ಭಗವಾಧ್ವಜದ ಹಿಂದುತ್ವ ಮತ್ತು ತ್ರಿವರ್ಣಧ್ವಜದ ಬಂಧುತ್ವ

Update: 2022-02-23 06:21 GMT

ಬ್ರಾಹ್ಮಣ್ಯದ ಪುನರುತ್ಥಾನವನ್ನು ಹಿಂದುತ್ವದ ವಿಜಯವೆಂದು ನಂಬಿಸುವ ಆರೆಸ್ಸೆಸ್ ಮತ್ತವರ ಸಿದ್ಧಾಂತಿಗಳು ಭಾರತದ ಮೇಲೆ ನಡೆದ ಎಲ್ಲಾ ಪರಕೀಯರ ದಾಳಿಗಳನ್ನು ಎದುರಿಸಲು ಹಿಂದೂ ರಾಜರು ಭಗವಾಧ್ವಜವನ್ನೇ ಬಳಸಿದ್ದರು ಎಂದು ಯಾವುದೇ ಪುರಾವೆಯಿಲ್ಲದೆ ಪ್ರತಿಪಾದಿಸುತ್ತಾರೆ. ಅದು ಸಹಜವೇ ಅಗಿದೆ. ಏಕೆಂದರೆ ಸಂಘಪರಿವಾರದ ಯಾವುದೇ ಪ್ರತಿಪಾದನೆಗಳಿಗೆ ಅವರ ನಂಬಿಕೆ ಪುರಾವೆಯೇ ಹೊರತು ಸಾಕ್ಷ್ಯಾಧಾರಗಳು ಇರುವುದಿಲ್ಲ.


ಹಿಂದುತ್ವದ ರಾಜಕಾರಣ ಹುಟ್ಟುಹಾಕಿರುವ ಕ್ರಿಯೆ-ಪ್ರತಿಕ್ರಿಯೆಗಳ ದ್ವೇಷದ ಹೋಮಕ್ಕೆ ಶಿವಮೊಗ್ಗದಲ್ಲಿ ಮತ್ತೊಬ್ಬ ಹಿಂದೂ ಯುವಕ ಬಲಿಯಾಗಿದ್ದಾನೆ. ಕೊಲೆಗಾರರು ಯಾರೇ ಆಗಿದ್ದರೂ ಅವರಿಗೆ ಕಠಿಣವಾದ ಶಿಕ್ಷೆಯಾಗಬೇಕು ಎಂದು ಅತ್ಯಂತ ಸಾರ್ವಕಾಲಿಕ ಹೇಳಿಕೆಯನ್ನು ಸುಲಭವಾಗಿ ಕೊಡಬಹುದಾದರೂ, ಕೊಲೆಗೆ ಹಿಂದೂಯೇತರರು ಕಾರಣವಲ್ಲದಿದ್ದರೆ ಕೊಲೆಗಾರರು ಪತ್ತೆಯೂ ಆಗುವುದಿಲ್ಲ, ಶಿಕ್ಷೆಯೂ ಅಗುವುದಿಲ್ಲ ಎನ್ನುವುದು ಪರೇಶ್ ಮೇಸ್ತಾ, ಶರತ್ ಮಡಿವಾಳ..ಇನ್ನಿತರ ಪ್ರಕರಣಗಳನ್ನು ಗಮನಿಸಿದಾಗ ಸ್ಪಷ್ಟವಾಗುತ್ತದೆ. ಚುನಾವಣೆಗೆ ಮುನ್ನ ಬಿಜೆಪಿ ಪರವಾದ ವೋಟು ಧ್ರುವೀಕರಣದ ತಂತ್ರಕ್ಕೆ ಇಂತಹ ಬಾಳಿಬದುಕಬೇಕಾದ ಜೀವಗಳು ಬಲಿಯಾಗುತ್ತಿರುವುದು ಕರ್ನಾಟಕಕ್ಕೆ ಹೊಸದೇನೂ ಅಲ್ಲ. ಈ ಬಾರಿಯೂ ಚುನವಣೆಗೆ ಒಂದು ವರ್ಷ ಮಾತ್ರವಿರುವಾಗ ಸೋಗಲಾಡಿ ಸಮವಸ್ತ್ರ-ಸಮಾನತೆಯ ಹೆಸರಿನಲ್ಲಿ ಹಿಜಾಬನ್ನು ಕಳಚಲು ಪ್ರಾರಂಭವಾದ ಕೇಸರಿ ಶಾಲಿನ ದಾಳಿಗಳನ್ನು ಸಂಘೀ ಸಂಘಟನೆಗಳು ದಿನಗಳೆಯುವುದರಲ್ಲಿ ಇಡೀ ರಾಜ್ಯಾದ್ಯಂತ ಕೋಮುದ್ವೇಷವನ್ನಾಗಿ ಮಾರ್ಪಡಿಸಿಬಿಟ್ಟವು. ಶಿವಮೊಗ್ಗದಲ್ಲಂತೂ ಸಂಘೀ ಪ್ರಚಾರಕ್ಕೆ ಬಲಿಯಾಗಿದ್ದ ದ್ವೇಷೋನ್ಮತ್ತ ವಿದ್ಯಾರ್ಥಿಗಳು ಕಾಲೇಜೊಂದರಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಕಟ್ಟಲಾಗಿದ್ದ ಸ್ತಂಭದ ಮೇಲೆ ಭಗವಾಧ್ವಜವನ್ನು ಹಾರಿಸಿಬಿಟ್ಟರು. ಯುದ್ಧ ಗೆದ್ದ ಉನ್ಮಾದದಲ್ಲಿ ತಾವು ಕಲಿಯುತ್ತಿದ್ದ ಕಾಲೇಜಿಗೆ ಕಲ್ಲುಗಳನ್ನೂ ತೂರಿದರು. ಇದರ ಅರ್ಥವೇನು? ಹಿಜಾಬ್ ವಿವಾದಕ್ಕೂ, ಭಗವಾಧ್ವಜವನ್ನು ಹಾರಿಸುವುದಕ್ಕೂ ಇರುವ ಸಂಬಂಧವೇನು? ಆ ಸಂಬಂಧವನ್ನು ಮರುದಿನ ಮಂತ್ರಿ ಈಶ್ವರಪ್ಪನವರು ‘‘ಮುಂದೊಂದು ದಿನ ಕೆಂಪುಕೋಟೆಯ ಮೇಲೆಯೂ ಭಗವಾಧ್ವಜ ಹಾರಾಡಬಹುದು’’ ಎಂದು ಹೇಳುವ ಮೂಲಕ ಸ್ಪಷ್ಟಪಡಿಸಿದರು. ಆದ್ದರಿಂದಲೇ ಹಿಜಾಬ್, ನಮಾಝ್‌ವಿವಾದಗಳು ಬಿಡಿ ಘಟನೆಗಳಲ್ಲವೇ ಅಲ್ಲ. ಅವು ಈ ದೇಶದ ಚರಿತ್ರೆ ಮತ್ತು ಭವಿಷ್ಯವನ್ನು ನಾಶಮಾಡುವ ದೊಡ್ಡ ಸಂಘೀ ಯೋಜನೆಗಳ ಭಾಗಗಳು. ಅದು ಸರ್ವಧರ್ಮೀಯರಿಗೂ ಸೇರಿರುವ ಸೆಕ್ಯುಲರ್- ಪ್ರಜಾತಂತ್ರವಾಗಿ ಕಟ್ಟಿಕೊಂಡಿರುವ ನಮ್ಮೀ ಭಾರತ ದೇಶವನ್ನು ಕೇವಲ ಹಿಂದೂರಾಷ್ಟ್ರವನ್ನಾಗಿ ಮಾಡುವ ಯೋಜನೆ. ಎಲ್ಲಾ ಹಿಂದೂಗಳಿಗೂ ಸಮಾನವಾಗಿ ಸೇರುವ ರಾಷ್ಟ್ರವಲ್ಲ. ಬದಲಿಗೆ ಯಾವುದೇ ಬಗೆಯ ಸಮಾನತೆ ಅಥವಾ ಹಕ್ಕುಗಳಿಲ್ಲದ, ಮಹಿಳೆ, ಶೂದ್ರ, ದಲಿತರು, ರೈತರು-ಕಾರ್ಮಿಕರು ಕೇವಲ ಕರ್ತವ್ಯವನ್ನು ಮಾತ್ರ ಮಾಡುವ ‘ಬ್ರಾಹ್ಮಣೀಯ ಹಿಂದೂ ರಾಷ್ಟ್ರ’ವನ್ನಾಗಿ ಮಾಡುವ ಯೋಜನೆಯಾಗಿದೆ. ಅದಕ್ಕೆ ನಮ್ಮ ದೇಶದ ಪ್ರಜಾತಾಂತ್ರಿಕ ಸಂವಿಧಾನ ಅಡ್ಡಿಯಾಗಿದೆ. ಸೆಕ್ಯುಲರ್- ಪ್ರಜಾತಂತ್ರದ ಸಂಕೇತವಾದ ತ್ರಿವರ್ಣ ಧ್ವಜವೂ ಅಡ್ಡಿ. ಆದ್ದರಿಂದಲೇ ಸ್ವಾತಂತ್ರ್ಯ ಪೂರ್ವದಿಂದಲೂ ಹಾಗೂ ಸ್ವಾತಂತ್ರ್ಯಾನಂತರವೂ ಸಂಘಪರಿವಾರ ತಿರಂಗ ಧ್ವಜವನ್ನಾಗಲೀ, ಸಂವಿಧಾನವನ್ನಾಗಲೀ ಒಪ್ಪಿಕೊಂಡಿರಲೇ ಇಲ್ಲ ಎಂಬುದನ್ನು ಇತಿಹಾಸ ನೋಡಿದರೆ ಸ್ಪಷ್ಟವಾಗುತ್ತದೆ.

ತ್ರಿವರ್ಣ ಧ್ವಜ V/S ಭಗವಾಧ್ವಜ  

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಕಾಂಗ್ರೆಸ್ ಎಲ್ಲಾ ಬಗೆಯ ಸ್ವಾತಂತ್ರ್ಯ ಹೋರಾಟಗಾರರ ವೇದಿಕೆಯಾಗಿ ಬದಲಾದ ಮೇಲೆ ಭಾರತದ ಸ್ವಾತಂತ್ರ್ಯ ಚಳವಳಿಗೊಂದು ಅರ್ಥಾತ್ ಸ್ವತಂತ್ರ ಭಾರತದ ಆಶಯಕ್ಕೊಂದು ಬಾವುಟವನ್ನು ರೂಪಿಸುವ ಪ್ರಯತ್ನಗಳು ಪ್ರಾರಂಭವಾಯಿತು. ಈ ದೇಶದ ಎಲ್ಲಾ ಧರ್ಮೀಯರಿಗೂ ಸಮಾನ ಅವಕಾಶದ ಆಶಯವನ್ನು ಪ್ರತಿಬಿಂಬಿಸುವ ಧ್ವಜವೊಂದನ್ನು ರೂಪಿಸುವ ಪ್ರಯತ್ನಗಳು ಮೇಡಂ ಕಾಮಾ ಅವರ ಮುಂದೊಡಗಿನಿಂದ ಪ್ರಾರಂಭವಾಯಿತು. ಈ ಪ್ರಯತ್ನಗಳನ್ನು ಕಾಂಗ್ರೆಸ್ ಅಧಿವೇಶನಗಳಲ್ಲಿ ವೆಂಕಯ್ಯನವರು ಮುಂದುವರಿಸಿದರು. ಅದಾದ ನಂತರದಲ್ಲಿ ಇಂದಿನ ಭಾರತದ ಬಾವುಟಕ್ಕೆ ಅಂತಿಮ ರೂಪವನ್ನು ಕೊಟ್ಟು ರೂಪಿಸಿದ್ದು ಸುರಯ್ಯೆ ತ್ಯಾಬ್ಜಿ ಎಂಬ ಸುಶಿಕ್ಷಿತ ಮುಸ್ಲಿಮ್ ಮಹಿಳಾ ಹೋರಾಟಗಾರ್ತಿ. ಆಕೆಯ ಪತಿ ಬದ್ರುದ್ದೀನ್ ತ್ಯಾಬ್ಜಿಯವರು ಮುಂಬೈ ಹೈಕೋರ್ಟಿನ ಪ್ರಥಮ ಮುಖ್ಯ ನ್ಯಾಯಾಧೀಶರಾಗಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದ ಪ್ರತಿಬಿಂಬವಾಗಿ ರೂಪಿತವಾದ ಆ ಬಾವುಟದಲ್ಲಿ ಕೇಸರಿ, ಹಸಿರು ಈ ದೇಶದ ಎರಡು ಪ್ರಮುಖ ಧರ್ಮವಾದ ಹಿಂದೂ ಮತ್ತು ಮುಸ್ಲಿಮರನ್ನು ಹಾಗೂ ಬಿಳಿಯ ಬಣ್ಣವು ಇತರ ಎಲ್ಲಾ ಧರ್ಮೀಯರನ್ನು ಪ್ರತಿನಿಧಿಸುತ್ತಿತ್ತು. ಅದರ ಜೊತೆಗೆ ಶಾಂತಿ, ಸಮೃದ್ಧಿ ಮತ್ತು ಸೌಹಾರ್ದಗಳ ಸಂಕೇತವಾಗಿಯೂ ಆ ಬಣ್ಣಗಳನ್ನು ಬಳಸಲಾಗಿತ್ತು. ವೆಂಕಯ್ಯನವರು ರೂಪಿಸಿದ್ದ ಧ್ವಜದಲ್ಲಿ ಮೂರೂ ಬಣ್ಣಗಳ ಹಿನ್ನೆಲೆಯಲ್ಲಿ ಚರಕವಿತ್ತು. ಆದರೆ ಚರಕವೂ ಕೇವಲ ಕಾಂಗ್ರೆಸ್ ಪಕ್ಷದ ಸಂಕೇತವಾಗಿ ಅರ್ಥವಾಗುವುದರಿಂದ ಅಂತಿಮ ವಿನ್ಯಾಸದಲ್ಲಿ ನಡುವಿನ ಬಿಳಿಯ ಬಣ್ಣದ ಮೇಲೆ ಅಶೋಕ ಚಕ್ರವನ್ನು ಅಳವಡಿಸಿಕೊಳ್ಳಲಾಯಿತು. ಇದಕ್ಕೆ ಪ್ರಧಾನ ಕಾರಣ ಭಾರತವು ತನ್ನ ಇತಿಹಾಸದಲ್ಲಿ ಅತಿಯಾಗಿ ಹೆಮ್ಮೆ ಪಡಬಹುದಾದದ್ದು ಹಾಗೂ ಭವಿಷ್ಯಕ್ಕೂ ರೂಢಿಸಿಕೊಳ್ಳಬೇಕಾದದ್ದು ಅಶೋಕನ ಬುದ್ಧಸತ್ವದ ಆಳ್ವಿಕೆಯನ್ನು ಎಂಬ ಗ್ರಹಿಕೆಯಾಗಿತ್ತು. ಅದರ ಜೊತೆಗೆ ಸಾರಾನಾಥದ ಬುದ್ಧ ಸ್ಥೂಪದಲ್ಲಿರುವ ನಾಲ್ಕು ಸಿಂಹದ ತಲೆಗಳೂ ಕೂಡ ಮುಂದೆ ಸ್ವತಂತ್ರ ಭಾರತದ ಮುದ್ರೆಯಾಯಿತು. ಅಂದರೆ ಸಾರದಲ್ಲಿ ತ್ರಿವರ್ಣ ಧ್ವಜವನ್ನು ಸಕಲ ಧರ್ಮೀಯರ ಅಸ್ಮಿತೆಗಳನ್ನು ಮತ್ತು ಸಮಾನತೆಯ ಆಶಯಗಳನ್ನು ಒಳಗೊಳ್ಳುವ ಧ್ವಜವನ್ನಾಗಿ ರೂಪಿಸಲಾಯಿತು. ಇದು ತಿರಂಗದ ಇತಿಹಾಸ. ಅದರ ಆಶಯಗಳಿಗೆ ತಕ್ಕ ಹಾಗೆ ಸ್ವಾತಂತ್ರ್ಯೋತ್ತರ ಭಾರತ ರೂಪುಗೊಂಡಿತೇ ಎನ್ನುವುದು ಬೇರೆ ವಿಷಯ. ಆದರೆ ತಿರಂಗದ ಹಿಂದಿದ್ದ ಅಶಯವಂತೂ ಸರ್ವಧರ್ಮೀಯರ ಶಾಂತಿಯ ತೋಟವಾಗಬೇಕೆಂಬ ಆಶಯವೇ ಅಗಿತ್ತು.

ಆರೆಸ್ಸೆಸ್‌ನ ಭಗವಾಧ್ವಜ- ಮನುವಿನ ವಿಜಯ ಪತಾಕೆ 

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಅಧ್ಯಯನ ಮಾಡಿದವರಿಗೆ ಸಂಘಪರಿವಾರ ಹಾಗೂ ಸಾವರ್ಕರ್‌ರ ಹಿಂದೂ ಮಹಾಸಭಾ ಹೇಗೆ ಉದ್ದಕ್ಕೂ ಬ್ರಿಟಿಷರ ಜೊತೆ ಕೈಗೂಡಿಸಿ ಸ್ವತಂತ್ರ ಭಾರತದ ಮೇಲೆ ಹಿಂದುತ್ವದ ಹೆಸರಿನಲ್ಲಿ ಬ್ರಾಹ್ಮಣ್ಯದ ಹಾಗೂ ಭೂ-ಮಾಲಕ ಮತ್ತು ಬಂಡವಾಳಶಾಹಿಗಳ ಆಧಿಪತ್ಯವನ್ನು ಮುಂದುವರಿಸಿಕೊಂಡು ಹೋಗಲು ಯತ್ನಿಸುತ್ತಿದ್ದರೆಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ರಾಷ್ಟ್ರೀ ಸ್ವಯಂಸೇವಕ ಸಂಘ- ಆರೆಸ್ಸೆಸ್ 1925ರ ವಿಜಯದಶಮಿ ದಿನದಂದು ನಾಗಪುರದಲ್ಲಿ ಸ್ಥಾಪಿತವಾಯಿತು. ಅದರ ಉದ್ದೇಶ ಬ್ರಿಟಿಷರನ್ನು ಭಾರತದಿಂದ ಓಡಿಸುವುದಾಗಿರಲಿಲ್ಲ. ಬದಲಿಗೆ ಹಿಂದೂ ಸಮಾಜವನ್ನು ಬ್ರಾಹ್ಮಣ್ಯದ ಆಧಾರದಲ್ಲಿ ಮರುಸಂಘಟಿಸುತ್ತಾ ಹಿಂದೂ ರಾಷ್ಟ್ರವನ್ನು ಕಟ್ಟುವುದಾಗಿತ್ತು. ಅದರ ಸಂಸ್ಥಾಪಕ ಡಾ. ಹೆಡಗೇವಾರರಂತೂ ಬ್ರಿಟಿಷರ ವಿರುದ್ಧ ಹೋರಾಡುವುದೆಂದರೆ ಜೈಲಿಗೆ ಹೋಗುವುದಲ್ಲ ಎಂದು ಸ್ವಾತಂತ್ರ್ಯ ಹೋರಾಟವನ್ನೇ ತಿರಸ್ಕರಿಸಿದ್ದರು. ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣ ಚಳವಳಿ, ಇಂತಹ ಯಾವುದೇ ಹೋರಾಟಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಬೇಕಿದ್ದರೆ ವ್ಯಕ್ತಿಗತ ನೆಲೆಯಲ್ಲಿ ಭಾಗವಹಿಸಬಹುದೇ ವಿನಾ ಸಂಘವಾಗಿ ಕೂಡದೆಂಬ ನಿರ್ದೇಶನವಿತ್ತಿದ್ದರು.
1928ರ ಸುಮಾರಿಗೆ ಅರೆಸ್ಸೆಸ್ ಭಗವಾಧ್ವಜವನ್ನು ತನ್ನ ಲಾಂಛನವನ್ನಾಗಿ ಸ್ವೀಕರಿಸಿತು. ಕೇಸರಿ ಬಣ್ಣದ ಹಾಗೂ ತ್ರಿಕೋನಾಕೃತಿಯ ಭಗವಾಧ್ವಜವನ್ನು ಆರೆಸ್ಸೆಸ್ ಏಕೆ ತನ್ನ ಬಾವುಟವನ್ನಾಗಿ ಸ್ವೀಕರಿಸಿತು ಎಂಬ ಬಗ್ಗೆ ಹೆಡಗೇವಾರರ ಸಹಚರನಾಗಿದ್ದ ಎನ್. ಎಚ್. ಪಾಲ್ಕರ್ ಅವರು ಬರೆದಿರುವ 'Saffron Flag' ಪುಸ್ತಕದಲ್ಲಿ ಏಕೆ ಮತ್ತು ಹೇಗೆ ಭಗವಾಧ್ವಜವು ಆರೆಸ್ಸೆಸ್ ಆಶಯದ ಹಿಂದೂ ರಾಷ್ಟ್ರದ ಪ್ರತೀಕವಾಗಿದೆ ಎಂದು ವಿವರಿಸುತ್ತಾರೆ. ಆರೆಸ್ಸೆಸ್ ಪ್ರಕಾರ ಭಗವಾಧ್ವಜವನ್ನು ವೇದಗಳ ಕಾಲದಲ್ಲಿ ಅರುಣಕೇತು ಎಂದು ಕರೆಯುತ್ತಿದ್ದರು.

ಆದರೆ ಆ ನಂತರ ಭಗವಾಧ್ವಜದ ಬಳಕೆಯು ಪ್ರಧಾನವಾಗಿ ಆಗಿರುವುದು ಬುದ್ಧ ಭಾರತದ ವಿರುದ್ಧ ಶಂಕರಾಚಾರ್ಯರ ನೇತೃತ್ವದಲ್ಲಿ ಸಾಧಿಸಲಾದ ಬ್ರಾಹ್ಮಣ್ಯದ ಪುನರುತ್ಥಾನದಲ್ಲಿ. ಅರ್ಥಾತ್ ಭಗವಾಧ್ವಜವು ಮಹಿಳೆ, ಶೂದ್ರ ಮತ್ತು ದಲಿತರ ಮೇಲೆ ಬ್ರಾಹ್ಮಣ್ಯದ ವಿಜಯದ ಪ್ರತೀಕವಾಗಿದೆ. ಆದರೆ ಬ್ರಾಹ್ಮಣ್ಯದ ಪುನರುತ್ಥಾನವನ್ನು ಹಿಂದುತ್ವದ ವಿಜಯವೆಂದು ನಂಬಿಸುವ ಆರೆಸ್ಸೆಸ್ ಮತ್ತವರ ಸಿದ್ಧಾಂತಿಗಳು ಭಾರತದ ಮೇಲೆ ನಡೆದ ಎಲ್ಲಾ ಪರಕೀಯರ ದಾಳಿಗಳನ್ನು ಎದುರಿಸಲು ಹಿಂದೂ ರಾಜರು ಇದೇ ಬಾವುಟವನ್ನೇ ಬಳಸಿದ್ದರು ಎಂದು ಯಾವುದೇ ಪುರಾವೆಯಿಲ್ಲದೆ ಪ್ರತಿಪಾದಿಸುತ್ತಾರೆ. ಅದು ಸಹಜವೇ ಅಗಿದೆ. ಏಕೆಂದರೆ ಸಂಘಪರಿವಾರದ ಯಾವುದೇ ಪ್ರತಿಪಾದನೆಗಳಿಗೆ ಅವರ ನಂಬಿಕೆ ಪುರಾವೆಯೇ ಹೊರತು ಸಾಕ್ಷ್ಯಾಧಾರಗಳು ಇರುವುದಿಲ್ಲ. ಆದರೆ ಪರಕೀಯರಾದ ಆರ್ಯರು ದಾಳಿ ನಡೆಸಿದಾಗ ಇಲ್ಲಿನ ದ್ರಾವಿಡರು ಅಥವಾ ಆರ್ಯರಿಗೆ ಮುಂಚೆಯೇ ಇಲ್ಲಿಗೆ ವಲಸೆ ಬಂದಿದ್ದ ಮೂಲ ಜನಾಂಗದವರು ಯಾವ ಬಾವುಟವನ್ನಿಟ್ಟುಕೊಂಡು ವಿರೋಧಿಸಿದರು ಎಂಬ ಪ್ರಶ್ನೆಗೂ ಅವರ ಬಳಿ ಉತ್ತರವಿರುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮೊಗಲರ ಸಾಮ್ರಾಜ್ಯದ ವಿರುದ್ಧ ನಡೆದ ಎಲ್ಲಾ ಸಾಮಂತರ ಬಂಡಾಯಗಳನ್ನು ಮುಸ್ಲಿಮ್ ಆಳ್ವಿಕೆಯ ವಿರುದ್ಧದ ಹಿಂದೂ ಬಂಡಾಯವೆಂದೇ ಕಥೆ ಕಟ್ಟುವ ಆರೆಸ್ಸೆಸ್ ಇತಿಹಾಸಕ್ಕೆ ಹೋಗಿ ಆ ಎಲ್ಲಾ ರಾಜರಿಗೂ ಭಗವಾಧ್ವಜವನ್ನು ಕೊಟ್ಟು ಬಂದಿದೆ. ಅವರ ಪ್ರಕಾರ ಈ ದೇಶದ ಗುಲಾಮಗಿರಿಯೆಂದರೆ ಬ್ರಿಟಿಷ್ ದಾಸ್ಯವಲ್ಲ. ಮುಸ್ಲಿಮ್ ಆಳ್ವಿಕೆ ಮತ್ತು ಮುಸ್ಲಿಮರು ಈ ದೇಶದವರಲ್ಲ. ಹಾಗೆಯೇ ಕ್ರಿಶ್ಚಿಯನ್ನರು ಕೂಡ. ಈ ದೇಶದ ಚರಿತ್ರೆಯಲ್ಲಿ ನಾವು ವೈಭವದ ಯುಗವೆಂದು ಪರಿಗಣಿಸಬೇಕಿರುವುದು ಹಾಗೂ ಪುನರ್ ಸ್ಥಾಪಿಸಬೇಕಿರುವುದು ಬುದ್ಧಧರ್ಮವನ್ನು ನಾಶ ಮಾಡಿದ ಗುಪ್ತರ ಕಾಲದ ಬ್ರಾಹ್ಮಣ್ಯವನ್ನು. ಹೀಗಾಗಿ ಭಗವಾಧ್ವಜವೇ ಅವರ ಚರಿತ್ರೆ ಹಾಗೂ ಭವಿಷ್ಯದ ಆಶಯಗಳ ಸಂಕೇತ. ಆದ್ದರಿಂದ ಅವರು ಪ್ರತಿಪಾದಿಸುತ್ತಿರುವುದು ಸನಾತನ ಭಗವಾಧ್ವಜವನ್ನೂ ಅಲ್ಲ.

ಆರೆಸ್ಸೆಸ್ ಮಾರ್ಪಡಿಸಿರುವ ಭಗವಾಧ್ವಜವನ್ನು!

ಹೀಗೆ ತಿರಂಗ ಮತ್ತು ಭಗವಾಧ್ವಜಗಳು ಎರಡು ತದ್ವಿರುದ್ಧ ಆಶಯ, ಚರಿತ್ರೆ ಮತ್ತು ಭವಿಷ್ಯಗಳ ಪ್ರತೀಕಗಳೇ ಆಗಿವೆ. ಆದ್ದರಿಂದಲೇ ಸಂಘಪರಿವಾರವು ಸ್ವಾತಂತ್ರ್ಯ ಹೋರಾಟದುದ್ದಕ್ಕೂ ಆ ನಂತರವೂ ತಿರಂಗ ಧ್ವಜಕ್ಕೆ ನಿರಂತರ ಅವಮಾನವನ್ನು ಮಾಡುತ್ತಲೇ ಬಂದಿದೆ. ತ್ರಿವರ್ಣ ಧ್ವಜಕ್ಕೆ ಆರೆಸ್ಸೆಸ್ ಮಾಡಿರುವ ಅಪಮಾನದ ಇತಿಹಾಸ ಉದಾಹರಣೆಗೆ 1930ರಲ್ಲಿ ಕಾಂಗ್ರೆಸ್ ಅಧಿವೇಶನವು ಅಧಿಕೃತವಾಗಿ ‘‘ಸಂಪೂರ್ಣ ಸ್ವಾತಂತ್ರ್ಯ’’ದ ಘೋಷಣೆಯನ್ನು ನೀಡಿ 1930ರ ಜನವರಿ 26 ರಂದು ಸ್ವತಂತ್ರ ಭಾರತದ ಘೋಷಣೆಯ ಭಾಗವಾಗಿ ಎಲ್ಲೆಡೆ ಭಾರತದ ಸ್ವತಂತ್ರ ಧ್ವಜವನ್ನು ಹಾರಿಸಲು ಕರೆ ನೀಡುತ್ತದೆ. ಆಗ ಆರೆಸ್ಸೆಸ್‌ನ ಮೊದಲ ಸರಸಂಘ ಚಾಲಕ ಹೆಡಗೇವಾರ್ ಅವರು:
  
‘‘ಕೊನೆಗೂ ನಮ್ಮ ಘೋಷಣೆಯನ್ನು ಕಾಂಗ್ರೆಸ್ ಒಪ್ಪಿಕೊಂಡಿದ್ದಕ್ಕೆ ನಾವು ಅಭಿನಂದಿಸುತ್ತೇವೆ. ಹೀಗಾಗಿ ನಮ್ಮ ಎಲ್ಲಾ ಶಾಖಾ ಕಚೇರಿಗಳಲ್ಲೂ ಭಗವಾಧ್ವಜವನ್ನು ಹಾರಿಸಬೇಕು’’ ಎಂದು ಅದೇಶಿಸುತ್ತಾರೆ! 1947ರ ಸೆಪ್ಟಂಬರ್‌ನಲ್ಲಿ ಬಿಜೆಪಿಯ ಪಿತಾಮಹ ಶ್ಯಾಮ ಪ್ರಸಾದ್ ಮುಖರ್ಜಿಯವರು ನೆಹರೂ ಮಂತ್ರಿಮಂಡಲದ ಸದಸ್ಯರಾಗಿದ್ದರೂ ತಮ್ಮ ಅಧಿಕೃತ ನಿವಾಸದ ಮೇಲೆ ಭಾರತದ ಬಾವುಟವನ್ನು ಹಾರಿಸದೆ ಹಿಂದೂ ಮಹಾ ಸಭಾದ ಬಾವುಟವನ್ನು ಹಾರಿಸುತ್ತಾರೆ. ಅದೇ ವರ್ಷ ನವೆಂಬರ್‌ನಲ್ಲಿ ಸಂಘಪರಿವಾರದ ಮುಖಪತ್ರಿಕೆ ‘ಆರ್ಗನೈಝರ್’ನಲ್ಲಿ ಬರೆಯಲಾದ ಸಂಪಾದಕೀಯವೊಂದು:
‘‘ವಿಧಿಯಾಟದ ಭಾಗವಾಗಿ ಅಧಿಕಾರ ಪಡೆದುಕೊಂಡಿರುವ ಇಂದಿನ ಸರಕಾರವು ತ್ರಿವರ್ಣ ಧ್ವಜವನ್ನು ಭಾರತದ ರಾಷ್ಟ್ರಧ್ವಜವನ್ನಾಗಿ ಅಂಗೀಕರಿಸಿದೆ. ಆದರೆ ಭಾರತದ ಜನರೆಂದೂ ತ್ರಿವರ್ಣ ಧ್ವಜವನ್ನು ತಮ್ಮ ಬಾವುಟವನ್ನಾಗಿ ಅಂಗೀಕರಿಸಲಾರರು. ಏಕೆಂದರೆ ಮೂರು ಎಂಬ ಸಂಖ್ಯೆ ಭಾರತೀಯರ ಪಾಲಿಗೆ ಕೆಟ್ಟ ಶಕುನವಾಗಿದೆ’’ ಎಂದೆಲ್ಲ ಬರೆಯುತ್ತಾರೆ. ತ್ರಿಶೂಲ, ತ್ರಿಮೂರ್ತಿ ಎಂದೆಲ್ಲಾ ತ್ರಿವಳಿಗಳನ್ನೇ ಆರಾಧಿಸುವ ಹಿಂದೂ ಧರ್ಮದ ವಕ್ತಾರರು ನೀಡಿದ ಹೇಳಿಕೆಯಿದು.

ಸ್ವಾತಂತ್ರ್ಯಾನಂತರದಲ್ಲೂ ಮುಂದುವರಿದ ದೇಶದ್ರೋಹ-ಧ್ವಜದ್ರೋಹ 

ಸ್ವಾತಂತ್ರ್ಯ ಬಂದ ಮರುವರ್ಷ 1948ರ ಜನವರಿ 30ರಂದು ಆರೆಸ್ಸೆಸ್ ಮತ್ತು ಹಿಂದೂಮಹಾ ಸಭಾದಿಂದ ತರಬೇತಿ ಹೊಂದಿದ ನಾಥೂರಾಮ್ ಗೋಡ್ಸೆ ಎಂಬ ಸ್ವತಂತ್ರ ಭಾರತದ ಪ್ರಥಮ ಭಯೋತ್ಪಾದಕ ಗಾಂಧಿಯನ್ನು ಕೊಂದ ನಂತರ ಆರೆಸ್ಸೆಸ್ ನಿಷೇಧವಾಗುತ್ತದೆ. ಪರೋಕ್ಷವಾಗಿ ಹಿಂದುತ್ವ ಪಕ್ಷಪಾತಿಯಾಗಿದ್ದ ಆಗಿನ ಗೃಹಮಂತ್ರಿ ಸರ್ದಾರ್ ಪಟೇಲರಿಗೂ ಆರೆಸ್ಸೆಸ್‌ನ ನಡೆಗಳು ಅತಿಯೆನಿಸುತ್ತವೆ. ಆದರೂ ಆರೆಸ್ಸೆಸ್ ಮತ್ತೆ ಮುಖ್ಯಧಾರೆಗೆ ಮರಳುವ ಬಗ್ಗೆ ಒಲವು ಹೊಂದಿದ್ದ ಪಟೇಲರು ಆರೆಸ್ಸೆಸ್ ಮೇಲಿನ ನಿಷೇಧವನ್ನು ಹಿಂದೆಗೆದುಕೊಳ್ಳಲು: ‘‘ಆರೆಸ್ಸೆಸ್ ಭಾರತದ ಸಂವಿಧಾನವನ್ನು ಒಪ್ಪಿಕೊಳ್ಳಬೇಕು. ಭಾರತದ ಬಾವುಟ, ಲಾಂಛನಗಳಿಗೆ ಮರ್ಯಾದೆ ಕೊಡಬೇಕು ಹಾಗೂ ತನ್ನ ರಹಸ್ಯ ಕಾರ್ಯಾಚರಣೆಯನ್ನು ನಿಲ್ಲಿಸಿ ತನ್ನ ಸಂಘಟನೆಗೂ ಒಂದು ಬಹಿರಂಗ ಪ್ರಣಾಳಿಕೆ ಹಾಗೂ ಕಾರ್ಯವಿಧಾನ ಘೋಷಿಸಿ ಒಂದು ಸಾಂಸ್ಕೃತಿಕ ಸಂಘಟನೆಯಾಗಿ ಮಾತ್ರ ಕೆಲಸ ಮಾಡಬೇಕು’’ ಎಂದು ತಾಕೀತು ಮಾಡುತ್ತಾರೆ. ಆ ಷರತ್ತಿನ ಮೇಲೆ ಆರೆಸ್ಸೆಸ್ ಮೇಲಿನ ನಿಷೇಧವನ್ನು 1949ರ ಜುಲೈನಲ್ಲಿ ಹಿಂದೆಗೆದುಕೊಳ್ಳಲಾಗುತ್ತದೆ. ಭಾರತದ ಸಂವಿಧಾನ ಮತ್ತು ಬಾವುಟಕ್ಕೆ ಒಳಪಡುವ ಷರತ್ತಿನ ಮೇಲೆ ಹೊರಬಂದ ಆರೆಸ್ಸೆಸ್ ಮಾಡಿದ್ದೇನು?
 1949ರ ನವೆಂಬರ್ 26ರಂದು ಭಾರತದ ಸಂವಿಧಾನ ರಚನಾ ಪ್ರಕ್ರಿಯೆ ಪೂರ್ಣವಾಗುತ್ತದೆ. ನವೆಂಬರ್ 30ರಂದು ‘ಆರ್ಗನೈಝರ್’ ಸಂಪಾದಕೀಯವು ಭಾರತದ ಸಂವಿಧಾನವನ್ನು ಹೀಗೆಳೆಯುತ್ತಾ:

‘‘ಭಾರತದ ಸಂವಿಧಾನದಲ್ಲಿ ಸನಾತನ ಭಾರತದಲ್ಲಿ ವಿಕಸನಗೊಂಡ ಸಂವಿಧಾನದ ಉಲ್ಲೇಖವೇ ಇಲ್ಲ. ಈಗಲೂ ಜಗತ್ತಿನಾದ್ಯಂತ ಮನಸ್ಮತಿಯು ಅಪಾರವಾದ ಗೌರವವನ್ನೂ ಮತ್ತು ಎಲ್ಲರ ಸ್ವಪ್ರೇರಿತ ಮನ್ನಣೆಯನ್ನೂ ಪಡೆದುಕೊಳ್ಳುತ್ತದೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಇದರ ಬಗ್ಗೆ ಅರಿವೇ ಇಲ್ಲ’’ ಎಂದು ಸಮಾನತೆಯ ಸಂವಿಧಾನದ ಬದಲಿಗೆ ತಾರತಮ್ಯದ ಮನುಸ್ಮತಿಯನ್ನು ಎತ್ತಿಹಿಡಿಯುತ್ತದೆ. ಆರೆಸ್ಸೆಸ್‌ನ ಎರಡನೇ ಸರಸಂಘಚಾಲಕ ಗೋಳ್ವಾಲ್ಕರ್ ಅವರು ತಮ್ಮ ‘ಬಂಚ್ ಆಫ್ ಥಾಟ್ಸ್’ ಬರಹ ಸಂಕಲನದಲ್ಲಿ ತ್ರಿವರ್ಣ ಧ್ವಜವನ್ನು ಭಾರತದ ಧ್ವಜವನ್ನಾಗಿ ಮಾಡಿದ್ದನ್ನು ತೀವ್ರವಾಗಿ ಟೀಕಿಸುತ್ತಾರೆ. ‘‘ನಮ್ಮ ನಾಯಕರು ನಮ್ಮ ದೇಶಕ್ಕೆ ಹೊಸ ಬಾವುಟ ಮತ್ತು ಹೊಸ ರಾಷ್ಟ್ರಗೀತೆಯನ್ನು ಕೊಟ್ಟಿದ್ದಾರೆ. ಏಕೆ ಹೀಗೆ? ಅತ್ಯಂತ ಸನಾತನವಾದ ನಮ್ಮ ರಾಷ್ಟ್ರಕ್ಕೆ ಒಂದು ಬಾವುಟ ಇರಲಿಲ್ಲವೇ? ರಾಷ್ಟ್ರಗೀತೆ ಇರಲಿಲ್ಲವೇ? ಇತ್ತು. ಹಾಗಿದ್ದ ಮೇಲೆ ಏಕೀ ವಿಸ್ಮತಿ’’ ಎಂದು ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸುತ್ತಾರೆ. ಭಾರತವೆಂಬುದು ಅಮೂರ್ತವಾದ ಒಂದು ನಾಗರಿಕತೆಯಾಗಿ ದ್ದರೂ ಅದು ಎಂದೂ ನಾಗರಿಕರು ಸ್ವ ಇಚ್ಛೆಯಿಂದ ಒಪ್ಪಿಕೊಳ್ಳುವ ಒಂದು ರಾಷ್ಟ್ರವಾಗಿರಲಿಲ್ಲ. ರಾಷ್ಟ್ರವೆಂಬ ಪರಿಕಲ್ಪನೆಯೇ ಒಂದು ಆಧುನಿಕ ಉತ್ಪನ್ನ. ಹೀಗಿರುವಾಗ ಗೋಳ್ವಾಲ್ಕರ್ ಹೇಳುತ್ತಿರುವ ರಾಷ್ಟ್ರ ಆರೆಸ್ಸೆಸ್ ಕಟ್ಟಬಯಸುವ ಹಿಂದೂ ರಾಷ್ಟ್ರವೇ ಹೊರತು ಮತ್ತೇನಲ್ಲ. ಇಲ್ಲಿ ಅವರು ಸೂಚಿಸುತ್ತಿರುವುದು ಭಗವಾಧ್ವಜವನ್ನೇ ಹೊರತು ಬೇರೇನನ್ನೂ ಅಲ್ಲ. ಆರೆಸ್ಸೆಸ್ ಕಚೇರಿಯ ಮೇಲೆ ರಾಷ್ಟ್ರೀಯ ದಿನಗಳಂದೂ ತ್ರಿವರ್ಣ ಧ್ವಜವಿರುತ್ತಿರಲಿಲ್ಲ! ಹೀಗೆ ಭಾರತ ರಾಷ್ಟ್ರ ಮತ್ತು ರಾಷ್ಟ್ರಧ್ವಜದ ಬಗ್ಗೆ ಸಂಘಪರಿವಾರದ ತಿರಸ್ಕಾರ ಮತ್ತು ಭಾರತವನ್ನು ಹಿಂದೂರಾಷ್ಟ್ರ ಅರ್ಥಾತ್ ಬ್ರಾಹ್ಮಣ ರಾಷ್ಟ್ರವನ್ನಾಗಿ ಮಾಡುವ ಪ್ರಯತ್ನಗಳು 47ರ ನಂತರವೂ ಮುಂದುವರಿಯಿತು. ಹಾಗೆ ನೋಡಿದರೆ 2002ರವರೆಗೂ ಆರೆಸ್ಸೆಸ್ ಕಚೇರಿಗಳ ಮೇಲೆ ಭಾರತದ ಬಾವುಟ ಹಾರಾಡಲೇ ಇರಲಿಲ್ಲ. 2001ರಲ್ಲಿ ‘ರಾಷ್ಟ್ರಪ್ರೇಮಿ ಯುವದಳ’ ಎಂಬ ಸಂಘಟನೆಯ ಕಾರ್ಯಕರ್ತರು ಆರೆಸ್ಸೆಸ್‌ನ ನಾಗಪುರದ ಪ್ರಧಾನ ಕಚೇರಿಯ ಮೇಲೆ ಬಲವಂತವಾಗಿ ರಾಷ್ಟ್ರಧ್ವಜವನ್ನು ಹಾರಿಸಿದ್ದರು. ಅವರನ್ನು ಹಿಡಿದು ಆರೆಸ್ಸೆಸ್‌ನ ದೇಶಭಕ್ತ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದರು. ಆ ನಂತರ 2002ರಲ್ಲಿ ಮೊದಲ ಬಾರಿಗೆ ಆರೆಸ್ಸೆಸ್‌ನ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು.

ಏಕೆ ಹೀಗೆ? 2002ರಲ್ಲಿ ವಾಜಪೇಯಿ ಸರಕಾರ ರಾಷ್ಟ್ರಧ್ವಜವನ್ನು ಖಾಸಗಿಯವರು ಹಾರಿಸಬಹುದೆಂದು ಭಾರತದ ಧ್ವಜ ನಿಯಮಗಳಿಗೆ ತಿದ್ದುಪಡಿ ತರುವವರೆಗೆ ಖಾಸಗಿ ವ್ಯಕ್ತಿ-ಸಂಘಟನೆಗಳು ರಾಷ್ಟ್ರಧ್ವಜವನ್ನು ಹಾರಿಸುವಂತಿರಲಿಲ್ಲವಾದ್ದರಿಂದ ಆವರೆಗೆ ಆರೆಸ್ಸೆಸ್ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ ಎಂಬ ಸಬೂಬನ್ನು ಆರೆಸ್ಸೆಸ್ ನೀಡುತ್ತದೆ. ಆದರೆ 1955ರ ಭಾರತದ ರಾಷ್ಟ್ರಧ್ವಜದ ನಿಯಮಗಳಾಗಲೀ, 1971ರ ನಿಯಮಗಳಾಗಲೀ ಖಾಸಗಿ ವ್ಯಕ್ತಿಗಳು ಮತ್ತು ಸಂಘಟನೆಗಳು ಪ್ರತಿದಿನ ರಾಷ್ಟ್ರಧ್ವಜವನ್ನು ಹಾರಿಸುವುದನ್ನು ಮಾತ್ರ ನಿಷೇಧಿಸುತ್ತವೆ. ಅರ್ಥಾತ್ ರಾಷ್ಟ್ರೀಯ ದಿನಗಳಾದ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನ ಇನ್ನಿತ್ಯಾದಿ ಆರು ದಿನಗಳಂದು ರಾಷ್ಟ್ರ ಧ್ವಜವನ್ನು ಎಲ್ಲಾ ವ್ಯಕ್ತಿಗಳೂ ಹಾಗೂ ಸಂಘಟನೆಗಳೂ ತಮ್ಮ ಮನೆ ಮತ್ತು ಕಚೇರಿಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಅನುಮತಿಸುತ್ತದೆ. ಆದರೂ ಆರೆಸ್ಸೆಸ್ ಕಚೇರಿಯ ಮೇಲೆ ರಾಷ್ರಧ್ವಜದ ಬದಲಿ ಭಗವಾಧ್ವಜ ಮಾತ್ರ ಹಾರುತ್ತಿರುವುದಕ್ಕೆ ಕಾರಣ ಬಿಡಿಸಿ ಹೇಳಬೇಕಿಲ್ಲ. 2002ರ ತನಕ ತಮ್ಮ ಕಚೇರಿಗಳ ಮೇಲೆ ಉದ್ದೇಶಪೂರ್ವಕವಾಗಿ ರಾಷ್ಟ್ರ ಧ್ವಜ ಹಾರಿಸದ ಈ ಸಂಗಳು 1994ರಲ್ಲಿ ಹುಬ್ಬಳ್ಳಿಯಲ್ಲಿ ಅಂಜುಮಾನ್ ಮೈದಾನದ ಮೇಲೆ, ಶ್ರೀನಗರದ ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಮುಂದಾಗಿದ್ದರು.

ಅದರ ಹಿಂದೆ ತ್ರಿವರ್ಣ ಧ್ವಜವನ್ನು ಕೂಡಾ ಭಗವಾಧ್ವಜದ ಉದ್ದೇಶಕ್ಕೆ ಪೂರಕವಾಗಿ ಬಳಸಿಕೊಳ್ಳುವ ಉದ್ದೇಶವೇ ಇತ್ತು. ರಾಷ್ಟ್ರಭಕ್ತಿಯಲ್ಲ. ತೀರಾ ಇತ್ತೀಚಿನ ದಿನಗಳಲ್ಲಿ ಬಿಜೆಪಿ ನಾಯಕರು ರೈತ ಹೋರಾಟದಲ್ಲಿ ಮೃತನಾದ ಹುತಾತ್ಮ ಕಿಸಾನನಿಗೆ ರಾಷ್ಟ್ರಧ್ವಜ ಸುತ್ತಿಸಿ ಅಂತಿಮ ಕಾರ್ಯಕ್ರಮವನ್ನು ಮಾಡಿದ್ದನ್ನು ಹಾಗೂ ಮೊನ್ನೆ ಕಾಂಗ್ರೆಸ್ ಪಕ್ಷವು ವಿಧಾನ ಸೌಧದಲ್ಲಿ ರಾಷ್ಟ್ರಧ್ವಜವನ್ನು ಪ್ರದರ್ಶಿಸುತ್ತಾ ಪ್ರತಿಭಟನೆ ಮಾಡಿದ್ದನ್ನು ರಾಷ್ಟ್ರಧ್ವಜಕ್ಕೆ ಆದ ಅಪಮಾನ ಎಂದು ಇಲ್ಲದ ಕಾನೂನನ್ನು ಉದ್ಧರಿಸುತ್ತಾ ಹುಸಿ ದೇಶಪ್ರೇಮವನ್ನು ಪ್ರದರ್ಶಿಸುತ್ತಿದ್ದಾರ

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News