ಹೌತಿ ಬಂಡುಕೋರರ ದಾಳಿ ಎದುರಿಸಲು ಯುಎಇಗೆ ಯುದ್ಧನೌಕೆ, ಯುದ್ಧವಿಮಾನ ರವಾನೆ: ಅಮೆರಿಕ

Update: 2022-02-02 16:26 GMT

ಸಾಂದರ್ಭಿಕ ಚಿತ್ರ:PTI
 

ವಾಷಿಂಗ್ಟನ್, ಫೆ.2: ಯೆಮನ್‌ನ ಹೌತಿ ಬಂಡುಕೋರರು ಯುಎಇ ಮೇಲೆ ಸರಣಿ ಕ್ಷಿಪಣಿ ದಾಳಿ ಮುಂದುವರಿಸಿರುವ ಹಿನ್ನೆಲೆಯಲ್ಲಿ, ಯುಎಇಗೆ ನೆರವಾಗಲು ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ವ್ಯವಸ್ಥೆ ಹಾಗೂ ಅತ್ಯಾಧುನಿಕ ಯುದ್ಧವಿಮಾನಗಳನ್ನು ರವಾನಿಸಲಾಗುವುದು ಎಂದು ಅಮೆರಿಕ ಹೇಳಿದೆ. 

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹಾಗೂ ಅಬುಧಾಬಿಯ ಯುವರಾಜ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ನಡುವೆ ಫೋನ್ ಮೂಲಕ ನಡೆದ ಸಂಭಾಷಣೆಯ ತರುವಾಯ, ಯುಎಇಗೆ ನೆರವು ನೀಡಲು ನಿರ್ಧರಿಸಲಾಗಿದೆ ಎಂದು ಯುಎಇಯಲ್ಲಿನ ಅಮೆರಿಕದ ರಾಯಭಾರಿ ಕಚೇರಿ ಹೇಳಿದೆ. 

ಮಾರ್ಗದರ್ಶಿ ಕ್ಷಿಪಣಿ ನಿರೋಧಕ ವ್ಯವಸ್ಥೆಯುಳ್ಳ ಅಮೆರಿಕದ ಯುದ್ಧನೌಕೆ ಯುಎಸ್ಎಸ್ ಕೋಲ್ ಯುಎಇಯ ನೌಕಾಪಡೆಗೆ ನೆರವಾಗಲಿದ್ದು ಇದನ್ನು ಅಬುಧಾಬಿಯ ಬಂದರಿನಲ್ಲಿ ನಿಯೋಜಿಸಲಾಗುವುದು. ಜೊತೆಗೆ, ಐದನೇ ತಲೆಮಾರಿನ ಯುದ್ಧವಿಮಾನಗಳನ್ನೂ ಅಮೆರಿಕ ನಿಯೋಜಿಸಲಿದೆ. ಜತೆಗೆ ಸಂಭಾವ್ಯ ದಾಳಿಯ ಬಗ್ಗೆ ಮುಂಚಿತವಾಗಿಯೇ ಎಚ್ಚರಿಕೆ ನೀಡುವ ಗುಪ್ತಚರ ಮಾಹಿತಿಯನ್ನೂ ಒದಗಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.ಇರಾನ್ ಬೆಂಬಲಿತ ಹೌತಿ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಯೆಮನ್‌ನ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರಕ್ಕೆ ಸೌದಿ ನೇತೃತ್ವದ ಮಿತ್ರರಾಷ್ಟ್ರಗಳ ಸೇನೆ ನೆರವಾಗುತ್ತಿದ್ದು ಮೈತ್ರಿಪಡೆಯಲ್ಲಿ ಯುಎಇ ಕೂಡಾ ಸೇರಿದೆ.

7 ವರ್ಷದಿಂದ ಯೆಮನ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದು ಕೋಟ್ಯಾಂತರ ಜನತೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದಾರೆ. ಜನವರಿ 17 ಮತ್ತು 24 ರಂದು ಅಬುಧಾಬಿಯ ತೈಲ ಸಂಗ್ರಹಾಗಾರ ಮತ್ತು ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ಹೌತಿ ಬಂಡುಕೋರರು ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದರಿಂದ ಕನಿಷ್ಟ 3 ಮಂದಿ ಮೃತಪಟ್ಟಿದ್ದಾರೆ. ಜನವರಿ 31ರಂದು ಯುಎಇಗೆ ಇಸ್ರೇಲ್ ಅಧ್ಯಕ್ಷ ಇಸಾಕ್ ಹರ್ಝೋಗ್ ಭೇಟಿ ನೀಡಿದ್ದ ಸಂದರ್ಭದಲ್ಲೇ ಯುಎಇ ಮೇಲೆ ಕ್ಷಿಪಣಿ ದಾಳಿ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News