ಹಿಜಾಬ್ ವಿವಾದವನ್ನು ಸಂವಿಧಾನದ ಚೌಕಟ್ಟಿನಲ್ಲಿ ಬಗೆಹರಿಸಿ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದಿಂದ ಠರಾವು ಮಂಡನೆ

Update: 2022-02-10 13:18 GMT

ಉಡುಪಿ : ಉಡುಪಿಯ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶಿರವಸ್ತ್ರ ಧಾರಣೆಯ ಕುರಿತು ಎಬ್ಬಿಸಲಾಗಿರುವ ವಿವಾದವನ್ನು ಸಂವಿಧಾನದ ಚೌಕಟ್ಟಿನಲ್ಲಿ ಬಗೆಹರಿಸಬೇಕು. ಕಾಲೇಜು ಅಭಿವೃದ್ಧಿ ಸಮಿತಿಯ ಸಂಕುಚಿತ ಹಾಗೂ ನಕಾರಾತ್ಮಕ ನಿಲುವು ಈ ಸಮಸ್ಯೆಯ ಪರಿಹಾರಕ್ಕೆ ದೊಡ್ಡ ತಡೆಯಾಗಿ ಪರಿಣಮಿಸಿತು. ಶಾಲೆಯ ಹಂತದಲ್ಲಿ ಪರಿಹರಿಸಬಹುದಾದ ವಿಷಯ ಒಂದು ದೊಡ್ಡ ಸಮಸ್ಯೆಯನ್ನು ಸೃಷ್ಟಿಸಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಆರೋಪಿಸಿದೆ.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕೇಂದ್ರ ಸಮಿತಿಯ ಸಭೆಯಲ್ಲಿ ವಿದ್ಯಾರ್ಥಿನಿಯರ ಶಿರವಸ್ತ್ರ ವಿವಾದದ ಕುರಿತು ಚರ್ಚೆ ನಡೆಸಿ ಮಂಡಿಸಿರುವ ಒಟ್ಟು ಏಳು ಠರಾವುಗಳನ್ನು ಒಕ್ಕೂಟದ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಇಂದು ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಪ್ರೌಢಾವಸ್ಥೆಗೆ ತಲುಪಿದ ಹೆಣ್ಣು ಮಕ್ಕಳಿಗೆ ಇಸ್ಲಾಮ್ ಧರ್ಮದಲ್ಲಿ ಶಿರ ವಸ್ತಾಧಾರಣೆ ಧಾರ್ಮಿಕ ಕರ್ತವ್ಯವಾಗಿದೆ. ಇದಕ್ಕೆ ದೇಶದ ಸಂವಿಧಾನವೂ ಮುಕ್ತ ಅವಕಾಶ ನೀಡಿದೆ. ಆದ್ದರಿಂದ ದೇಶದ ಸಂವಿಧಾನದಕ್ಕನುಸಾರವಾಗಿ ನಡೆಯುವ ಯಾವುದೇ ಸಂಸ್ಥೆಯು ಇದಕ್ಕೆ ಅಡ್ಡಿಯುಂಟು ಮಾಡಬಾರದು. ವಿದ್ಯಾಸಂಸ್ಥೆಗಳಿಗೆ ಸಂಬಂಧಿಸಿದ ಯಾವುದೇ ನಿಯಮ ಅಥವಾ ಉಪ ನಿಯಮಗಳನ್ನು, ಯಾವುದೇ ಜಾತಿ, ಧರ್ಮ, ವರ್ಗ, ಸಮುದಾಯ, ಅಥವಾ ಸಂಪ್ರದಾಯದ ವರು ತಮ್ಮ ಶಿಕ್ಷಣದ ಹಕ್ಕಿನಿಂದ ವಂಚಿತರಾಗದಂತೆ ಸಂವೇದನಾಶೀಲವಾಗಿರಚಿಸಬೇಕು. ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ಉದ್ದೇಶ ಮಕ್ಕಳಿಗೆ ಶಿಕ್ಷಣ ನೀಡುವುದು ಆಗಿರಬೇಕೇ ಹೊರತು ಇತರರ ಆಚರಣೆಗಳನ್ನು ತಡೆಯುವುದು ಅಥವಾ ತಮ್ಮ ಆಚರಣೆಗಳನ್ನು ಅವರ ಮೇಲೆ ಹೇರುವುದು ಆಗಿರಬಾರದು. ಭಾರತದಂತಹ ವೈವಿಧ್ಯಪೂರ್ಣ ದೇಶದಲ್ಲಿ ಶಿಕ್ಷಣ ಸಂಬಂಧಿ ನಿಲುವು ಮತ್ತು ನಿಯಮಗಳು ಸಾಂಸ್ಕೃತಿಕ, ಸಾಮುದಾಯಿಕ ಮತ್ತು ಸ್ಥಳೀಯ ನಂಬಿಕೆಗಳು, ಭಾವನೆಗಳು ಮತ್ತು ಆಚರಣೆಗಳ ಬಗ್ಗೆ ಸಂವೇದನಾಶೀಲವಾಗಿರಬೇಕು. ಹಿಜಾಬ್ ಧಾರಣೆ ಯಾವುದೇ ಸಮವಸ್ತ್ರ ಸಂಹಿತೆಯನ್ನು ಉಲ್ಲಂಘಿಸುವುದಿಲ್ಲ. ಅದನ್ನು ಧರಿಸ ಬಯಸುವ ವಿದ್ಯಾರ್ಥಿನಿಯರು ಶಾಲೆಯ ಸಮವಸ್ತ್ರ ನಿಯಮದಲ್ಲಿ ತಿಳಿಸಲಾಗಿರುವ ಬಣ್ಣಕ್ಕೆ ಅನುಸಾರವಾದ ಹಿಜಾಬ್ ಧರಿಸಲು ಸಿದ್ಧರಾಗಿದ್ದು ಅವರ ಈ ಬೇಡಿಕೆ ನ್ಯಾಯೋಚಿತವಾಗಿದೆ. ರಾಜಕೀಯ ಪಕ್ಷಗಳು ಮತ್ತು ಅವುಗಳಿಂದ ಬೆಂಬಲಿತ ಸಂಘ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ನಡೆಸಬಾರದು ಮತ್ತು ವಿದ್ಯಾರ್ಥಿಗಳ ಧಾರ್ಮಿಕ ಮತ್ತು ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿಯುವ ಅಥವಾ ವಿದ್ಯಾರ್ಥಿಗಳನ್ನು ಪರಸ್ಪರ ಸಂಘರ್ಷಕ್ಕೆ ಪ್ರಚೋದಿಸುವಂತಹ ಚಟುವಟಿಕೆಗಳನ್ನು ನಡೆಸಬಾರದು ಎಂಬ ಠರಾವು ಮಂಡಿಸಲಾಗಿದೆಂದು ಇಬ್ರಾಹಿಂ ಸಾಹೇಬ್ ಕೋಟ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟ ಉಪಾಧ್ಯಕ್ಷ ಇದ್ರೀಸ್ ಹೂಡೆ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ, ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್ ಕಟಪಾಡಿ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಅಝೀಝ್, ತಾಲೂಕು ಅಧ್ಯಕ್ಷ ಜಫರುಲ್ಲಾ ಹೂಡೆ, ಇಕ್ಬಾಲ್ ಮನ್ನಾ, ಇಕ್ಬಾಲ್ ಕಟಪಾಡಿ ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News