ಸಮಾಜ ಕಲ್ಯಾಣ ಇಲಾಖೆಗೆ ಬಜೆಟ್‌ನಲ್ಲಿ ಹೆಚ್ಚು ಅನುದಾನದ ನಿರೀಕ್ಷೆ: ಸಚಿವ ಕೋಟ

Update: 2022-02-07 16:23 GMT

ಉಡುಪಿ, ಫೆ.7: ಕಳೆದ ಬಾರಿಯ ಬಜೆಟ್‌ನಲ್ಲಿ ಕೊರೋನಾ ಕಾರಣದಿಂದ ನಮ್ಮ ಇಲಾಖೆಗೆ ಅನುದಾನವನ್ನು ಕಡಿತ ಮಾಡಲಾಗಿತ್ತು. ಆದರೆ ಈ ಬಾರಿ ಕಡಿತ ಆಗದಂತೆ ಮತ್ತು ಹೆಚ್ಚು ಕೊಡುವಂತೆ ಮುಖ್ಯಮಂತ್ರಿಯನ್ನು ಕೇಳ ಲಾಗುವುದು. ಕಳೆದ ಬಾರಿ 3500-4000ಕೋಟಿ ರೂ. ಅನುದಾನ ನೀಡಿದರೆ, ಈ ಬಾರಿ ಅದರ ಎರಡು ಪಟ್ಟು ಹಣ ಜಾಸ್ತಿ ಕೇಳುತ್ತೇವೆ ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಜೆಟ್‌ನಲ್ಲಿ ನಿಗದಿ ಪಡಿಸಬಹುದಾದ ಮೊತ್ತ ಮತ್ತು ಕೈಗೊಳ್ಳಬಹುದಾದ ಯೋಜನೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಫೆ.8 ಮತ್ತು 9ರಂದು ಸಭೆ ಕರೆದಿದ್ದಾರೆ. ಈ ಸಂಬಂಧ ನಮ್ಮ ಇಲಾಖೆಯಲ್ಲಿ ಈಗಾಗಲೇ ಪೂರ್ವಭಾವಿ ಸಿದ್ಧತೆಗಳು ನಡೆದಿವೆ. ಅಧಿಕಾರಿಗಳನ್ನು ಕರೆದು ಚರ್ಚೆ ಮಾಡಲಾಗಿದೆ. ಈ ಬಾರಿ ತುಂಬಾ ಪರಿಣಾಮಕಾರಿ, ಹೆಚ್ಚು ಆರ್ಥಿಕ ಶಕ್ತಿ ಹಾಗೂ ದೂರಗಾಮಿ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗುತ್ತದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯಲ್ಲಿರುವ ಅನುದಾನವನ್ನು ಹೆಚ್ಚಿಸುವುದು ಹೇಗೆ ಮತ್ತು ಇತರ ಅನುದಾನಗಳನ್ನು ಕ್ರೋಢಿಕರಿಸಿ, ಹಾಸ್ಟೆಲ್‌ಗಳಿಗೆ ಮೂಲಭೂತ ಸೌಕರ್ಯ, ಹೊಸ ಶಾಲೆಗಳ ನಿರ್ಮಾಣ, ಪರಿಶಿಷ್ಟ ಜಾತಿ ಮತ್ತು ಪಂಗಡದ ವರಿಗೆ ಸೌಲಭ್ಯಗಳನ್ನು ಹೆಚ್ಚಿಸುವ ಕುರಿತು ಯೋಚನೆ ಮಾಡುತ್ತಿದ್ದೇವೆ. ಅಸ್ಪಶ್ಯತೆ ನಿವಾರಣೆ ಬಗ್ಗೆ ಜನಾಂದೋಲನಕ್ಕೆ ಬೇಕಾದ ಅನುದಾನ, ಪರಿಶಿಷ್ಟ ಜಾತಿಯ ಮಕ್ಕಳಿಗೆ ವಿದೇಶ ವ್ಯಾಸಂಗ ಮತ್ತು ಪಿಎಚ್‌ಡಿ ಮಾಡಲು ವಿದ್ಯಾರ್ಥಿ ವೇತನ ಹಾಗೂ ಅಂಬೇಡ್ಕರ್ ಹೆಸರಿನಲ್ಲಿ ಹಲವು ಹೊಸ ಯೋಜನೆಗಳನ್ನು ತರುವ ಯೋಚನೆ ನಮ್ಮ ಮುಂದೆ ಇದೆ ಎಂದು ಅವರು ತಿಳಿಸಿದರು.

ಯಾವುದೇ ರೀತಿಯ ಕಾನೂನು ಮಾಡಿದರೂ, ಪ್ರಕರಣ ದಾಖಲಿಸಿದರೂ  ಕೆಲವು ಕಡೆ ಇನ್ನೂ ಕೂಡ ಅಸ್ಪಸ್ಯತೆ ಜೀವಂತವಾಗಿದೆ. ನಮ್ಮ ಇಲಾಖೆ ಮೂಲಕ ಅಸ್ಪಶ್ಯತೆಯನ್ನು ಸಂಪೂರ್ಣ ತೊಡೆದು ಹಾಕಲು ದೂರಗಾಮಿ ಯೋಜನೆ ಹಾಕಿಕೊಳ್ಳಲಾಗುವುದು. ಅದಕ್ಕೆ ಬೇಕಾದ ವಿಸ್ತೃತ ಯೋಜನೆ ರೂಪಿಸಿದ್ದೇವೆ. ಮುಖ್ಯಮಂತ್ರಿ ಜೊತೆ ಕೂಡ ಮಾತುಕರತೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಕಾಲೇಜುಗಳಲ್ಲಿ ಸಮವಸ್ತ್ರಕ್ಕೆ ಸಂಬಂಧಿಸಿ ಸರಕಾರದಿಂದ ಆದೇಶ ಬಂದಿದೆ. ಪ್ರತಿ ಕಾಲೇಜುಗಳಲ್ಲಿಯೂ ಸಮವಸ್ತ್ರವೇ ಅಂತಿಮ. ಇನ್ನು ಯಾವುದೇ ಗೊಂದಲಗಳು ಇರುವುದಿಲ್ಲ. ಈ ಆದೇಶವನ್ನು ಅನುಷ್ಠಾನಗೊಳಿಸುವ ಜವಾ ಬ್ದಾರಿ ಇಲಾಖೆಯದ್ದಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News