ಅಬುಧಾಬಿ: ಗ್ಯಾಸ್ ಸ್ಫೋಟದಿಂದ ಕಟ್ಟಡಕ್ಕೆ ಬೆಂಕಿ; ಕ್ಷಿಪಣಿ ದಾಳಿಯ ಎಚ್ಚರಿಕೆ ಸಂದೇಶ ರವಾನಿಸಿದ ಅಮೆರಿಕ ದೂತಾವಾಸ
ದುಬೈ, ಫೆ.9: ಅಬುಧಾಬಿಯ ಹಮ್ದಾನ್ ರಸ್ತೆಯಲ್ಲಿನ ಕಟ್ಟಡವೊಂದರಲ್ಲಿ ಮಂಗಳವಾರ ಮಧ್ಯರಾತ್ರಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದ ಬಳಿಕ ಅಧಿಕಾರಿಗಳು ಸಂಭಾವ್ಯ ಕ್ಷಿಪಣಿ ದಾಳಿಯ ಬಗ್ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದು ಈ ಪ್ರದೇಶದಲ್ಲಿ ಆತಂಕದ ವಾತಾವರಣ ನೆಲೆಸಿತು ಎಂದು ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಡಬ್ಯ್ಲೂಎಎಮ್ ವರದಿ ಮಾಡಿದೆ.
ಯೆಮನ್‌ನ ಹೌದಿ ಬಂಡುಗೋರರು ಇತ್ತೀಚೆಗೆ ಅಬುಧಾಬಿಯನ್ನು ಗುರಿಯಾಗಿಸಿಕೊಂಡು ಸರಣಿ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿದ್ದರು. ಮಂಗಳವಾರ ತಡರಾತ್ರಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಬೆಂಕಿಯ ಉಂಡೆ ಆಕಾಶದೆತ್ತರಕ್ಕೆ ಹಾರಿದ್ದು ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೌತಿ ಬಂಡುಗೋರರು ಮತ್ತೆ ದಾಳಿ ನಡೆಸಿದರು ಎಂದು ಭಾವಿಸಿದ ಅಮೆರಿಕದ ರಾಯಭಾರ ಕಚೇರಿ ತಕ್ಷಣ ಭದ್ರತಾ ಕಟ್ಟೆಚ್ಚರದ ಸಂದೇಶ ಮೊಳಗಿಸಿತು.
ನಗರದ ಮೇಲೆ ಸಂಭಾವ್ಯ ಕ್ಷಿಪಣಿ ಅಥವಾ ಡ್ರೋನ್ ದಾಳಿ ನಡೆದಿರುವ ವರದಿ ಬಂದಿದೆ ಎಂದು ರಾಯಭಾರ ಕಚೇರಿ ಪ್ರಕಟಿಸಿತು. ಆದರೆ ಕೆಲ ಹೊತ್ತಿನ ಬಳಿಕ ಮತ್ತೊಂದು ಸಂದೇಶ ರವಾನಿಸಿದ್ದು ಸಿಲಿಂಡರ್ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಎಮಿರೇಟ್ಸ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.
ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಸಂಭವಿಸಿದ ಬೆಂಕಿಯನ್ನು ಅಗ್ನಿಶಾಮಕ ಪಡೆ ಹಾಗೂ ತುರ್ತು ಕಾರ್ಯನಿರ್ವಹಣಾ ಪಡೆ ನಿಯಂತ್ರಿಸಿದ್ದು ಅಲ್ಲಿದ್ದ ಜನರನ್ನು ತೆರವುಗೊಳಿಸಿದೆ ಎಂದು ಸುದ್ಧಿಸಂಸ್ಥೆಯ ವರದಿ ತಿಳಿಸಿದೆ.
/**/