ಪರದೋಷ

Update: 2022-01-29 19:30 GMT

ಅವರಿಬ್ಬರೂ ಸಹೋದರರು. ತಮ್ಮ ಅಂದು ಶಾಲೆಯಿಂದ ಮರಳಿ ಬರುವಾಗ ಆಟ ಆಡಿಕೊಂಡು ತಡವಾಗಿ ಮನೆಗೆ ಬಂದ. ಯಾಕೆ ತಡ ಎಂದು ತಾಯಿ ಗದರಿದರು. ತಮ್ಮ ಅಣ್ಣ ಅವತ್ತು ತಡವಾಗಿ ಬರಲಿಲ್ಲವಾ? ಅವನು ಮಾತ್ರ ತಡ ಮಾಡಬಹುದಾ? ನಾನು ತಡ ಮಾಡಿದರೆ ಮಾತ್ರ ತಪ್ಪಾ? ನೀನು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದಕ್ಕೆ ಸುಣ್ಣ ಹಾಕ್ತೀಯಾ!

ಅಮ್ಮ ಏನೋ ವಿವರಣೆ ಕೊಡಲು ಹೋದರೂ ಅವನು ಕೇಳಿಸಿಕೊಳ್ಳಲು ಸಿದ್ಧನಿಲ್ಲ. ಏಕೆಂದರೆ ಅವನಿಗೊಂದು ಸಮಸ್ಯೆ ಇದೆ. ಅದೇನೆಂದರೆ ಹೈಲಿ ಸೆನ್ಸಿಟಿವ್ ಪರ್ಸನ್ ಅಂತ ಒಂದು ಡಿಸಾರ್ಡರ್. ಈ ಬಗೆಯ ಜನರಿಗೆ ಯಾವುದೇ ರೀತಿಯ ವಿಮರ್ಶೆಯನ್ನು ಅದೆಷ್ಟೇ ಮೃದುವಾಗಿ, ಮಧುರವಾಗಿ ಮೆಲುದನಿಯಲ್ಲಿ ಉಸುರಿದರೂ ಅದನ್ನು ತಮ್ಮ ಮೇಲೆ ಮಾಡುತ್ತಿರುವ ಆರೋಪವೆಂದೇ ಪರಿಗಣಿಸುತ್ತಾರೆ. ತಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಗುರಿ ಮಾಡುತ್ತಿದ್ದಾರೆ ಎಂದೇ ಭಾವಿಸುತ್ತಾರೆ. ಇನ್ನು ಇದರ ಜೊತೆಗೆ ತಾನು ದೋಷಿತ ಎಂದು ಯಾವಾಗಲಾದರೂ ಯಾರಿಂದಾದರೂ ಗುರುತಿಸುವ ಸಂದರ್ಭ ಬಂದರೆ ಕೂಡಲೇ ಇತರರನ್ನು ದೂಷಿಸಲೂ ಆರಂಭಿಸುತ್ತಾರೆ. ಇದು ಅಹಂಕಾರದ ಒಂದು ಕುಶಲ ತಂತ್ರ. ತನ್ನ ಅಹಮಿಕೆಯ ಉದ್ದೇಶವನ್ನು ಪೂರೈಸಿಕೊಳ್ಳುವುದು ಬಿಟ್ಟರೆ ಇನ್ನೇನೂ ಇಲ್ಲ. ಇತರರು ಅದೇ ರೀತಿಯ ತಪ್ಪುಮಾಡುವಾಗ ತನ್ನದೇನೂ ತಪ್ಪುಅಲ್ಲ! ನಾನೊಬ್ಬನೇ ಅಲ್ಲ ಅದನ್ನು ಮಾಡುತ್ತಿರುವುದು! ಅವನ ತಪ್ಪುಅಷ್ಟು ದೊಡ್ಡ ಪ್ರಮಾಣದಲ್ಲಿರುವಾಗ ತನ್ನ ತಪ್ಪನ್ನು ತಪ್ಪಾಗಿ ನೋಡುವಷ್ಟೇ ಇಲ್ಲ. ತನ್ನ ತಪ್ಪು ಅವನದಕ್ಕಿಂತ ಘೋರವೇನೂ ಅಲ್ಲದ ಕಾರಣದಿಂದ ತಾನು ಉತ್ತಮನೇ ಆಗಿದ್ದೇನೆ ಎನ್ನುವುದೊಂದು ಅಪರಾಧ ಪ್ರಜ್ಞೆಯನ್ನು ಹೊಂದಿಲ್ಲದೇ ಇರುವುದಕ್ಕೆ ಅಹಂಕಾರ ಚಾಲಾಕಿತನ ತೋರುತ್ತದೆ. ಅದೆಷ್ಟು ಗಟ್ಟಿಗೊಳ್ಳುತ್ತಾ ಹೋಗುತ್ತದೆ ಎಂದರೆ, ತಮ್ಮ ಉತ್ತಮತೆಯನ್ನು ಇತರರ ಅಧಮತೆಯ ಮೇಲೆಯೇ ಅವಲಂಬಿಕೊಂಡಿರುವಷ್ಟು.

ಇಷ್ಟೇ ವಿಷಯ, ತನ್ನಲ್ಲಿ ದೋಷವಿಲ್ಲ ಎಂದು ತನಗೆ ಮನವರಿಕೆ ಮಾಡಿಕೊಳ್ಳಲು ಇತರರ ದೋಷಗಳನ್ನು ಹುಡುಕುತ್ತಿರುವುದು! ಈ ರೂಢಿ ವ್ಯಕ್ತಿಯನ್ನು ತನ್ನಲ್ಲಿರುವ ದೋಷ ಮತ್ತು ಇತಿಮಿತಿಗಳನ್ನು ಗುರುತಿಸಿಕೊಳ್ಳದೇ ಇರುವಷ್ಟು ಸೋಮಾರಿಯನ್ನಾಗಿಸುತ್ತದೆ. ಇತರರು ತಾನು ಸಾಧಾರಣ ಅಥವಾ ಸಹಜ ಎಂದುಕೊಳ್ಳುವ ತನ್ನ ಗುಣಗಳನ್ನು ವಿಮರ್ಶಿಸಿದರೆ ಕನಲಿ, ಅತ್ಯುಗ್ರನಾಗಿ ಅಹಂಕಾರದ ಉನ್ಮತ್ತತೆಯಿಂದ ವಿಮರ್ಶಿಸಿದವರನ್ನು ಖಂಡಿಸುತ್ತಾ, ಅವರ ಗುಣದೋಷಗಳನ್ನು ಗುರುತಿಸುತ್ತಾ, ಅವರನ್ನು ಬರೀ ತಿರಸ್ಕರಿಸುವುದು ಮಾತ್ರವಲ್ಲ ದ್ವೇಷಿಸಲೂ ಪ್ರಾರಂಭಿಸುತ್ತಾನೆ. ಇನ್ನೂ ಕೆಲವು ಸಲ ವ್ಯಕ್ತಿಗಳು ಇತರರನ್ನು ತಮ್ಮ ಅಧೀನದಲ್ಲಿಟ್ಟುಕೊಳ್ಳಲು ತಮ್ಮಲ್ಲಿ ಸರಿಯಾದ ಸಾಮರ್ಥ್ಯವಿಲ್ಲವೆಂಬ ಕೀಳರಿಮೆ ಇದ್ದಾಗಲೂ ಇತರರ ದೋಷಗಳನ್ನು ಗುರುತಿಸಿ, ಅವರನ್ನು ಖಂಡಿಸುವ ಮೂಲಕ ತಮ್ಮ ಅಹಂಕಾರವನ್ನು ತೃಪ್ತಿಗೊಳಿಸಿಕೊಳ್ಳುವಂತಹ ಗುಪ್ತತಂತ್ರ ಕೆಲಸಕ್ಕೆ ತೊಡಗುತ್ತಾರೆ. ಇದು ಬಾಲ್ಯದಿಂದಲೂ ರೂಢಿಯಾಗಿ ಬಂದು ದೊಡ್ಡವರಾದ ಮೇಲೂ ಮುಂದುವರಿಸುತ್ತಾರೆ. ಅನುಮಾನವೇ ಇಲ್ಲ. ಬಾಲ್ಯದ ಇಂತಹ ದೋಷಗಳು ದೊಡ್ಡವರಾದ ಮೇಲೆ ಬೇರೆ ಬೇರೆ ಗುರುತಿಸಿಕೊಳ್ಳುವಿಕೆಯ ಮೂಲಕವೂ ಪ್ರಕಟಗೊಳ್ಳುತ್ತಿರುತ್ತವೆ. ಒಂದು ಧರ್ಮದ ಜೊತೆಗೆ ಗುರುತಿಸಿಕೊಂಡಿರು ವಾಗ ತನ್ನ ಸಾಂಪ್ರದಾಯಿಕ ಪದ್ಧತಿಯನ್ನು ಮತ್ತೊಬ್ಬ ಧರ್ಮೀಯನೋ ಅಥವಾ ತನ್ನದೇ ಧರ್ಮದವರು ಟೀಕೆ ಮಾಡಿದಾಗ ಈ ಗುಣ ಜಾಗೃತವಾಗುತ್ತದೆ. ಈ ಗುಣಕ್ಕೆ ಹೊರಬರಲೊಂದು ದಾರಿ ಬೇಕು. ಆಗ ತಾನು ಗುರುತಿಸಿಕೊಂಡಿರುವ ಧರ್ಮದ ಪ್ರತಿನಿಧಿಯೇ ತಾನು ಎಂಬಂತೆ ಇತರ ಧರ್ಮೀಯನ ಸಂಪ್ರದಾಯಗಳನ್ನು ಟೀಕಿಸತೊಡಗುತ್ತಾನೆ.

ತನ್ನ ಸಮರ್ಥನೆ ತನ್ನ ವಿಚಾರ ಮತ್ತು ಗ್ರಹಿಕೆಯ ಪ್ರಕಟಣೆಗಿಂತ ಮತ್ತೊಂದನ್ನು ಖಂಡಿಸುವುದರ ಮೇಲೆಯೇ ಅವಲಂಬಿತನಾಗುತ್ತಾನೆ. ನಿನ್ನ ಸಂಪ್ರದಾಯದಲ್ಲಿ ಇಂತಹ ದೋಷವಿದೆ ಎಂದರೆ ನಿನ್ನ ಸಂಪ್ರದಾಯದಲ್ಲಿ ಇರುವುದು ದೋಷ. ಅಂತಹ ದೋಷವನ್ನೆಲ್ಲಾ ಹೊಂದಿರುವ ನೀವು ನಮ್ಮ ಸಂಪ್ರದಾಯದಲ್ಲಿರುವ ದೋಷವನ್ನು ಹೇಗೆ ಹೇಳಲಿಕ್ಕೆ ಬರ್ತೀರಾ? ಇದು ಅವನ ಕೋಪಕ್ಕೆ ಕಾರಣ. ರಾಮಕೃಷ್ಣ ಪರಮಹಂಸರ ಭಿನ್ನ ಆಧ್ಯಾತ್ಮಿಕ ಸಾಧನೆಗಳನ್ನು ನೋಡಿ ಹೆದರಿದ ಅವರ ಬಂಧುಗಳು ಅವರಿಗೆ ಹುಚ್ಚು ಹಿಡಿದಿದೆ ಎಂದು ಭಾವಿಸಿದರು. ಈ ಹುಚ್ಚು ಬಿಡಲು ಮದುವೆ ಮಾಡುವುದು ಸರಿ ಎಂದುಕೊಂಡರು. ಹುಚ್ಚನೆಂದು ಹಣೆಪಟ್ಟಿ ಹೊಂದಿದ್ದ ಅವರಿಗೆ ಹೆಣ್ಣು ಸಿಗುವುದು ಸುಲಭವೇನಾಗಿರಲಿಲ್ಲ. ಅಂತೂ ಅತಿ ಚಿಕ್ಕವಯಸ್ಸಿನ, ಬಡತನದಲ್ಲಿದ್ದ ಮನೆಯ ಶಾರದೆಯನ್ನು ಮದುವೆ ಮಾಡಿದರು. ಗಂಡನೋ ಲೌಕಿಕನಾಗಿರದೆ ಆಕೆಯನ್ನು ತಾಯಿ ಎಂದನು. ಶಾರದಾ ದೇವಿ ತಾವು ಪ್ರಬುದ್ಧರಾದಾಗ, ಆಕೆಯ ಮಾತುಗಳನ್ನು ಕೇಳಲು ಮಂದಿ ಮುಂದೆ ಕುಳಿತಾಗ, ‘‘ಮಗೂ ಪರದೋಷ ಕಾಣಬೇಡ. ಒಂದು ವೇಳೆ ದೋಷವನ್ನು ಕಾಣಲೇಬೇಕಾದರೆ, ನಿನ್ನ ದೋಷವನ್ನು ನೀನು ಕಂಡುಕೋ’’ ಎಂದು ಬೋಧಿಸಿದರು. ತಾವು ಅದರಿಂದ ಶಾಂತಿ ಕಂಡುಕೊಂಡರು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News

ನಾಸ್ತಿಕ ಮದ