ಯೆಮನ್ ನ ಹೌತಿ ಬಂಡುಗೋರರು ಉಡಾಯಿಸಿದ ಮತ್ತೊಂದು ಕ್ಷಿಪಣಿ ಹೊಡೆದುರುಳಿಸಿದ ಯುಎಇ
ದುಬೈ, ಜ.31: ಯೆಮನ್ನ ಹೌತಿ ಬಂಡುಗೋರರು ಉಡಾಯಿಸಿದ ಪ್ರಕ್ಷೇಪಕ ಕ್ಷಿಪಣಿಯನ್ನು ಹೊಡೆದುರುಳಿಸಲಾಗಿದೆ. ಇದು ಈ ತಿಂಗಳು ಹೌತಿ ಬಂಡುಗೋರರು ಯುಎಇ ಗುರಿಯಾಗಿಸಿ ನಡೆಸಿದ 3ನೇ ಕ್ಷಿಪಣಿ ದಾಳಿಯಾಗಿದೆ ಎಂದು ಯುಎಇ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಇಸ್ರೇಲ್ ಅಧ್ಯಕ್ಷರು ಯುಎಇಗೆ ಭೇಟಿ ನೀಡಿದ ಸಂದರ್ಭದಲ್ಲೇ ಈ ಕ್ಷಿಪಣಿ ದಾಳಿ ನಡೆದಿದೆ. ಆದರೆ ಅಧ್ಯಕ್ಷರ ಪ್ರವಾಸ ಯೋಜಿತ ರೀತಿಯಲ್ಲೇ ಮುಂದುವರಿಯಲಿದೆ ಎಂದು ಇಸ್ರೇಲ್ ಮೂಲಗಳು ಸ್ಪಷ್ಟಪಡಿಸಿವೆ. ಸೋಮವಾರ ಬೆಳಗ್ಗೆ ನಡೆದ ದಾಳಿಯಲ್ಲಿ ಯಾವುದೇ ನಾಶ-ನಷ್ಟ ಸಂಭವಿಸಿಲ್ಲ. ನಮ್ಮ ವಾಯು ರಕ್ಷಣಾ ಪಡೆ ಈ ಕ್ಷಿಪಣಿಯನ್ನು ತುಂಡರಿಸಿದೆ. ಕ್ಷಿಪಣಿಯ ಅವಶೇಷ ಜನನಿಬಿಡ ಪ್ರದೇಶದ ಹೊರಭಾಗದಲ್ಲಿ ಬಿದ್ದಿದೆ. ದೇಶದ ಮೇಲೆ ನಡೆಯುವ ಯಾವುದೇ ದಾಳಿ, ಬೆದರಿಕೆಯನ್ನು ಎದುರಿಸಲು ಯುಎಇ ಸಮರ್ಥವಾಗಿದೆ ಮತ್ತು ಯಾವುದೇ ದಾಳಿಯಿಂದ ದೇಶವನ್ನು ರಕ್ಷಿಸಿಕೊಳ್ಳಲು ಸೂಕ್ತ ಮತ್ತು ಸಕಾಲಿಕ ಕ್ರಮ ಕೈಗೊಳ್ಳಲಾಗುವುದು ಎಂದು ಯುಎಇ ರಕ್ಷಣಾ ಇಲಾಖೆ ಹೇಳಿದೆ.
ಸೋಮವಾರದ ದಾಳಿಯ ಹಿನ್ನೆಲೆಯಲ್ಲಿ ವಿಮಾನ ಸಂಚಾರಕ್ಕೆ ಯಾವುದೇ ಅಡ್ಡಿಯಾಗಿಲ್ಲ ಮತ್ತು ನಮ್ಮ ಜನರನ್ನು ಗುರಿಯಾಗಿಸುವ ಹೌತಿ ಭಯೋತ್ಪಾದಕರ ದಾಳಿಯನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿಕೆ ತಿಳಿಸಿದೆ.
ಈ ದಾಳಿಗೆ ಉತ್ತರವಾಗಿ, ಯೆಮನ್ ನ ಉತ್ತರದಲ್ಲಿರುವ ಅಲ್ಜವಾಫ್ ಪ್ರದೇಶದಲ್ಲಿನ ಕ್ಷಿಪಣಿ ಉಡಾವಣಾ ವ್ಯವಸ್ಥೆಯನ್ನು ಯುಎಇ ಪಡೆ ನಾಶಗೊಳಿಸಿದೆ ಎಂದು ಹೇಳಿರುವ ಸಚಿವಾಲಯ, ಇದಕ್ಕೆ ಪುಷ್ಟಿ ನೀಡುವ ವೀಡಿಯೊವನ್ನು ಪ್ರದರ್ಶಿಸಿದೆ. ಇದರೊಂದಿಗೆ ಜನವರಿ 17ರ ಬಳಿಕ ಹೌತಿ ಬಂಡುಗೋರರು ಯುಎಇಯತ್ತ ಪ್ರತೀ ಸೋಮವಾರದಂತೆ 3 ಬಾರಿ ಕ್ಷಿಪಣಿ ದಾಳಿ ನಡೆಸಿದಂತಾಗಿದೆ.
ಈ ಮಧ್ಯೆ, ಯುಎಇಯನ್ನು ಗುರಿಯಾಗಿಸಿಕೊಂಡು ಬೃಹತ್ ಸೇನಾ ಕಾರ್ಯಾಚರಣೆ ನಡೆಸಲಾಗುವುದು ಎಂದು ಹೌತಿ ಬಂಡುಗೋರ ಸಂಘಟನೆಯ ವಕ್ತಾರ ಯಾಹ್ಯಾ ಹೇಳಿದ್ದಾರೆ. ಯುಎಇಯ ಪ್ರಮುಖ ಸ್ಥಳಗಳು ಹಾಗೂ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ತಾವು ಹಿಂಜರಿಯುವುದಿಲ್ಲ ಎಂದವರು ಯುಎಇಯಲ್ಲಿ ಇರುವ ವಿದೇಶಿ ಸಂಸ್ಥೆಗಳು, ಪ್ರಜೆಗಳು ಮತ್ತು ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸೋಮವಾರದ ದಾಳಿಯನ್ನು ಅಮೆರಿಕ ಖಂಡಿಸಿದೆ. ‘ಇಸ್ರೇಲ್ ಅಧ್ಯಕ್ಷರು ಯುಎಇಗೆ ಭೇಟಿ ನೀಡಿ ಸ್ನೇಹಸಂಬಂಧ ಸ್ಥಾಪಿಸಿ ಈ ವಲಯದಲ್ಲಿ ಸ್ಥಿರತೆ ಸ್ಥಾಪಿಸಲು ಪ್ರಯತ್ನಿಸುತ್ತಿದ್ದರೆ, ಹೌತಿಗಳು ಪ್ರಜೆಗಳನ್ನು ಬೆದರಿಸುವ ಉದ್ದೇಶದ ದಾಳಿಯನ್ನು ಮುಂದುವರಿಸಿದ್ದಾರೆ ಎಂದು ಅಮೆರಿಕದ ವಿದೇಶ ವ್ಯವಹಾರ ಇಲಾಖೆ ವಕ್ತಾರ ನೆಡ್ ಪ್ರೈಸ್ ಟ್ವೀಟ್ ಮಾಡಿದ್ದಾರೆ.