ಗಾಂಧಿ ವರ್ಸಸ್ ಹಿಂದುತ್ವ

Update: 2022-01-28 19:30 GMT

 1948ರಂತೆ 2022ರಲ್ಲಿಯೂ ಅಲ್ಪಸಂಖ್ಯಾತ ವಿರೋಧಿ ಕೇಸರಿ ಸಿದ್ಧಾಂತ ಹಾಗೂ ಗಾಂಧೀಜಿಯವರ ಎಲ್ಲರನ್ನೂ ಒಳಗೊಂಡ ಹಾಗೂ ಬಹುತ್ವವಾದಿ ಸಿದ್ಧಾಂತದ ನಡುವೆ ಅಗಾಧವಾದ ಅಂತರವಿದೆ. ಆಗಿನಂತೆ ಈಗ ಕೂಡಾ ಭಾರತೀಯರು ಎರಡರಲ್ಲಿ ಒಂದನ್ನು ಆಯ್ದುಕೊಳ್ಳಬೇಕಿದೆ. ಭಾರತದ ಗಣರಾಜ್ಯದ ಭವಿಷ್ಯವು ನಾವು ಎಷ್ಟು ಬುದ್ಧಿವಂತರು ಹಾಗೂ ಶೂರರು ಎಂಬುದನ್ನು ಅವಲಂಬಿಸಿದೆ.



1915ರ ಎಪ್ರಿಲ್‌ನಲ್ಲಿ, ಮೋಹನದಾಸ ಕರಮಚಂದ ಗಾಂಧಿ ಅವರು ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ಹಿಂದಿರುಗಿದ ಕೆಲವು ತಿಂಗಳುಗಳ ಆನಂತರ ದಿಲ್ಲಿಗೆ ಬಂದಿದ್ದರು. ಅಲ್ಲಿ ಅವರು ಸೈಂಟ್ ಸ್ಟೀಫನ್ಸ್ ಕಾಲೇಜಿನ ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡಿದ್ದರು. ವೈವಿಧ್ಯಮಯ ಧಾರ್ಮಿಕ ಹಿನ್ನೆಲೆಗಳಿಂದ ಬಂದ ಸಭಿಕರೇ ತುಂಬಿದ್ದ ಈ ಕಾರ್ಯಕ್ರಮದಲ್ಲಿ ಗಾಂಧೀಜಿ ಅವರು ತನ್ನ ಮಾರ್ಗದರ್ಶಕರಾದ ಪ್ರೊ.ಗೋಪಾಲಕೃಷ್ಣ ಗೋಖಲೆ ಬಗ್ಗೆ ಮಾತನಾಡಿದ್ದರು. ಈ ಕಾರ್ಯಕ್ರಮ ನಡೆದ ಕೆಲವು ವಾರಗಳ ಹಿಂದೆಯಷ್ಟೇ ಗೋಖಲೆಯವರು ಪುಣೆಯಲ್ಲಿ ನಿಧನರಾದರು. ಪ್ರೊ. ಗೋಖಲೆ ಓರ್ವ ಅಪ್ಪಟ ಹಿಂದೂವಾಗಿದ್ದಾರೆ ಎಂದವರು ಹೇಳಿದರು. ಹಿಂದೂ ಸನ್ಯಾಸಿಯೊಬ್ಬರು ಒಂದೊಮ್ಮೆ ಅವರ ಬಳಿಗೆ ಬಂದು ಮುಸ್ಲಿಮರನ್ನು ದಮನಿಸಲು ಹಿಂದೂ ರಾಜಕೀಯ ಧ್ಯೇಯಕ್ಕೆ ಒತ್ತು ನೀಡಬೇಕೆಂಬ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು. ಇದಕ್ಕಾಗಿ ಅವರು ಹಲವಾರು ನಿರ್ದಿಷ್ಟ ಕಾರಣಗಳನ್ನು ನೀಡಿದ್ದರು. ಆಗ ಗೋಖಲೆಯವರು ಆ ವ್ಯಕ್ತಿಗೆ ಹೀಗೆ ಉತ್ತರಿಸಿದ್ದರು. ‘‘ಒಂದು ವೇಳೆ ನಾನು ಹಿಂದೂವಾಗಿರಲು, ನೀವು ಇಚ್ಛಿಸಿದಂತೆ ನಾನು ಮಾಡಬೇಕಾದರೆ, ದಯವಿಟ್ಟು ನಾನು ಹಿಂದೂವಲ್ಲವೆಂದು ವಿದೇಶದಲ್ಲಿ ಪ್ರಕಟಿಸಿರಿ’’ ಎಂದವರು ಹೇಳಿದ್ದರು. (ಗಾಂಧೀಜಿ ಭೇಟಿ, ಸೈಂಟ್ ಸ್ಟೀಫನ್ಸ್ ಕಾಲೇಜ್ ಮ್ಯಾಗಝಿನ್, ನಂ.32, ಎಪ್ರಿಲ್ 1915).

20ನೇ ಶತಮಾನದ ಮೊದಲ ದಶಕಗಳಲ್ಲಿ ಕೆಲವು ಹಿಂದೂ ರಾಜಕಾರಣಿಗಳು ಹಾಗೂ ಹಲವರು ಹಿಂದೂ ಸಂತರು, ತಮ್ಮ ಸಮುದಾಯದ ಬಹುಸಂಖ್ಯಾತ್ಮಕತೆಯು ತಮಗೆ ಭಾರತದ ರಾಜಕಾರಣವನ್ನು ಹಾಗೂ ಆಡಳಿತದ ಮೇಲೆ ಪ್ರಾಬಲ್ಯವನ್ನು ಸ್ಥಾಪಿಸಲು ಹಕ್ಕನ್ನು ನೀಡಿತು ಎಂದು ಹೇಳಿದ್ದರು. ಈ ನಂಬಿಕೆಯನ್ನು ಗಾಂಧೀಜಿಯವರು ಸ್ಪಷ್ಟವಾಗಿ ತಿರಸ್ಕರಿಸಿದ್ದರು. ತನ್ನ ಗುರುವಾದ ಗೋಖಲೆಯವರಂತೆ, ಹಿಂದೂ ರಾಷ್ಟ್ರವಾಗಿ ಭಾರತವನ್ನು ವ್ಯಾಖ್ಯಾನಿಸಬೇಕೆಂಬ ಪ್ರಲೋಭನೆಯನ್ನು ಗಾಂಧೀಜಿಯವರು ಕೂಡಾ ಸ್ಪಷ್ಟವಾಗಿ ನಿರಾಕರಿಸಿದ್ದರು. ಭಾರತದ ಎರಡು ಪ್ರಮುಖ ಧಾರ್ಮಿಕ ಸಮುದಾಯಗಳ ನಡುವೆ ಸೇತುವೆಗಳನ್ನು ನಿರ್ಮಿಸಲು ಅವರು ಎಡೆಬಿಡದೆ ಶ್ರಮಿಸಿದರು. ಈ ಮುಕ್ತ ಮನಸ್ಸಿನ ಹಾಗೂ ಗಾಢವಾದ ಮಾನವೀಯ ನಡವಳಿಕೆಯು ಅವರ ಸಮುದಾಯದ ಕೆಲವು ಮತಾಂಧರನ್ನು ಕೆರಳಿಸಿತು. ಈ ಮತಾಂಧರು ಗಾಂಧೀಜಿಯವರನ್ನು ಅವರ ಸಾರ್ವಜನಿಕ ಜೀವನದುದ್ದಕ್ಕೂ ವಿರೋಧಿಸುತ್ತಲೇ ಬಂದಿದ್ದರು, ಕೊನೆಗೆ ಅವರನ್ನು ಹತ್ಯೆಗೈಯುವಲ್ಲೂ ಸಫಲರಾದರು.

 ವ್ಯತಿರಿಕ್ತವಾದ ಹೇಳಿಕೆಗಳ ಹೊರತಾಗಿಯೂ ಇತ್ತೀಚೆಗೆ ಪ್ರಕಟವಾದ ‘ಗಾಂಧೀಜಿ’ಸ್ ಅಸಾಸಿನ್’ ಕೃತಿಯಲ್ಲಿ ಧಿರೇಂದ್ರ ಕೆ. ಜಾ ಅವರು 1940ರ ದಶಕದುದ್ದಕ್ಕೂ ನಾಥೂರಾಮ್ ಗೋಡ್ಸೆ ಆರೆಸ್ಸೆಸ್ ಜೊತೆ ನಿಕಟವಾದ ನಂಟನ್ನು ಕಾಪಾಡಿಕೊಂಡು ಬಂದಿದ್ದ, 1948ರ ಜನವರಿ 30ರಂದು ಗಾಂಧೀಜಿಯವರನ್ನು ಕೊಲೆಗೈಯುವವರೆಗೆ ಆತನಿಗೆ ಆರೆಸ್ಸೆಸ್ ಜೊತೆ ಒಡನಾಟವಿತ್ತು ಎಂಬುದಕ್ಕೆ ಬಲವಾದ ಪುರಾವೆಗಳನ್ನು ನೀಡಿದ್ದಾರೆ. ಗೋಡ್ಸೆಯ ಹಾಗೆ ಆರೆಸ್ಸೆಸ್ ಕೂಡಾ ಹಿಂದೂಗಳು ದೇಶದ ಸಾಂಸ್ಕೃತಿಕ ಹಾಗೂ ರಾಜಕೀಯ ಬದುಕಿನಲ್ಲಿ ಉನ್ನತವಾದ ಹಕ್ಕನ್ನು ಹೊಂದಿದ್ದಾರೆ ಎಂದು ನಂಬಿದೆ ಮತ್ತು ಈಗಲೂ ಹಾಗೆಂದು ನಂಬುತ್ತಿದೆ. ಮುಸ್ಲಿಮರು ಹಾಗೂ ಕ್ರೈಸ್ತರಿಗಿಂತ ಹಿಂದೂಗಳು ಅದೇಕೋ ಹೆಚ್ಚು ಸಹಜವಾಗಿ ಹಾಗೂ ಹೆಚ್ಚು ಅಗತ್ಯವುಳ್ಳ ಭಾರತೀಯರಾಗಿದ್ದಾರೆ ಎಂಬ ಕಲ್ಪನೆಯೊಂದಿಗೆ ಅದು ಚಿಂತಿಸುತ್ತಿದೆ ಹಾಗೂ ಕೆಲಸ ಮಾಡುತ್ತಿದೆ. ಆರೆಸ್ಸೆಸ್ ಹಾಗೂ ಅದರ ಸಹ ಸಂಘಟನೆಗಳು ಗಾಂಧೀಜಿಯ ಜೊತೆ ಭಿನ್ನಾಭಿಪ್ರಾಯವನ್ನು ಹೊಂದಿದ್ದಾರೆಂಬುದನ್ನು ಕೆಳಗಿನ ಪ್ಯಾರಾಗಳು ತೋರಿಸುತ್ತವೆ.

ಭಾರತದ ಮೇಲೆ ಹಿಂದೂಗಳು ವಿಶೇಷವಾದ ಹಕ್ಕನ್ನು ಹೊಂದಿದ್ದಾರೆಂದು ಭಾವಿಸುವ ಆರೆಸ್ಸೆಸ್ ಧೋರಣೆಗೆ ವ್ಯತಿರಿಕ್ತವಾಗಿ ದೇಶದ ಮೇಲೆ ಎಲ್ಲಾ ಧರ್ಮಗಳ ಜನರಿಗೆ ಸಮಾನವಾದ ಹಕ್ಕಿದೆ ಎಂದು ಗಾಂಧೀಜಿಯವರು ನಂಬಿದ್ದರು. ಗಾಂಧೀಜಿಯವರ ನೈತಿಕ ದೂರದೃಷ್ಟಿ ಹಾಗೂ ಅವರ ರಾಜಕೀಯ ಆಚರಣೆಯು ಎಲ್ಲರನ್ನೂ ಒಳಗೊಂಡ ಭಾರತದ ಪರಿಕಲ್ಪನೆಯನ್ನು ಹೊಂದಿತ್ತು. ಈ ನಿಟ್ಟಿನಲ್ಲಿ ಅವರ ಪಕ್ಷದ ರಚನಾತ್ಮಕ ಕಾರ್ಯಕ್ರಮದ ಕುರಿತಾಗಿ 1945ರಲ್ಲಿ ಪ್ರಕಟಿಸಿದ ಮಹತ್ವದ ಕಿರುಹೊತ್ತಗೆಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಈ ಯೋಜನೆಯ ಮೊದಲ ಅಂಶವೆಂದರೆ ಕೋಮು ಸೌಹಾರ್ದವಾಗಿದೆ. ಅಸ್ಪಶ್ಯತೆಯ ರದ್ದತಿ, ಖಾದಿಗೆ ಉತ್ತೇಜನ, ಮಹಿಳೆಯರ ಸಬಲೀಕರಣ ಹಾಗೂ ಆರ್ಥಿಕ ಸಮಾನತೆಯ ಹಂಬಲ (ಈ ವಿಷಯಗಳೆಲ್ಲವೂ ಅವರಿಗೆ ಅತ್ಯಂತ ಆಪ್ತವಾಗಿದ್ದವು). ಕಿರುಹೊತ್ತಗೆಯ ನಿರ್ಣಾಯಕವಾದ ಪೀಠಿಕೆ ವಿಭಾಗದಲ್ಲಿ ಗಾಂಧೀಜಿಯವರು, ಕೋಮು ಸೌಹಾರ್ದವನ್ನು ಸಾಧಿಸುವಲ್ಲಿ ಅತ್ಯಂತ ಅಗತ್ಯದ ವಿಷಯವೇನೆಂದರೆ ಪ್ರತಿಯೊಬ್ಬ ಕಾಂಗ್ರೆಸಿಗನೂ, ಆತ ಯಾವುದೇ ಧರ್ಮದವನಾಗಿರಲಿ, ಆತನು ವ್ಯಕ್ತಿಗತವಾಗಿ ಹಿಂದೂ, ಮುಸ್ಲಿಂ, ಕ್ರೈಸ್ತ, ರೆರಾಸ್ಟ್ರಿಯನ್, ಯೆಹೂದಿ ಇತ್ಯಾದಿ ಧರ್ಮಗಳನ್ನು, ಚಿಕ್ಕದಾಗಿ ಹೇಳುವುದಾದರೆ ಹಿಂದೂಗಳನ್ನು ಹಾಗೂ ಹಿಂದೂಯೇತರರನ್ನು ಪ್ರತಿನಿಧಿಸಬೇಕಾಗಿದೆ. ಭಾರತದಲ್ಲಿ ವಾಸಿಸುವ ಕೋಟ್ಯಂತರ ಜನರಲ್ಲಿ ಪ್ರತಿಯೊಬ್ಬನೊಂದಿಗೆ ಆತ ತನ್ನನ್ನು ಗುರುತಿಸಿಕೊಳ್ಳಬೇಕಾಗಿದೆ. ಇದನ್ನು ಸಾಕಾರಗೊಳಿಸುವುದಕ್ಕಾಗಿ ಪ್ರತಿಯೊಬ್ಬ ಕಾಂಗ್ರೆಸಿಗನೂ ವೈಯಕ್ತಿಕ ಸ್ನೇಹಪರತೆಯನ್ನು ಇತರ ಧರ್ಮಗಳನ್ನು ಪ್ರತಿನಿಧಿಸುವ ಜನರೊಂದಿಗೂ ಬೆಳೆಸಿಕೊಳ್ಳಬೇಕು. ಆತ ತನ್ನ ಧರ್ಮದ ಹಾಗೆ ಇತರ ಧರ್ಮಗಳ ಬಗೆಗೂ ಗೌರವಾದರಗಳನ್ನು ಹೊಂದಿರಬೇಕು (ಎಂ.ಕೆ. ಗಾಂಧಿ, ಕನ್‌ಸ್ಟ್ರಕ್ಟಿವ್ ಪ್ರೋಗ್ರಾಂ: ಇಟ್ಸ್ ಮೀನಿಂಗ್ ಆ್ಯಂಡ್ ಪ್ಲೇಸ್, ಅಹ್ಮದಾಬಾದ್, 1945, ಪುಟಗಳು 8-9).

ಎರಡು ವರ್ಷಗಳ ಆನಂತರ ಕಾಂಗ್ರೆಸ್ ಹಾಗೂ ಮಹಾತ್ಮಾಗಾಂಧಿ ಅವರು ಧರ್ಮದ ಆಧಾರದಲ್ಲಿ ಬ್ರಿಟಿಷ್ ಭಾರತವನ್ನು ವಿಭಜಿಸುವಲ್ಲಿ ವಿಫಲರಾದರು. ಆದಾಗ್ಯೂ ಖಿನ್ನತೆ ಹಾಗೂ ವಿಧಿವಾದಕ್ಕೆ ತುತ್ತಾಗುವ ಬದಲು ಅಥವಾ ಪ್ರತೀಕಾರದ ಭಾವನೆಗಳಿಗೆ ಶರಣಾಗುವ ಬದಲು ಗಾಂಧೀಜಿಯವರು ತನ್ನ ಎಲ್ಲಾ ಶಕ್ತಿಗಳನ್ನು ಬಳಸಿಕೊಂಡು ಭಾರತದಲ್ಲಿ ಉಳಿದುಕೊಂಡ ಎಲ್ಲಾ ಮುಸ್ಲಿಮರು ಸಮಾನ ಪೌರತ್ವದ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆಂದು ಭರವಸೆ ನೀಡಿದರು. ಕೋಮುಸೌಹಾರ್ದಕ್ಕಾಗಿ 1947ರ ಸೆಪ್ಟಂಬರ್‌ನಲ್ಲಿ ಕೋಲ್ಕತಾದಲ್ಲಿ ಹಾಗೂ 1948ರ ಜನವರಿಯಲ್ಲಿ ದಿಲ್ಲಿಯಲ್ಲಿ ಅವರು ನಡೆಸಿದ ಉಪವಾಸ ಸತ್ಯಾಗ್ರಹಗಳ ಬಗ್ಗೆ ವ್ಯಾಪಕವಾಗಿ ಬರೆಯಲಾಗಿದೆ. 1947ರ ನವೆಂಬರ್ 15ರಂದು ಭಾರತ ಕಾಂಗ್ರೆಸ್ ಸಮಿತಿಯಲ್ಲಿ ಅವರು ಮಾಡಿದ ಭಾಷಣವು ಹೆಚ್ಚು ಜನಪ್ರಿಯವಾಗಿಲ್ಲವಾದರೂ, ಮಹತ್ವದ್ದಾಗಿದೆ. ಅವರು ಹೀಗೆ ಹೇಳಿದ್ದರು.

‘‘ಕಾಂಗ್ರೆಸ್‌ನ ಮೂಲಭೂತ ಸ್ವರೂಪಕ್ಕೆ ಸತ್ಯನಿಷ್ಠವಾಗಿ ನೀವು ನಡೆದುಕೊಳ್ಳಬೇಕು ಹಾಗೂ ಹಿಂದೂಗಳು ಮತ್ತು ಮುಸ್ಲಿಮರನ್ನು ಒಂದುಗೂಡಿಸಬೇಕು. ಈ ಆದರ್ಶಕ್ಕಾಗಿ ಕಾಂಗ್ರೆಸ್ 60 ವರ್ಷಗಳಿಗೂ ಹೆಚ್ಚು ಸಮಯದಿಂದ ಶ್ರಮಿಸಿದೆ. ಈ ಆದರ್ಶಗಳು ಇನ್ನೂ ಮುಂದುವರಿದಿದೆ. ಹಿಂದೂಗಳ ಹಿತಾಸಕ್ತಿಗಾಗಿ ತಾನು ಕೆಲಸ ಮಾಡಿರುವುದಾಗಿ ಕಾಂಗ್ರೆಸ್ ಎಂದೂ ಪ್ರತಿಪಾದಿಸಿಲ್ಲ. ಕಾಂಗ್ರೆಸ್ ಜನ್ಮತಾಳಿದಾಗಿನಿಂದ ನಾವು ಏನೆಂದು ಪ್ರತಿಪಾದಿಸುತ್ತಾ ಬಂದಿದ್ದೇವೆಯೋ ಅದನ್ನು ನಾವು ಕೈಬಿಡಬೇಕೇ ಹಾಗೂ ವಿಭಿನ್ನವಾದ ರಾಗವನ್ನು ಹಾಡಬೇಕೇ?. ಕಾಂಗ್ರೆಸ್ ಭಾರತೀಯರದ್ದಾಗಿದೆ. ಹಿಂದೂಗಳಾಗಿರಲಿ, ಮುಸ್ಲಿಮರಾಗಿರಲಿ, ಕ್ರೈಸ್ತರಾಗಿರಲಿ, ಸಿಖ್ಖರು ಅಥವಾ ಪಾರ್ಸಿಗಳಾಗಿರಲಿ ಈ ದೇಶದಲ್ಲಿ ಯಾರೆಲ್ಲಾ ವಾಸಿಸುತ್ತಾರೋ ಅವರಿಗೆ ಸೇರಿದ್ದಾಗಿದೆ.’’ (ಕಲೆಕ್ಟಿವ್ ವರ್ಕ್ಸ್ ಆಫ್ ಮಹಾತ್ಮಾಗಾಂಧಿ, ಸಂಪುಟ 90, ಪುಟ 38).

 ಈ ನಂಬಿಕೆಯನ್ನು ಹಿಡಿದುಕೊಂಡೇ ಭಾರತವು ಹಿಂದೂ ಅಥವಾ ಮುಸ್ಲಿಂ ಅಥವಾ ಇವೆರಡು ಧರ್ಮಗಳಿಗೆ ಹೊರತಾದವರು ಸೇರಿದಂತೆ ಈ ನೆಲದಲ್ಲಿ ನೆಲೆಸಿರುವವರೆಲ್ಲರಿಗೂ ಸಮಾನವಾಗಿ ಸೇರಿದ್ದಾಗಿದೆ. ಗಾಂಧೀಜಿಯವರು ಹತ್ಯೆಯಾದ ಕೆಲವು ವಾರಗಳ ಬಳಿಕ ಅವರ ಅನುಯಾಯಿಗಳ ಗುಂಪೊಂದು ಮುಂದಿನ ಕಾರ್ಯತಂತ್ರಗಳ ಸೇವಾಗ್ರಾಮದಲ್ಲಿ ಸಭೆ ಸೇರಿದ್ದರು. ಆರೆಸ್ಸೆಸ್ ವಿಷಯವೂ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಗೋಡ್ಸೆ ಆರೆಸ್ಸೆಸ್‌ನ ಸದಸ್ಯನೆಂಬುದು ಕಾರಣವಲ್ಲ. ಆದರೆ ಆಗ ಆರೆಸ್ಸೆಸ್ ವರಿಷ್ಠರಾಗಿದ್ದ ಎಂ.ಎಸ್.ಗೋಳ್ವಾಲ್ಕರ್ ಅವರು ಗಾಂಧೀಜಿ ಹತ್ಯೆಗೆ ಕೆಲವು ಸಮಯ ಮುನ್ನ ಕೋಮುದ್ವೇಷದ ಭಾಷಣಗಳನ್ನು ಮಾಡಿದ್ದರು. 1948ರ ಮಾರ್ಚ್‌ನಲ್ಲಿ ಸೇವಾಗ್ರಾಮದಲ್ಲಿ ವಿನೋಭಾ ಭಾವೆ ಅವರು ಸಭೆಯಲ್ಲಿ ಭಾವುಕರಾಗಿ ಮಾತನಾಡಿದ್ದರು. ಮಹಾರಾಷ್ಟ್ರದ ಬ್ರಾಹ್ಮಣನಾದ ಅವರಿಗೆೆ ತನ್ನದೇ ಜಾತಿ ಬಾಂಧವರ ಪ್ರಾಬಲ್ಯವಿರುವ ಈ ಸಂಘಟನೆಯ ಬಗ್ಗೆ ಗಾಢವಾದ ಅಪನಂಬಿಕೆ ಸೃಷ್ಟಿಯಾಗಿತ್ತು. ‘‘ಆರೆಸ್ಸೆಸ್ ಅತ್ಯಂತ ನೈಪುಣ್ಯತೆಯೊಂದಿಗೆ ದೇಶದ ಉದ್ದಗಲಕ್ಕೂ ಹರಡಿಕೊಂಡಿದೆ ಹಾಗೂ ಅದರ ಬೇರುಗಳು ಆಳಕ್ಕಿಳಿದಿವೆ. ಅವೆಲ್ಲವೂ ಸಂಪೂರ್ಣವಾಗಿ ಫ್ಯಾಶಿಸ್ಟ್ ರೂಪದ್ದಾಗಿವೆ. ಈ ಸಂಘಟನೆಯ ಕೆಲವು ಸದಸ್ಯರು ಇತರರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ, ಸತ್ಯವೇ ಗಾಂಧೀಜಿಯವರ ತತ್ವವಾಗಿತ್ತು. ಆದರೆ ಈ ಜನರಿಗೆ ಅಸತ್ಯವೇ ಆಗಿರುವಂತೆ ಭಾಸವಾಗುತ್ತಿದೆ. ಈ ಅಸತ್ಯವು ಅವರ ತಂತ್ರಗಾರಿಕೆ ಹಾಗೂ ತತ್ವಜ್ಞಾನದಲ್ಲಿ ಅವಿಭಾಜ್ಯವಾಗಿ ಬೆಸೆದುಕೊಂಡಿದೆ’’ ಎಂದು ವಿನೋಭಾ ಭಾವೆ ಹೇಳಿದ್ದರು.
 ಗಾಂಧಿ ನೇತೃತ್ವದ ರಾಷ್ಟ್ರೀಯ ಚಳವಳಿ ಹಾಗೂ ಹಿಂದುತ್ವದ ಪ್ರತಿಪಾದಕರ ನಡುವೆ ಭಾರೀ ಅಂತರವಿರುವುದನ್ನು ವಿನೋಬಾ ಭಾವೆ ವಿವರಿಸುತ್ತಾರೆ. ‘‘ಆರೆಸ್ಸೆಸ್ ಕಾರ್ಯವಿಧಾನವು ಯಾವತ್ತೂ ನಮಗೆ ವಿರುದ್ಧವಾದುದಾಗಿದೆ. ಎಲ್ಲೆಲ್ಲಿ ಹಿಂದೂ-ಮುಸ್ಲಿಂ ದಂಗೆ ಸಂಭವಿಸುವ ಸಾಧ್ಯತೆಯಿರುತ್ತದೆಯೋ ಅಲ್ಲಿಗೆ ಅವರು ಕ್ಷಿಪ್ರವಾಗಿ ದೌಡಾಯಿಸುತ್ತಾರೆ. ಆಗಿನ ಬ್ರಿಟಿಷ್ ಸರಕಾರವು ಇವೆಲ್ಲವನ್ನೂ ತನ್ನ ಲಾಭಕ್ಕೆ ಬಳಸಿಕೊಂಡಿತು ಮತ್ತು ಅವರಿಗೆ ಉತ್ತೇಜನ ನೀಡಿದೆ ಹಾಗೂ ಈಗ ನಾವು ಇದರ ಪರಿಣಾಮವನ್ನು ನಿಭಾಯಿಸಬೇಕಾಗಿದೆ.’’

(ಶ್ರೀ ಗೋಪಾಲಕೃಷ್ಣ ಗಾಂಧಿ, ಸಂಪಾದಕರು, ‘ಗಾಂಧಿ ಇಸ್ ಗಾನ್, ಹೂ ವಿಲ್ ಗೈಡ್ ಅಸ್ ನೌ? ಪರ್ಮನೆಂಟ್ ಬ್ಲಾಕ್, ಪುಟ-88-90)

  ಆರೆಸ್ಸೆಸನ್ನು ನಿಕಟವಾಗಿ ಅಧ್ಯಯನ ಮಾಡಿದ ಗಾಂಧೀಜಿಯವರ ಇತರ ಅನುಯಾಯಿಗಳು, ಈ ಬಗ್ಗೆ ವಿನೋಬಾ ಭಾವೆಯವರ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ‘ಹರಿಜನ’ ಪತ್ರಿಕೆಯ 1948 ಡಿಸೆಂಬರ್ 19ರ ಸಂಚಿಕೆಯಲ್ಲಿ ಭಾವೆಯವರಂತೆ ಗಾಂಧೀಜಿಯ ಆಪ್ತ ವಲಯದ ದೀರ್ಘಕಾಲದ ಸದಸ್ಯ ಹಾಗೂ ವಿದ್ವಾಂಸ ಕೆ.ಜಿ.ಮಶ್ರೂವಾಲಾ ಅವರು ಬರೆದಿರುವ ಲೇಖನದಲ್ಲಿ ಆರೆಸ್ಸೆಸ್ ಬಗ್ಗೆ ಪೂರ್ವಾಗ್ರಹಗಳನ್ನು ಹೊಂದಿದ್ದರು. ಆದರೆ ನನ್ನ ಈ ತಪ್ಪುಕಲ್ಪನೆಗಳು ಈಗ ಒಂದೇ ಹೊತ್ತಿನಲ್ಲಿ ಬಲಪಡೆದುಕೊಂಡಿವೆ. ಮಶ್ರೂವಾಲಾ ಅವರು ಮರಾಠಿ ಸಾಹಿತ್ಯದ ಹಾಗೂ ಆರೆಸ್ಸೆಸ್ ಬಗ್ಗೆ ಅಧ್ಯಯನ ನಡೆಸಿದ್ದರು. ‘ಹಿಂದುತ್ವದ ಬಗ್ಗೆ ಪ್ರೀತಿ ಹಾಗೂ ಇತರರ ಬಗ್ಗೆ ಬದ್ಧ ದ್ವೇಷವೇ ಆರೆಸ್ಸೆಸ್‌ನ ಘೋಷವಾಕ್ಯವಾಗಿದೆ’ಯೆಂಬುದು ಮಶ್ರೂವಾಲಾ ಅವರ ಲೇಖನಗಳನ್ನು ಓದಿದಾಗ ಅರಿವಾಗುತ್ತದೆ.
ಮುಸ್ಲಿಮರ ಬಗ್ಗೆ ಬದ್ಧದ್ವೇಷ ಹಾಗೂ ಅವರನ್ನು ಮೆಚ್ಚದಿರುವುದು ಆರೆಸ್ಸೆಸ್‌ನ ಪ್ರಮುಖ ನಿಲುವಾಗಿದೆಯೆಂಬುದನ್ನು ಆರೆಸ್ಸೆಸ್‌ನ ಅತ್ಯಂತ ದೀರ್ಘಕಾಲದ ಸರಸಂಘಚಾಲಕರಾದ ಎಂ.ಎಸ್.ಗೋಳ್ವಾಲ್ಕರ್ ಅವರ ಬರಹಗಳಿಂದ ವ್ಯಕ್ತವಾಗುತ್ತದೆಯೆಂದು ಮಶ್ರೂವಾಲಾ ಹೇಳುತ್ತಾರೆ.

ಆರೆಸ್ಸೆಸ್‌ನ ಹಾಲಿ ವರಿಷ್ಠ ಮೋಹನ್ ಭಾಗವತ್ ಅವರು ತನ್ನ ಪೂರ್ವಾಧಿಕಾರಿಗಳಿಗಿಂತ ಕಡಿಮೆ ವಿವಾದಿತ ವ್ಯಕ್ತಿಯಾಗಿದ್ದಾರೆ. ಆದರೆ ಹಿಂದುತ್ವದ ಶ್ರೇಷ್ಠತಾವಾದ ಸಿದ್ಧಾಂತವನ್ನು ಅವರು ಕೂಡಾ ಅಪ್ಪಿಕೊಳ್ಳುತ್ತಾರೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. (ಇತ್ತೀಚೆಗೆ ಹರಿದ್ವಾರದಲ್ಲಿ ನಡೆದ ಸಮಾವೇಶವೊಂದರಲ್ಲಿ ನಡೆದ ದ್ವೇಷ ಭಾಷಣದ ಬಗ್ಗೆ ಅವರು ತಾಳಿರುವ ವೌನ ಇದಕ್ಕೆ ಸಾಕ್ಷಿಯಾಗಿದೆ).
 1948ರಂತೆ 2022ರಲ್ಲಿಯೂ ಅಲ್ಪಸಂಖ್ಯಾತ ವಿರೋಧಿ ಕೇಸರಿ ಸಿದ್ಧಾಂತ ಹಾಗೂ ಗಾಂಧೀಜಿಯವರ ಎಲ್ಲರನ್ನೂ ಒಳಗೊಂಡ ಹಾಗೂ ಬಹುತ್ವವಾದಿ ಸಿದ್ಧಾಂತದ ನಡುವೆ ಅಗಾಧವಾದ ಅಂತರವಿದೆ. ಆಗಿನಂತೆ ಈಗ ಕೂಡಾ ಭಾರತೀಯರು ಎರಡರಲ್ಲಿ ಒಂದನ್ನು ಆಯ್ದುಕೊಳ್ಳಬೇಕಿದೆ. ಭಾರತದ ಗಣರಾಜ್ಯದ ಭವಿಷ್ಯವು ನಾವು ಎಷ್ಟು ಬುದ್ಧಿವಂತರು ಹಾಗೂ ಶೂರರು ಎಂಬುದನ್ನು ಅವಲಂಬಿಸಿದೆ.

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News

ಸಂವಿಧಾನ -75