ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಮನೆಯಲ್ಲಿ ಗೌಪ್ಯವಾಗಿ ವಿಡಿಯೋ ಮಾಡಿದ ಆರೋಪ: ಖಾಸಗಿ ಚಾನೆಲ್ ವಿರುದ್ಧ ಪ್ರಕರಣ ದಾಖಲು
ಉಡುಪಿ, ಫೆ.22: ಹಿಜಾಬ್ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿರುವ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿಯ ಅಜ್ಜಿ ಮನೆಗೆ ಅಕ್ರಮ ಪ್ರವೇಶಿಸಿ ಗೌಪ್ಯವಾಗಿ ವಿಡಿಯೋ ಚಿತ್ರೀಕರಣ ನಡೆಸಿ ಪ್ರಸಾರ ಮಾಡಿ ಮಾನಹಾನಿಗೈದಿದ್ದಾರೆನ್ನಲಾದ ಖಾಸಗಿ ಟಿವಿ ಚಾನೆಲ್‌ವೊಂದರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಹಿಜಾಬ್ ಕುರಿತು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿರುವ ವಿಚಾರವಾಗಿ ಖಾಸಗಿ ಚಾನೆಲ್‌ನ ಕ್ಯಾಮೆರಾಮೆನ್ ಹಾಗೂ ವರದಿಗಾರ ಕುಟುಕು ಕಾರ್ಯಾಚರಣೆ ನೆಪದಲ್ಲಿ ನನ್ನ ಅಜ್ಜಿ ಮನೆಗೆ ಅಕ್ರಮ ಪ್ರವೇಶ ಮಾಡಿ ನನ್ನ ಬಗ್ಗೆ ಮನೆಯಲ್ಲಿದ್ದವರಲ್ಲಿ ವಿಚಾರಿಸಿ, ಹಿಜಾಬ್‌ಗೆ ಸಂಬಂಧಿಸಿ ಹಾಗೂ ಸಂಬಂಧಪಡದ ಪ್ರಶ್ನೆಗಳನ್ನು ಕೇಳಿದ್ದರು’. ‘ಅಲ್ಲದೆ ಚಾನೆಲ್‌ನವರು ನನ್ನ ಅಜ್ಜಿಗೆ ಮಾನಸಿಕ ಕಿರುಕುಳ ನೀಡಿದಲ್ಲದೆ ಗೌಪ್ಯವಾಗಿ ವಿಡಿಯೋ ಚಿತ್ರೀಕರಣ ಮಾಡಿ, ಅದನ್ನು ಫೆ.19ರಂದು ಸಂಜೆ 6ಗಂಟೆಗೆ ‘ಹಿಜಾಬ್ ಹಿಂದೆ ಐಸಿಸ್ ಕೈವಾಡ’ ಎಂಬ ಶಿರ್ಷಿಕೆಯಲ್ಲಿ ಪ್ರಸಾರ ಮಾಡಿ ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ. ಚಾನೆಲ್‌ನವರು ನನ್ನ ಬಗ್ಗೆ ಅಪಪ್ರಚಾರ ಮಾಡಿ ಮಾನಹಾನಿ ಮಾಡುವ ಪ್ರಯತ್ನ ಮಾಡಿದ್ದಾರೆ’ ಎಂದು ಆಲಿಯಾ ಅಸ್ಸಾದಿ ದೂರಿನಲ್ಲಿ ತಿಳಿಸಿದ್ದಾರೆ.
ಅದರಂತೆ ಮಲ್ಪೆ ಪೊಲೀಸರು ಐಪಿಸಿ 1860(ಯು/ಎಸ್-448) ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಇದನ್ನೂ ಓದಿ: ಮಲ್ಪೆ ಹೊಟೇಲ್‌ಗೆ ದಾಳಿ, ಹಲ್ಲೆ ಪ್ರಕರಣ: ಮೂವರು ಆರೋಪಿಗಳ ಬಂಧನ