ಉಡುಪಿ: ಕೊಂಕಣ ರೈಲಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಅಕ್ರಮ ಮದ್ಯ ವಶ
ಉಡುಪಿ, ಫೆ.20: ನಗರದ ಇಂದ್ರಾಳಿಯಲ್ಲಿರುವ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಗೋವಾದ ಕಡೆಯಿಂದ ಬಂದ ರೈಲು ನಂ.16596 ರಲ್ಲಿ ಲಕ್ಷಾಂತರ ರೂ.ಮೌಲ್ಯದ ಅಕ್ರಮ ಮದ್ಯವನ್ನು ತಪಾಸಣೆಯ ವೇಳೆ ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಿಲ್ದಾಣಕ್ಕೆ ಬಂದು ನಿಂತ ರೈಲನ್ನು ಕಾನ್‌ಸ್ಟೇಬಲ್‌ಗಳಾದ ಗುರುರಾಜ್, ಶ್ರೀಕಾಂತ್, ಝೀನಾ ಪಿಂಟೊ ಹಾಗೂ ಕರುಣಾಕರ ಅವರು ಎಂದಿನಂತೆ ಪರಿಶೀಲಿಸುತಿದ್ದಾಗ ಎಸ್3 ಬೋಗಿಯ ಶೌಚಾಲಯದಲ್ಲಿ ಯಾರೂ ವಾರಸುದಾರರು ಇಲ್ಲದ ಆರು ಬ್ಯಾಗ್‌ಗಳನ್ನು ಗುರುತಿಸಿ ವಶಪಡಿಸಿಕೊಂಡರು. ಸಮಯದ ಕೊರತೆಯಿಂದ ಎಲ್ಲಾ ಬೋಗಿಗಳನ್ನು ಪರಿಶೀಲಿಸಲು ಅವರಿಗೆ ಸಾಧ್ಯವಾಗಲಿಲ್ಲ. ವಶಪಡಿಸಿಕೊಂಡ ಬ್ಯಾಗನ್ನು ಆರ್‌ಪಿಎಫ್ ಕಚೇರಿಗೆ ತಂದು ಅಬಕಾರಿ ಇಲಾಖೆಯ ಇನ್‌ಸ್ಪೆಕ್ಟರ್ ಸುಭೋದ್ ನಾಯಕ್ ಸಮ್ಮುಖದಲ್ಲಿ ಶನಿವಾರ ಪರಿಶೀಲಿಸಿದಾಗ ಅದರಲ್ಲಿ ವಿವಿಧ ಬ್ರಾಂಡಿನ ಒಟ್ಟು 101.620ಲೀ. ಗೋವಾ ಮದ್ಯ ಪತ್ತೆಯಾಯಿತು. ಇವುಗಳ ಒಟ್ಟು ವಮೌಲ್ಯ 1,64,412ರೂ. ಎಂದು ಹೇಳಲಾಗಿದೆ. ಬ್ಯಾಗ್‌ನಲ್ಲಿದ್ದ 79 ಬಾಟಲಿ ವಿಸ್ಕಿ, ಬ್ರಾಂಡಿಗಳನ್ನು ಅಬಕಾರಿ ಇಲಾಖೆಗೆ ಒಪ್ಪಿಸಲಾಯಿತು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.