ಸರಕಾರದ ವಿವಿಧ ಯೋಜನೆಗಳು ಅರ್ಹರಿಗೆ ಸಿಗುವಂತಾಗಬೇಕು: ಸಚಿವ ಸುನೀಲ್‌ ಕುಮಾರ್

Update: 2022-01-29 15:14 GMT

ಕಾರ್ಕಳ: ಸರಕಾರದ ವಿವಿಧ ಯೋಜನೆಗಳು ತಳಹಂತದಲ್ಲಿ ಕ್ಲಪ್ತ ಸಮಯದಲ್ಲಿ ಅರ್ಹರಿಗೆ ಸಿಗುವಂತಾಗಬೇಕು. ಜನರನ್ನು ಸತಾಯಿಸುವುದು ತರವಲ್ಲ. ಯೋಜನೆಯ ಕಾರ್ಯರೂಪವು ಸುತ್ತೋಲೆಯಲ್ಲಿ ಸುತ್ತಿಕೊಳ್ಳದೇ ಸಾಮಾಜ್ಯ ಕನಿಷ್ಠ ಜ್ಞಾನ ಹೊಂದಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಯೋಜನೆಗಳು ಜನಸಾಮಾನ್ಯರ ನೆರವಿಗಾಗಿಯೇ ಇರುತ್ತದೆ. ಯೋಜನೆಯನ್ನು ಫಲಾನುಭವಿಗಳಿಗೆ ಹೆಚ್ಚು ಹೆಚ್ಚಾಗಿ ತಲುಪಿಸುವ ಸಂದರ್ಭದಲ್ಲಿ ಎದುರಾಗುವ ತೊಡಕುಗಳನ್ನು ನನ್ನ ಗಮನಕ್ಕೆ ತನ್ನಿ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್‌ ಕುಮಾರ್ ಹೇಳಿದರು. 

ಕಾರ್ಕಳ, ಹೆಬ್ರಿ ತಾಲೂಕಿನ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಕಾರ್ಕಳ ತಾಲೂಕಿನ ಜನಮಾನಸದಲ್ಲಿ ಉಳಿಯುವಂತಹ ಯೋಜನೆಗಳನ್ನು ಜಾರಿಗೊಳಿಸುವ ಪ್ರಯತ್ನ ತಮ್ಮಲ್ಲೂ ಇರಬೇಕು. ಇಂಧನ ಇಲಾಖೆಯಿಂದ ಈಗಾಗಲೇ ವಿಭಾಗೀಯ ಕಚೇರಿ, ಉಪವಿಭಾಗಗಳ ಸ್ಥಾಪನೆ, ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ರೂ.110 ಕೋಟಿ ಅನುದಾನ ಕ್ಷೇತ್ರಕ್ಕೆ ಬಂದಿದೆ. ಉಳಿದೆಲ್ಲ ಇಲಾಖೆಗಳಿಂದಲೂ ಇಂತಹದೇ ಯೋಜನೆಗಳು ತರುವಲ್ಲಿ ಪ್ರಯತ್ನಕ್ಕೆ ಇಲಾಖಾಧಿಕಾರಿಗಳ ಸಹಕಾರ ಬಯಸಿದರು.

ಜಲಜೀವನ್ ವಿಷನ್ ಯೋಜನೆ ಶೀಫ್ರದಲ್ಲಿ ಕಾರ್ಯಗತಗೊಳ್ಳಬೇಕು. ಎಲ್ಲ ಯೋಜನೆಗಳನ್ನು ಎಲ್ಲರಿಗೂ ತಲುಪಿಸಿದಾಗ ಅದರಲ್ಲಿ ಪ್ರಗತಿ ಸಾಧ್ಯ ಎಂದು ಅವರು ಹೇಳಿದರು.

ಜಲಜೀವನ್ ವಿಷನ್ ಕುರಿತು ಇಲಾಖಾಧಿಕಾರಿ ಸಭೆಯಲ್ಲಿ ಅಂಕಿಅಂಶ ನೀಡುವಲ್ಲಿ ತಡವರಿಸಿದ್ದಕ್ಕೆ ಸಚಿವ ಸುನೀಲ್‌ ಕುಮಾರ್ ಗರಂ ಆದರು. 
ಇಲಾಖೆಯ ಕಾರ್ಯವೈಖರಿಯ ಕುರಿತು ಅಸಾಮಾಧಾನ ಮಾತುಗಳನ್ನು ವ್ಯಕ್ತಪಡಿಸಿದ ಸಚಿವ, ಯೋಜನೆಗಳನ್ನು ಕ್ಷೇತ್ರಕ್ಕೆ ಅನುಷ್ಠಾನಗೊಳಿಸುವ ಹೊಣೆಗಾರಿಕೆ ಜನಪ್ರತಿನಿಧಿಯದ್ದಾಗಿರುತ್ತದೆ. ಕಾಮಗಾರಿಯ ಪ್ರಗತಿಗೆ ಇಲಾಖಾಧಿಕಾರಿಗಳು ಪ್ರಮುಖರಾಗಿದ್ದು, ಕಾಮಗಾರಿಯನ್ನು ಪರಿಶೀಲನೆ ನಡೆಸಬೇಕು. ಅದನ್ನು ಮಾಡದೇ ಫ್ಯಾನ್‌ನ ತಳಭಾಗದಲ್ಲಿ ಕುಳಿತು, ಅದ್ಯಾವುದೋ ಲೆಕ್ಕಚಾರವನ್ನು ಬರೆದು ಸಭೆಯಲ್ಲಿ ಮಂಡಿಸಿ ಅಪಹಾಸ್ಯಕ್ಕೆ ಒಳಗಾಗದಿರಿ. ನಿಷ್ಠೆ, ಪ್ರಮಾಣಿಕತೆಯಿಂದ ದುಡಿದು ಪ್ರಶಂಸೆಗೆ ಒಳಗಾಗಿ ಎಂದರು. 

ಡೀಮ್ಡ್ ಅರಣ್ಯ ಮಾಹಿತಿ

ಅವಿಭಜಿತ ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 48,923 ಹೆಕ್ಟೇರ್ ಪ್ರದೇಶವು  ಡೀಮ್ಡ್ ಅರಣ್ಯ ಪ್ರದೇಶವೆಂದು ಗುರುತಿಸಲಾಗಿದ್ದು, ಅದರಲ್ಲಿ 20,806 ಹೆಕ್ಟೇರ್ ಪ್ರದೇಶವನ್ನು ಕೈಬಿಡಲು ತೀರ್ಮಾನಿಸಲಾಗಿದೆ ಎಂಬ ವಿಚಾರವನ್ನು ಹೆಬ್ರಿ, ಕಾರ್ಕಳ, ಮೂಡಬಿದಿರೆ ಅರಣ್ಯ ಇಲಾಖಾಧಿಕಾರಿಗಳು ಸಭೆಯ ಗಮನಕ್ಕೆ ತಂದರು. 

ಇದನ್ನು ಉಲ್ಲೇಖಿಸಿದ ಸಚಿವರು, ಜನವಸತಿ ಪ್ರದೇಶಕ್ಕೆ ಅನುವು ಆಗುವಂತೆ ಪ್ರತಿ ಸಣ್ಣ ಗ್ರಾಮದಲ್ಲಿ 5 ಎಕರೆ ಪ್ರದೇಶ ಹಾಗೂ ದೊಡ್ಡ ಗ್ರಾಮ ಪಂಚಾಯತ್‌ಗಳಲ್ಲಿ 10 ಎಕರೆ ಪ್ರದೇಶವನ್ನು ಕಾದಿರಿಸಬೇಕು. ಗ್ರಾಮಕ್ಕೊಂದು 1 ಎಕರೆ ಭೂಮಿಯನ್ನು ಸ್ಮಶಾನಕ್ಕೆ ಮೀಸಲಿಡಬೇಕು. ಅದರಲ್ಲಿ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಒಳಪಟ್ಟರೆ ಅದನ್ನು ಉಲ್ಲೇಖಿಸಿ ಪತ್ರ ವ್ಯವಹರಿಸಬೇಕೆಂದು ಸಲಹೆ ನೀಡಿದರು. ಕಲ್ಯಾದಲ್ಲಿ ಹಾಗೂ ಶಿವಪುರ ಗ್ರಾಮಗಳಲ್ಲಿ ಸ್ಮಶಾನ ಇಲ್ಲದಿರುವ ಕುರಿತು ಮಾಹಿತಿ ಇದೆ ಎಂದರು. 

ಪಶ್ಚಿಮವಾಹಿತಿ ಯೋಜನೆಯಡಿ ಹೆಬ್ರಿ, ಕಾರ್ಕಳ ತಾಲೂಕುಗಳಲ್ಲಿ ಹಲವು ಕಿಂಡಿಅಣೆಕಟ್ಟು ನಿರ್ಮಿಸಲಾಗಿದೆ. 8 ಕಿಂಡಿಅಣೆಕಟ್ಟು ನಿರ್ಮಾಣದ ಕಾಮಗಾರಿ ಬಾಕಿ ಉಳಿದಿದೆ. ಈಗಾಗಲೇ 76 ಕಿಂಡಿಅಣೆಕಟ್ಟಿಗೆ ಹಲಗೆ ಅಳವಡಿಕೆ ಪೂರ್ಣಗೊಂಡಿದೆ. ಇದರಿಂದ ಅಂತರ್‌ಜಲ ವೃದ್ಧಿಯಾಗಿರುವ ಪ್ರಮಾಣ ಎಷ್ಟೆಂದು ಮಾಹಿತಿ ಅಧಿಕಾರಿಗಳಲ್ಲಿ ಸಚಿವರು ಪ್ರಶ್ನಿಸಿದರು. 

ಕೆರೆಗಳ ಅಭಿವೃದ್ಧಿಗೆ ತಲಾ ರೂ.1 ಕೋಟಿ
ಎರಡು ತಾಲೂಕುಗಳಲ್ಲಿ ಐದು ಕರೆಗಳ ಅಭಿವೃದ್ಧಿಗೆ ಒಟ್ಟು ರೂ.1 ಕೋಟಿ ಅನುದಾನ ಬಿಡುಗಡೆಗೊಂಡಿದೆ. ಸಾರ್ವಜನಿಕರ, ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೆರೆಗಳ ಅಭಿವೃದ್ಧಿ ಕಾಮಗಾರಿಗಳು ನಡೆಸಬೇಕು. ಆ ಮೂಲಕ ಜನಜಾಗೃತಿ ಮೂಡಲು ಕಾರಣವಾಗುತ್ತದೆ. ಸರಕಾರದ ಅನುದಾನವನ್ನೇ ನಿರೀಕ್ಷಿಸಬಾರದೆಂದು ಸಚಿವರು ತಿಳಿಸಿದರು. 

15-18 ವರ್ಷದೊಳಗಿನವರಿಗೆ ನೀಡಿರುವ ಕೋವಿಡ್ ಲಸಿಕೆ ಪ್ರಮಾಣ ಶೇ.97 ರಷ್ಟಾಗಿದೆ ಎಂದು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಮಾಹಿತಿ ನೀಡಿದರು.
ಸರಕಾರಿ ನರ್ಸಿಂಗ್ ಕಾಲೇಜಿಗಾಗಿ ಕುಕ್ಕುಂದೂರು ಗ್ರಾಮದಲ್ಲಿ ಭೂಮಿಯನ್ನು ಗುರುತಿಸಲಾಗಿದೆ. ಯಕ್ಷರಂಗಾಯಣ ಕೇಂದ್ರ ಸ್ಥಾಪನೆಗೆ ಕೋಟಿಚೆನ್ನಯ್ಯ ಹಾಗೂ ತೋಟಗಾರಿಕೆ ಪಕ್ಕದಲ್ಲಿ ಎರಡು ಎಕರೆ ಪ್ರದೇಶವನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ತಹಶೀಲ್ದಾರ್ ಪುರಂದರ ತಿಳಿಸಿದರು.

ಬಜಗೋಳಿ ವಿದ್ಯುತ್ ಕೇಂದ್ರ ಸ್ಥಾಪನೆಗೊಳ್ಳುವುದರಿಂದ ಬಜಗೋಳಿ, ಹೊಸ್ಮಾರು, ಈದು ಪ್ರದೇಶಗಳಲ್ಲಿ ಕಂಡುಬರುತ್ತಿದ್ದ ಹಲವುಗಳಿಂದ ಕಾಡುತ್ತಿರುವ ವಿದ್ಯುತ್ ಲೋವೋಲ್ಟೇಜ್ ಸಮಸ್ಸೆಗೆ ಶೀಘ್ರದಲ್ಲಿ ಪರಿಹಾರ ದೊರಕಲಿದೆ ಎಂದು ಮೆಸ್ಕಾಂ ಕಾರ್ಕಳ ವಿಭಾಗದ ಕಾರ್ಯನಿರ್ವಹಕ ಅಭಿಯಂತರರು ಹೇಳಿದರು.

ಹೆಬ್ರಿ ತಾಲೂಕು ತಹಶೀಲ್ದಾರ್ ಹಾಗೂ ಕಾರ್ಕಳ ಪ್ರಭಾರ ತಹಶೀಲ್ದಾರ್ ಪುರಂದರ ಕೆ, ತಾಲೂಕು ಆಡಳಿತಾಧಿಕಾರಿ ಪ್ರಸನ್ನ, ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News