ಹಿಜಾಬ್ ವಿವಾದ ಪ್ರೌಢಶಾಲೆಗೆ ವಿಸ್ತರಿಸದಂತೆ ಎಚ್ಚರ: ಬಾಬು ಎಂ.
ಉಡುಪಿ, ಫೆ.23: ಕಾಲೇಜಿನಲ್ಲಿರುವ ಹಿಜಾಬ್ ವಿವಾದ ಪ್ರೌಢಶಾಲೆವರೆಗೆ ಬರಬಾರದು. ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇಲ್ಲದಿದ್ದರೆ ಧಾರ್ಮಿಕ ಸಹಿಷ್ಣುತೆಗೆ ಕಷ್ಟವಾಗುತ್ತದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಾಗೃತೆ ವಹಿಸಬೇಕಾಗಿದೆ ಎಂದು ಉಡುಪಿ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಬಾಬು ಎಂ. ಹೇಳಿದ್ದಾರೆ.
ಉಡುಪಿ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಈ ಸಂಬಂಧ ಮುಖ್ಯೋಪಾಧ್ಯಾಯರು, ಫೋಷಕರು, ಎಸ್‌ಡಿಎಂಸಿಗಳ ಸಭೆ ಕರೆದು ಒಳ್ಳೆಯ ರೀತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಬೇಕು. ಒಳ್ಳೆಯ ರೀತಿಯಲ್ಲಿ ಮಕ್ಕಳಿಗೆ ಪರೀಕ್ಷೆ ನಡೆಯಬೇಕು. ಆ ನಿಟ್ಟಿನಲ್ಲಿ ಉತ್ತಮ ವಾತಾವರಣವನ್ನು ನಿರ್ಮಿಸಬೇಕು. ಆದುದರಿಂದ ಎಲ್ಲರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.
ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ ಮಾತನಾಡಿ, ಹಿಜಾಬ್ ವಿಚಾರವಾಗಿ ಮಲ್ಲಾರಿನ ಪ್ರೌಢ ಶಾಲೆಯಲ್ಲಿ ಆರಂಭದಲ್ಲಿ ಸ್ವಲ್ಪ ಸಮಸ್ಯೆ ಆಗಿತ್ತು. ಬಳಿಕ ಮಾತುಕತೆಯ ಮೂಲಕ ಬಗೆಹರಿಸಿದ್ದೇವೆ. ಅದೇ ರೀತಿ ಕಾಪು ವಿದ್ಯಾನಿಕೇತನ ಶಾಲೆಯಲ್ಲೂ ಸಮಸ್ಯೆ ಬಗೆಹರಿಸಲಾಗಿದೆ. ಪರೀಕ್ಷೆ ಸುಸೂತ್ರವಾಗಿ ನಡೆಸಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಕೊರೋನಾದಿಂದ ವಿದ್ಯಾರ್ಥಿಗಳು ಎರಡು ವರ್ಷ ಪರೀಕ್ಷೆ ಬರೆದಿಲ್ಲ. ಇದೀಗ ಎರಡು ವರ್ಷ ಬಳಿಕ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಾಬು ಎಂ., ಸಂಪನ್ಮೂಲ ವ್ಯಕ್ತಿಗಳನ್ನು ಮಕ್ಕಳಿಗೆ ತರಬೇತಿ ನೀಡುವ ಕೆಲಸ ಮಾಡಬೇಕು. ಇದರಿಂದ ಮಕ್ಕಳಲ್ಲಿ ಆಸಕ್ತಿ ಹೆಚ್ಚುತ್ತದೆ ಎಂದು ಹೇಳಿದರು. ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿವೇಕಾನಂದ ಗಾಂವ್ಕರ್ ಉಪಸ್ಥಿತರಿದ್ದರು.