ಮೆಸ್ಕಾಂನಿಂದ 1.33 ರೂ. ದರ ಹೆಚ್ಚಳದ ಬೇಡಿಕೆ

Update: 2022-02-21 13:29 GMT

ಮಂಗಳೂರು, ಫೆ. 21: ಮುಂಬರುವ ಸಾಲಿನಲ್ಲಿ ಮೆಸ್ಕಾಂಗೆ ಅಂದಾಜು 718.21 ಕೋಟಿ ರೂ.ಗಳ ಕೊಂದಾಯ ಕೊರತೆ ಎದುರಾಗಬಹುದಾದ ಹಿನ್ನೆಲೆಯಲ್ಲಿ ಪ್ರತಿ ಯೂನಿಟ್‌ಗೆ ಸರಾಸರಿ 1.33 ರೂ. ದರ ಹೆಚ್ಚಳ ಮಾಡಬೇಕೆಂಬ ಪ್ರಸ್ತಾಪಿಸಲಾಗಿದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಅಧ್ಯಕ್ಷ ಎಚ್.ಎಂ. ಮಂಜುನಾಥ್ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದರ ಪರಿಷ್ಕರಣೆ ಕುರಿತಂತೆ ನಡೆದ ಸಾರ್ವಜನಿಕ ವಿಚಾರಣೆಯಲ್ಲಿ ಕೈಗಾರಿಕೋದ್ಯಮಿಗಳು, ರೈತರು ಹಾಗೂ ಸಾರ್ವಜನಿಕರಿಂದ ದರ ಏರಿಕೆಯ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತವಾಯಿತು.

ಕೋವಿಡ್‌ನಿಂದಾಗಿ ವಿದ್ಯುತ್ ಮಾರಾಟ ಕಡಿಮೆ ಆಗಿದ್ದು, ನಷ್ಟಕ್ಕೆ ಕಾರಣವಾಗಿದೆ ಎಂಬುದಾಗಿ ಮೆಸ್ಕಾಂ ಆಡಳಿತ ನಿರ್ದೇಶಕರು ಅಭಿಪ್ರಾಯಿಸಿದ್ದಾರೆ. ವಾಸ್ತವದಲ್ಲಿ ಕೋವಿಡ್‌ನಿಂದ ಎಲ್ಲಾ ಕ್ಷೇತ್ರವೂ ತೊಂದರೆ ಅನುಭವಿಸಿದೆ. ಕೈಗಾರಿಕಾ ವಲಯ ಸಂಪೂರ್ಣ ಕುಸಿದಿದೆ. ಹಲವಾರು ಕೈಗಾರಿಕೆಗಳು ಮುಚ್ಚಿದ್ದು, ಮುಂದೆ ಪರಿಸ್ಥಿತಿ ಎಲ್ಲಿಗೆ ತಲುಪಬಹುದೆಂದು ಹೇಳಲಾಗದು. ಇಂತಹ ಪರಿಸ್ಥಿತಿಯಲ್ಲಿ ಸಣ್ಣ, ಮಧ್ಯಮ ಹಾಗೂ ಕಿರು ಉದ್ಯಮಗಳನ್ನು ಮೇಲೆತ್ತುವ ಕಾರ್ಯ ನಡೆಯಬೇಕಾಗಿದ್ದು, ವಿದ್ಯುತ್ ದರ ಏರಿಕೆಗೆ ಅವಕಾಶ ಬೇಡ ಎಂದು ಕೈಗಾರಿಕೋದ್ಯಮಿ ಬಿ.ಎ. ನಝೀರ್ ಅಭಿಪ್ರಾಯಿಸಿದರು.

ಮಂಜುಗಡ್ಡೆ ಸ್ಥಾವರಗಳು ಸಾಕಷ್ಟು ಸಂಕಷ್ಟದಲ್ಲಿದ್ದು, ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ನಿಗದಿತ ಋತುಮಾನದ ಕೈಗಾರಿಕೆ ಎಂಬ ನೆಲೆಯಲ್ಲಿ ಆಯೋಗವು ವಿಶೇಷ ರಿಯಾಯಿತಿ ನೀಡಿತ್ತು. ಆದರೆ ಅದು ಕಳೆದ ಬಾರಿ ಉದ್ಯಮಿಗಳಿಗೆ ಉಪಯೋಗ ಆಗದ ಕಾರಣ ಅದನ್ನು ಮುಂದುವರಿಸಬೇಕೆಂದು ಮಂಜುಗಡ್ಡೆ ಸ್ಥಾವರಗಳ ಉದ್ಯಮಿಗಳ ಪರವಾಗಿ ರೇಣುದಾಸ್, ರಾಜೇಂದ್ರ ಸುವರ್ಣ, ಅಶೋಕ್, ಮೊದಲಾದವರು ದನಿಗೂಡಿಸಿದರು.
ಮೆಸ್ಕಾಂಗೆ ಸರಕಾರದಿಂದ ಬರಬೇಕಾದ ಬಾಕಿ ಸಂದಾಯವಾದರೆ ಸಾಕಷ್ಟು ನಷ್ಟ ಹಾಗೂಹೊರೆಯನ್ನು ತಪ್ಪಿಸಲು ಸಾಧ್ಯ. ಈ ಬಗ್ಗೆ ಆಯೋಗ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಮಾತ್ರವಲ್ಲದೆ ರೈತರ ಪಂಪ್‌ಸೆಟ್‌ ಗಳಿಗೆ ಮೀಟರೀಕರಣ ವ್ಯವಸ್ಥೆ ಮಾಡಬೇಕೆಂಬ ದೀರ್ಘಕಾಲೀನ ಬೇಡಿಕೆಯನ್ನು ಪರಿಗಣಿಸಬೇಕು ಎಂದು ರೈತ ಮುಖಂಡ ಸತ್ಯನಾರಾಯಣ ಉಡುಪ ಆಗ್ರಹಿಸಿದರು.

ಮೆಸ್ಕಾಂ ಕಚೇರಿಗಳು ಗುತ್ತಿಗೆದಾರರ ಅಡ್ಡಾ: ಆರೋಪ
ಮೆಸ್ಕಾಂ ಕಚೇರಿಗಳು ಗುತ್ತಿಗೆದಾರರ ಅಡ್ಡಾ ಆಗುತ್ತಿದೆ. ಸಾರ್ವಜನಿಕರು ತಮ್ಮ ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ನೇರವಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಇಲ್ಲ. ಗುತ್ತಿಗೆದಾರರ ಸಂಘದಿಂದಲೇ ಅರ್ಜಿ ಪಡೆದು ಅರ್ಜಿ ಸಲ್ಲಿಸಬೇಕಾದ ಪ್ರಸಂಗವಿದ್ದು, ಈ ಬಗ್ಗೆ ಆಯೋಗ ಸೂಕ್ತ ಕ್ರಮ ವಹಿಸಬೇಕು ಎಂದು ರೈತ ಮುಖಂಡ ಸತ್ಯನಾರಾಯಣ ಉಡುಪ ಆರೋಪ ಮಾಡಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಆಯೋಗದ ಸದಸ್ಯ ಎಂ.ಡಿ. ರವಿ, ಮೆಸ್ಕಾಂ ಎಂಡಿಯವರು ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳುವ ಭರವಸೆ ಇದೆ. ಮುಂದಿನ ದಿನಗಳಲ್ಲಿ ಈ ಭರವಸೆ ಕಾರ್ಯಗತವಾಗದಿದ್ದಲ್ಲಿ ಆಯೋಗ ಸೂಕ್ತ ಕ್ರಮ ವಹಿಸಲಿದೆ ಎಂದರು.

ಮೆಸ್ಕಾಂ ಗ್ರಾಹಕರ ರೈತರು, ಕೈಗಾರಿಕೋದ್ಯಮಿಗಳು ಹಾಗೂ ಗೃಹ ಬಳಕೆಯ ಗ್ರಾಹಕರ ಪರವಾಗಿ ವೆಂಕಟಗಿರಿ, ಅಬ್ದುಲ್ ರೆಹಮಾನ್, ಸುರೇಶ್ ನಾಯಕ್, ರವೀಂದ್ರ ಪೈ, ಸುನಿಲ್ ವಾಸು, ಆರ್. ಕುಮಾರ್ ಹಾಗೂ ಇನ್ನಿತರರು ತಮ್ಮ ಅಹವಾಲು ಮಂಡಿಸಿದರು.

ಕೆಇಆರ್‌ಸಿ ಎದುರು ಸಲ್ಲಿಸಲಾದ ಪ್ರಮುಖ ಪ್ರಸ್ತಾವನೆ- ಕೈಗೊಂಡ ಕಾಮಗಾರಿ
►ಕೋವಿಡ್ ನಿಬಂಧನೆಗಳ ಕಾರಣ ವಾಣಿಜ್ಯ ಮತ್ತು ಕೈಗಾರಿಕಾ ಚಟುವಟಿಕೆಗಳಲ್ಲಿನ ನಿರಂತರೆಯು ಬಾಧಿತವಾಗಿ 2020-21ನೆ ಸಾಲಿನಲ್ಲಿ ವಿದ್ಯುತ್ ಮಾರಾಟದಲ್ಲಿ ಇಳಿಕೆಯಾಗಿ ಕಂದಾಯ ಸಂಗ್ರಹಣೆ ಸಾಧ್ಯವಾಗಿಲ್ಲ.

►2021ರ ಡಿಸೆಂಬರ್ ಅಂತ್ಯಕ್ಕೆ ಮೆಸ್ಕಾಂ ಗ್ರಾಹಕರ ಸಂಖ್ಯೆ 25.49 ಲಕ್ಷ (ಇದರಲ್ಲಿ 18.28 ಲಕ್ಷ ಗೃಹ ಬಳಕೆ, 3.80 ಲಕ್ಷ ಪಂಪ್‌ಸೆಟ್, 2.39 ಲಕ್ಷ ವಾಣಿಜ್ಯ ಗ್ರಾಹಕರು ಸೇರಿದಂತೆ)

►ಪುತ್ತೂರು ವಿಭಾಗದ ಗುತ್ತಿಗಾರು ಎಂಬಲ್ಲಿ 11.11 ಕೋಟಿ ರೂ. ವೆಚ್ಚದಲ್ಲಿ ಹಾಗೂ ಉಡುಪಿ ವಿಭಾಗದ ಮಲ್ಪೆಯಲ್ಲಿ 5.06 ಕೋಟಿ ರೂ. ವೆಚ್ಚದಲ್ಲಿ ಹೊಸ ಉಪ ವಿದ್ಯುತ್ ಸ್ಠೇಷನ್‌ಗಳನ್ನು ಆರಂಭಿಸಲಾಗಿದೆ.

►ಮಂಗಳೂರಿನ ಉರ್ವಾ ಮಾರುಕಟ್ಟೆಯಲ್ಲಿ 12.82 ಕೋಟಿ ರೂ. ವೆಚ್ಚ ಹಾಗೂ ಬಂಟ್ವಾಳದ ವಿದ್ಯಾಗಿರಿಯಲ್ಲಿ 12.54 ಕೋಟಿ ರೂ. ವೆಚ್ಚದಲ್ಲಿ , ಉಡುಪಿ ಉದ್ಯಾವರದಲ್ಲಿ 13.66 ಕೋಟಿ ರೂ., ಸಾಲಿಗ್ರಾಮ ಕೋಟದಲ್ಲಿ 18.37 ಕೋಟಿ ರೂ. ಗ್ಯಾಸ್ ಇನ್ಸುಲೇಟೆಡ್ ಸಬ್ ಸ್ಟೇಷನ್‌ನಗಳನ್ನು ಸ್ಥಾಪಿಸಲಾಗಿದೆ.

►ಕರ್ನಾಟಕ ಸರಕಾರ ಬೆಳಕು ಯೋಜನೆಯಲ್ಲಿ ಜನವರಿ ಅಂತ್ಯಕ್ಕೆ 7817 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

►ಸೆಪ್ಟಂಬರ್ 2021ರಿಂದ ಜನವರಿ 2022ರವರೆಗೆ ಒಟ್ಟು 3850 ಸಂಖ್ಯೆಯ ಪರಿವರ್ತಕಗಳು ವಿಫಲವಾಗಿದ್ದು, ಅದರಲ್ಲಿ 3027 ಸಂಖ್ಯೆಯ ಪರಿವರ್ತಕಗಳನ್ನು ದೂರು ಬಂದ 24 ಗಂಟೆಯೊಳಗೆ ಬದಲಿಸಲಾಗಿಗದೆ.

►ಶಾಲಾ ಕಾಲೇಜುಗಳ ಮೇಲೆ ಹಾಗೂ ಆವರಣದಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಕಾರ್ಯದಡಿ ಜನವರಿ 2022ರವರೆಗೆ ಒಟ್ಟು 687 ಶಾಲೆಗಳಲ್ಲಿನ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸಲಾಗಿದೆ.

►ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯಲಾದ 119 ಕೊಳೆವೆಬಾವಿಗಳಿಗೆ ಒಂದು ತಿಂಗಳೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
- ಪ್ರಶಾಂತ್ ಮಿಶ್ರಾ, ಆಡಳಿತ ನಿರ್ದೇಶಕರು, ಮೆಸ್ಕಾಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News