ಕೇರಳ ಸಿಎಂ ಭೇಟಿ ಬೆನ್ನಲ್ಲೇ ಮಲಯಾಳಂನಲ್ಲಿ ಟ್ವೀಟ್ ಮಾಡಿದ ದುಬೈ ದೊರೆ; ಅರಬಿಕ್ ಭಾಷೆಯಲ್ಲಿ ಉತ್ತರಿಸಿದ ವಿಜಯನ್

Update: 2022-02-03 12:37 GMT
Photo: Twitter/@HHShkMohd

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದುಬೈ ದೊರೆ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರನ್ನು ಭೇಟಿಯಾದ ಬೆನ್ನಲ್ಲೇ ಶೇಖ್ ಅವರು ಮಲಯಾಳಂನಲ್ಲಿ ಮಾಡಿದ ಟ್ವೀಟ್ ಒಂದು ವೈರಲ್ ಆಗಿದೆಯಲ್ಲದೆ ನೂರಾರು ಕೇರಳಿಗರು ಈ ಟ್ವೀಟ್ ಅನ್ನು ಶೇರ್ ಮಾಡಿದ್ದಾರೆ.

ದುಬೈ ಎಕ್ಸ್ ಪೋ 2020 ಸ್ಥಳದಲ್ಲಿ ಪಿಣರಾಯಿ ಅವರಿಗೆ ನೀಡಿದ ಸ್ವಾಗತದ ಫೋಟೋ ಅನ್ನೂ ದುಬೈ ದೊರೆ ಶೇರ್ ಮಾಡಿದ್ದಾರೆ. ಪಿಣರಾಯಿ ಕೂಡ ಇದನ್ನು ಶೇರ್ ಮಾಡಿದ್ದಾರಲ್ಲದೆ ಧನ್ಯವಾದ ತಿಳಿಸಿ ಅರಬಿಕ್ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.

"ಸಂಯುಕ್ತ ಅರಬ್ ಸಂಸ್ಥಾನವು ಕೇರಳದೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದೆ. ದುಬೈ ಮತ್ತು ಯುಎಇ ಇವುಗಳ ಅಭಿವೃದ್ಧಿಯಲ್ಲಿ ಕೇರಳಿಗರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ,'' ಎಂದು ದುಬೈ ದೊರೆ ತಮ್ಮ ಮಲಯಾಳಂ ಟ್ವೀಟ್ ನಲ್ಲಿ ಬರೆದಿದ್ದರೆ, ಇದಕ್ಕೆ ಪಿಣರಾಯಿ ಅವರು ಅರಬಿಕ್ ಭಾಷೆಯಲ್ಲಿ ಪ್ರತಿಕ್ರಿಯಿಸಿ "ನಿಮ್ಮ ಆತಿಥ್ಯ ಮತ್ತು ಆತ್ಮೀಯ ಸ್ವಾಗತಕ್ಕೆ ಋಣಿ;" ಎಂದು ಬರೆದಿದ್ದಾರಲ್ಲದೆ ಕೇರಳ ರಾಜ್ಯವು ಯುಎಇ ಮತ್ತು ದುಬೈ ಜತೆಗಿನ ತನ್ನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಬಯಸುತ್ತದೆ ಎಂದು ಬರೆದಿದ್ದಾರೆ.

ಮುಖ್ಯಮಂತ್ರಿ ತಮ್ಮ ಭೇಟಿಯ ವೇಳೆ ಕೇರಳದಲ್ಲಿ ಹೆಚ್ಚಿನ ಹೂಡಿಕೆಗಳನ್ನು ಮಾಡುವಂತೆ ಹಾಗೂ ಅಲ್ಲಿ ಉದ್ಯಮ ಸ್ನೇಹಿ ವಾತಾವರಣವಿರುವ ಭರವಸೆಯನ್ನು ನೀಡಿದ್ದಾರೆ.

ದುಬೈ ರಾಜಕುಮಾರ ಶೇಖ್ ಹಮ್ದನ್ ಬಿನ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್, ಉಪಪ್ರಧಾನಿ ಮತ್ತು ವಿತ್ತ ಸಚಿವ ಶೇಖ್ ಮಕ್ತೂಮ್ ಬಿನ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್, ಕೇರಳ ಕೈಗಾರಿಕಾ ಸಚಿವ ಪಿ ರಾಜೀವ್, ಭಾರತದ ರಾಯಭಾರಿ ಸಂಜಯ್ ಸುಧೀರ್, ಕಾನ್ಸುಲ್ ಜನರಲ್ ಅಮನ್ ಪುರಿ, ಲುಲು ಗ್ರೂಪ್ ಅಧ್ಯಕ್ಷ ಯೂಸುಫ್ ಅಲಿ ಎಂ. ಎ. ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ವಿಗ್ರಹಗಳ ಕಳವು ಪ್ರಕರಣ: ಪೊಲೀಸ್ ಸಿಬ್ಬಂದಿ, ಬಿಜೆಪಿ ಪದಾಧಿಕಾರಿ ಸೇರಿ 4 ಮಂದಿಯ ಬಂಧನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News