71 ದ್ವಿಚಕ್ರ ವಾಹನಗಳ ಮೊಡಿಫೈ ಸೈಲೆನ್ಸರ್ ವಶ: ಎಸ್ಪಿ ವಿಷ್ಣುವರ್ಧನ್
ಉಡುಪಿ, ಜ.31: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇವಲ 25 ದಿನಗಳ ಕಾಲ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಕಾನೂನು ಉಲ್ಲಂಘಿಸಿ ಮೊಡಿಫೈ ಹಾಗೂ ಕರ್ಕಶ ಶಬ್ದ ಮಾಡುವ 71 ಬೈಕ್‌ಗಳ ಸೈಲೆನ್ಸರ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳನ್ನು ಇಂದು ಮಣಿಪಾಲ ಠಾಣೆಯಲ್ಲಿ ರೋಡ್ ರೋಲರ್ ಮೂಲಕ ನಿಷ್ಕ್ರೀಯಗೊಳಿಸಲಾಯಿತು.
ಮಣಿಪಾಲ ಠಾಣೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣು ವರ್ಧನ್ ಈ ಕುರಿತು ಮಾಹಿತಿ ನೀಡಿದರು. ದ್ವಿಚಕ್ರ ವಾಹನ ಸವಾರರು ವಾಹನ ತಯಾರಿಕ ಕಂಪೆನಿಯಿಂದ ಬರುವ ಸೈಲೆನ್ಸರ್‌ಗಳನ್ನು ಸ್ಥಳೀಯವಾಗಿ ಬದಲಾಯಿಸಿ, ಮಾರ್ಪಡುಗೊಳಿಸಿದ ಸೈಲೆನ್ಸರ್‌ಗಳನ್ನು ಆಳವಡಿಸಿ ಶಬ್ಧ ಮಾಲಿನ್ಯಕ್ಕೆ ಕಾರಣರಾಗುತ್ತಿದ್ದಾರೆ. ಇದರ ವಿರುದ್ಧ 500ರೂ.ನಿಂದ 2ಸಾವಿರ ರೂ.ವರೆಗೆ ದಂಡ ವಿಧಿಸಲು ಮತ್ತು ಸೈಲೆನ್ಸರ್ ವಶಪಡಿಸಿಕೊಳ್ಳಲು ಅವಕಾಶ ಇದೆ ಎಂದು ತಿಳಿಸಿದರು.
ಇಂತಹ ಸೈಲೆನ್ಸರ್ ಆಳವಡಿಸಿ ಕಿರಿಕಿರಿ ಉಂಟು ಮಾಡುತ್ತಿರುವ ದ್ವಿಚಕ್ರ ವಾಹನ ಸವಾರರ ವಿರುದ್ಧ ಸಾರ್ವಜನಿಕರು ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಜ.1ರಿಂದ ಜ.25ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಮಾರ್ಪಡುಗೊಂಡ ಸೈಲೆನ್ಸರ್ ಆಳವಡಿಸಿರುವ 71 ದ್ವಿಚಕ್ರ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ. ಈ ಸೈಲೆನ್ಸರ್ ಗಳನ್ನು ವಶಪಡಿಸಿಕೊಂಡು ನಿಷ್ಕ್ರೀಯಗೊಳಿಸಿ ನಂತರ ನ್ಯಾಯಾಲಯದ ಅನು ಮತಿ ಪಡೆದು ಹರಾಜು ಹಾಕಲಾಗುವುದು. ಕಳೆದ ಸಾಲಿನಲ್ಲಿ ಒಟ್ಟು 51 ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ನಿಷ್ಕ್ರೀಯಗೊಳಿಸಲಾಗಿತ್ತು ಎಂದು ಅವರು ಹೇಳಿದರು.
ಸಾಮಾನ್ಯವಾಗಿ 80 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಹೊರಸೂಸಿದರೆ ಅದು ಶಬ್ದಮಾಲಿನ್ಯಕ್ಕೆ ಕಾರಣವಾಗುತ್ತದೆ. ಅಂತಹ ಸೈಲೆನ್ಸರ್‌ಗಳನ್ನು ವಶಪಡಿಸಿ ಕೊಳ್ಳುತ್ತಿದ್ದೇವೆ. ಜಿಲ್ಲೆಯಾದ್ಯಂತ ಎಲ್ಲ ಪೊಲೀಸ್ ಠಾಣೆಗಳಲ್ಲಿ ಈ ರೀತಿಯಾಗಿ ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗು ವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಡಿವೈಎಸ್ಪಿ ಸುಧಾಕರ್ ಎಸ್.ನಾಯ್ಕಿ, ಮಣಿಪಾಲ ನಿರೀಕ್ಷಕ ಮಂಜುನಾಥ್ ಎಂ., ಉಪನಿರೀಕ್ಷಕ ರಾಜಶೇಖರ್ ವಂದಲಿ, ಪ್ರೊಬೆಷನರಿ ಎಸ್ಸೈಗಳಾದ ಸುಷ್ಮಾ ಮತ್ತು ವಿನಯ್ ಮೊದಲಾದವರು ಉಪಸ್ಥಿತರಿದ್ದರು.