ಸೌಹಾರ್ದದ ಕೊಳಲಿಗೆ ಧ್ವನಿ ಸಿಕ್ಕೀತೆ?

Update: 2022-02-23 05:59 GMT

ಉತ್ತರಪ್ರದೇಶದ ಅಸಲಿ ಚುನಾವಣೆಯ ಗಮ್ಮತ್ತು ನಾಲ್ಕನೆಯ ಹಂತದ ಮತದಾನದಿಂದ ಪ್ರಾರಂಭವಾಗಲಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಈಗಾಗಲೇ ಮೂರು ಹಂತದ ಮತದಾನ ನಡೆದಿರುವ 172 ಕ್ಷೇತ್ರಗಳಲ್ಲಿ ಬಿಜೆಪಿ 140ರಲ್ಲಿ ಗೆದ್ದಿತ್ತು. ಒಂದು ಸರಳ ಲೆಕ್ಕಾಚಾರದ ಪ್ರಕಾರ ಈ 140 ಸ್ಥಾನಗಳಲ್ಲಿ ಬಿಜೆಪಿ ಕನಿಷ್ಠ 60 ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಅಂದರೆ ಪ್ರತಿ ಹಂತದ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳುತ್ತಾ ಬಂದಿದೆ.

ಈ ಲೆಕ್ಕದ ಪ್ರಕಾರ ಬಿಜೆಪಿಯ ಒಟ್ಟು ಸದಸ್ಯ ಬಲ 297ರಿಂದ 237ಕ್ಕೆ ಕುಸಿಯಲಿದೆ. ಇದೇ ಲೆಕ್ಕ ಮುಂದುವರಿದು ಉಳಿದ ನಾಲ್ಕು ಹಂತದ ಮತದಾನಗಳಲ್ಲಿ ಸರಾಸರಿ 80 ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡರೆ ಯೋಗಿ ಆದಿತ್ಯನಾಥ್ ಮರಳಿ ಗೋರಖ್ ಪುರ ಮಠ ಸೇರಬೇಕಾಗಬಹುದು. ಆದರೆ ರಾಜಕೀಯದ ಗಣಿತ ಅಷ್ಟು ಸರಳವಾಗಿ ಇರುವುದಿಲ್ಲ.

ಮೊದಲ ಮೂರು ಹಂತದ ಮತದಾನ ನಡೆದ 172 ವಿಧಾನಸಭಾ ಕ್ಷೇತ್ರಗಳು ಬಿಜೆಪಿಯ ಪಾರಂಪರಿಕ ಮತದಾರರ ಕ್ಷೇತ್ರಗಳಲ್ಲ. ಅದು ಜಾಟರು, ಮುಸ್ಲಿಮರು ಮತ್ತು ಒಬಿಸಿ-ದಲಿತರ ಕ್ಷೇತ್ರಗಳು. ನಾಲ್ಕನೇ ಹಂತದ ಮತದಾನ ಪ್ರಾರಂಭವಾಗಲಿರುವ ಕ್ಷೇತ್ರಗಳಲ್ಲಿ ಮುಸ್ಲಿಮ್, ಒಬಿಸಿ, ದಲಿತ ಮತದಾರರ ಜೊತೆಗೆ ಬಿಜೆಪಿಯ ಪಾರಂಪರಿಕ ಮತದಾರರಾದ ಬ್ರಾಹ್ಮಣ ಮತ್ತು ಠಾಕೂರು ಮತದಾರರೂ ಇದ್ದಾರೆ.

ಇದರ ಜೊತೆಗೆ ಮುಂದಿನ ನಾಲ್ಕು ಹಂತದ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಕೂಡಾ ಏಕಾಂಗಿಯಾಗಿ ಸ್ಪರ್ಧಿಸಬೇಕಾಗಿದೆ. ಈ ಕ್ಷೇತ್ರಗಳಲ್ಲಿ ಅಖಿಲೇಶ್ ಯಾದವ್ ಮಿತ್ರಪಕ್ಷವಾದ ಆರ್ ಎಲ್ ಡಿಗೆ ನೆಲೆ ಇಲ್ಲ. ಇಲ್ಲಿ ಏನಿದ್ದರೂ ಬಿಜೆಪಿ,ಎಸ್ ಪಿ ಮತ್ತು ಬಿಎಸ್ ಪಿ ನಡುವಿನ ತ್ರಿಕೋನ ಸ್ಪರ್ಧೆ. ಈಗಾಗಲೇ ಸೋಲು ಒಪ್ಪಿಕೊಂಡಿರುವ ರೀತಿಯಲ್ಲಿ ವರ್ತಿಸುತ್ತಿರುವ ಬಿಎಸ್ ಪಿ ಕಳೆದುಕೊಳ್ಳಲಿರುವ ಮತಗಳು ಈ ಕ್ಷೇತ್ರಗಳಲ್ಲಿ ಯಾರ ಬುಟ್ಟಿಗೆ ಹೋಗಿ ಬೀಳಲಿವೆ ಎನ್ನುವುದಷ್ಟೇ ಈಗಿನ ಪ್ರಶ್ನೆ.

ಉತ್ತರಪ್ರದೇಶದ ರಾಜಕೀಯವನ್ನು ಬಹಳ ಕಾಲದಿಂದ ಬಲ್ಲ ಪತ್ರಕರ್ತರೊಬ್ಬರ ಪ್ರಕಾರ ಬಿಎಸ್ ಪಿ ಕಳೆದುಕೊಂಡದ್ದನ್ನು ಬಿಜೆಪಿ ಪಡೆಯಲಿದೆಯಂತೆ. ಉತ್ತರಪ್ರದೇಶದ ರಾಜಕಾರಣದಲ್ಲಿ ಬಿಎಸ್‌ಪಿಮತ್ತು ಬಿಎಸ್‌ಪಿಯ ಮತದಾರರು, ಬಿಜೆಪಿ ಮತ್ತು ಬಿಜೆಪಿ ಮತದಾರರ ಜೊತೆಯಲ್ಲಿ ಸೇರಿಕೊಳ್ಳುವಷ್ಟು ಸಲೀಸಾಗಿ ಎಸ್ ಪಿ ಮತ್ತು ಎಸ್ ಪಿ ಮತದಾರರ ಜೊತೆ ಸೇರಲಾರರು. ಅಲ್ಲಿ ದಲಿತ್? ಬ್ರಾಹ್ಮಣ್ ಭಾಯಿಚಾರ್ ನಡೆದಿದೆ. ಆದರೆ ದಲಿತ್-ಯಾದವ್, ದಲಿತ್-ಠಾಕೂರ್ ಭಾಯೀಚಾರಾ ನಡೆದಿಲ್ಲ. ಈ ಕಾರಣದಿಂದಾಗಿಯೇ 2019ರ ಲೋಕಸಭಾ ಚುನಾವಣೆಯಲ್ಲಿ ಎಸ್‌ಪಿ? ಬಿಎಸ್‌ಪಿ ಮೈತ್ರಿ ನಿರೀಕ್ಷಿತ ಫಲ ನೀಡಿಲ್ಲ.

ರಾಯಬರೇಲಿ ಎಂಬ ಕಾಂಗ್ರೆಸ್ ಗತವೈಭವ

ನಾಲ್ಕನೇ ಹಂತದ ಮತದಾನ ನಡೆಯಲಿರುವ 59 ಕ್ಷೇತ್ರಗಳಲ್ಲಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿರುವ ಏಕೈಕ ಲೋಕಸಭಾ ಕ್ಷೇತ್ರ ರಾಯಬರೇಲಿ ಕೂಡಾ ಸೇರಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಸಮಾಜವಾದಿ ಪಕ್ಷ ಗೆದ್ದಿದೆ, ಕಾಂಗ್ರೆಸ್ ಪಕ್ಷ ಒಂದು ಕ್ಷೇತ್ರದಲ್ಲಿ ಗೆದ್ದಿದ್ದರೂ ಆ ಶಾಸಕಿ ಕೂಡಾ ಬಿಜೆಪಿ ಸೇರಿದ್ದಾರೆ. ಪ್ರಿಯಾಂಕಾ ಗಾಂಧಿ ಏನಾದರೂ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಲು ಇಚ್ಛಿಸಿದರೆ ಅವರು ಇದೇ ಕ್ಷೇತ್ರದಿಂದ ಸ್ಪರ್ಧೆಗಿಳಿಯಬಹುದು. ಈ ಹಿನ್ನೆಲೆಯಲ್ಲಿ ಮುಖ್ಯವಾಗಿ ಈ ಕ್ಷೇತ್ರದ ಚುನಾವಣೆ ವೈಯಕ್ತಿಕವಾಗಿ ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯದ್ದು.

ರಾಯಬರೇಲಿಯಲ್ಲಿನ ಮತದಾರರಿಗೆ ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚಾಗಿ ಇಂದಿರಾಗಾಂಧಿ ಕುಟುಂಬದ ಜೊತೆ ಭಾವಾನಾತ್ಮಕವಾದ ಸಂಬಂಧ ಇದೆ. 2012ರ ವಿಧಾನಸಭಾ ಕ್ಷೇತ್ರದ ಸಮೀಕ್ಷೆಗೆ ಉತ್ತರಪ್ರದೇಶಕ್ಕೆ ಹೋಗಿದ್ದ ನಾನು ರಾಯಬರೇಲಿಗೆ ಹೋಗಿದ್ದೆ.

ರಾಯಬರೇಲಿಯಲ್ಲಿ ಎಲ್ಲವೂ ಗಾಂಧಿಮಯ. ಈ ಗಾಂಧಿ ಮಾಯೆ ಮಹಾತ್ಮಾಗಾಂಧೀಜಿಯವರಿಂದ ಪ್ರಾರಂಭಗೊಂಡು ಸೋನಿಯಾಗಾಂಧಿಯ ವರೆಗೆ ಬಂದು ನಿಂತಿದೆ. ಲಖನೌ-ರಾಯಬರೇಲಿ ಹೆದ್ದಾರಿಯಲ್ಲಿ ಸಿಗುವ ಇಂದಿರಾಗಾಂಧಿ ದ್ವಾರದಿಂದ ಒಳಹೊಕ್ಕ ಕೂಡಲೇ ಸ್ವಲ್ಪ ದೂರದಲ್ಲಿ ಎದುರಾಗುವುದು ಗಾಂಧೀಜಿ ಪ್ರತಿಮೆ. ಅದರ ಹಿಂಭಾಗದಲ್ಲಿಯೇ ಶ್ರೀ ಗಾಂಧಿ ಶಾಲೆ, ಅಲ್ಲಿಂದ ಒಂದು ಕಿ.ಮೀ.ದೂರದಲ್ಲಿ ಕಸ್ತೂರುಬಾ ಶಾಲೆ. ಪಟ್ಟಣದೊಳಗೆ ಪ್ರವೇಶಿಸಿದೊಡನೆ ಸ್ವಾಗತಿಸುವ ಫಿರೋಝ್ ಗಾಂಧಿ ದ್ವಾರ. ಮುಂದೆ ಸಾಗಿ ಚೌಕ ದಾಟಿದೊಡನೆ ಸೋನಿಯಾಗಾಂಧಿ ಶಿಕ್ಷಣ ಸಂಸ್ಥೆ. ಒಂದೆಡೆ ಇಂದಿರಾಗಾಂಧಿ ಕಮಾನ್, ಇನ್ನೊಂದೆಡೆ ರಾಜೀವ್ ಗಾಂಧಿ ಯುವಜನ ಸಂಸ್ಥೆ. ಈ ಪಟ್ಟಣದಲ್ಲಿ ಸುತ್ತಾಡಿದರೆ ನೋಡಿದ ಕಡೆಗಳೆಲ್ಲ ಕಣ್ಣಿಗೆ ಬೀಳುವ ಗಾಂಧಿ ಹೆಸರು ಒಂದು ಕ್ಷಣವೂ ಗಾಂಧಿ ಪರಿವಾರವನ್ನು ಮರೆಯದಂತೆ ಮಾಡುತ್ತದೆ. ನಾಲ್ಕನೇ ಹಂತದ ಮತದಾನ ನಡೆಯಲಿರುವ ಉತ್ತರಪ್ರದೇಶದ 59 ಕ್ಷೇತ್ರಗಳಲ್ಲಿ ರಾಯಬರೇಲಿ ಲೋಕಸಭಾ ಕ್ಷೇತ್ರದ ಐದು ಕ್ಷೇತ್ರಗಳೂ ಸೇರಿವೆ. 2019ರಲ್ಲಿ ಬಿಜೆಪಿ ಸುಂಟರಗಾಳಿಯಲ್ಲಿ ಧೂಳೀಪಟವಾಗಿ ಹೋಗಿದ್ದ ಕಾಂಗ್ರೆಸ್ ಪಕ್ಷದ ಮಾನ ಉಳಿಸಿದ್ದು ಸೋನಿಯಾಗಾಂಧಿಯವರನ್ನು ಗೆಲ್ಲಿಸಿದ್ದ ರಾಯಬರೇಲಿ ಲೋಕಸಭಾ ಕ್ಷೇತ್ರ.

ಈ ಊರಲ್ಲಿ ಸುತ್ತಾಡಿದರೆ ಇಂದಿರಾಗಾಂಧಿಯವರ ಜೊತೆ ಮಾತನಾಡಿದ್ದ ಹಿರಿಯರು, ರಾಜೀವ್ ಗಾಂಧಿ ಜೊತೆ ಪೋಟೊ ತೆಗೆಸಿದವರು, ಸೋನಿಯಾಗಾಂಧಿ ಬರೆದ ಪತ್ರ ಇಟ್ಟುಕೊಂಡವರು ಸಿಗುತ್ತಾರೆ. ಇದು ಮೂಲತ: ಇಂದಿರಾಗಾಂಧಿ ಪತಿ ಫಿರೋಝ್ ಗಾಂಧಿಯವರ ರಾಜಕೀಯ ಕರ್ಮಭೂಮಿ. ಅವರು ಎರಡು ಬಾರಿ ಇಲ್ಲಿ ಲೋಕಸಭಾ ಸದಸ್ಯರಾಗಿದ್ದರು. ರಾಜ್ಯಸಭಾ ಸದಸ್ಯರಾಗಿದ್ದುಕೊಂಡೇ 1966ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಇಲ್ಲಿಂದಲೇ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದು. 1977ರಲ್ಲಿ ರಾಜ್ ನಾರಾಯಣ್ ವಿರುದ್ದ ಇಂದಿರಾಗಾಂಧಿ ಸೋತದ್ದು ಬಿಟ್ಟರೆ ಕಳೆದ 70 ವರ್ಷಗಳಲ್ಲಿ ನೆಹರೂ ಕುಟುಂಬದವರು ಈ ಕ್ಷೇತ್ರದಲ್ಲಿ ಎಂದೂ ಸೋತಿಲ್ಲ. 1996 ಮತ್ತು 1998ರಲ್ಲಿ ನೆಹರೂ ಕುಟುಂಬ ಸ್ಪರ್ಧಿಸದೆ ಇದ್ದಾಗ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರು.

 ರಾಯಬರೇಲಿ ಜನ ಇಂದಿರಾಗಾಂಧಿ ಪರಿವಾರಕ್ಕೆ ಋಣಿಯಾಗಲು ಕಾರಣವಿದೆ, ಪಕ್ಕದ ಅಮೇಠಿಗೆ ಹೋಲಿಸಿದರೆ ರಾಯಬರೇಲಿ ಒಂದು ಮಟ್ಟದ ಅಭಿವೃದ್ಧಿಯನ್ನು ಕಂಡಿದೆ. ಮುಖ್ಯವಾಗಿ ಸಿಮೆಂಟ್ ನಿಂದ ಹಿಡಿದು ಕಾಗದದ ವರೆಗೆ, ಜವಳಿಯಿಂದ ಕಾರ್ಪೆಟ್ ವರೆಗೆ ಕನಿಷ್ಠ ಎರಡು ಡಜನ್ ಕಾರ್ಖಾನೆಗಳಿವೆ. ಯುಪಿಎ ಕಾಲದಲ್ಲಿ ಇಲ್ಲಿಗೆ ರೈಲ್ವೆ ಕೋಚ್ ಕಾರ್ಖಾನೆ ಮಂಜೂರಾಗಿತ್ತು. ಇದರಿಂದ ಒಂದಷ್ಟು ಉದ್ಯೋಗ ಸೃಷ್ಟಿಯಾಗಿತ್ತು. ಆದರೆ ಕಳೆದ ಏಳೆಂಟು ವರ್ಷಗಳಲ್ಲಿ ರಾಯಬರೇಲಿ ವಿಐಪಿ ಸ್ಥಾನಮಾನ ಕಳೆದುಕೊಂಡು ಜನ ಹತಾಶರಾಗಿದ್ದಾರೆ ಎನ್ನುತ್ತಿವೆ ಸ್ಥಳೀಯ ವರದಿಗಳು. ಹತ್ತು ವರ್ಷಗಳ ಹಿಂದೆ ಈ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾಗ ಅಲ್ಲಿನ ಕಾಂಗ್ರೆಸ್ ಮತದಾರರು ‘ಪ್ರಿಯಾಂಕಾ ಜ್ವರ’ದಿಂದ ನರಳುತ್ತಿರುವ ಹಾಗೆ ಕಂಡಿದ್ದರು. ಅಲ್ಲಿನ ಮುನ್ಸಿ ಗಂಜ್ ನ ಸಾರ್ವಜನಿಕ ಸಭೆಗೆ ಪ್ರಿಯಾಂಕಾ ಗಾಂಧಿ ನಾಲ್ಕು ಗಂಟೆ ತಡವಾಗಿ ಬಂದರೂ ಸೇರಿದ್ದ ಜನ ತಾಳ್ಮೆ ಕಳೆದುಕೊಳ್ಳದೆ ಜೈಕಾರ ಹಾಕುತ್ತಿದ್ದರು. ಅದೇ ಸಭೆಯಲ್ಲಿ ನನ್ನ ಪಕ್ಕದಲ್ಲಿದ್ದ ಒಬ್ಬ ಯುವಕ ಸಭೆ ಮುಗಿಯುತ್ತಿದ್ದಂತೆ ‘‘ಫಿರ್ ಅಗ್ಲೆ ಚುನಾವ್ ಮೇ ಆಯೇಗಿ’ ಎಂದು ಗೊಣಗಾಡುತ್ತಾ ನಿರ್ಗಮಿಸಿದ್ದ. ಪ್ರಿಯಾಂಕಾ ಹಿಂದಿನ ಚುನಾವಣೆಗಳಿಗಿಂತ ಈ ಚುನಾವಣೆಯಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಇಷ್ಟು ವರ್ಷಗಳ ನಂತರ ಆಕೆಯ ಪರವಾಗಿ ಜೈಕಾರ ಹಾಕಿದವರು ಹೆಚ್ಚಾಗಿದ್ದಾರೆಯೇ? ಗೊಣಗಾಡುತ್ತಾ ತಿರಸ್ಕರಿಸಿದವರು ಹೆಚ್ಚಾಗಿದ್ದಾರೆಯೇ ಎನ್ನುವುದನ್ನು ಈ ಚುನಾವಣೆ ತಿಳಿಸಲಿದೆ. ಒಂದು ರೀತಿಯಲ್ಲಿ ನಾಲ್ಕನೇ ಮತ್ತು ಐದನೇ ಹಂತದ ಚುನಾವಣೆ ನಡೆಯಲಿರುವ ಕ್ಷೇತ್ರಗಳು ಪ್ರಿಯಾಂಕಾ ಗಾಂಧಿಯ ಸತ್ವ ಪರೀಕ್ಷೆಯ ಕ್ಷೇತ್ರಗಳು.

ಕೋಮುಸೌಹಾರ್ದದ ಕೊಳಲುವಾದ

  ನಾಲ್ಕನೇ ಹಂತದ ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ನೆಹರೂ ಕುಟುಂಬದ ಇನ್ನೊಂದು ಕವಲಿನ ಇಬ್ಬರು ನಾಯಕರಾದ ಮೇನಕಾಗಾಂಧಿ ಮತ್ತು ವರುಣ್ ಗಾಂಧಿಯವರ ರಾಜಕೀಯ ನೆಲೆಗಳಿರುವ ಪಿಲಿಬಿಟ್ ಜಿಲ್ಲೆಯ ಮತಕ್ಷೇತ್ರಗಳೂ ಸೇರಿವೆ.2009ರ ಲೋಕಸಭಾ ಚುನಾವಣಾ ಸಮೀಕ್ಷೆಗಾಗಿ ಹಿಮಾಲಯದ ತಪ್ಪಲಲ್ಲಿ ನೇಪಾಳಕ್ಕೆ ತಾಗಿಕೊಂಡಿರುವ ಬರೇಲಿಯಿಂದ ಸುಮಾರು 60 ಕಿ.ಮೀ. ದೂರದಲ್ಲಿರುವ ಪಿಲಿಬಿಟ್ ಗೆ ಹೋಗಿದ್ದೆ.

ವೇಣುವಿನೋದ ಕೃಷ್ಣನ ಕೈಯಲ್ಲಿ ಕೊಳಲು ಕಣ್ಣಿಗೆ ಬಿದ್ದಾಗ, ಇಲ್ಲವೇ ಹರಿಪ್ರಸಾದ್ ಚೌರಾಸಿಯಾ ಅವರ ಕೊಳಲವಾದನಕ್ಕೆ ಕಿವಿಕೊಟ್ಟಾಗ ಒಂದು ಕ್ಷಣ ಪಿಲಿಬಿಟ್ ಎಂಬ ಈ ಊರನ್ನು ನೆನೆಸಿಕೊಳ್ಳಿ. ಸಾಧ್ಯವಾದರೆ ಈ ಕೊಳಲುಗಳನ್ನು ತಯಾರಿಸುತ್ತಿರುವ ಪಿಲಿಬಿಟ್ ನ ಬಡ ಕುಶಲಕರ್ಮಿಗಳಿಗೆ ಮನಸ್ಸಲ್ಲಿ ಅಭಿನಂದಿಸಿ ಬಿಡಿ. ಶೇಕಡಾ 30ರಷ್ಟು ಮುಸ್ಲಿಮರನ್ನು ಹೊಂದಿರುವ ಪಿಲಿಬಿಟ್ ಕೊಳಲುಗಳಿಗಷ್ಟೇ ಅಲ್ಲ ಕೋಮುಸೌಹಾರ್ದಕ್ಕೂ ಪ್ರಸಿದ್ಧ. ಬನಾರಸ್ ನ ಸೀರೆ, ಮೊರದಾಬಾದ್ ನ ಹಿತ್ತಾಳೆ ಸಾಮಗ್ರಿಗಳಂತೆ ಪಿಲಿಬಿಟ್ ನ ಕೊಳಲುಗಳನ್ನು ಕೂಡಾ ತಯಾರಿಸುವವರು ಮುಸ್ಲಿಮ್ ಕುಶಲಕರ್ಮಿಗಳು.

ಇವರಲ್ಲಿ ಯಾರೂ ಅಂದು ಕೂಡಾ ಚುನಾವಣಾ ರಾಜಕೀಯದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ, ಬಹುಷಃ ಈ ಚುನಾವಣೆಯಲ್ಲಿಯೂ ಯಾರಾದರೂ ಮಾತನಾಡಿಸಿದರೆ ರಾಜಕೀಯದ ಚರ್ಚೆ ಬಗ್ಗೆ ಆಸಕ್ತಿ ತೋರಲಾರರು. ಅವರ ಸಮಸ್ಯೆಗಳ ಹೊರೆ ಬೇರೆಯೇ ಇದೆ.

ಈ ಕೊಳಲು ತಯಾರಿಸುವ ಕುಶಲಕರ್ಮಿಗಳ ಏಕೈಕ ಬೇಡಿಕೆ ಕಡಿಮೆ ಬೆಲೆಯಲ್ಲಿ ಕೊಳಲಿಗೆ ಬೇಕಾದ ಬಿದಿರಿನ ಪೂರೈಕೆ. ಅಸ್ಸಾಮಿನ ಬರಾಕ್ ಕಣಿವೆಯ ಬಿದಿರುಗಳಿಂದ ಮಾತ್ರ ಉತ್ತಮ ಗುಣಮಟ್ಟದ ಕೊಳಲು ತಯಾರಿಸಲು ಸಾಧ್ಯ. ಸಿಲ್ ಚಾರ್ ನಿಂದ ಪಿಲಿಬಿಟ್ ಜೋಡಿಸುವ ನ್ಯಾರೋಗೇಜ್ ರೈಲು ಮಾರ್ಗವನ್ನು ಬ್ರಿಟಿಷರು ನಿರ್ಮಿಸಿದ್ದರು. ಈ ಊರಲ್ಲಿ ಕೊಳಲು ತಯಾರಿಸುವ ವೃತ್ತಿ ಬೆಳೆಯಲು ಈ ರೈಲುಮಾರ್ಗವೂ ಕಾರಣವಿರಬಹುದು. ಆದರೆ ಸುಮಾರು ಹದಿನೈದು ವರ್ಷಗಳ ಹಿಂದೆ ನ್ಯಾರೋಗೇಜ್ ರೈಲು ರದ್ದು ಮಾಡಲಾಯಿತು. ಈಗ ರೈಲು ಬರೇಲಿಗೆ ಸುತ್ತಿ ಬರಬೇಕಾಗಿದೆ.

ಇದೇ ಅವಕಾಶವನ್ನು ಬಳಸಿಕೊಂಡು ಹುಟ್ಟಿಕೊಂಡ ದಲ್ಲಾಳಿಗಳು ಟ್ರಕ್ ಗಳಲ್ಲಿಬಿದಿರು ತಂದು ಕೊಳಲು ತಯಾರಿಸುವ ಕೈಗಾರಿಕೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ರೈಲಿನಲ್ಲಿ ಸ್ವತ: ಹೋಗಿ ಬಿದಿರುತಂದು ಕೊಳಲು ತಯಾರಿಸುತ್ತಿದ್ದ ಕುಶಲಕರ್ಮಿಗಳು ಈಗ ಈ ದಲ್ಲಾಳಿಗಳ ಜೀತದಾಳುಗಳಾಗಿ ಹೋಗಿದ್ದಾರೆ. ದಲ್ಲಾಳಿಗಳ ದಬ್ಬಾಳಿಕೆಯಿಂದ ಬೇಸತ್ತು ನೂರಾರು ಕುಟುಂಬಗಳು ಬೇರೆ ವೃತ್ತಿ ಹಿಡಿದಿವೆ.

ಪ್ರಾಣಿಗಳ ಬಗ್ಗೆ ತೋರುತ್ತಿರುವ ಅನುಕಂಪದ ಅರ್ಧದಷ್ಟನ್ನು ಈ ಮನುಷ್ಯರ ಬಗ್ಗೆ ಮೇನಕಾಗಾಂಧಿ ತೋರಿಸಿದ್ದರೆ ಬಡಪಾಯಿ ಕುಶಲಕರ್ಮಿಗಳು ನೆಮ್ಮದಿಯಿಂದ ಬದುಕುತ್ತಿದ್ದರು ಎಂದು ಸ್ಥಳೀಯ ಪತ್ರಕರ್ತರೊಬ್ಬರು ವ್ಯಂಗ್ಯದಿಂದ ಹೇಳಿದ್ದರು. ಪಿಲಿಬಿಟ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿಗೆದ್ದಿದ್ದ ಮೇನಕಾಗಾಂಧಿ ನಂತರ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು ಪಕ್ಕದ ಸುಲ್ತಾನ್ ಪುರದಿಂದ ಸ್ಪರ್ಧಿಸಿ ಲೋಕಸಭಾ ಸದಸ್ಯರಾಗಿದ್ದಾರೆ. ಈ ಊರಿಗೆ ಕಾಲಿಟ್ಟೊಡನೆ ಎದುರಾಗುವ ಜುಮಾ ಮಸೀದಿಯ ಹಿಂಭಾಗದಲ್ಲಿ ಗೌರಿ ಶಂಕರ ದೇವಸ್ಥಾನ ಇದೆ. ಅದರ ಹೆಬ್ಬಾಗಿಲನ್ನು ನಿರ್ಮಿಸಿದ್ದು ಮಸೀದಿ ಸ್ಥಾಪಕ ಹಪೀಝ್ ರೆಹಮತ್ ಖಾನ್. ಈ ಹೆಬ್ಬಾಗಿಲು ಪ್ರವೇಶಕ್ಕೊಂದು ದಾರಿಯೇ ಹೊರತು ತಡೆ ಅಲ್ಲ. ಆದರೆ ನೆಹರೂ ಮೊಮ್ಮಗ ವರುಣ್ ಗಾಂಧಿ ಪಿಲಿಬಿತ್ ಲೋಕಸಭಾ ಕ್ಷೇತ್ರವನ್ನು ಗೆದ್ದ ನಂತರ ಅಲ್ಲಿನ ಹಿಂದೂ-ಮುಸ್ಲಿಮರ ಮನೆಮನೆಗಳ ನಡುವೆ ಅಡ್ಡಗೋಡೆಗಳು ಎದ್ದಿವೆ. ಪ್ರಾರಂಭದಲ್ಲಿ ಕೋಮುದ್ವೇಷವನ್ನು ಕಾರುತ್ತಿದ್ದ ವರುಣ್ ಗಾಂಧಿ ಇತ್ತೀಚೆಗೆ ಯಾಕೋ ಬಂಡುಕೋರನಾಗಿ ಬದಲಾಗಿದ್ದಾರೆ.

Writer - ದಿನೇಶ್ ಅಮೀನ್ ಮಟ್ಟು

contributor

Editor - ದಿನೇಶ್ ಅಮೀನ್ ಮಟ್ಟು

contributor

Similar News