ರಾಜ್ಯಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು: ಒಕ್ಕೂಟ ವ್ಯವಸ್ಥೆಯನ್ನು ಕೊಲ್ಲುವ 5 ವಿಧಾನಗಳು

Update: 2022-02-11 19:30 GMT

ನರೇಂದ್ರ ಮೋದಿ ಅಧಿಕಾರದಲ್ಲಿದ್ದ ಏಳೂವರೆ ವರ್ಷದ ಅವಧಿಯಲ್ಲಿ ಸಂವಿಧಾನದ 356ನೇ ವಿಧಿಯನ್ನು 8 ಬಾರಿ ಬಳಸಲಾಗಿದೆ. ಅಂದರೆ, ಸರಾಸರಿ ವರ್ಷಕ್ಕೆ ಸುಮಾರು ಒಂದು ಬಾರಿಯಂತೆ. ಕೇವಲ ಇದೊಂದೇ ಮಾನದಂಡದಲ್ಲಿ ಅಳೆಯುವುದಾದರೆ, ರಾಜ್ಯಗಳ ಹಕ್ಕುಗಳ ವಿಷಯದಲ್ಲಿ ಮೋದಿ ಇಂದಿರಾ ಗಾಂಧಿಗಿಂತ ಹೆಚ್ಚಿನ ಗೌರವವನ್ನು ಹೊಂದಿದ್ದಾರೆ ಎಂಬುದಾಗಿ ಹೇಳಬಹುದು. ಆದರೆ, ಇತರ ವಿಧಾನಗಳಲ್ಲಿ ಅವರು ಹಿಂದಿನ ಯಾವುದೇ ಪ್ರಧಾನಿಗಿಂತ ಭಾರತೀಯ ಒಕ್ಕೂಟ ವ್ಯವಸ್ಥೆಯನ್ನು ಅತಿ ಹೆಚ್ಚು ಕಡೆಗಣಿಸಿದ್ದಾರೆ ಹಾಗೂ ದುರ್ಬಲಗೊಳಿಸಿದ್ದಾರೆ.


ಭಾರತೀಯ ಒಕ್ಕೂಟ ವ್ಯವಸ್ಥೆಯು ಇಂದಿನ ದಿನಗಳಲ್ಲಿ ಸುದ್ದಿಯಲ್ಲಿದೆ. ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳ ಸರಕಾರಗಳು ವಿನ್ಯಾಸಗೊಳಿಸಿರುವ ಸ್ತಬ್ಧಚಿತ್ರಗಳಿಗೆ ಗಣರಾಜ್ಯೋತ್ಸವ ದಿನಾಚರಣೆಯ ಮೆರವಣಿಗೆಯಲ್ಲಿ ಅವಕಾಶ ನಿರಾಕರಿಸಿರುವುದನ್ನು ಆ ರಾಜ್ಯಗಳ ಮೇಲೆ ನಡೆಸಿದ ಸಾಂಕೇತಿಕ ದಾಳಿ ಎಂಬುದಾಗಿ ಪರಿಗಣಿಸಲಾಗಿದೆ. ಈ ಮೂರು ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳ ಸರಕಾರಗಳಿವೆ. ಹಾಲಿ ಸಂಸತ್ ಅಧಿವೇಶನದಲ್ಲಿ ಈ ಕುರಿತ ಚರ್ಚೆಯು ಸಾಂಕೇತಿಕತೆಯಿಂದ ನೈಜತೆಯತ್ತ ಸಾಗಿದೆ. ಸಂವಿಧಾನದ ತತ್ವಗಳು ಮತ್ತು ನಿಯಮಗಳಿಗೆ ವಿರುದ್ಧವಾಗಿ ರಾಜ್ಯಗಳ ಹಕ್ಕುಗಳನ್ನು ಕಡೆಗಣಿಸುತ್ತಿರುವುದಕ್ಕಾಗಿ ಹಲವಾರು ಪ್ರತಿಪಕ್ಷಗಳ ಸಂಸದರು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 ಭಾರತೀಯ ಒಕ್ಕೂಟ ವ್ಯವಸ್ಥೆಯ ಮೇಲೆ ಮೊದಲ ಪ್ರಮುಖ ದಾಳಿ ನಡೆದದ್ದು 1959ರಲ್ಲಿ. ಅಂದು ಕೇರಳದ ಕಮ್ಯುನಿಸ್ಟ್ ಸರಕಾರವನ್ನು ಸಂವಿಧಾನದ 356ನೇ ವಿಧಿಯನ್ನು ಬಳಸಿ ವಜಾಗೊಳಿಸಲಾಗಿತ್ತು. ಆ ಕ್ರಮದ ಹಿಂದೆ ಇದ್ದವರ ಪೈಕಿ ಪ್ರಮುಖರು ಕಾಂಗ್ರೆಸ್ ಅಧ್ಯಕ್ಷೆ ಇಂದಿರಾ ಗಾಂಧಿ ಮತ್ತು ಗೃಹ ಸಚಿವ ಗೋವಿಂದ ವಲ್ಲಭ ಪಂತ್. ಆದರೆ, ಅಂದು ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂಗೆ ಈ ಅಪವಾದದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಘಟನೆಯು ನೆಹರೂರ ಪ್ರಜಾಪ್ರಭುತ್ವವಾದಿ ವಿಶ್ವಾಸಾರ್ಹತೆಯ ಮೇಲೆ ಕಪ್ಪು ಚುಕ್ಕೆಯಾಗಿಯೇ ಉಳಿದಿದೆ.

ಪ್ರಧಾನಿಯಾಗಿ ನೆಹರೂರ ಸುದೀರ್ಘ ಅವಧಿಯಲ್ಲಿ ಸಂವಿಧಾನದ 356ನೇ ವಿಧಿಯನ್ನು ಒಟ್ಟು 8 ಬಾರಿ ಬಳಸಲಾಗಿತ್ತು. ಇಂದಿರಾ ಗಾಂಧಿ ಪ್ರಧಾನಿಯಾದ ಬಳಿಕ ಈ ವಿಧಿಯನ್ನು ಆಗಾಗ ಬಳಸಿದರು. ಒಂದು ಲೆಕ್ಕಾಚಾರದಂತೆ, ಪ್ರಧಾನಿಯಾಗಿ ಇಂದಿರಾ ಗಾಂಧಿಯ ಎರಡು ಅವಧಿಗಳಲ್ಲಿ (1966-1977 ಮತ್ತು 1980-1984) ಈ ವಿಧಿಯನ್ನು ಒಟ್ಟು 50 ಬಾರಿ ಬಳಸಲಾಗಿತ್ತು. ಅಂದರೆ, ಇದು ವರ್ಷಕ್ಕೆ ಸರಾಸರಿ 3 ಬಾರಿಯಾಗುತ್ತದೆ. 356ನೇ ವಿಧಿಯನ್ನು ಮುಖ್ಯವಾಗಿ ಎರಡು ಹಂತಗಳಲ್ಲಿ ಬೇಕಾಬಿಟ್ಟಿ ಬಳಸಲಾಗಿತ್ತು. ಮೊದಲನೆಯದು, 1970-71ರಲ್ಲಿ; ಇಂದಿರಾ ಗಾಂಧಿ ಕಾಂಗ್ರೆಸ್ ಪಕ್ಷವನ್ನು ವಿಭಜಿಸಿದ ಬಳಿಕ. ಆ ಹಂತದಲ್ಲಿ ರಾಜ್ಯ ಸರಕಾರಗಳಲ್ಲಿ ತನ್ನ ಬಣವು ಪ್ರಾಬಲ್ಯ ಪಡೆಯಬೇಕು ಎಂಬುದಾಗಿ ಅವರು ಬಯಸಿದ್ದರು. ಎರಡನೆಯದು, 1980ರಲ್ಲಿ; ಇಂದಿರಾ ಗಾಂಧಿ ಕೇಂದ್ರದಲ್ಲಿ ಮರಳಿ ಅಧಿಕಾರಕ್ಕೆ ಬಂದ ಬಳಿಕ. ಆಗ ಹಲವಾರು ರಾಜ್ಯಗಳಲ್ಲಿದ್ದ ಬೇರೆ ಪಕ್ಷಗಳ ಸರಕಾರಗಳನ್ನು ಅವರು ವಜಾಗೊಳಿಸಿದರು.

ಭಾರತೀಯ ರಾಜಕಾರಣದಲ್ಲಿ ಇಂದಿರಾ ಗಾಂಧಿ ಯುಗ 1989ರಲ್ಲಿ ಕೊನೆಗೊಂಡಿತು. ಆ ವರ್ಷ ಇಂದಿರಾ ಗಾಂಧಿಯ ಮಗ ಹಾಗೂ ಪ್ರಧಾನಿ ರಾಜೀವ್ ಗಾಂಧಿ ಚುನಾವಣೆಯಲ್ಲಿ ಸೋತರು. ಅಂದು ಭಾರತೀಯ ಒಕ್ಕೂಟ ವ್ಯವಸ್ಥೆಯ ಸುವರ್ಣ ಯುಗ ಆರಂಭಗೊಂಡಿತೆನ್ನಬಹುದು (ಹಿಂದಿರುಗಿ ನೋಡಿದಾಗ ಹೀಗೆ ಅನಿಸುತ್ತದೆ). ಲೈಸನ್ಸ್-ಪರ್ಮಿಟ್ ರಾಜ್ ವ್ಯವಸ್ಥೆ ಕೊನೆಗೊಂಡಿತು. ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡದಿರುವ ಜಾಣತನವನ್ನು ಭಾರತೀಯ ನಾಗರಿಕರು ಪ್ರದರ್ಶಿಸಿದರು. ಈ ಬೆಳವಣಿಗೆಗಳು ದೇಶವನ್ನು ಆರ್ಥಿಕ ಪ್ರಗತಿಯತ್ತ ಒಯ್ದಿತು ಹಾಗೂ ಆಡಳಿತದಲ್ಲಿ ಸಹಕಾರದ ಮನೋಭಾವನೆಯನ್ನು ಬೆಳೆಸಿತು. ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಪರಸ್ಪರ ಗೌರವದ ವಾತಾವರಣ ಬೆಳೆಯಿತು. ಇದರ ಪ್ರಯೋಜನಗಳು ಎಲ್ಲಾ ಕಡೆಗೆ ತಲುಪಿದವು.

ಆದರೆ, 2014 ಮತ್ತು 2019ರಲ್ಲಿ ಬಿಜೆಪಿಯು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ, ಭಾರತೀಯ ಒಕ್ಕೂಟ ವ್ಯವಸ್ಥೆಯು ಮತ್ತೊಮ್ಮೆ ಬೆದರಿಕೆಯನ್ನು ಎದುರಿಸುತ್ತಿದೆ. ನರೇಂದ್ರ ಮೋದಿ ಅಧಿಕಾರದಲ್ಲಿದ್ದ ಏಳೂವರೆ ವರ್ಷದ ಅವಧಿಯಲ್ಲಿ ಸಂವಿಧಾನದ 356ನೇ ವಿಧಿಯನ್ನು 8 ಬಾರಿ ಬಳಸಲಾಗಿದೆ. ಅಂದರೆ, ಸರಾಸರಿ ವರ್ಷಕ್ಕೆ ಸುಮಾರು ಒಂದು ಬಾರಿಯಂತೆ. ಕೇವಲ ಇದೊಂದೇ ಮಾನದಂಡದಲ್ಲಿ ಅಳೆಯುವುದಾದರೆ, ರಾಜ್ಯಗಳ ಹಕ್ಕುಗಳ ವಿಷಯದಲ್ಲಿ ಮೋದಿ ಇಂದಿರಾ ಗಾಂಧಿಗಿಂತ ಹೆಚ್ಚಿನ ಗೌರವವನ್ನು ಹೊಂದಿದ್ದಾರೆ ಎಂಬುದಾಗಿ ಹೇಳಬಹುದು. ಆದರೆ, ಇತರ ವಿಧಾನಗಳಲ್ಲಿ ಅವರು ಹಿಂದಿನ ಯಾವುದೇ ಪ್ರಧಾನಿಗಿಂತ ಭಾರತೀಯ ಒಕ್ಕೂಟ ವ್ಯವಸ್ಥೆಯನ್ನು ಅತಿ ಹೆಚ್ಚು ಕಡೆಗಣಿಸಿದ್ದಾರೆ ಹಾಗೂ ದುರ್ಬಲಗೊಳಿಸಿದ್ದಾರೆ. ಅವುಗಳು ಯಾವುದೆಂದು ನೋಡೋಣ.

ಮೊದಲನೆಯದಾಗಿ, ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸದೆಯೇ ಮಹತ್ವದ ನೀತಿಗಳನ್ನು ರೂಪಿಸಲಾಗುತ್ತಿದೆ ಹಾಗೂ ಕಾನೂನುಗಳನ್ನು ಅಂಗೀಕರಿಸಲಾಗುತ್ತಿದೆ. ಆದರೆ, ಈ ನೀತಿಗಳು ಮತ್ತು ಕಾನೂನುಗಳನ್ನು ರಾಜ್ಯಗಳು ಜಾರಿಗೊಳಿಸಬೇಕಾಗುತ್ತದೆ. ಈಗ ಹಿಂದಕ್ಕೆ ಪಡೆಯಲಾಗಿರುವ ಕೃಷಿ ಕಾನೂನುಗಳ ವಿಷಯದಲ್ಲಿ ಇದು ತೀರಾ ಸತ್ಯವಾಗಿದೆ. ಶಿಕ್ಷಣ, ಸಹಕಾರ, ಬ್ಯಾಂಕಿಂಗ್ ಮುಂತಾದ ಮಹತ್ವದ ಕ್ಷೇತ್ರಗಳಿಗೆ ಸಂಬಂಧಿಸಿದ ನೀತಿಗಳು ಮತ್ತು ಕಾನೂನುಗಳನ್ನು ಕೇಂದ್ರ ಸರಕಾರವು ಮುಂಚಿತವಾಗಿಯೇ ನಿರ್ಧರಿಸುತ್ತದೆ ಹಾಗೂ ಬಳಿಕ ಅವುಗಳನ್ನು ರಾಜ್ಯಗಳ ಮೇಲೆ ಹೇರಲು ಮುಂದಾಗುತ್ತದೆ.

ಎರಡನೆಯದು, ಕಾನೂನು ಮತ್ತು ಸುವ್ಯವಸ್ಥೆ ರಾಜ್ಯ ವಿಷಯವಾಗಿದ್ದರೂ, ರಾಜ್ಯ ಸರಕಾರಗಳ ಕಾನೂನು ವ್ಯಾಪ್ತಿಯಲ್ಲಿ ತನ್ನ ಮೂಗು ತೂರಿಸುವುದಕ್ಕಾಗಿ ಮೋದಿ ಸರಕಾರವು ರಾಜ್ಯ ಸರಕಾರಗಳ ಸ್ವಾಯತ್ತೆ ಮತ್ತು ಸಾಮರ್ಥ್ಯವನ್ನು ಎಷ್ಟು ದುರ್ಬಲಗೊಳಿಸಬಹುದೋ ಅಷ್ಟು ದುರ್ಬಲಗೊಳಿಸಿದೆ. ನಿಜವಾದ ಭಯೋತ್ಪಾದಕರನ್ನು ಹತ್ತಿಕ್ಕುವ ಬದಲು, ರಾಜಕೀಯ ಭಿನ್ನಮತವನ್ನು ದಮನಿಸಲು ಮೋದಿ ಸರಕಾರವು ಯುಎಪಿಎ ಕಾನೂನನ್ನು ಮುಕ್ತವಾಗಿ ಹಾಗೂ ಹೊಣೆಗೇಡಿತನದಿಂದ ಬಳಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯನ್ನು ಒಂದರ ನಂತರ ಒಂದರಂತೆ ರಾಜ್ಯಗಳಿಗೆ ಕಳುಹಿಸಿದೆ. ಈ ಕಾನೂನನ್ನು 2008ರ ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ಸೀಮಿತ ಹಾಗೂ ನಿರ್ದಿಷ್ಟ ಉದ್ದೇಶಕ್ಕಾಗಿ ರೂಪಿಸಲಾಗಿತ್ತು. ಶಿಕ್ಷಿಸುವ ಅಧಿಕಾರವನ್ನು ಕೇಂದ್ರೀಕರಿಸಲು ಮೋದಿ ಸರಕಾರ ಯಾವ ರೀತಿ ಪ್ರಯತ್ನಗಳನ್ನು ಮಾಡುತ್ತಿದೆ ಎನ್ನುವುದಕ್ಕೆ ಇವು ಉದಾಹರಣೆಗಳಾಗಿವೆ.

ರಾಜ್ಯಗಳೊಂದಿಗೆ ಸಕ್ರಿಯವಾಗಿ ಸಮಾಲೋಚನೆಗಳನ್ನು ನಡೆಸುವ ಮೂಲಕ ದೇಶವನ್ನು ಒಗ್ಗೂಡಿಸುವ ದೊಡ್ಡ ಅವಕಾಶವೊಂದನ್ನು ಕೋವಿಡ್ ಸಾಂಕ್ರಾಮಿಕ ಒದಗಿಸಿತ್ತು. ಆದರೆ, ಮೋದಿ ಸರಕಾರವು ಆರಂಭದಿಂದಲೇ ಏಕಪಕ್ಷೀಯವಾಗಿ ವರ್ತಿಸಿತು. ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರವೊಂದು (ಈ ಸರಕಾರವೇ ವಂಚನೆ ಮತ್ತು ಬಲಾತ್ಕಾರದ ಮೂಲಕ ರೂಪುಗೊಂಡಿತ್ತು) ಪ್ರಮಾಣವಚನ ಸ್ವೀಕರಿಸುವವರೆಗೆ ಕಾದ ಕೇಂದ್ರ ಸರಕಾರವು, ಬಳಿಕವಷ್ಟೇ ಕೊರೋನ ವೈರಸನ್ನು ಸಾಂಕ್ರಾಮಿಕ ಎಂಬುದಾಗಿ ಪರಿಗಣಿಸಿತು. ಬಳಿಕ, ಪ್ರಧಾನಿಯವರು ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸದೆಯೇ ದೇಶವ್ಯಾಪಿ ಲಾಕ್‌ಡೌನ್ ಘೋಷಿಸಿದರು. ರಾಜ್ಯಗಳೊಂದಿಗೆ ಸಮಾಲೋಚಿಸುವುದು ಬಿಡಿ, ತನ್ನ ಸಚಿವ ಸಂಪುಟದ ಸದಸ್ಯರಿಗೂ ಒಂದು ಮಾತು ಹೇಳಲಿಲ್ಲ. ಘೋಷಣೆಯಾದ ಕೇವಲ ನಾಲ್ಕು ಗಂಟೆಗಳಲ್ಲಿ ಲಾಕ್‌ಡೌನ್ ಜಾರಿಗೆ ಬಂತು.

ಲಾಕ್‌ಡೌನ್ ಜೊತೆಗೇ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (ಎನ್‌ಡಿಎಮ್‌ಎ)ಯನ್ನೂ ಕೇಂದ್ರ ಸರಕಾರ ಜಾರಿಗೊಳಿಸಿತು. ಈಗಲೂ ರಾಜ್ಯಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸಲಿಲ್ಲ. ವೈರಸ್ ವಿರುದ್ಧದ ಹೋರಾಟದಲ್ಲಿ ಸರಕಾರ ಜಯ ಗಳಿಸಿದೆ ಎಂಬ ಹೇಳಿಕೆಗಳ ಹೊರತಾಗಿಯೂ, ಎರಡು ವರ್ಷಗಳ ಬಳಿಕವೂ ಈ ಕಾನೂನು ಜಾರಿಯಲ್ಲಿದೆ. ಜನರು ಮತ್ತು ವಸ್ತುಗಳ ಚಲನವಲನದ ಮೇಲೆ ನಿಗಾ ಇಡಲು ಈ ಕಾಯ್ದೆಯು ಕೇಂದ್ರ ಸರಕಾರಕ್ಕೆ ಅಗಾಧ ಅಧಿಕಾರವನ್ನು ನೀಡುವುದರಿಂದ ಈ ಕಾಯ್ದೆಯು ಇನ್ನಷ್ಟು ಕಾಲ ಮುಂದುವರಿಯಬಹುದು. ನಿರ್ದಿಷ್ಟ ಪ್ರಾಕೃತಿಕ ವಿಪತ್ತುಗಳನ್ನು ನಿಭಾಯಿಸಲು ನಿರ್ದಿಷ್ಟ ಅವಧಿಯವರೆಗೆ ಜಾರಿಗೊಳಿಸುವುದಕ್ಕಾಗಿ ರೂಪಿಸಲಾಗಿರುವ ಎನ್‌ಡಿಎಮ್‌ಎ, ರಾಜ್ಯಗಳ ಮೇಲಿನ ತನ್ನ ಅಧಿಕಾರವನ್ನು ಹೆಚ್ಚಿಸಲು ಈ ಸರಕಾರಕ್ಕೆ ಇನ್ನೊಂದು ಆಯುಧವಾಗಿದೆ.

ಮೂರನೆಯದು, ತನಗೆ ವಿರುದ್ಧವಾಗಿರುವ ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರಕಾರಗಳನ್ನು ದುರ್ಬಲಗೊಳಿಸಲು ಮತ್ತು ಹೆದರಿಸಲು ಮೋದಿ ಸರಕಾರವು ಸಿಬಿಐ ಮತ್ತು ಅನುಷ್ಠಾನ ನಿರ್ದೇಶನಾಲಯ ಮುಂತಾದ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡಿದೆ. ಈ ವಿಷಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಾಸ್ಯಗಳು ಹರಿದಾಡುತ್ತಿವೆ. ಶಿವಸೇನೆ, ತೃಣಮೂಲ ಕಾಂಗ್ರೆಸ್ ಅಥವಾ ಎನ್‌ಸಿಪಿಯಂತಹ ರಾಜಕೀಯ ಪಕ್ಷಗಳಿಂದ ಬಿಜೆಪಿ ಸೇರುವ ರಾಜಕಾರಣಿಗಳನ್ನು ‘ಗಂಗಾ ಸ್ನಾನ’ ಮಾಡಿಸಿ ಅವರನ್ನು ಯಾವುದೇ ಭ್ರಷ್ಟಾಚಾರ ಆರೋಪದ ಕಳಂಕದಿಂದ ಮುಕ್ತರನ್ನಾಗಿ ಮಾಡಲಾಗುತ್ತದೆ ಎಂಬ ಹಾಸ್ಯ ಜನಪ್ರಿಯವಾಗಿದೆ.

ನಾಲ್ಕನೆಯದು, ತನಗೆ ವಿರುದ್ಧವಾಗಿರುವ ರಾಜ್ಯ ಸರಕಾರಗಳ ಮೇಲೆ ಮೋದಿ ಸರಕಾರವು ವ್ಯವಸ್ಥಿತ ದಾಳಿ ನಡೆಸುತ್ತದೆ ಹಾಗೂ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ತನ್ನ ನಿಷ್ಠತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕೆಂದು ಬಲವಂತಪಡಿಸುತ್ತದೆ. ಭಾರತದ ಪ್ರಥಮ ಗೃಹ ಸಚಿವ ವಲ್ಲಭಭಾಯಿ ಪಟೇಲರು ಆಧುನಿಕ ಐಎಎಸ್ ಮತ್ತು ಐಪಿಎಸ್‌ನ ನಿರ್ಮಾತೃ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ದಕ್ಷ, ಪರಿಣಾಮಕಾರಿ ಮತ್ತು ಮಹತ್ವದ ಸೇತುವೆಯಾಗಬೇಕೆಂದು ಪಟೇಲರು ಬಯಸಿದ್ದರು. ಈ ಅಧಿಕಾರಿಗಳು ಯಾವಾಗಲೂ ಸಂವಿಧಾನವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಹಾಗೂ ರಾಜಕಾರಣಿಗಳ ದುರುದ್ದೇಶಪೂರಿತ ಆದೇಶಗಳನ್ನು ಪಾಲಿಸಬಾರದು ಎಂಬ ಕಲ್ಪನೆಯನ್ನು ಪಟೇಲ್ ಹೊಂದಿದ್ದರು.

ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಇಂದು ಪಟೇಲ್‌ರ ಕುರ್ಚಿಯಲ್ಲಿ ಕುಳಿತಿರುವ ಅಮಿತ್ ಶಾ, ತನ್ನ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಂದ ವೈಯಕ್ತಿಕ ಮತ್ತು ಸೈದ್ಧಾಂತಿಕ ವಿಧೇಯತೆಯನ್ನು ಕೇಳುತ್ತಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ಮುಂತಾದ ಬಿಜೆಪಿಯೇತರ ಪಕ್ಷಗಳ ಆಳ್ವಿಕೆಯಲ್ಲಿರುವ ಮಹತ್ವದ ರಾಜ್ಯಗಳ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಕೇಂದ್ರದಲ್ಲಿರುವ ಸರಕಾರಕ್ಕೆ ತಮ್ಮ ನಿಷ್ಠೆಯನ್ನು ಘೋಷಿಸಬೇಕೆನ್ನುವ ಒತ್ತಡವನ್ನು ಎದುರಿಸುತ್ತಿದ್ದಾರೆ. ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಕೇಂದ್ರ ಸರಕಾರದ ಈ ವಿಕೃತ ಪಕ್ಷಪಾತಪೂರಿತ ನಿಲುವು ಕೇಂದ್ರ-ರಾಜ್ಯ ಸಂಬಂಧಕ್ಕೆ ಹಾಗೂ ಅಂತಿಮವಾಗಿ ಸಾಂವಿಧಾನಿಕ ಆಡಳಿತದ ಕಲ್ಪನೆಗೆ ಬದ್ಧ ವಿರುದ್ಧವಾಗಿದೆ.

ಮೋದಿ-ಶಾ ಸರಕಾರವು ಪ್ರತಿಪಕ್ಷಗಳ ಆಡಳಿತದ ರಾಜ್ಯ ಸರಕಾರಗಳನ್ನು ದುರ್ಬಲಗೊಳಿಸಲು ರಾಜ್ಯಪಾಲರನ್ನು ದುರುಪಯೋಗಪಡಿಸಿಕೊಂಡಿದೆ. ಇದು ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದಲ್ಲಿ ಈಗಾಗಲೇ ನಡೆಯುತ್ತಿದೆ. ಆ ರಾಜ್ಯಗಳ ರಾಜ್ಯಪಾಲರು ದೇಶದ ಇತಿಹಾಸದಲ್ಲಿ ಹಿಂದೆಂದೂ ನಡೆಯದ ರೀತಿಯಲ್ಲಿ ತಮ್ಮ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ.

ಐದನೆಯದು, ಅಗಾಧ ವೆಚ್ಚದಲ್ಲಿ ಮತ್ತು ಸರಕಾರದ ಸರ್ವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಧಾನಿಯ ವೈಯಕ್ತಿಕ ವ್ಯಕ್ತಿತ್ವವನ್ನು ವೈಭವೀಕರಿಸಲಾಗುತ್ತಿದೆ. ಇದು ಒಕ್ಕೂಟ ಗಣರಾಜ್ಯ ಎಂಬ ಭಾರತದ ಕಲ್ಪನೆಯನ್ನು ದುರ್ಬಲಗೊಳಿಸುತ್ತದೆ. ಒಕ್ಕೂಟ ಗಣರಾಜ್ಯದಲ್ಲಿ ರಾಜ್ಯಗಳು ಮತ್ತು ಕೇಂದ್ರ ಸಮಾನ ಭಾಗೀದಾರರಾಗಿದ್ದಾರೆ. ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಜಾರಿಗೊಳಿಸುವ ಹೊಣೆ ರಾಜ್ಯಗಳದ್ದಾಗಿವೆ. ಆದರೆ, ಈ ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳಲ್ಲಿ ನರೇಂದ್ರ ಮೋದಿಯ ಭಾವಚಿತ್ರವನ್ನು ಹಾಕಿ ಅವರನ್ನು ವೈಯಕ್ತಿಕವಾಗಿ ವೈಭವೀಕರಿಸಲಾಗುತ್ತಿದೆ. ಇದು ಅದಮ್ಯ ಸರ್ವಾಧಿಕಾರಿ ಮನೋಸ್ಥಿತಿ ಮತ್ತು ಹೆಸರು ಬೇರೆಯವರಿಗೆ ಹೋಗಬಹುದು ಎನ್ನುವ ಭಯವನ್ನು ಸೂಚಿಸುತ್ತದೆ.

ಪ್ರಧಾನಿಯ ವೈಯಕ್ತಿಕ ಪ್ರತಿಷ್ಠೆಯ ವೈಭವೀಕರಣವು ರಾಜ್ಯಗಳ ಮೇಲೆ ಆರ್ಥಿಕ ಹೊರೆಯನ್ನೂ ಹೇರಿದೆ. ಇಲ್ಲಿ ಪಿಎಮ್-ಕೇರ್ಸ್‌ ನಿಧಿಯನ್ನು ಉಲ್ಲೇಖಿಸಬಹುದಾಗಿದೆ. ರಹಸ್ಯಗಳಿಂದ ಸುತ್ತುವರಿಯಲ್ಪಟ್ಟಿರುವ ಈ ನಿಧಿಯು ಸಾರ್ವಜನಿಕರಿಗೆ ಯಾವುದೇ ಉತ್ತರದಾಯಿತ್ವವನ್ನು ಹೊಂದಿಲ್ಲ. ಅದೂ ಅಲ್ಲದೆ, ಈ ನಿಧಿಯು ಒಕ್ಕೂಟ ತತ್ವದ ಉಲ್ಲಂಘನೆಯಾಗಿದೆ. ಕುತೂಹಲಕರ ಸಂಗತಿಯೆಂದರೆ, ‘ಕೈಗಾರಿಕೆಗಳ ಸಾಮಾಜಿಕ ಜವಾಬ್ದಾರಿ’ ಎಂಬ ಯೋಜನೆಯಡಿ, ಈ ನಿಧಿಗೆ ಕಂಪೆನಿಗಳು ನೀಡಿರುವ ದೇಣಿಗೆಗಳನ್ನು ತೆರಿಗೆ ವಿನಾಯಿತಿ ಎಂಬುದಾಗಿ ಮನ್ನಾ ಮಾಡಬಹುದಾಗಿದೆ. ಆದರೆ, ಇದೇ ವಿನಾಯಿತಿಯನ್ನು ರಾಜ್ಯಗಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಲು ಬಯಸಿರುವವರಿಗೆ ನಿಡಲಾಗುತ್ತಿಲ್ಲ.

ಅಂತಿಮವಾಗಿ, ಇಂದಿರಾ ಗಾಂಧಿಗೆ ಹೋಲಿಸಿದರೆ, ನರೇಂದ್ರ ಮೋದಿ 356ನೇ ವಿಧಿಯನ್ನು ಕಡಿಮೆ ಸಂಖ್ಯೆಯಲ್ಲಿ ಬಳಸಿರಬಹುದು. ಆದರೆ, ಕಾನೂನುಬದ್ಧವಾಗಿ ರಚನೆಗೊಂಡಿರುವ ರಾಜ್ಯವನ್ನೇ ರದ್ದುಗೊಳಿಸಿದ ಏಕೈಕ ಪ್ರಧಾನಿ ಎಂಬ ಹೆಗ್ಗಳಿಕೆಯನ್ನು ಅವರು ಗಳಿಸಿದ್ದಾರೆ. ಗೋವಾ, ಅರುಣಾಚಲಪ್ರದೇಶ, ನಾಗಾಲ್ಯಾಂಡ್, ಮಣಿಪುರ, ತ್ರಿಪುರ ಮತ್ತು ಹಿಮಾಚಲ ಪ್ರದೇಶಗಳು ಮೊದಲು ಕೇಂದ್ರಾಡಳಿತ ಪ್ರದೇಶಗಳಾಗಿದ್ದವು. ಬಳಿಕ ಅವುಗಳು ರಾಜ್ಯಗಳಾದವು. ಆದರೆ, ಜಮ್ಮು ಮತ್ತು ಕಾಶ್ಮೀರ ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗಿತು. ಅದರ ಸ್ಥಾನಮಾನವನ್ನು ರಾಜ್ಯದಿಂದ ಕೇಂದ್ರಾಡಳಿತ ಪ್ರದೇಶಕ್ಕೆ ಇಳಿಸಲು ಜನರ ಇಚ್ಛೆಯನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳಲು ರಾಜ್ಯಪಾಲರನ್ನು ಬಳಸಿಕೊಳ್ಳಲಾಯಿತು. ಕೋಮುವಾದಿ ಭಾವನೆಗಳನ್ನು ಅಂತರ್ಗತವಾಗಿ ಇಟ್ಟುಕೊಂಡು ಶ್ರೇಷ್ಠತೆ ಮತ್ತು ಹೆಮ್ಮೆಯ ಹೆಸರಿನಲ್ಲಿ ನಡೆಸಲಾಗಿರುವ ಈ ಕೃತ್ಯವು ಖಂಡಿತವಾಗಿಯೂ ಭಾರತದ ಪ್ರಧಾನಿಯೊಬ್ಬರು ಒಕ್ಕೂಟ ತತ್ವದ ಮೇಲೆ ನಡೆಸಿದ ಅತ್ಯಂತ ಬರ್ಬರ ದಾಳಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಹೊರಗೆ, ರಾಜ್ಯಗಳ ಹಕ್ಕುಗಳನ್ನು ದುರ್ಬಲಗೊಳಿಸಲು ನರೇಂದ್ರ ಮೋದಿ ಮತ್ತು ಅಮಿತ್ ಶಾ 356ನೇ ವಿಧಿಗಿಂತ ಕಡಿಮೆ ತೀವ್ರತೆಯ ಮತ್ತು ಕಡಿಮೆ ಕ್ರೌರ್ಯದ ಆಯುಧಗಳನ್ನು ಬಳಸಿದ್ದಾರೆ. ಇದರಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ. ಮಾಧ್ಯಮಗಳನ್ನು ಕೈವಶಮಾಡಿಕೊಂಡಿರುವುದು, ನಮ್ಮ ಶ್ರೇಷ್ಠ ಸರಕಾರಿ ವಿಶ್ವವಿದ್ಯಾನಿಲಯಗಳ ನಾಶ, ಸಶಸ್ತ್ರ ಪಡೆಗಳ ರಾಜಕೀಕರಣ ಮತ್ತು ಬಹುಸಂಖ್ಯಾತ ವೌಲ್ಯಗಳ ವೈಭವೀಕರಣದ ಮೂಲಕ ನಮ್ಮ ಗಣರಾಜ್ಯದ ಒಕೂಟ ವ್ಯವಸ್ಥೆಯ ಮೇಲೆ ಬಹುಹಂತಗಳ ದಾಳಿ ನಡೆಸಲಾಗಿದೆ. ಇದು ನವ ಭಾರತದ ಪ್ರಮುಖ ಸಾಧನೆಗಳ ಪೈಕಿ ಒಂದಾಗಿದೆ.

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News

ಸಂವಿಧಾನ -75