ಹಿಜಾಬ್ ತೆಗೆದು ಮಕ್ಕಳು ತರಗತಿಗೆ ಹಾಜರಾಗಿದ್ದಾರೆ: ಉಡುಪಿ ಶಾಸಕ ರಘುಪತಿ ಭಟ್
ಉಡುಪಿ, ಫೆ.14: ಉಡುಪಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಇಂದು ಉಡುಪಿ ಶಾಸಕ ರಘುಪತಿ ಭಟ್ ಭೇಟಿ ನೀಡಿ ಮುಖ್ಯೋಪಾಧ್ಯಾಯರ ಜೊತೆ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಈ ಶಾಲೆಯಲ್ಲಿ 357 ಮಕ್ಕಳು ಕಲಿಯುತ್ತಿದ್ದಾರೆ. ಅದರಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು ಈ ಹಿಂದಿನಂತೆ ಹಿಜಾಬ್ ತೆಗೆದಿಟ್ಟು ತರಗತಿಗೆ ಪ್ರವೇಶಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ 295 ಪ್ರೌಢಶಾಲೆಗಳು ಕೂಡ ಇಂದು ಆರಂಭಗೊಂಡಿವೆ. ಎಲ್ಲ ಕಡೆಗಳಲ್ಲಿಯೂ ಹೈಕೋರ್ಟ್ ಆದೇಶ ಪಾಲನೆ ಮಾಡಲಾಗಿದೆ. ಯಾವುದೇ ಗೊಂದಲಗಳಿಲ್ಲದೆ ಶಾಂತಿಯ ವಾತಾವರಣ ನಿರ್ಮಾಣವಾಗಿದೆ ಎಂದರು.
ಹಿಜಾಬ್ ವಿವಾದವನ್ನು ನಾವು ಆರಂಭ ಮಾಡಿರುವುದಲ್ಲ. ಸದ್ಯ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಉಡುಪಿ ಬಾಲಕಿಯರ ಕಾಲೇಜಿನಲ್ಲಿ ಯಾವುದೇ ಗೊಂದಲಗಳಿಲ್ಲ. ಹಿಂದೆಯೂ ವಿದ್ಯಾರ್ಥಿಗಳು ಹಿಜಾಬ್ ಇಲ್ಲದೆ ಕಾಲೇಜಿಗೆ ಬರುತ್ತಿದ್ದರು. ಹೈಸ್ಕೂಲ್ ನ ಎಲ್ಲಾ ವಿದ್ಯಾರ್ಥಿಗಳು ಹಿಜಾಬ್ ತೆಗೆದು ಪರೀಕ್ಷೆ ಬರೆಯುತ್ತಿದ್ದಾರೆ. ಪಿಯುಸಿ ವಿದ್ಯಾರ್ಥಿನಿಯರು ಶೀಘ್ರವೇ ಕಾಲೇಜು ಆರಂಭಿಸುವಂತೆ ಮನವಿ ನೀಡಿದ್ದಾರೆ. ಇದನ್ನು ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಅವರು ತಿಳಿಸಿದರು
‘ಈಗಾಗಲೇ ವಿಧಾನಸೌಧದಲ್ಲಿ ಅಧಿವೇಶನ ಆರಂಭವಾಗಿದೆ. ಕಾಲೇಜಿನ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ವಿಧಾನಸೌಧಕ್ಕೆ ಹೋಗುತ್ತೇನೆ. ನಮ್ಮ ಬಳಿ ತರಗತಿಯ ಸಿಸಿಟಿವಿ ಫೂಟೇಜ್ ಕೂಡ ಇದೆ. ತರಗತಿ ಒಳಗಿನ ಸಿಸಿಟಿವಿ ಫೂಟೇಜನ್ನು ಕೋರ್ಟಿಗೆ ಸಲ್ಲಿಸಲಾಗುವುದು’
-ರಘುಪತಿ ಭಟ್, ಶಾಸಕರು, ಉಡುಪಿ