ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿಗಿಲ್ಲ ಪ್ರವೇಶ: ಕುಳಿತುಕೊಳ್ಳಲು ಪ್ರತ್ಯೇಕ ಕೊಠಡಿ ನೀಡಲು ತೀರ್ಮಾನ

Update: 2022-02-05 11:20 GMT

ಕುಂದಾಪುರ, ಫೆ.5: ಹಿಜಾಬ್ ಧರಿಸಿ ಬಂದ ಕಾರಣಕ್ಕೆ ಕುಂದಾಪುರ ಸರಕಾರಿ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಆವರಣದೊಳಗೆ ಪ್ರವೇಶ ಕಲ್ಪಿಸದೆ ಗೇಟ್ ಹೊರಗಡೆಯೇ ಸಂಜೆಯವರೆಗೆ ನಿಲ್ಲಿಸಿರುವ ವಿಚಾರ ರಾಷ್ಟ್ರ ಮಟ್ಟದಲ್ಲಿ ಗದ್ದಲ ಎಬ್ಬಿಸಿದ್ದು, ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಕಾಲೇಜು ಅಭಿವೃದ್ಧಿ ಸಮಿತಿಯು ಹಿಜಾಬ್ ಧರಿಸುವ ವಿದ್ಯಾರ್ಥಿನಿಯರಿಗೆ ಕಾಲೇಜಿನ ಯಾವುದಾರರೊಂದು ಕೊಠಡಿಯಲ್ಲಿ ಕೂರಲು ವ್ಯವಸ್ಥೆ ಮಾಡಿಕೊಡಲು ತೀರ್ಮಾನಿಸಿದೆ.

ಇಂದು ನಡೆದ ಕುಂದಾಪುರ ಸರಕಾರಿ ಜೂನಿಯರ್ ಕಾಲೇಜ್ ಅಭಿವೃದ್ಧಿ ಸಮಿತಿ ಸಭೆಯ ಬಳಿಕ ಮಾಧ್ಯಮದವರಿಗೆ ಈ ಕುರಿತು ಮಾಹಿತಿ ನೀಡಿದ ಸಮಿತಿಯ ಮೋಹನದಾಸ್ ಶೆಣೈ, ಕಳೆದ ಮೂರು ದಿನಗಳ ಕಾಲ ಗೇಟಿನ ಹೊರಗಡೆ ನಿಂತುಕೊಂಡು ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿನಿಯರಿಗೆ ತೊಂದರೆ ಆಗಬಾರದೆಂಬ ದೃಷ್ಟಿಯಿಂದ ಕಾಲೇಜಿನ ವಠಾರದಲ್ಲಿರುವ ತರಗತಿ ಕೊಠಡಿಯಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿಕೊಡಬೇಕು. ಆದರೆ ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿ ಬಂದವರಿಗೆ ತರಗತಿಗೆ ಪ್ರವೇಶಕ್ಕೆ ಅವಕಾಶ ಕೊಡಬಾರದು. ಹಿಜಾಬ್ ಹಾಗೂ ಕೇಸರಿ ಶಾಲು ತೆಗೆದು ಬಂದವರಿಗೆ ಮಾತ್ರ ತರಗತಿಗೆ ಪ್ರವೇಶ ನೀಡಬೇಕು. ಅಲ್ಲದೆ ಕಾಲೇಜಿನ ಆವರಣದೊಳಗೆ ಯಾವುದೇ ಸಂಘಟನೆ ಹಾಗೂ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಬಾರದು ಎಂಬ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಸರಕಾರದ ಆದೇಶ ಹಾಗೂ ಕಾನೂನು ಮೀರಿ ಯಾರು ಹೋಗಬಾರದು. ಅದಕ್ಕೆ ಅನುಗುಣವಾಗಿಯೇ ಸರಕಾರಿ ಸಂಸ್ಥೆಗಳು ನಡೆಯಬೇಕು. 135ಕ್ಕೂ ಅಧಿಕ ಇತಿಹಾಸ ಇರುವ ಹಾಗೂ ಇಡೀ ರಾಜ್ಯಕ್ಕೆ ಮಾದರಿಯಾಗಿರುವ ಈ ಕಾಲೇಜಿಗೆ ಕೆಟ್ಟ ಹೆಸರು ಬರಬಾರದೆಂಬ ಉದ್ದೇಶ ದಿಂದ ಹಿಜಾಬ್ ಮತ್ತು ಕೇಸರಿ ಸೇರಿದಂತೆ ಯಾವುದೇ ಧರ್ಮಾಧಾರಿತವಾದ ಸಂಕೇತಕ್ಕೆ ಅವಕಾಶ ನೀಡಬಾರದು ಹಾಗೂ ಸಮವಸ್ತ್ರ ಧರಿಸಿದವರಿಗೆ ಮಾತ್ರ ತರಗತಿಗೆ ಅವಕಾಶ ನೀಡಬೇಕೆಂಬ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದರು.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಸೂಚನೆಯಂತೆ ಈ ಸಭೆಯನ್ನು ಕರೆಯಲಾಗಿದೆ. ಕಾನೂನಿಗೆ ಎಲ್ಲರೂ ಬದ್ಧರಾಗಿರಬೇಕೆಂಬ ಆಶಯ ಸಭೆಯಲ್ಲಿ ವ್ಯಕ್ತವಾಗಿದೆ. ಮಕ್ಕಳಲ್ಲಿ ಹಿಂದು, ಮುಸ್ಲಿಮ್, ಕ್ರಿಶ್ಚಿಯನ್ ಎಂಬ ಧರ್ಮಾಧಾರಿತವಾದ ಒತ್ತಾಸೆಗೆ ಪೋಷಕರು ಅವಕಾಶ ಕೊಡಬಾರದು. ಮಕ್ಕಳ ಭವಿಷ್ಯವನ್ನು ರೂಪಿಸುವ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗದಿರುವುದನ್ನು ಮಕ್ಕಳ ಹಿರಿಯರು ಗಮನಿಸಿ, ಪಾಲಿಸಬೇಕು ಎಂದು ಅವರು ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News