವರ್ಷಗಳಲ್ಲಿ ಶೇ.60ರಷ್ಟು ಶಾಸಕರು ಪಕ್ಷಾಂತರ ಮಾಡಿದ್ದಾರಂತೆ... ಕ್ಷೇತ್ರ ಅಭಿವೃದ್ಧಿ ಪಡಿಸುವುದರಲ್ಲಿ ಶೂನ್ಯದಾಖಲೆ ಮಾಡಿದರೇನಾಯ್ತು ಸ್ವಾಮಿ... ಹೀಗೆ ಜಿಗಿಯೋದ್ರದಲ್ಲಿ ಸಾಧನೆ ಮಾಡಿದ್ದಾರಲ್ಲ... ಖುಷಿ ಪಡಿ ಮತ್ತು ಸಿಹಿ ಹಂಚಿ!    

ಸರಿ, ಕೊನೇದಾಗಿ ನಮ್ಮ ವೀಕ್ಷಕರಿಗೆ ಒಂದು ಸಣ್ಣ ಕ್ವಿಜ್. ಈಗ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪಂಚರಾಜ್ಯಗಳಲ್ಲಿ, ಉತ್ತರ ಪ್ರದೇಶ, ಉತ್ತರಾಖಂಡ್, ಪಂಜಾಬ್, ಮಣಿಪುರ ಮತ್ತು ಗೋವಾ ಈ ಐದು ರಾಜ್ಯಗಳಲ್ಲಿ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರಿದ ಜಿಗಿತವೀರ ರಾಜಕಾರಣಿಗಳನ್ನು ಪಟ್ಟಿ ಮಾಡಿ!! ಹಂಗೇ ಯಾವ ಪಕ್ಷದಿಂದ ಯಾವ ಪಕ್ಷಕ್ಕೆ ಹಾರಿದರು ಅಂತಲೂ ಹೇಳಿ!!!

ಏನಪಾ ಇದು... ಮರದ ಮೇಲೆ ನೂರು ಪಕ್ಷಿ ಕೂತಿವೆ, ಸಣ್ಣ ಕಲ್ಲು ಎಸೆದ್ರೆ ಎಷ್ಟು ಹಕ್ಕಿ ಹಾರಿದವು, ಈಗ ಎಷ್ಟು ಉಳಿದಿವೆ ಅಂತ ಲೆಕ್ಕ ಮಾಡಿ ಅಂದಂಗೆ ಆತಲ್ಲ ಅಂತ ತಲೆ ಕೆರೆದುಕೊಳ್ತೀರ ನೀವು ಅಂತ ನಮಗೂ ಗೊತ್ತು!!

ನಮ್ಮ ನಿಮ್ಮ ಮುಂದಿನ ಭೇಟಿಯಲ್ಲಿ ಸರಿಯಾದ ಲೆಕ್ಕ ಹೇಳಿ!

Writer - ಸುಮಂಗಲಾ

contributor

Editor - ಸುಮಂಗಲಾ

contributor

Similar News

ಸಂವಿಧಾನ -75