ಉಡುಪಿ ಸ್ಕಾರ್ಫ್ ವಿವಾದ: ನಾವು ಆನ್‌ಲೈನ್ ತರಗತಿಗೆ ಹಾಜರಾಗುವುದಿಲ್ಲ ಎಂದ ವಿದ್ಯಾರ್ಥಿನಿಯರು

Update: 2022-01-27 08:16 GMT

ಉಡುಪಿ, ಜ.27: ನಾವು ಆನ್‌ಲೈನ್ ತರಗತಿಗೆ ಹಾಜರಾಗುವ ಪ್ರಸ್ತಾಪವನ್ನು ಒಪ್ಪಿಕೊಳ್ಳುವುದಿಲ್ಲ. ಆನ್‌ಲೈನ್ ಕ್ಲಾಸ್ ಮೂಲಕ ಮತ್ತೆ ಬೇರೆ ವಿದ್ಯಾರ್ಥಿಗಳ ಜೊತೆ ನಮಗೆ ತಾರತಮ್ಯ ಮಾಡಬೇಡಿ ಎಂದು ಹಿಜಾಬ್ ಧರಿಸುವ ಕಾರಣಕ್ಕಾಗಿ ಕಳೆದ ಸುಮಾರು ಒಂದು ತಿಂಗಳಿನಿಂದ ತರಗತಿಗಳಿಗೆ ಹಾಜರಾಗಲು ಅವಕಾಶ ನಿರಾಕರಿಸಲ್ಪಟ್ಟ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಎಂಟು ಮಂದಿ ವಿದ್ಯಾರ್ಥಿನಿಯರು ಹೇಳಿದ್ದಾರೆ.

ಈ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೇ ತರಗತಿಗೆ ಹಾಜರಾಗಲು ಈಗಲೂ ಅವಕಾಶವಿದೆ. ಒಂದು ವೇಳೆ ಹೀಗೆ ಬರಲು ನಿರಾಕರಿಸಿದರೆ ಅವರ ಶೈಕ್ಷಣಿಕ ಹಿತದೃಷ್ಟಿಯಿಂದ ಈ ವರ್ಷ ಇನ್ನುಳಿದ ಅವಧಿಗೆ ಅವರಿಗಾಗಿ ಆನ್‌ಲೈನ್ ಕ್ಲಾಸ್ ನಡೆಸಲು ಆಡಳಿತ ಮಂಡಳಿ ಸಿದ್ಧವಿದೆ. ಈ ಮೂಲಕ ಅವರು ಈ ವರ್ಷದ ವಾರ್ಷಿಕ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಆಡಳಿ ಮಂಡಳಿ ಅಧ್ಯಕ್ಷ, ಶಾಸಕ ಕೆ.ರಘುಪತಿ ಭಟ್ ಬುಧವಾರ ಹೇಳಿದ್ದರು.

ಹಿಜಾಬ್ ನಮ್ಮ ಸಂವಿಧಾನಾತ್ಮಕ ಹಕ್ಕು. ನಾವು ಹಿಜಾಬ್ ಹಾಕಿ ಕಾಲೇಜಿಗೆ ಹೋಗುತ್ತೇವೆ. ನಮಗೆ ಯಾವುದೇ ಆನ್ಲೈನ್ ಕ್ಲಾಸ್ ಗಳು ಬೇಡ ಎಂದು ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಹೇಳಿದ್ದಾರೆ.

ಸರಕಾರಿ ಕಾಲೇಜಿನಲ್ಲಿ ನಮಗೆ ನಮ್ಮ ಹಕ್ಕು ಸಿಗದಿದ್ದರೆ ನಾವು ಬೇರೆಡೆ ಅದನ್ನು ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ವಿದ್ಯಾರ್ಥಿನಿಯರು, ನಮ್ಮಲ್ಲಿ ಸಾಯನ್ಸ್ ವಿದ್ಯಾರ್ಥಿಗಳು ಇರೋದ್ರಿಂದ ನಮಗೆ ಆನ್ಲೈನ್ ಕ್ಲಾಸ್ ನಲ್ಲಿ ಲ್ಯಾಬ್ ಅಟೆಂಡ್ ಮಾಡಲು ಆಗುವುದಿಲ್ಲ. ನಮಗೆ ಈಗಾಗಲೇ ಒಂದು ತಿಂಗಳ ತರಗತಿ ನಷ್ಟ ಆಗಿದೆ ಎಂದರು.

ಕಾಲೇಜಿನ ಉಳಿದ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಸಿದ್ಧರಿದ್ದಾರೆ ಆದರೆ ನಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಅವರು ಭಯಗೊಂಡಿದ್ದಾರೆ ಎಂದರು.

ಸರಕಾರಿ ಕಾಲೇಜ್ ಆಗಿರುವುದರಿಂದ ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ತಾರತಮ್ಯವನ್ನು ಮಾಡಬೇಡಿ. ಪ್ರತಿದಿನ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳನ್ನು ನೋಡಿ ಇತರ ಮುಸ್ಲಿಂ ವಿದ್ಯಾರ್ಥಿನಿಯರು ಆತಂಕಗೊಂಡಿದ್ದಾರೆ. ಅವರು ನೈತಿಕವಾಗಿ ನಮಗೆ ಬೆಂಬಲ ಸೂಚಿಸಿದ್ದಾರೆ ಆದರೆ ಯಾರೂ ಮುಂದೆ ಬರುತ್ತಿಲ್ಲ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.

ಉಳಿದ ವಿದ್ಯಾರ್ಥಿನಿಯರು ಶಿಕ್ಷಣ ತುಂಬಾ ಇಂಪಾರ್ಟೆಂಟ್ ಎಂದು ನಮ್ಮ ಜೊತೆ ಪ್ರತಿಭಟನೆಗೆ ಬರುತ್ತಿಲ್ಲ ಕ್ಲಾಸಿಗೆ ಹೋಗುತ್ತಿದ್ದಾರೆ. ನಮಗೂ ಶಿಕ್ಷಣ ಮುಖ್ಯ ಅದರ ಜೊತೆಗೆ ನಮ್ಮ ಧರ್ಮ, ನಮ್ಮ ಹಿಜಾಬ್ ಹಕ್ಕು ಸಹ ಮುಖ್ಯ ಎಂದರು.

ಹಿಜಾಬ್ ಇಲ್ಲದೆ ತರಗತಿಯಲ್ಲಿ ಕುಳಿತುಕೊಳ್ಳಲು ನಮಗೆ ಕಂಫರ್ಟ್ ಆಗುವುದಿಲ್ಲ. ಕಾಲೇಜಿನ ಸಮವಸ್ತ್ರವನ್ನು ತೊಟ್ಟುಕೊಂಡು ಕ್ಲಾಸಿನಲ್ಲಿ ಕುಳಿತುಕೊಳ್ಳುತ್ತೇವೆ. ನಾವು ಬೇರೆ ಯಾವುದೇ ವಿಚಾರಕ್ಕೆ ಹಠಹಿಡಿದು ಕುಳಿತುಕೊಂಡಿಲ್ಲ ಎಂದರು.

ಉತ್ತಮವಾದ ಶಿಕ್ಷಣ ಪಡೆದು ಮುಂದೆ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಆಶೆ ನಮಗೂ ಇದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News