ಉಡುಪಿ: ಲಯನ್ಸ್ ಕ್ಲಬ್‌ನಿಂದ ಆಸ್ಪತ್ರೆಗಳಿಗೆ ಇಸಿಜಿ, ಆಕ್ಸಿಜನ್ ಯಂತ್ರಗಳ ಕೊಡುಗೆ

Update: 2022-02-12 15:05 GMT

ಉಡುಪಿ, ಫೆ.12: ಉಡುಪಿ ಲಯನ್ಸ್ ಕ್ಲಬ್ ಮಂಗಳೂರಿನ ವೈದ್ಯ ಡಾ.ಪದ್ಮನಾಭ ಕಾಮತ್ ಅವರ ನೆರವಿನಿಂದ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆರು ಇಸಿಜಿ ಯಂತ್ರಗಳನ್ನು ನೀಡಿದೆ ಎಂದು ಲಯನ್ಸ್ ಜಿಲ್ಲೆ 317-ಸಿ ಇದರ ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ ಅವರು ತಿಳಿಸಿದ್ದಾರೆ.

ಲಯನ್ಸ್ ಕ್ಲಬ್ ಉಡುಪಿಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಕಳೆದೊಂದು ವರ್ಷ ದಲ್ಲಿ ಲಯನ್ಸ್ ಕ್ಲಬ್ ತನ್ನ ವ್ಯಾಪ್ತಿಯಲ್ಲಿ ನಡೆಸಿದ ಸೇವಾ ಕಾರ್ಯಗಳ ವಿವರಗಳನ್ನು ನೀಡುತ್ತಾ ತಿಳಿಸಿದರು. ಅದೇ ರೀತಿ ಗ್ರಾಮೀಣ ಭಾಗದ ಪಿಎಚ್‌ಸಿಗಳಿಗೆ ಆರು ಆಕ್ಸಿಜನ್ ಯಂತ್ರಗಳನ್ನು ನೀಡಲಿದೆ ಎಂದೂ ಅವರು ತಿಳಿಸಿದರು.

ಲಯನ್ಸ್ ಜಿಲ್ಲೆ 317-ಸಿ ವ್ಯಾಪ್ತಿಯಲ್ಲಿ 129 ಕ್ಲಬ್ ಹಾಗೂ 3350 ಸದಸ್ಯ ರುಗಳಿದ್ದು, ಕಳೆದೊಂದು ವರ್ಷದ ಅವಧಿಯಲ್ಲಿ 2.5 ಕೋಟಿ ರೂ.ಗಳಿಗೂ ಅಧಿಕ ಸೇವಾ ಕಾರ್ಯವನ್ನು ಕೈಗೊಂಡಿದೆ. ದಾವಣಗೆರೆ ಲಯನ್ಸ್ ಕ್ಲಬ್ 1.5 ಕೋಟಿ ರೂ.ವೆಚ್ಚದಲ್ಲಿ ಬ್ಲಡ್‌ಬ್ಯಾಂಕ್‌ನ್ನು ನೀಡಿದೆ ಎಂದರು.

ಇಂದ್ರಾಳಿ ರೈಲು ನಿಲ್ದಾಣದಲ್ಲಿ 2.5ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ತಂಗುದಾಣವನ್ನು ನಿರ್ಮಿಸಿದೆ. ಅದೇ ರೀತಿ ನಾವುಂದ ಲಯನ್ಸ್ ಕ್ಲಬ್ ಐದು ಲಕ್ಷರೂ.ವೆಚ್ಚದಲ್ಲಿ ಬಸ್ ತಂಗುದಾಣಗಳನ್ನು ನಿರ್ಮಿಸಿದೆ. ಹಲವು ಬಡವರಿಗೆ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಲಯನ್ಸ್ ಕ್ಲಬ್‌ನ ಸೇವಾ ಕಾರ್ಯಗಳಿಂದ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಪ್ರಯೋಜನವಾಗಿದೆ ಎಂದು ವಿಶ್ವನಾಥ ಶೆಟ್ಟಿ ತಿಳಿಸಿದರು.

ಉಡುಪಿ ಲಯನ್ಸ್ ಕ್ಲಬ್ ಆರು ಲಕ್ಷ ರೂ.ಗಳಿಗೂ ಅಧಿಕ ಸೇವಾ ಕಾರ್ಯಗಳನ್ನು ಕೈಗೊಂಡಿದೆ.ಇದರಲ್ಲಿ ಶಾಲೆಗಳಲ್ಲಿ ಮಳೆ ನೀರಿನ ಕೊಯ್ಲು, ಮಧ್ಯಾಹ್ನದ ಬಿಸಿಯೂಟಕ್ಕೆ ಬಟ್ಟಲು ಇಲ್ಲದಲ್ಲಿ ಸ್ಟೀಲ್ ಬಟ್ಟಲುಗಳನ್ನು ನೀಡಿದೆ. ಎರಡು ಕೋವಿಡ್ ಲಸಿಕಾ ಶಿಬಿರಗಳನ್ನೂ ಲಯನ್ಸ್ ಕ್ಲಬ್ ಆಯೋಜಿಸಿದೆ ಎಂದವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳಾದ ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ವಿಠಲ ಪೈ,ಕಾರ್ಯದರ್ಶಿ ಪಿ.ವಿಷ್ಣುದಾಸ್ ಪಾಟೀಲ್, ಖಜಾಂಚಿ ಶ್ರೀಧರ ಭಟ್, ಜಯಪ್ರಕಾಶ್ ಭಂಡಾರಿ, ಸುಂದರ ಕೋಟ್ಯಾನ್, ಸ್ವಪ್ನಾ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News