ಕುಂದಾಪುರ: ಕಾಲೇಜಿನ ಗೇಟಿನಲ್ಲಿಯೇ ಉಪನ್ಯಾಸಕರಿಗೆ ಅಸ್ಸೈನ್‌ಮೆಂಟ್ ಒಪ್ಪಿಸಿದ ಹಿಜಾಬ್‌ಧಾರಿ ವಿದ್ಯಾರ್ಥಿನಿಯರು!

Update: 2022-02-21 12:24 GMT

ಕುಂದಾಪುರ, ಫೆ.21: ಹಿಜಾಬ್ ಧರಿಸಿ ತರಗತಿ ಪ್ರವೇಶ ನಿರ್ಬಂಧಿಸಿರುವುದರಿಂದ ಕುಂದಾಪುರ ಸರಕಾರಿ ಜ್ಯೂನಿಯರ್ ಕಾಲೇಜಿನ ಕಾಮರ್ಸ್ ವಿಭಾಗದ ನಾಲ್ಕು ಮಂದಿ ಹಿಜಾಬ್‌ಧಾರಿ ವಿದ್ಯಾರ್ಥಿನಿಯರು, ಆಂತರಿಕ ಅಂಕಕ್ಕಾಗಿ ಪಾಠ ಯೋಜನೆ(ಅಸ್ಸೈನ್ ಮೆಂಟ್)ಯನ್ನು ಇಂದು ಕಾಲೇಜಿನ ಗೇಟ್ ಹೊರಗಡೆ ನಿಂತೇ ತಮ್ಮ ಉಪನ್ಯಾಸಕರಿಗೆ ಸಲ್ಲಿಸಿದರು.

ಫೆ.3ರಂದು ಹಿಜಾಬ್ ಧರಿಸಿ ಆಗಮಿಸಿದ ಕಾರಣಕ್ಕೆ ಕುಂದಾಪುರ ಸರಕಾರಿ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಕಾಲೇಜಿನ ಗೇಟಿನಲ್ಲಿಯೇ ತಡೆದು ಪ್ರವೇಶ ನಿರಾಕರಿಸಿದ್ದರು. ಅಲ್ಲಿಂದ ಇವರು ಪ್ರತಿದಿನ ಕಾಲೇಜಿನ ಬಂದು, ಗೇಟಿನ ಹೊರಗಡೆ ನಿಂತು ಮನೆಗೆ ತೆರಳುತ್ತಿದ್ದರು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇವರು ಫೆ.16ರ ಕಾಲೇಜು ಪುನಾರಂಭದ ನಂತರ ಕಾಲೇಜಿಗೆ ಗೈರು ಹಾಜರಾಗಿ ಮನೆಯಲ್ಲಿ ಓದುಬಹರ ಮುಂದುವರೆಸಿದ್ದಾರೆ.

ಹೀಗೆ ಕಾಮರ್ಸ್ ವಿಭಾಗದ ವಿದ್ಯಾರ್ಥಿನಿಯರು ಕಳೆದ ಕೆಲವು ದಿನಗಳಿಂದ ಆಂತರಿಕ ಅಂಕಕ್ಕಾಗಿ ತಯಾರಿಸಲಾದ ಅಸ್ಸೈನ್‌ಮೆಂಟ್‌ನ್ನು ತಮ್ಮ ಉಪನ್ಯಾಸಕರಿಗೆ ಸಲ್ಲಿಸುತ್ತಿದ್ದಾರೆ. ಹಿಜಾಬ್ ಧರಿಸಿದವರಿಗೆ ಕಾಲೇಜು ಪ್ರವೇಶ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ನಾಲ್ಕು ಮಂದಿ ವಿದ್ಯಾರ್ಥಿನಿಯರು ಗೇಟಿನ ಹೊರಗಡೆಯೇ ನಿಂತು ಅಸ್ಸೈನ್‌ಮೆಂಟ್‌ಗಳನ್ನು ಉಪನ್ಯಾಸಕರಿಗೆ ಒಪ್ಪಿಸಿ ಮನೆಗೆ ವಾಪಾಸ್ಸಾಗುವ ದೃಶ್ಯ ಕಂಡುಬಂದಿದೆ.

‘ಕಾಮರ್ಸ್ ವಿಭಾಗದವರು ಆಂತರಿಕ ಅಂಕಕ್ಕಾಗಿ ಅಸ್ಸೈನ್‌ಮೆಂಟ್‌ನ್ನು ವರ್ಷದಲ್ಲಿ ಎರಡು ಬಾರಿ ಸಲ್ಲಿಸಬೇಕಾಗುತ್ತದೆ. ಅದರಂತೆ ಹಿಜಾಬ್ ಧರಿಸಿ ಬರುತ್ತಿದ್ದ ಕಾಲೇಜಿನ ವಿದ್ಯಾರ್ಥಿನಿಯರು, ಅಸ್ಸೈನ್‌ಮೆಂಟ್‌ನ್ನು ಒಪ್ಪಿಸುತ್ತಿದ್ದಾರೆ. ಇವತ್ತು ನಾಲ್ಕು ಮಂದಿ ಬಂದಿದ್ದರೆ, ಉಳಿದ ಮಂದಿ ನಾಳೆಯೂ ಬರಬಹುದು. ಮೊನ್ನೆ ಕೆಲವು ಪೋಷಕರು ಕೂಡ ತಮ್ಮ ಮಕ್ಕಳ ಅಸ್ಸೈನ್‌ಮೆಂಟ್ ಕೊಟ್ಟು ಹೋಗಿದ್ದಾರೆ ಎಂದು ಉಪನ್ಯಾಸಕ ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News