ಕೆಡವಿದ ಸ್ಮಾರಕದ ಮೇಲೆ ಚರಿತ್ರೆಯ ಸಮಾಧಿ

Update: 2022-02-09 05:00 GMT

ಕೆಡವಿ ಕಟ್ಟುವುದು ಮಾನವ ಇತಿಹಾಸದ ಪರಂಪರೆಯಾಗಿಯೇ ಬೆಳೆದುಬಂದಿರುವ ವಿದ್ಯಮಾನ. ಬದಲಾಗುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ಸ್ಥಿತ್ಯಂತರಗಳಿಗನುಗುಣವಾಗಿ ಹಳೆಯದನ್ನು ಕೆಡವಿ ಹೊಸತನ್ನು ಕಟ್ಟುವ ಪ್ರಕ್ರಿಯೆಯಲ್ಲೇ ಮಾನವ ಸಮಾಜ ತನ್ನ ಅಭ್ಯುದಯದ ಹಾದಿಯನ್ನು ಗುರುತಿಸಿಕೊಂಡಿದೆ. ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಈ ಕೆಡವಿ ಕಟ್ಟುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಆಧುನಿಕತೆಯ ಹಾದಿಯಲ್ಲಿ ಮುನ್ನಡೆಯುವ ಯಾವುದೇ ಸಮಾಜ ತನ್ನ ಗತ ಇತಿಹಾಸದ ಪಳೆಯುಳಿಕೆಗಳನ್ನು ಕೆಡವುತ್ತಲೇ ಹೊಸ ಜಗತ್ತನ್ನು ನಿರ್ಮಿಸಲು ಮುಂದಾಗುತ್ತದೆ. ಆದರೆ ಈ ಕೆಡವುವ ಪ್ರಕ್ರಿಯೆ ಬೌದ್ಧಿಕ ನೆಲೆಯಲ್ಲಿ ಅನಾವರಣಗೊಳ್ಳುವಾಗ ಮನ್ವಂತರದ ಹಾದಿಗಳಲ್ಲಿ ಇತಿಹಾಸದ ಮೌಲಿಕ ನೆಲೆಗಳೂ ಕೆಡವಲ್ಪಡುತ್ತವೆ. ಸಮಾಜ ತನ್ನ ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಂಡು, ಮಾನವೀಯ ನೆಲೆಗಳನ್ನು ನಾಶಪಡಿಸಿಕೊಳ್ಳುತ್ತಾ, ಹೊಸತು ಸೃಷ್ಟಿಸುವ ಭರದಲ್ಲಿ ಚರಿತ್ರೆಯ ಹೆಜ್ಜೆಗಳನ್ನು ಅಳಿಸಿಹಾಕುವ ನಿಟ್ಟಿನಲ್ಲಿ ಸಾಗುತ್ತದೆ.

ಇಂತಹ ಒಂದು ಪ್ರಕ್ರಿಯೆ ಇಂದು ಭಾರತದಲ್ಲಿ ಜಾರಿಯಲ್ಲಿದೆ. ಮತೀಯ ನೆಲೆಗಳಲ್ಲಿ ಧೃವೀಕರಣಗೊಳ್ಳುತ್ತಿರುವ ಸಾಂಸ್ಕೃತಿಕ ರಾಜಕಾರಣ ಮತ್ತು ಮತಾಂಧತೆ ಚರಿತ್ರೆಯ ಪಳೆಯುಳಿಕೆಗಳನ್ನು ನಾಶಪಡಿಸುವ ಮತ್ತು ಪಾರಂಪರಿಕ ಸ್ಥಾವರ-ಜಂಗಮಗಳನ್ನು ಇಲ್ಲವಾಗಿಸುವ ವಿಕೃತ ಮನಸ್ಥಿತಿಯನ್ನು ಯುವ ಪೀಳಿಗೆಯಲ್ಲೂ ಸೃಷ್ಟಿಸಿಬಿಟ್ಟಿದೆ. ಇಂತಹ ವಿಕೃತಿಗೆ ಬಲಿಯಾಗಿರುವುದು ಮೈಸೂರಿನ ಇತಿಹಾಸ ಪ್ರಸಿದ್ಧ ಮಹಾರಾಣಿ ಎನ್‌ಟಿಎಂ ಶಾಲೆ. ಮೈಸೂರಿನ ಮಹಾರಾಣಿ ಕೆಂಪನಂಜಮ್ಮಣ್ಣಿ 1881ರಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಕಟ್ಟಿದ ಶಾಲೆಯೊಂದು ಈಗ ಇತಿಹಾಸದ ತೊಟ್ಟಿಗೆ ಸೇರಿದೆ. 140 ವರ್ಷಗಳ ಕಾಲದ ಮೈಸೂರಿನ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿದ್ದ ಒಂದು ಶಾಲೆಯನ್ನು, ವಿವೇಕಾನಂದರ ಸ್ಮಾರಕ ಕಟ್ಟುವ ಸಲುವಾಗಿ ಕೆಡವಲಾಗಿದೆ.

ಈ ಶಾಲೆ ಮೂಲತಃ ಅರಮನೆಯ ಆವರಣದಲ್ಲಿ ಆರಂಭವಾಗಿ ನಂತರ, ಮಹಾರಾಣಿ ಹೆಣ್ಣುಮಕ್ಕಳ ಶಾಲೆಯ ಆವರಣದಲ್ಲಿ ಕೆಲವು ದಶಕಗಳ ಕಾಲ ಕಾರ್ಯನಿರ್ವಹಿಸಿ ನಂತರ 50 ವರ್ಷಗಳ ಹಿಂದೆ ತನ್ನದೇ ಆದ ಒಂದು ಸ್ಥಾವರವನ್ನು ಗಳಿಸಿಕೊಂಡಿತ್ತು. ಈ ಹೆಜ್ಜೆಗುರುತುಗಳಲ್ಲೇ ಎನ್‌ಟಿಎಂ ಶಾಲೆಯ ಚಾರಿತ್ರಿಕ ಮಹತ್ವವನ್ನು ಗುರುತಿಸಬೇಕಿದೆ. ಇಂದು ಈ ಶಾಲೆಯನ್ನು ಮತ್ತೊಂದು ಶಾಲೆಯಲ್ಲಿ ವಿಲೀನಗೊಳಿಸುವ ಮೂಲಕ ಚರಿತ್ರೆಯ ಅಕ್ಷರಗಳನ್ನು ಅಳಿಸಿಹಾಕಲಾಗುತ್ತಿದೆ. ತಾತ್ಕಾಲಿಕವಾಗಿ ಮಹಾರಾಣಿ ಶಿಕ್ಷಕರಿಯರ ತರಬೇತಿ ಸಂಸ್ಥೆಯ ಕಟ್ಟಡಕ್ಕೆ ಶಾಲೆಯನ್ನು ವರ್ಗಾಯಿಸಲಾಗಿದ್ದು, ಈ ಚಾರಿತ್ರಿಕ ಶಾಲೆಯ ಮೂಲ ಸ್ವರೂಪವನ್ನು ಉಳಿಸಿಕೊಂಡು ಅಭಿವೃದ್ಧಿಪಡಿಸುವುದಾಗಿ ಆಡಳಿತ ವ್ಯವಸ್ಥೆ ಭರವಸೆ ನೀಡಿದೆ.

ಐವತ್ತು ವರ್ಷಗಳ ಕಾಲ, ಮೂರು ಪೀಳಿಗೆಯ ಬಡ ಹೆಣ್ಣುಮಕ್ಕಳಿಗೆ, ಕನ್ನಡ ಮಾಧ್ಯಮದ ಶಿಕ್ಷಣ ಒದಗಿಸಿದ್ದ ಒಂದು ಶಾಲಾ ಕಟ್ಟಡವನ್ನು ವಿವೇಕ ಸ್ಮಾರಕಕ್ಕಾಗಿ ನೆಲಸಮ ಮಾಡುವ ಮೂಲಕ ಜಿಲ್ಲಾಡಳಿತ ತನ್ನ ಅವಿವೇಕವನ್ನು ಪ್ರದರ್ಶಿಸಿದೆ. ಹಾಗೆಯೇ ಶಿಕ್ಷಣವೊಂದೇ ಸಮಾಜದ ಮುನ್ನಡೆಗೆ ಸಾಧನ ಎಂದು ಬೋಧಿಸಿದ, ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ನಿರ್ಮಿಸುವ ಸ್ಮಾರಕಕ್ಕೆ, ಹೆಣ್ಣುಮಕ್ಕಳ ಶಿಕ್ಷಣದ ದೇಗುಲವನ್ನು ನಾಶಪಡಿಸುವ ಮೂಲಕ ಮೈಸೂರಿನ ರಾಮಕೃಷ್ಣ ಮಠ ತನ್ನ ಸಾಂಸ್ಕೃತಿಕ ಕ್ರೌರ್ಯ ಮತ್ತು ಬೌದ್ಧಿಕ ದಾರಿದ್ರ್ಯವನ್ನು ಪ್ರದರ್ಶಿಸಿದೆ. ಶಾಲಾ ಕಟ್ಟಡವನ್ನು ಮೂಲ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆಯಷ್ಟೇ, ಶಾಲೆಯ ಚಾರಿತ್ರಿಕ ಅಸ್ತಿತ್ವವನ್ನು ಉಳಿಸಿಕೊಳ್ಳಲಾಗುವುದು ಎಂದು ಹೇಳುವುದು ಇದೇ ಬೌದ್ಧಿಕ ದಾರಿದ್ರ್ಯದ ಮತ್ತೊಂದು ಸ್ವರೂಪ.

ಒಂದು ಶಾಲೆಯ ಅಸ್ತಿತ್ವಕ್ಕೆ ಎರಡು ಆಯಾಮಗಳಿರುತ್ತವೆ. ಚಾರಿತ್ರಿಕ ಪರಂಪರೆಯನ್ನು ಹೊಂದಿರುವ ಒಂದು ಶಾಲೆಗೆ ಬೌದ್ಧಿಕವಾಗಿ, ಜಂಗಮ ಸ್ವರೂಪದ ಅಸ್ತಿತ್ವ ಚಿರಂತನವಾಗಿರುತ್ತದೆ. ಮತ್ತೊಂದೆಡೆ ಸ್ಥಾವರ ರೂಪದಲ್ಲಿ ಇಂತಹ ಒಂದು ಶಾಲೆ ತನ್ನದೇ ಆದ ಪಾರಂಪರಿಕ ಅಸ್ತಿತ್ವವನ್ನು ಹೊಂದಿರುತ್ತದೆ. ಮಹಾರಾಣಿ ಎನ್‌ಟಿಎಂ ಹೆಣ್ಣು ಮಕ್ಕಳ ಶಾಲೆಯ ಪರಂಪರೆ ಇರುವುದು ಅದರ ಆಶಯಗಳಲ್ಲಿ. ಭಾರತದ ಶ್ರೇಣೀಕೃತ-ಪಿತೃಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣವೇ ಮರೀಚಿಕೆಯಾಗಿದ್ದಂತಹ ಕಾಲಘಟ್ಟದಲ್ಲಿ ರಾಜಪ್ರಭುತ್ವವೊಂದು ಹೆಣ್ಣುಮಕ್ಕಳಿಗಾಗಿಯೇ ಪ್ರತ್ಯೇಕ ಶಾಲೆಯನ್ನು ತೆರೆಯುವುದು ಮತ್ತು ಕನ್ನಡ ಮಾಧ್ಯಮದಲ್ಲಿ ನಡೆಸುವುದು ಈ ಪರಂಪರೆಯ ದ್ಯೋತಕ. ಈ ಶಾಲೆಯ ಆರಂಭ ಒಂದು ಜೋಪಡಿಯಲ್ಲೇ ಆಗಿದ್ದರೂ, ಅದು ಐವತ್ತು ವರ್ಷಗಳಿಂದ ಮೂರು ಪೀಳಿಗೆಯ ಹೆಣ್ಣುಮಕ್ಕಳ ಶೈಕ್ಷಣಿಕ ನೆಲೆಯಾಗಿ ಒಂದು ಸ್ಥಾವರದಲ್ಲಿ ವಿಜೃಂಭಿಸಿದೆ. ಈ ಸ್ಥಾವರವನ್ನು ಸಂರಕ್ಷಿಸುವುದು ಇತಿಹಾಸ ಪ್ರಜ್ಞೆ ಇರುವ ಒಂದು ಸರಕಾರದ ವುತ್ತು ಸಮಾಜದ ನೈತಿಕ ಕರ್ತವ್ಯ.

19ನೇ ಶತಮಾನದ ರಾಜಪ್ರಭುತ್ವದ ಕೊಡುಗೆಯಾದ ಎನ್‌ಟಿಎಂ ಶಾಲೆ ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನ್ನದೇ ಆದ ಒಂದು ಸ್ಥಾವರವನ್ನು ನಿರ್ಮಿಸಿಕೊಂಡಿತ್ತು. ಈ ಸ್ಥಾವರವನ್ನು ಧ್ವಂಸ ಮಾಡುವುದು ಮತ್ತು ಈ ವಿಧ್ವಂಸಕ ಕೃತ್ಯವನ್ನು ಸ್ಥಳಾಂತರ ಎಂದು ಸರಳೀಕರಿಸುವುದು ಸೂಕ್ಷ್ಮ ಸಂವೇದನೆ ಇಲ್ಲದ, ಇತಿಹಾಸ ಪ್ರಜ್ಞೆ ಇಲ್ಲದ ಬೌದ್ಧಿಕ ದೀವಾಳಿತನವನ್ನು ಪ್ರದರ್ಶಿಸುತ್ತದೆ. ಈ ಸ್ಥಾವರವನ್ನು ಕೆಡವಿ, ಜಂಗಮ ಸನ್ಯಾಸಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಭವ್ಯ ಸ್ಮಾರಕವನ್ನು ನಿರ್ಮಿಸಲು ಮುಂದಾಗಿರುವ ರಾಮಕೃಷ್ಣ ಮಠ ವಿವೇಕಾನಂದರ ಆಧ್ಯಾತ್ಮಿಕ ಚಿಂತನೆಗೆ ಅಪಚಾರ ಎಸಗಿರುವುದೇ ಅಲ್ಲದೆ, ಸಾವಿರಾರು ಹೆಣ್ಣುಮಕ್ಕಳ ಹೆಜ್ಜೆ ಗುರುತುಗಳನ್ನು ಒಮ್ಮೆಲೇ ಅಳಿಸಿಹಾಕುವ ಮೂಲಕ, ತನ್ನ ಸಾಂಸ್ಕೃತಿಕ ಕ್ರೌರ್ಯವನ್ನು ಪ್ರದರ್ಶಿಸಿದೆ. ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಭೂಮಿಯೂ ಒಂದು ಮಾರುಕಟ್ಟೆ ಸರಕಾಗಿರುವುದರಿಂದ, ಒಂದು ಶಾಲೆಯ ನೆಲೆಯೂ ಸಹ ಹರಾಜು ಹಾಕಬಹುದಾದ ಕಟ್ಟಡದಂತೆಯೇ ಕಾಣುವುದು ಸಹಜ.

ಆದರೆ ರಾಮಕೃಷ್ಣ ಮಠ ಈ ಸ್ಥಾವರವನ್ನು ಕೆಡವುವ ಮೂಲಕ ಚರಿತ್ರೆಯನ್ನೇ ಸಮಾಧಿ ಮಾಡಿದೆ. ಶಾಲೆ ಎನ್ನುವುದು ಸಮಾಜ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಒಂದು ಜಂಗಮ ರೂಪಿ ಸ್ಥಾವರ. ಚಾರಿತ್ರಿಕವಾಗಿ ತನ್ನದೇ ಆದ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಹೊಂದಿದ್ದ ಜ್ಞಾನ ಪರಂಪರೆಯ ಒಂದು ಕಟ್ಟಡವನ್ನು ಕೆಡವಿ, ವಿವೇಕಾನಂದರ ಆಧ್ಯಾತ್ಮಿಕ ಚಿಂತನೆಗಳ ಸ್ಮಾರಕವನ್ನು ನಿರ್ಮಿಸಿದರೆ ಅದು ಒಂದು ಬೌದ್ಧಿಕ ಸಮಾಧಿಯಾಗಿಯೇ ಕಾಣುತ್ತದೆ. ಸಂಸ್ಕೃತಿಯ ಬಗ್ಗೆ ಪುಂಖಾನುಪುಂಖ ಉಪನ್ಯಾಸಗಳನ್ನು ನೀಡುವ ರಾಮಕೃಷ್ಣ ಮಠದ ವಿವೇಕಾನುಯಾಯಿಗಳಿಗೆ ಒಂದು ಚಾರಿತ್ರಿಕ ಶಿಕ್ಷಣ ಸಂಸ್ಥೆಯ ಹಿಂದೆ, ಸುದೀರ್ಘ ಸಾಂಸ್ಕೃತಿಕ ಪರಂಪರೆಯೂ ಇದೆ ಎಂಬ ವಿವೇಕ, ಪರಿಜ್ಞಾನ ಇರಬೇಕಿತ್ತಲ್ಲವೇ? ಈ ಶಾಲೆಯ ಕಟ್ಟಡವನ್ನು ಉಳಿಸಿಕೊಂಡೇ ವಿವೇಕ ಸ್ಮಾರಕ ನಿರ್ಮಿಸುವ ಅವಕಾಶಗಳು ಇದ್ದಾಗಲೂ, ರಾತ್ರೋರಾತ್ರಿ ಕಟ್ಟಡವನ್ನು ಧ್ವಂಸ ಮಾಡುವ ಮೂಲಕ ಜಿಲ್ಲಾಡಳಿತ, ರಾಮಕೃಷ್ಣ ಮಠದ ಈ ಸಾಂಸ್ಕೃತಿಕ ಕ್ರೌಯರ್ಕ್ಕೆ ಅಧಿಕೃತ ಮಾನ್ಯತೆ ನೀಡಿಬಿಟ್ಟಿದೆ.

ಧ್ವಂಸಗೊಂಡ ಐತಿಹಾಸಿಕ ಹೆಣ್ಣುಮಕ್ಕಳ ಶಾಲೆಯ ಕಟ್ಟಡವನ್ನು ಕೇವಲ ಸಿಮೆಂಟು ಗಾರೆಗಳ ಗುಪ್ಪೆಯಂತೆ ಕಾಣುವ ಇತಿಹಾಸ ತಜ್ಞರು, ಕನ್ನಡದ ಪರಿಚಾರಕರು ಮತ್ತು ಪ್ರಜ್ಞಾವಂತರಿಗೆ, ಈ ಕಟ್ಟಡದ ಗೋಡೆ ಗೋಡೆಗಳಲ್ಲೂ ಅಂತರ್ಗತವಾಗಿರುವ ಚರಿತ್ರೆಯ ಹೆಜ್ಜೆಗಳನ್ನು ಗುರುತಿಸುವ ವ್ಯವಧಾನ ಇರಬೇಕಲ್ಲವೇ? ರಾಮಕೃಷ್ಣ ಮಠ ಒಂದು ವಾಣಿಜ್ಯೋದ್ಯಮವಾಗಿ, ಶಿಕ್ಷಣ ಮತ್ತು ಅಧ್ಯಾತ್ಮವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸಾಂಸ್ಕೃತಿಕ ಸಂಸ್ಥೆಯಂತೆ ನೆಲೆಗೊಂಡಿದೆ. ವಿವೇಕಾನಂದರ ಅಧ್ಯಾತ್ಮ ಬೋಧನೆಗೂ, ರಾಮಕೃಷ್ಣ ಮಠದ ಅಧ್ಯಾತ್ಮ ಮಾರುಕಟ್ಟೆಗೂ ಇರುವ ಅಂತರವನ್ನು ಗುರುತಿಸುವಷ್ಟು ಪ್ರಜ್ಞೆ ಪ್ರಜ್ಞಾವಂತ ಸಮಾಜದಲ್ಲಿ ಇರಬೇಕಲ್ಲವೇ? ಕೆಡವಲಾಗಿರುವ ಶಾಲಾ ಕಟ್ಟಡದ ಕಣಕಣಗಳಲ್ಲೂ ಮೈಸೂರಿನ ಲಕ್ಷಾಂತರ ಬಡ ಹೆಣ್ಣುಮಕ್ಕಳ ಚಾರಿತ್ರಿಕ ಹೆಜ್ಜೆ ಗುರುತುಗಳನ್ನು ಕಾಣಬೇಕಾದ ಪ್ರಜ್ಞಾವಂತಿಕೆ ನಮ್ಮಲ್ಲಿರಬೇಕಲ್ಲವೇ ?

ಸ್ಥಳಾಂತರಗೊಂಡ ಶಾಲೆ ನಾಳೆ ಮತ್ತೊಂದು ಶಾಲೆಯಲ್ಲಿ ವಿಲೀನವಾಗುತ್ತದೆ. ಮತ್ತೊಂದು ದಿನ ನಿಶ್ಶೇಷವಾಗಿ ಇತಿಹಾಸದ ಹಾಳೆಗಳಲ್ಲಿ ಉಲ್ಲೇಖನೀಯವಾಗಿ ಉಳಿದುಬಿಡುತ್ತದೆ. ಎನ್‌ಟಿಎಂ ಹೆಣ್ಣುಮಕ್ಕಳ ಶಾಲೆ ಕೇವಲ ರಾಜಪರಂಪರೆಯ ದ್ಯೋತಕವಲ್ಲ, ರಾಜಪ್ರಭುತ್ವದಲ್ಲಿ ಅಪರೂಪಕ್ಕೆ ಕಾಣಬಹುದಾದ ಜನೋಪಯೋಗಿ ಪರಂಪರೆಯ ದ್ಯೋತಕ. ನಿರಂಕುಶಾಧಿಕಾರದಲ್ಲಿ ಸ್ಥಾಪನೆಯಾದ ಒಂದು ಜನೋಪಯೋಗಿ ಸಂಸ್ಥೆಯನ್ನು ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾಶಪಡಿಸುವುದು ನಾಚಿಕೆಗೇಡಿನ ವಿಚಾರವಲ್ಲವೇ? ಮೈಸೂರಿನ ಸಮಸ್ತ ಜನತೆಯೂ ಇಂದು ನಾಚಿ ತಲೆತಗ್ಗಿಸುವಂತಾಗಿದೆ. ಒಂಭತ್ತು ವರ್ಷಗಳ ಸುದೀರ್ಘ ಹೋರಾಟದ ಮೂಲಕ ಮೈಸೂರಿನ ಕನ್ನಡ ಪರ ಮನಸ್ಸುಗಳು ಈ ಸ್ಥಾವರವನ್ನು, ಅದರ ಜಂಗಮ ಸ್ವರೂಪವನ್ನು ಉಳಿಸಿಕೊಳ್ಳಲು ಹೋರಾಡಿವೆ. ಈ ಹೋರಾಟಗಳನ್ನು ವಿಫಲಗೊಳಿಸುವ ಷಡ್ಯಂತ್ರಗಳ ನಡುವೆಯೇ ಮೈಸೂರಿನ ಪ್ರಜ್ಞಾವಂತ ಜನತೆ ಎನ್‌ಟಿಎಂ ಶಾಲೆಯ ಉಳಿವಿಗೆ ಶ್ರಮಿಸಿದೆ. ಆದರೆ ಕೊನೆಗೂ ಸಾಂಸ್ಕೃತಿಕ ರಾಜಕಾರಣದ ಕ್ರೌರ್ಯ ವಿಜಯಿಯಾಗಿದೆ. ಎನ್‌ಟಿಎಂ ಶಾಲೆಯ ಕಟ್ಟಡವನ್ನು ಕೆಡವುವ ಮೂಲಕ ಆಡಳಿತ ವ್ಯವಸ್ಥೆ ಮತ್ತು ರಾಮಕೃಷ್ಣ ಮಠ ಚರಿತ್ರೆಯ ಸಮಾಧಿಯನ್ನು ನಿರ್ಮಿಸಲು ಹೊರಟಿವೆ. ಈ ಸಮಾಧಿಯ ಮೇಲೆ ನಿರ್ಮಾಣವಾಗುವ ವಿವೇಕ ಸ್ಮಾರಕದ ಛಾಯೆಯಲ್ಲಿ ಇತಿಹಾಸದ ಭೂತ ಕಾಡುತ್ತಲೇ ಇರುತ್ತದೆ. ಅಳಿಸಿಹಾಕಲಾದ ಚರಿತ್ರೆಯ ಹೆಗ್ಗುರುತುಗಳು, ಕರಾಳ ನೆನಪಿನಂತೆ ವಿವೇಕಾನಂದರ ಪ್ರತಿಮೆಯ ಪ್ರಭಾವಳಿಯಾಗಿ ಕಾಡುತ್ತಲೇ ಇರುತ್ತವೆ. ಹಾಗೆಯೇ ಎನ್‌ಟಿಎಂ ಶಾಲೆಯ ಇತಿಹಾಸದ ಪುಟಗಳಲ್ಲಿ ವಿಶ್ವಾಸ ದ್ರೋಹದ ಛಾಯೆಯೂ ಶಾಶ್ವತವಾಗಿ ಉಳಿಯಲಿದೆ. ಜಾತಿ ಶ್ರೇಷ್ಠತೆ, ಅಂಧ ಮತಶ್ರದ್ಧೆ, ಮತಾಂಧತೆ ಮತ್ತು ಸಾಂಸ್ಕೃತಿಕಕ್ರೌರ್ಯದ ಸಮಕಾಲೀನ ಇತಿಹಾಸ ವಿವೇಕ ಸ್ಮಾರಕದ ಫಲಕಗಳಲ್ಲಿ ಸದಾ ಜ್ವಲಿಸುತ್ತಲೇ ಇರುತ್ತವೆ.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News