ಉಡುಪಿ: ಫೆ.5ರಿಂದ ಪುರಂದರ, ತ್ರಿಮೂರ್ತಿ ಸಂಗೀತೋತ್ಸವ
Update: 2022-02-04 11:47 GMT
ಉಡುಪಿ, ಫೆ.4: ರಾಗಧನ ಉಡುಪಿ, ಎಂ.ಜಿ.ಎಂ.ಕಾಲೇಜಿನ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ 34ನೆಯ ಶ್ರೀ ಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಸಂಗೀತೋತ್ಸವ-2022ನ್ನು ಫೆ.5 ಮತ್ತು 6ರಂದು ಉಡುಪಿಯ ಎಂ.ಜಿ.ಎಂ.ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದೆ.
ಫೆ.5ರಂದು ಮಧ್ಯಾಹ್ನ 2ರಿಂದ ಪಿಳ್ಳಾರಿ ಗೀತೆಗಳು, ತ್ಯಾಗರಾಜರ ಪಂಚರತ್ನ ಗೋಷ್ಠಿಗಾಯನ ನಡೆಯಲಿದೆ. ಸಂಜೆ 5 ಗಂಟೆಗೆ ಮಣಿಪಾಲದ ರೂಮ ಐಯ್ಯಂಗಾರ್ ಸಂಗೀತೋತ್ಸವವನ್ನು ಉದ್ಘಾಟಿಸಲಿದ್ದು, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯ್ಕ್ ಮುಖ್ಯ ಅತಿಥಿಗಳಾಗಿರುವರು. ಡಾ.ಸುಶೀಲಾ ಉಪಾಧ್ಯಾಯರ ಸ್ಮರಣಾರ್ಥ ಡಾ.ಯು.ಪಿ.ಉಪಾಧ್ಯಾಯ ಪ್ರಾಯೋಜಿಸಿರುವ ಈ ವರ್ಷದ ರಾಗ ಧನ ಪಲ್ಲವಿ ಪ್ರಶಸ್ತಿಯನ್ನು ಶ್ರೇಯಾ ಕೊಳತ್ತಾಯ ಇವರಿಗೆ ಪ್ರದಾನ ಮಾಡಲಾಗುವುದು. ಸಂಜೆ 5ರಿಂದ ಶ್ರೇಯಾ ಕೊಳತ್ತಾಯರ ಸಂಗೀತ ಕಚೇರಿ ನಡೆಯಲಿದೆ ಎಂದು ರಾಗಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.