ಯುಎಇಗೆ ಆಗಮಿಸಿದ ಇಸ್ರೇಲ್ ಅಧ್ಯಕ್ಷ

Update: 2022-01-31 11:30 GMT
photo:twitter/@Isaac_Herzog

ದುಬೈ, ಜ.30: ಕೊಲ್ಲಿ ದೇಶಗಳೊಂದಿಗೆ ಸಂಬಂಧ ಸುಧಾರಣೆಯ ಉಪಕ್ರಮವಾಗಿ ಇಸ್ರೇಲ್ ಅಧ್ಯಕ್ಷ ಇಸಾಕ್ ಹರ್ಝೋಗ್ ರವಿವಾರ ಯುಎಇಗೆ ಅಧಿಕೃತ ಭೇಟಿಗಾಗಿ ಆಗಮಿಸಿದ್ದು ಇಸ್ರೇಲ್ ಅಧ್ಯಕ್ಷರೊಬ್ಬರು ಯುಎಇಗೆ ನೀಡಿರುವ ಪ್ರಪ್ರಥಮ ಭೇಟಿ ಇದಾಗಿದೆ.

2020ರ ಸೆಪ್ಟಂಬರ್‌ನಲ್ಲಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಯುಇಎಗೆ ಭೇಟಿ ನೀಡುವ ಮೂಲಕ ಉಭಯ ದೇಶಗಳ ಸಹಕಾರ ಸಂಬಂಧ ಹೊಸ ದಿಕ್ಕಿನತ್ತ ಸಾಗುವ ಸಂದೇಶ ಸಾರಿದ್ದರು. ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದಿರುವ ಅಬ್ರಹಾಂ ಒಪ್ಪಂದದ ಅನ್ವಯ ಬಹ್ರೈನ್, ಸುಡಾನ್ ಮತ್ತು ಮೊರೊಕ್ಕೋ ದೇಶಗಳು ಈಗಾಗಲೇ ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಬಾಂಧವ್ಯವನ್ನು ಸ್ಥಾಪಿಸಿಕೊಂಡಿವೆ.

ಯುಎಇ ಯುವರಾಜ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅವರ ವೈಯಕ್ತಿಕ ಆಮಂತ್ರಣದ ಹಿನ್ನೆಲೆಯಲ್ಲಿ ಯುಎಇಯ ನಾಯಕರನ್ನು ಭೇಟಿಯಾಗಲಿದ್ದೇನೆ. ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದ ಸಾಧ್ಯವಾಗಿಸಿದ ಮತ್ತು ಶಾಂತಿಯೇ ಈ ವಲಯದ ಜನರ ಮುಂದಿರುವ ಪರ್ಯಾಯ ಎಂಬ ಸಂದೇಶವನ್ನು ಇಡೀ ವಲಯಕ್ಕೆ ಸಾರಿದ ಅವರ ಧೈರ್ಯ ಮತ್ತು ದಿಟ್ಟ ನಾಯಕತ್ವಕ್ಕೆ ಆಭಾರಿಯಾಗಿದ್ದೇನೆ ಎಂದು ಹರ್ಝೋಗ್ ಹೇಳಿದ್ದಾರೆ. ಇಸ್ರೇಲ್ ಅಧ್ಯಕ್ಷರು ದುಬೈ ಆಡಳಿತಗಾರರನ್ನು ಹಾಗೂ ಉನ್ನತ ಅಧಿಕಾರಿಗಳನ್ನು ಭೇಟಿಯಾಗುವ ಜೊತೆಗೆ ದುಬೈ ಎಕ್ಸ್‌ಪೋ ಕಾರ್ಯಕ್ರಮಕ್ಕೆ ಭೇಟಿ ನೀಡಲಿದ್ದಾರೆ ಎಂದು ಇಸ್ರೇಲ್ ರಾಯಭಾರಿ ಕಚೇರಿ ಹೇಳಿದೆ.

ಕಳೆದ ತಿಂಗಳು ಇಸ್ರೇಲ್ ಪ್ರಧಾನಿಯ ಯುಎಇ ಭೇಟಿ ಸಂದರ್ಭ, ಇರಾನ್‌ನ ಪರಮಾಣು ಕಾರ್ಯಕ್ರಮ ಮಾತುಕತೆಯ ಪ್ರಮುಖ ಅಜೆಂಡಾ ಆಗಿತ್ತು. 2020ರಲ್ಲಿ ಅಮೆರಿಕ ಮಧ್ಯಸ್ಥಿಕೆಯಲ್ಲಿ ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದಕ್ಕೆ ಯುಎಇ ಮತ್ತು ಬಹ್ರೈನ್ ಸಹಿ ಹಾಕಿದ್ದು ಇದಕ್ಕೆ ಪೆಲೆಸ್ತೀನ್ ಆಕ್ರೋಶ ವ್ಯಕ್ತಪಡಿಸಿದೆ. ಯುಎಇ, ಬಹ್ರೈನ್ ಹಾಗೂ ಇಸ್ರೇಲ್ ದೇಶಗಳು ಇರಾನ್ ಹಾಗೂ ಅದರ ಮಿತ್ರ ಪಡೆಗಳ ವಿಷಯದಲ್ಲಿ ಸಮಾನ ಆತಂಕ ಎದುರಿಸುತ್ತಿವೆ. ಯೆಮನ್‌ನಲ್ಲಿರುವ ಇರಾನ್ ಬೆಂಬಲಿತ ಹೌದಿ ಪಡೆಗಳು ಜನವರಿ 18ರಂದು ಯುಎಇ ವಿರುದ್ಧ ಮಾರಣಾಂತಿಕ ಡ್ರೋನ್ ದಾಳಿ ನಡೆಸಿದ ಬಳಿಕ, ಯುಎಇಗೆ ಭದ್ರತೆ ಮತ್ತು ಗುಪ್ತಚರ ಬೆಂಬಲ ಒದಗಿಸುವುದಾಗಿ ಇಸ್ರೇಲ್ ವಾಗ್ದಾನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News