ಹೈಕೋರ್ಟ್ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ: ಶಾಸಕ ರಘುಪತಿ ಭಟ್
ಉಡುಪಿ, ಫೆ.18: ಹಿಜಾಬ್‌ಗೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಹೈಕೋರ್ಟ್‌ನ ತ್ರಿಸದಸ್ಯ ಪೀಠ ನೀಡುವ ತೀರ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ. ತೀರ್ಪು ವ್ಯತಿರಿಕ್ತವಾಗಿ ಬಂದರೆ, ಅದನ್ನು ಪರಿಶೀಲಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೀರ್ಪು ಏನೇ ಇದ್ದರೂ, ಅದನ್ನು ಒಪ್ಪಿಕೊಳ್ಳುತ್ತೇವೆ ಎಂದು ಪುನರುಚ್ಛರಿಸಿದರು. ಹಿಜಾಬ್ ಪ್ರಕರಣದ ಬಗ್ಗೆ ಎನ್‌ಐಎ ತನಿಖೆ ನಡೆಸುವಂತೆ ಕರಾವಳಿಯ ಶಾಸಕರು ನಾವು ಮನವಿಯನ್ನು ಸಲ್ಲಿಸಿದ್ದೇವೆ. ರಾಜ್ಯ ಪೊಲೀಸರಿಂದ ಈಗ ತನಿಖೆ ನಡೆಯುತ್ತಿದೆ. ಅಗತ್ಯ ಬಿದ್ದರೆ ಸರಕಾರ ಈ ಬಗ್ಗೆ ಖಂಡಿತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದರು.
ಹಿಜಾಬ್ ವಿಷಯಕ್ಕೆ ಸಂಬಂಧಿಸಿದಂತೆ ರಾಜಿನಾಮೆಗೆ ಒತ್ತಾಯಿಸಿರುವ ಎಸ್‌ಡಿಪಿಐ ನಾಯಕರ ಹೇಳಿಕೆಯ ಕುರಿತು ಉತ್ತರಿಸಿದ ಶಾಸಕರು, ನನ್ನ ಕ್ಷೇತ್ರದ ಮತದಾರರಿದ್ದಾರೆ, ಮುಸ್ಲಿಂ ಮುಖಂಡರಿದ್ದಾರೆ. ಅವರು ನನ್ನ ಬಗ್ಗೆ ಮಾತನಾಡಲಿ. ಯಾರೋ ಹೊರಗಿನಿಂದ ಬಂದು ನನಗೆ ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲ ಎಂದರು.
ನನ್ನ ಕ್ಷೇತ್ರದ ಮತದಾರರಿಗೆ ಮಾತ್ರ ಉತ್ತರ ನೀಡುವ ಬಾದ್ಯತೆ ಇದೆ. ಮುಸ್ಲಿಂ ಮುಖಂಡರು, ಕಾಂಗ್ರೆಸ್ ಮುಖಂಡರು ಸಹ ನನ್ನ ನಿಲುವು ಸರಿಯಾಗಿದೆ ಎಂದಿದ್ದಾರೆ. ಹೀಗಾಗಿ ನನಗೆ ಎಸ್‌ಡಿಪಿಐನ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದರು.
ನಾನು ಇದುವರೆಗೆ ಯಾವುದೇ ಧರ್ಮವನ್ನು, ಧರ್ಮದವರನ್ನು ದೂರಿಲ್ಲ. ಎಸ್‌ಡಿಪಿಐನ ವಿದ್ಯಾರ್ಥಿ ಸಂಘಟನೆಯೇ ಈ ವಿವಾದಕ್ಕೆ ನೇರ ಕಾರಣ. ಅದನ್ನು ಅವರೇ ಬಹಿರಂಗವಾಗಿ ಹೇಳಿದ್ದಾರೆ. ಹೀಗಾಗಿ ಅವರ ಸರ್ಟಿಫಿಕೇಟಾಗಲಿ, ಪ್ರಶಂಸೆಯಾಗಲಿ ನನಗೆ ಅಗತ್ಯವಿಲ್ಲ ಎಂದರು.
ಉಡುಪಿಯ ಯಾವುದೇ ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಲು ನಾನು ಅವಕಾಶ ನೀಡಿಲ್ಲ. ಕೊನೆಯ ದಿನ ಖಾಸಗಿ ಎಂಜಿಎಂ ಕಾಲೇಜಿನಲ್ಲಿ ಮಾತ್ರ ಸ್ವಲ್ಪ ಸಮಸ್ಯೆಯಾಗಿದೆ. ಸರಕಾರಿ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ನಾವೇನೂ ನಿಯಮ ಬದಲಿಸಿಲ್ಲ. ಹಿಂದಿನ ನಿಯಮವನ್ನೇ ಮುಂದುವರಿಸಿದ್ದೇವೆ ಎಂದವರು ನುಡಿದರು.
ನಾವು ಯಾವುದೇ ವಿದ್ಯಾರ್ಥಿನಿಯರ ಖಾಸಗಿ ಮಾಹಿತಿಗಳನ್ನು ಬಹಿರಂಗ ಪಡಿಸಿಲ್ಲ. ನಾನು ಸುಳ್ಳು ಹೇಳುತಿದ್ದೇನೆ ಎಂದು ಆರೋಪಿಸಿದ ಕಾರಣ, ನನ್ನ ನಿಲುವನ್ನು ಸಮರ್ಥಿಸಲು ದಾಖಲೆ ನೀಡಿದ್ದೇನೆ ಅಷ್ಟೇ. ನಾನು ಅದನ್ನು ಕೋರ್ಟಿಗೆ ನೀಡಿದ್ದೇನೆ. ಯಾವುದೇ ವೈಯಕ್ತಿಕ ದಾಖಲೆ ಬಿಡುಗಡೆ ಮಾಡಿಲ್ಲ. ಕಾಲೇಜಿನ ಸಿಸಿಟಿವಿ ದೃಶ್ಯಗಳನ್ನು ಕೋರ್ಟಿಗೆ ನೀಡಿದ್ದೇನೆ ಎಂದರು.