ಸೇನಾ ದುಸ್ಸಾಹಸಗಳಿಗೆ ನಾಯಕರ ಚಿತ್ತಭ್ರಾಂತಿಯೇ ಕಾರಣ

Update: 2022-02-25 19:30 GMT

‘ಅಮೆರಿಕವು ಜಗತ್ತಿನ ಏಕೈಕ ಸೂಪರ್ ಪವರ್ ಆಗಿದೆ ಹಾಗೂ ತನ್ನ ಇಚ್ಛೆಯನ್ನು ಎಲ್ಲಿ ಬೇಕಾದರೂ ಯಾವತ್ತೂ ಹೇರುವ ಅಧಿಕಾರ ತನಗಿದೆ’ ಎಂಬ ಅದರ ಅಹಂಕಾರವು ಇರಾಕ್ ಮೇಲೆ ಅದು ನಡೆಸಿದ ದಾಳಿಗೆ ಕಾರಣವಾಗಿತ್ತು. ಅದೇ ವೇಳೆ, ಜಗತ್ತು ಇನ್ನು ತನಗೆ ಗೌರವಾನ್ವಿತ ಸ್ಥಾನ ಕೊಡುವುದಿಲ್ಲ; ಹಾಗಾಗಿ ತಾನು ಪ್ರಬಲ ಶಕ್ತಿ ಎಂಬುದಾಗಿ ಇನ್ನೊಮ್ಮೆ ಪರಿಗಣಿಸಲ್ಪಡಬೇಕಾದರೆ, ನಿರ್ಣಾಯಕ ಕ್ರಮವೊಂದನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬ ರಶ್ಯದ ಚಿತ್ತಭ್ರಾಂತಿಯೇ ಯುಕ್ರೇನ್ ಮೇಲಿನ ದಾಳಿಗೆ ಕಾರಣವಾಗಿದೆ.


ಉಕ್ರೇನ್ ಮೇಲೆ ರಶ್ಯ ನಡೆಸಿರುವ ಆಕ್ರಮಣವು ಹಿಂದೆಯೂ ನಡೆದ ಈ ರೀತಿಯ ಆಕ್ರಮಣಗಳನ್ನು ನೆನಪಿಸುವಂತಾಗಿದೆ. ತಾವು ಹೆಚ್ಚಿನ ಮಹತ್ವ ಹೊಂದಿದ್ದೇವೆ ಎಂಬುದಾಗಿ ಭಾವಿಸಿರುವ ಬಲಿಷ್ಠ ಸೇನೆಯನ್ನೊಳಗೊಂಡ ಬೃಹತ್ ದೇಶಗಳು ಸಣ್ಣ ದೇಶಗಳ ಮೇಲೆ ತಮ್ಮ ಸಾಮರ್ಥ್ಯವನ್ನು ತೋರಿಸಿವೆ. ನನ್ನ ಜೀವಿತಾವಧಿಯಲ್ಲಿ ನಡೆದ ಇಂಥ ಆಕ್ರಮಣಗಳ ಬಗ್ಗೆ ಮಾತ್ರ ಮಾತನಾಡುವುದಾದರೆ, ಇದು ಇಂಥ ನಾಲ್ಕನೇ ಆಕ್ರಮಣವಾಗಿದೆ. ಇದಕ್ಕೂ ಮೊದಲು ವಿಯೆಟ್ನಾಮ್ ಮತ್ತು ಇರಾಕ್‌ಗಳ ಮೇಲೆ ಅಮೆರಿಕ ಹಾಗೂ ಅಫ್ಘಾನಿಸ್ತಾನದ ಮೇಲೆ ಸೋವಿಯತ್ ಇದೇ ರೀತಿಯಲ್ಲಿ ದಾಳಿಗಳನ್ನು ಮಾಡಿದ್ದವು. ಈ ಎಲ್ಲಾ ದಾಳಿಗಳು ಕೆಟ್ಟದಾಗಿ ಕೊನೆಗೊಂಡವು. ದಾಳಿಗೊಳಗಾದ ದೇಶಗಳು ಅಪಾರ ನಾಶ-ನಷ್ಟವನ್ನು ಅನುಭವಿಸಿದವು, ಆಕ್ರಮಣ ನಡೆಸಿದ ದೇಶಗಳ ಪ್ರತಿಷ್ಠೆ ಮಣ್ಣು ಪಾಲಾಯಿತು ಹಾಗೂ ಪ್ರಪಂಚದಾದ್ಯಂತ ಋಣಾತ್ಮಕ ಸರಣಿ ಪರಿಣಾಮಗಳು ಕಾಣಿಸಿಕೊಂಡವು.

1965ರಲ್ಲಿ, ಅಮೆರಿಕ ಅಧ್ಯಕ್ಷ ಜಾನ್ಸನ್ ವಿಯೆಟ್ನಾಮ್ ಮೇಲಿನ ಆಕ್ರಮಣವನ್ನು ತೀವ್ರಗೊಳಿಸಿದಾಗ ನಾನು ಉತ್ತರ ಭಾರತದಲ್ಲಿ ಬೆಳೆಯುತ್ತಿದ್ದ ಎಳೆಯ ಬಾಲಕನಾಗಿದ್ದೆ. ಯುದ್ಧ ಸಾಗಿದ ಗತಿಯ ಬಗ್ಗೆ ನನ್ನಲ್ಲಿ ಹೆಚ್ಚಿನ ನೆನಪುಗಳಿಲ್ಲ. ಆದರೆ ಯುದ್ಧ ಹೇಗೆ ಕೊನೆಗೊಂಡಿತು ಎಂಬ ಬಗ್ಗೆ ನನ್ನಲ್ಲಿ ಸ್ಪಷ್ಟ ನೆನಪುಗಳಿವೆ. 1975 ಎಪ್ರಿಲ್‌ನಲ್ಲಿ ನಾನು ದಿಲ್ಲಿಯಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದೆ. ಅಮೆರಿಕದ ಕೊನೆಯ ಸೈನಿಕರನ್ನು ಸೈಗಾನ್‌ನಿಂದ ಹೊತ್ತೊಯ್ದ ವಿಮಾನದ ಬಗ್ಗೆ ನಾವು ಕೆಲವು ಗೆಳೆಯರು ಬಿಬಿಸಿಯ ವಿವರಣೆಯನ್ನು ಕೇಳುತ್ತಿದ್ದೆವು. ಅಮೆರಿಕದ ಪಾಲಿಗೆ ಈ ಅವಮಾನ ಈಗಷ್ಟೇ ಆರಂಭವಾಗಿದೆ ಎಂದು ನಾವು ಭಾವಿಸಿದ್ದೆವು. ಯಾಕೆಂದರೆ, ಏಶ್ಯಾದ್ಯಂತ ಅಂದು ಒಗ್ಗಟ್ಟು ನೆಲೆಸಿತ್ತು. ಅದೂ ಅಲ್ಲದೆ, ಬಾಂಗ್ಲಾದೇಶ ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕವು ಆಗ ಅತ್ಯಂತ ಏಕಪಕ್ಷೀಯ ನಿಲುವನ್ನು ತೆಗೆದುಕೊಂಡಿತ್ತು. ಪಾಕಿಸ್ತಾನದ ಅಮಾನುಷ ಹಾಗೂ ಜನಾಂಗೀಯ ಹತ್ಯೆಕಾರಕ ಸೇನಾಡಳಿತಕ್ಕೆ ಅದು ಬೆಂಬಲ ನೀಡಿತ್ತು.

1979 ಡಿಸೆಂಬರ್‌ನಲ್ಲಿ ಸೋವಿಯತ್ ಯೂನಿಯನ್ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿತು. ಆಗ ಹೊಸದಿಲ್ಲಿಯಲ್ಲಿ ಅಧಿಕಾರದಲ್ಲಿದ್ದದ್ದು ಚರಣ್ ಸಿಂಗ್ ನೇತೃತ್ವದ ಉಸ್ತುವಾರಿ ಸರಕಾರ. ಚರಣ್ ಸಿಂಗ್ ಭಾರತದ ವಸಾಹತುಶಾಹಿ ವಿರೋಧಿ ಧೋರಣೆಯ ಅತ್ಯುನ್ನತ ಸಂಪ್ರದಾಯವನ್ನು ಎತ್ತಿಹಿಡಿದು, ದೇಶವೊಂದರ ಸಾರ್ವಭೌಮತೆಯ ಮೇಲೆ ನಡೆಸಿದ ದಾಳಿಗಾಗಿ ಸೋವಿಯತ್ ಯೂನಿಯನನ್ನು ಟೀಕಿಸಿದರು. ಅಫ್ಘಾನಿಸ್ತಾನದೊಂದಿಗೆ ನಾವು ನಿಕಟ ಹಳೆಯ ಬಾಂಧವ್ಯವನ್ನು ಹೊಂದಿದ್ದೆವು.

1980ರ ಜನವರಿಯಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿ ಅಧಿಕಾರಕ್ಕೆ ಮರಳಿದರು. ಆದರೆ, ಅವರು ಸೋವಿಯತ್ ಯೂನಿಯನ್ ಅಫ್ಘಾನಿಸ್ತಾನದ ಮೇಲೆ ನಡೆಸಿದ ದಾಳಿಯನ್ನು ಬೆಂಬಲಿಸಿದರು. ಈ ನಿರ್ಧಾರಕ್ಕಾಗಿ ಹೊಸದಿಲ್ಲಿಯಲ್ಲಿರುವ ಸೋವಿಯತ್ ಪರ ಪತ್ರಕರ್ತರು ಇಂದಿರಾ ಗಾಂಧಿಯನ್ನು ಪ್ರಶಂಸಿಸಿದರು. ಇದೇ ಪತ್ರಕರ್ತರಿಗಾಗಿ ಬಳಿಕ ಸೋವಿಯತ್ ಯೂನಿಯನ್ ಕಾಬೂಲ್ ಪ್ರವಾಸವನ್ನು ಏರ್ಪಡಿಸಿತು. ಅವರಿಗೆ ಯಾವುದನ್ನು ತೋರಿಸಬೇಕು ಎಂಬುದಾಗಿ ಸೋವಿಯತ್ ಒಕ್ಕೂಟ ನಿರ್ಧರಿಸಿತ್ತೋ ಅದನ್ನು ತೋರಿಸಲಾಯಿತು. ಪ್ರವಾಸದಿಂದ ವಾಪಸಾದ ಬಳಿಕ ಆ ಪತ್ರಕರ್ತರು, ಊಳಿಗಮಾನ್ಯ ವ್ಯವಸ್ಥೆ ಮತ್ತು ಶೋಷಣೆ ಯಾವ ರೀತಿಯಲ್ಲಿ ಸಮಾಜವಾದ ಮತ್ತು ಸ್ವಾತಂತ್ರಕ್ಕೆ ದಾರಿಮಾಡಿಕೊಟ್ಟಿದೆ ಎಂಬ ಬಗ್ಗೆ ವರದಿಗಳನ್ನು ಬರೆದರು.

1986ರಲ್ಲಿ ನಾನು ಮೊದಲ ಬಾರಿಗೆ ಅಮೆರಿಕಕ್ಕೆ ಹೋದೆ. ಅದಕ್ಕಾಗಿ ಕೊಲ್ಕತಾದಲ್ಲಿರುವ ಅಮೆರಿಕದ ಕೌನ್ಸುಲೇಟ್ ಕಚೇರಿಯಿಂದ ವೀಸಾ ಪಡೆದೆ. ಕೌನ್ಸುಲೇಟ್ ಕಚೇರಿಯಿರುವ ರಸ್ತೆಯ ಹೆಸರು ಮೊದಲು ಹ್ಯಾರಿಂಗ್ಟನ್ ಸ್ಟ್ರೀಟ್ ಎಂಬುದಾಗಿತ್ತು. ಎಡಪಂಥೀಯ ರಾಜ್ಯ ಸರಕಾರವು, ರಸ್ತೆಗಳಲ್ಲಿ ಕೇಳಿಬರುತ್ತಿದ್ದ ‘ಅಮರ್ ನಾಮ್, ತುಮರ್ ನಾಮ್, ವಿಯೆಟ್ನಾಮ್’ ಎಂಬ ಘೋಷಣೆಗಳಿಂದ ಪ್ರೇರಣೆ ಪಡೆದು 1967ರಲ್ಲಿ ಆ ರಸ್ತೆಗೆ ‘ಹೊ ಚಿ ಮಿನ್ ಸರಣಿ’ ಎಂಬುದಾಗಿ ಮರುನಾಮಕರಣ ಮಾಡಿತು.

ಅಮೆರಿಕದ ವಿಶ್ವವಿದ್ಯಾನಿಲಯವೊಂದರಲ್ಲಿ ನಾನು ಕಲಿಸುತ್ತಿದ್ದೆ. ಅಲ್ಲಿ ದೇಶಭ್ರಷ್ಟ ಅಫ್ಘಾನ್ ಸ್ವಾತಂತ್ರ ಹೋರಾಟಗಾರರು ಸಭೆಯೊಂದನ್ನು ಏರ್ಪಡಿಸಿದ್ದರು. ಆ ಸಭೆಗೆ ನಾನು ಹಾಜರಾದೆ. ತಜಿಕಿಸ್ತಾನದ ಹೋರಾಟ ದಂತಕತೆ ಅಹ್ಮದ್ ಶಾ ಮಸೂದ್ ಜೊತೆಗೆ ಗುರುತಿಸಿಕೊಂಡಿದ್ದ ಆ ಸ್ವಾತಂತ್ರ ಹೋರಾಟಗಾರರು ಚೇತೋಹಾರಿ ದೇಶಭಕ್ತರಾಗಿದ್ದರು ಹಾಗೂ ಅತ್ಯಂತ ಜಾತ್ಯತೀತರಾಗಿದ್ದರು. ಆ ಸಭೆಗೆ ಹಾಜರಾದ ಏಕೈಕ ಭಾರತೀಯ ನಾನಾಗಿದ್ದೆ. ಸಭೆಯಲ್ಲಿದ್ದ ಅಫ್ಘಾನಿಸ್ತಾನಿಯೊಬ್ಬರು ನನಗೆ ಹೇಳಿದರು: ‘ಇಂದಿರಾ ಗಾಂಧಿ ನಮ್ಮ ಕೈಬಿಟ್ಟರು. ನಮ್ಮ ದೇಶದ ಮೇಲೆ ಸೋವಿಯತ್ ನಡೆಸಿದ ಆಕ್ರಮಣವನ್ನು ಅವರು ಹೇಗೆ ಬೆಂಬಲಿಸಲು ಸಾಧ್ಯ? ಭಾರತ ಸರಕಾರ ಹೀಗೆ ಮಾಡಲು ಹೇಗೆ ಸಾಧ್ಯ?’ ಇದಕ್ಕೆ ನನ್ನಲ್ಲಿ ಉತ್ತರವಿರಲಿಲ್ಲ.

ಈ ಮಾತನ್ನು ನನಗೆ ಹೇಳಿದ ಅಫ್ಘಾನಿಸ್ತಾನದ ಸ್ವಾತಂತ್ರ ಹೋರಾಟಗಾರ ಎತ್ತರದ ನಿಲುವಿನ ಕಟ್ಟುಮಸ್ತು ದೇಹದ ಮುಂಡಾಸುಧಾರಿ ವ್ಯಕ್ತಿಯಾಗಿದ್ದರು. ಇದನ್ನು ನಾನು ಬರೆಯುತ್ತಿರುವಾಗ ಅವರ ಮುಖವನ್ನು ನಾನು ಸ್ಪಷ್ಟವಾಗಿ ನೋಡುತ್ತಿದ್ದೇನೆ, ಅವರ ಮಾತುಗಳನ್ನೂ ಕೇಳುತ್ತಿದ್ದೇನೆ. ಅವರು ಹೇಳಿದ್ದು ಸರಿ. ಇಂದಿರಾ ನಾಯಕತ್ವದ ಭಾರತವು ಸೋವಿಯತ್ ಯೂನಿಯನ್‌ಗೆ ಬೆಂಬಲ ಕೊಡುವ ಮೂಲಕ ದೊಡ್ಡ ತಪ್ಪು ಮಾಡಿತು. ಅದರ ಬದಲಿಗೆ, ಆಕ್ರಮಣವನ್ನು ಕ್ಷಿಪ್ರವಾಗಿ ಕೊನೆಗೊಳಿಸಲು ನಮ್ಮ ಸರಕಾರವು ಪ್ರಯತ್ನಿಸಬಹುದಾಗಿತ್ತು. ಅಂತಿಮವಾಗಿ, ಭಾರತ ಮತ್ತು ಇತರ ಮಿತ್ರದೇಶಗಳ ಬೆಂಬಲದಿಂದ ಧೈರ್ಯ ಪಡೆದ ಸೋವಿಯತ್ ಯೂನಿಯನ್ ಅಫ್ಘಾನಿಸ್ತಾನದಲ್ಲಿ ಒಂದು ಇಡೀ ದಶಕದ ಕಾಲ ನೆಲೆಸಿತು. ಆ ಅವಧಿಯಲ್ಲಿ ಸೋವಿಯತ್ ಯೂನಿಯನ್ ವಿರುದ್ಧ ಪ್ರತಿರೋಧ ಚಳವಳಿಯೊಂದು ಹುಟ್ಟಿಕೊಂಡಿತು. ಅದು ದಿನೇ ದಿನೇ ಧಾರ್ಮಿಕ ಮತ್ತು ಮೂಲಭೂತವಾದಿ ರೂಪವನ್ನು ಪಡೆದುಕೊಂಡಿತು. ಅದು ಅಂತಿಮವಾಗಿ ಆಂತರಿಕ ಯುದ್ಧಕ್ಕೆ ಕಾರಣವಾಯಿತು ಹಾಗೂ ದೇಶ ಬಿಕ್ಕಟ್ಟಿಗೆ ಸಿಲುಕಿಕೊಂಡಿತು. ಇದು ತಾಲಿಬಾನ್‌ನ ಉದಯಕ್ಕೆ ಹಾದಿಮಾಡಿಕೊಟ್ಟಿತು. ಅಂತಿಮವಾಗಿ ವಿಯೆಟ್ನಾಮ್‌ನಿಂದ ಅಮೆರಿಕನ್ನರು ಪಲಾಯನ ಮಾಡಿದಷ್ಟೇ ಹೀನಾಯವಾಗಿ ಸೋವಿಯತ್ ಆಕ್ರಮಣಕಾರರು ಅಫ್ಘಾನಿಸ್ತಾನದಿಂದ ಕಾಲ್ಕೀಳಬೇಕಾಯಿತು.

2001ರಲ್ಲಿ ಅಮೆರಿಕನ್ನರು ಅಫ್ಘಾನಿಸ್ತಾನದ ಮೇಲೆ ಬಾಂಬ್ ದಾಳಿ ನಡೆಸಿದರು ಹಾಗೂ ಬಳಿಕ ದೇಶದೊಳಕ್ಕೆ ಸೈನಿಕರನ್ನು ಕಳುಹಿಸಿದರು. ಅಮೆರಿಕದ ಈ ದಾಳಿಗೆ ಹಿಂದಿನ ಸೋವಿಯತ್ ದಾಳಿಗಿಂತ ಹೆಚ್ಚಿನ ಸಮರ್ಥನೆಯಿದೆ. ಸೆಪ್ಟಂಬರ್ 11ರಂದು ಅಮೆರಿಕದ ಮೇಲೆ ಭಯೋತ್ಪಾದಕ ದಾಳಿ ನಡೆಸಿದ ಅಲ್ ಖಾಯಿದಕ್ಕೆ ಅಫ್ಘಾನಿಸ್ತಾನದಲ್ಲಿ ಅಧಿಕಾರದಲ್ಲಿದ್ದ ತಾಲಿಬಾನ್ ಆಶ್ರಯ ಹಾಗೂ ಬೆಂಬಲ ನೀಡಿತ್ತು.

2002ರ ಕೊನೆಯ ತಿಂಗಳುಗಳಲ್ಲಿ, ’ನ್ಯೂಯಾರ್ಕ್ ಟೈಮ್ಸ್’ ಪತ್ರಕರ್ತ ಥಾಮಸ್ ಫ್ರೀಡ್‌ಮನ್ ಬೆಂಗಳೂರಿಗೆ ಆಗಮಿಸಿದರು. ಇಬ್ಬರಿಗೂ ಪರಿಚಿತರಾದ ವ್ಯಕ್ತಿಯೊಬ್ಬರ ಮನೆಯಲ್ಲಿ ನಾನು ಅವರನ್ನು ಭೇಟಿ ಮಾಡಿದೆ. ಅಲ್ಲಿ ಅವರು, ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದ ಬಳಿಕ, ಮುಂದೆ ಅಮೆರಿಕವು ಇರಾಕ್ ಮೇಲೆ ಯಾಕೆ ದಾಳಿ ನಡೆಸಬೇಕು ಎನ್ನುವುದಕ್ಕೆ ಸಂಬಂಧಿಸಿ ಎಲ್ಲ ರೀತಿಯ ವಾದಗಳನ್ನು ಮುಂದಿಟ್ಟರು. ಅವರ ನಿಲುವುಗಳನ್ನು ಎಷ್ಟು ಸಾಧ್ಯವೋ ಅಷ್ಟು ನಾನು ವಿರೋಧಿಸಿದೆ. 9/11ರ ದಾಳಿಯಲ್ಲಿ ಇರಾಕ್ ಯಾವುದೇ ಪಾತ್ರವನ್ನು ವಹಿಸಿಲ್ಲ ಎಂದು ನಾನು ಅವರಿಗೆ ಹೇಳಿದೆ. ಇರಾಕ್ ಅಮೆರಿಕದಿಂದ ಅತ್ಯಂತ ಹೆಚ್ಚಿನ ದೂರದಲ್ಲಿದೆ ಹಾಗೂ ಅಲ್ಲಿನ ಸರಕಾರದಿಂದ ಅಮೆರಿಕಕ್ಕೆ ಯಾವುದೇ ರೀತಿಯ ಬೆದರಿಕೆಯಿಲ್ಲ ಎಂದು ನಾನು ಹೇಳಿದೆ. ವಿಯೆಟ್ನಾಮ್‌ನಲ್ಲಿ ಅಮೆರಿಕನ್ನರಿಗೆ ಏನಾಯಿತು ಎನ್ನುವುದನ್ನು ನಾನು ಅವರಿಗೆ ಜ್ಞಾಪಿಸಿದೆ. ಆದರೆ, ತರ್ಕವಾಗಲಿ, ಇತಿಹಾಸವಾಗಲಿ ಅವರನ್ನು ವಿಚಲಿತರಾಗಿಸಲಿಲ್ಲ. ಅವರು ಯುದ್ಧದ ಪ್ರಮುಖ ಬೆಂಬಲಿಗನಾಗಿ ಹೊರಹೊಮ್ಮಿದರು.

ಇರಾಕ್ ಮೇಲೆ ನಡೆಸಿದ ಕಾನೂನುಬಾಹಿರ ಮತ್ತು ಅನೈತಿಕ ಆಕ್ರಮಣವನ್ನು ಸಮರ್ಥಿಸಿಕೊಳ್ಳಲು ಅಮೆರಿಕನ್ನರು, ‘ಇರಾಕ್ ಪರಮಾಣು ಅಸ್ತ್ರಗಳನ್ನು ಹೊಂದಿತ್ತು’ ಎಂಬ ಕಟ್ಟುಕತೆಯನ್ನು ಹೆಣೆದರು.

ವಾಸ್ತವಿಕವಾಗಿ, ಅದೊಂದು ಸೂಪರ್‌ಪವರ್ ದೇಶವೊಂದರ ಪ್ರತಿಷ್ಠೆಯ ಅತ್ಯುಗ್ರ ಪ್ರದರ್ಶನವಾಗಿತ್ತು. ಅದರ ಭೀಕರ ಪರಿಣಾಮಗಳೊಂದಿಗೆ ನಾವು ಈಗಲೂ ಬದುಕುತ್ತಿದ್ದೇವೆ. ಥಾಮಸ್ ಫ್ರೀಡ್‌ಮನ್ ಅಥವಾ ‘ನ್ಯೂಯಾರ್ಕರ್’ನ ಡೇವಿಡ್ ರೆಮ್ನಿಕ್ ಅಥವಾ ಅಂದಿನ ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್- ಈ ಎಲ್ಲರೂ ಇರಾಕ್ ಮೇಲೆ ರಶ್ಯ ನಡೆಸಿದ ಆಕ್ರಮಣ ಹಾಗೂ ಅದರ ನಂತರ ಮಧ್ಯಪ್ರಾಚ್ಯದಲ್ಲಿ ನಡೆದ ಹಲವಾರು ಆಂತರಿಕ ಯುದ್ಧಗಳಲ್ಲಿ ಜನರು ಅನುಭವಿಸಿದ ಅಗಾಧ ಯಾತನೆಯ ಕಾರಣಕರ್ತರಾಗಿದ್ದಾರೆ. ಜಾನ್ ಲೂಯಿಸ್ ಗ್ಯಾಡಿ ಮತ್ತು ನಿಯಾಲ್ ಫರ್ಗ್ಯೂಸನ್ ಮುಂತಾದ ಇತಿಹಾಸಕಾರರೂ ಜನರ ಯಾತನೆಗೆ ಜವಾಬ್ದಾರರಾಗಿದ್ದಾರೆ. ಇದೆಲ್ಲವೂ (ದಾಳಿ ಮತ್ತು ನಂತರದ ಪರಿಣಾಮಗಳು) ನಿಮಗೆ, ನಿಮ್ಮ ದೇಶಕ್ಕೆ ಮತ್ತು ಜಗತ್ತಿಗೆ ಒಳ್ಳೆಯದನ್ನು ತರುತ್ತದೆ ಎಂಬ ಭರವಸೆಯನ್ನು ಈ ಇತಿಹಾಸಕಾರರು ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲು. ಬುಶ್‌ಗೆ ನೀಡಿದ್ದರು.

ಅಮೆರಿಕನ್ನರು ವಿಯೆಟ್ನಾಮ್‌ನಿಂದ 1975ರಲ್ಲಿ ತೆರಳಿದರು. ಅವರು, 28 ವರ್ಷಗಳ ಬಳಿಕ, 2003ರಲ್ಲಿ ಇರಾಕ್ ಮೇಲೆ ದಾಳಿ ನಡೆಸಿದರು. ಸೋವಿಯತ್ ಸೇನೆಯು ಅಫ್ಘಾನಿಸ್ತಾನದಿಂದ 1989ರಲ್ಲಿ ಹೊರ ಹೊರಟಿತು. ಮೂವತ್ತ ಮೂರು ವರ್ಷಗಳ ಬಳಿಕ, 2022ರಲ್ಲಿ ರಶ್ಯ ಸೇನೆಯು ಉಕ್ರೇನ್ ಮೇಲೆ ದಾಳಿ ನಡೆಸಿತು. ಈ ಎರಡೂ ಪ್ರಕರಣಗಳಲ್ಲಿ, ಎರಡು ದಾಳಿಗಳ ನಡುವೆ ಸಾಕಷ್ಟು ಸಮಯ ಕಳೆದುಹೋಗಿದೆ. ಹಾಗಾಗಿ ಸಹಜವಾಗಿಯೇ ಹಿಂದಿನದನ್ನು ಜನರು ಮರೆತಿದ್ದಾರೆ. ಹಿಂದಿನ ದುಸ್ಸಾಹಸಗಳು ಎಷ್ಟು ಕೆಟ್ಟದಾಗಿ ಕೊನೆಗೊಂಡಿವೆ ಎಂಬುದನ್ನು ಜನರು (ಮತ್ತು ನಾಯಕರು) ಮರೆತಿದ್ದಾರೆ. ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿರುವ ಹೊಸ ತಲೆಮಾರಿಗೆ, ಆ ಯುದ್ಧಗಳನ್ನು ದೇಶದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವುದಕ್ಕಾಗಿ ಮಾಡಲಾಗಿತ್ತು ಎಂಬ ಬೋಧನೆಗಳನ್ನು ಮಾಡಿದರೆ ಸಾಕಾಗುತ್ತದೆ.

ಈ ಎರಡು ಪ್ರಕರಣಗಳಲ್ಲಿ ವ್ಯತ್ಯಾಸಗಳಿರುವುದನ್ನೂ ಗಮನಿಸಬೇಕು. ವಿಯೆಟ್ನಾಮ್ ಮತ್ತು ಇರಾಕ್- ಎರಡೂ ದೇಶಗಳು ಭೌಗೋಳಿಕವಾಗಿ ಅಮೆರಿಕದಿಂದ ತುಂಬಾ ದೂರದಲ್ಲಿವೆ. ಆದರೆ, ಅಫ್ಘಾನಿಸ್ತಾನವು ಸೋವಿಯತ್ ಯೂನಿಯನ್ ಜೊತೆಗೆ ಗಡಿ ಹೊಂದಿತ್ತು ಹಾಗೂ ಉಕ್ರೇನ್ ರಶ್ಯನ್ ಫೆಡರೇಶನ್ ಜೊತೆ ಗಡಿ ಹೊಂದಿದೆ. ‘ಅಮೆರಿಕವು ಜಗತ್ತಿನ ಏಕೈಕ ಸೂಪರ್ ಪವರ್ ಆಗಿದೆ ಹಾಗೂ ತನ್ನ ಇಚ್ಛೆಯನ್ನು ಎಲ್ಲಿ ಬೇಕಾದರೂ ಯಾವತ್ತೂ ಹೇರುವ ಅಧಿಕಾರ ತನಗಿದೆ’ ಎಂಬ ಅದರ ಅಹಂಕಾರವು ಇರಾಕ್ ಮೇಲೆ ಅದು ನಡೆಸಿದ ದಾಳಿಗೆ ಕಾರಣವಾಗಿತ್ತು. ಅದೇ ವೇಳೆ, ಜಗತ್ತು ಇನ್ನು ತನಗೆ ಗೌರವಾನ್ವಿತ ಸ್ಥಾನ ಕೊಡುವುದಿಲ್ಲ; ಹಾಗಾಗಿ ತಾನು ಪ್ರಬಲ ಶಕ್ತಿ ಎಂಬುದಾಗಿ ಇನ್ನೊಮ್ಮೆ ಪರಿಗಣಿಸಲ್ಪಡಬೇಕಾದರೆ, ನಿರ್ಣಾಯಕ ಕ್ರಮವೊಂದನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬ ರಶ್ಯದ ಚಿತ್ತಭ್ರಾಂತಿಯೇ ಉಕ್ರೇನ್ ಮೇಲಿನ ದಾಳಿಗೆ ಕಾರಣವಾಗಿದೆ.

ಆದರೆ, ವ್ಯತ್ಯಾಸಗಳಿಗೆ ಹೋಲಿಸಿದರೆ ಸಾಮ್ಯತೆಗಳು ಹೆಚ್ಚಾಗಿವೆ. ಈ ಎಲ್ಲ ನಾಲ್ಕು ದುಸ್ಸಾಹಸಗಳಲ್ಲಿರುವ ಒಂದು ಸಾಮಾನ್ಯ ಅಂಶವೆಂದರೆ, ಇವೆಲ್ಲವೂ ಇನ್ನೊಂದು ಸಾರ್ವಭೌಮ ದೇಶವೊಂದರ ಮೇಲೆ ನಡೆದ ಅಪ್ರಚೋದಿತ ದಾಳಿಗಳಾಗಿವೆ. ಅಮೆರಿಕಕ್ಕೆ ವಿಯೆಟ್ನಾಮ್‌ಗೆ ಅಥವಾ ಬಳಿಕ ಇರಾಕ್‌ಗೆ ಹೋಗುವ ಅಗತ್ಯವಿರಲಿಲ್ಲ. ಹಾಗೆಯೇ, 1979ರಲ್ಲಿ ಸೋವಿಯತ್ ಯೂನಿಯನ್ ಅಫ್ಘಾನಿಸ್ತಾನಕ್ಕೆ ಮತ್ತು ಈಗ ರಶ್ಯ ಉಕ್ರೇನ್‌ಗೆ ಹೋಗುವ ಪ್ರಮೇಯವಿರಲಿಲ್ಲ. ‘ರಾಷ್ಟ್ರೀಯ ಶ್ರೇಷ್ಠತೆ’ಯ ಸಿದ್ಧಾಂತಗಳೇ ಈ ಏಕಪಕ್ಷೀಯ ದಾಳಿಗಳಿಗೆ ಕಾರಣವಾಗಿದೆ. ದೊಡ್ಡ, ಶ್ರೀಮಂತ ಅಥವಾ ಪ್ರಬಲ ಸೇನಾ ಶಕ್ತಿ ಹೊಂದಿರುವ ದೇಶವೊಂದು ಸಣ್ಣ ಹಾಗೂ ಸುಸಜ್ಜಿತ ಸೇನೆಯಿಲ್ಲದ ದೇಶವೊಂದರ ಭೂಭಾಗ ಮತ್ತು ಜನರ ಮೇಲೆ ದಾಳಿ ನಡೆಸುವ ಒಂದು ರೀತಿಯ ದೈವಿಕ ಹಕ್ಕನ್ನು ಹೊಂದಿದೆ ಎನ್ನುವ ನಂಬಿಕೆಯೇ ಈ ಸಿದ್ಧಾಂತವಾಗಿದೆ.

ಹಾಲಿ ಸಂಘರ್ಷವು ಹೇಗೆ ಸಾಗುತ್ತದೆ ಎನ್ನುವುದನ್ನು ಈಗಲೇ ಊಹಿಸಲು ಸಾಧ್ಯವಾಗದು. ರಶ್ಯವು ಉಕ್ರೇನ್‌ನಿಂದ ತನ್ನ ಪಡೆಗಳನ್ನು ಕ್ಷಿಪ್ರವಾಗಿ ವಾಪಸ್ ಪಡೆದುಕೊಳ್ಳಬೇಕು ಎನ್ನುವುದು ಎಲ್ಲ ಪ್ರಜ್ಞಾವಂತರ ಆಶಯ. ಆದರೆ, ಸದ್ಯಕ್ಕೆ ಅದು ಸಂಭವಿಸುವ ಸಾಧ್ಯತೆ ಕಾಣುತ್ತಿಲ್ಲ. ಇನ್ನೊಂದು ಆಘಾತಕಾರಿ ಸಂಗತಿಯೆಂದರೆ, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇರಾಕ್ ಮೇಲೆ ಅಮೆರಿಕ ನಡೆಸಿದ ದಾಳಿಯನ್ನು ಉದಾಹರಿಸಿ ತನ್ನ ಕೃತ್ಯಗಳನ್ನು ಸಮರ್ಥಿಸಿಕೊಂಡಿದ್ದಾರೆ ಹಾಗೂ ಜಾರ್ಜ್ ಡಬ್ಲು. ಬುಶ್ ಮತ್ತು ಅವರ ಬಲಗೈ ಬಂಟರು ಇರಾಕ್‌ನ ಆಡಳಿತದಲ್ಲಿ ತಂದ ಬದಲಾವಣೆಯ ಮಾದರಿಯಲ್ಲೇ ಯುಕ್ರೇನ್‌ನಲ್ಲೂ ಸರಕಾರ ಬದಲಾವಣೆಯ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಪಾಶ್ಚಾತ್ಯ ವೀಕ್ಷಕರು ಇದನ್ನು ಸ್ವೀಕರಿಸಲು ನಿರಾಸಕ್ತಿ ಹೊಂದಿರಬಹುದು ಅಥವಾ ಸ್ವೀಕರಿಸಲು ಅವರಿಗೆ ಸಾಧ್ಯವಾಗದಿರಬಹುದು. ಆದರೆ, ವಿದೇಶಗಳಲ್ಲಿ ಅಮೆರಿಕ ನಡೆಸಿರುವ ಸೇನಾ ಕಾರ್ಯಾಚರಣೆಗಳು, ತನ್ನ ನೆರೆ ದೇಶಗಳಲ್ಲಿ ಸೇನಾ ಹಸ್ತಕ್ಷೇಪ ನಡೆಸಲು ರಶ್ಯಕ್ಕೆ ಮೇಲ್ಪಂಕ್ತಿಯೊಂದನ್ನು ಒದಗಿಸಿದೆ. ಉಕ್ರೇನ್ ಮೇಲೆ ರಶ್ಯದ ದಾಳಿಗೆ ಸಂಬಂಧಿಸಿ ‘ಫೈನಾನ್ಶಿಯಲ್ ಟೈಮ್ಸ್’ನಲ್ಲಿ ಇತ್ತೀಚೆಗೆ ಪ್ರಕಟಗೊಂಡ ಲೇಖನವೊಂದು ಈ ಅಭಿಪ್ರಾಯಕ್ಕೆ ಬಂದಿದೆ: ‘‘ತನ್ನ ಐತಿಹಾಸಿಕ ಭವಿಷ್ಯದ ಮೇಲಿನ ನಂಬಿಕೆಯನ್ನು ಬಲವಾಗಿ ನಂಬಿಕೊಂಡು, ಪುಟಿನ್ ಹೆಚ್ಚು ಶಕ್ತಿಶಾಲಿಯಾಗಿ ಮತ್ತು ಹೆಚ್ಚು ದಿಟ್ಟತನದಿಂದ ವರ್ತಿಸುತ್ತಿದ್ದಾರೆ’’. (https://www.ft.com/content/09c93ff8-13e6-43f6-901a-787483d46866?shareType=nongift) ವಾಸ್ತವಿಕವಾಗಿ, ಇದನ್ನೇ ಜಾರ್ಜ್ ಡಬ್ಲು. ಬುಶ್ ಮತ್ತು 2003ರಲ್ಲಿ ಇರಾಕ್ ಮೇಲೆ ಅವರು ನಡೆಸಿದ ದಾಳಿಯ ಬಗ್ಗೆಯೂ ಹೇಳಬಹುದಾಗಿದೆ.

ರಶ್ಯದ ಇತಿಹಾಸಕಾರರ ಮಾತುಗಳನ್ನು ವ್ಲಾದಿಮಿರ್ ಪುಟಿನ್ ಕೇಳುತ್ತಾರೆಯೇ ಎನ್ನುವುದು ನನಗೆ ಗೊತ್ತಿಲ್ಲ. ಅಫ್ಘಾನಿಸ್ತಾನದಲ್ಲಿ ಸೇನಾ ಸೋಲು ಅನುಭವಿಸಿದ ಬಳಿಕ. ಸೋವಿಯತ್ ಸಾಮ್ರಾಜ್ಯದ ಆತ್ಮವಿಶ್ವಾಸ ಕುಸಿಯಿತು. ಅದರಿಂದಾಗಿ, ಕೆಲವು ಪ್ರಮುಖ ಭಾಗಗಳಲ್ಲಿ ಅದು ತನ್ನ ಅಧಿಕಾರ ಮತ್ತು ಪ್ರಭಾವವನ್ನು ಕಳೆದುಕೊಂಡಿತು. ಬಹುಷಃ ಇದನ್ನು ಯಾರಾದರೂ ಪುಟಿನ್‌ಗೆ ಜ್ಞಾಪಿಸಬೇಕಾಗಿದೆ.

ಅದೂ ಅಲ್ಲದೆ, ಅಮೆರಿಕವು ಇರಾಕ್ ಮೇಲೆ ದಾಳಿ ನಡೆಸಿದ ಬಳಿಕ, ಜಗತ್ತಿನಲ್ಲಿ ಅಮೆರಿಕದ ಸ್ಥಾನವು ಗಣನೀಯವಾಗಿ ದುರ್ಬಲಗೊಂಡಿತು ಎಂಬುದನ್ನೂ ಪುಟಿನ್‌ಗೆ ಜ್ಞಾಪಿಸಬೇಕಾಗಿದೆ. ಈ ಎರಡು ಕೃತ್ಯಗಳಂತೆ, ಉಕ್ರೇನ್ ಮೇಲೆ ರಶ್ಯ ಈಗ ನಡೆಸಿರುವ ದಾಳಿಯೂ ನೈತಿಕವಾಗಿ ತಪ್ಪು ಹಾಗೂ ರಕ್ಷಣಾ ದೃಷ್ಟಿಯಿಂದಲೂ ಜಾಣತನವಲ್ಲದ ನಡೆಯಾಗಿದೆ. ಸೇನಾ ವಿಜಯಕ್ಕಾಗಿ ಹಾತೊರೆಯುತ್ತಿರುವ ಪುಟಿನ್, ಎಲ್ಲ ನಾಶ-ನಷ್ಟಗಳನ್ನು ಅನುಭವಿಸುವುದು ಆಕ್ರಮಣಕ್ಕೊಳಗಾದ ದೇಶ ಮಾತ್ರ ಎಂಬುದಾಗಿ ಯೋಚಿಸಬಹುದು. ಆದರೆ, ಸಂಘರ್ಷವು ಸುದೀರ್ಘ ಕಾಲ ಮುಂದುವರಿದಷ್ಟೂ, ಅದಕ್ಕಾಗಿ ರಶ್ಯ ಮತ್ತು ರಶ್ಯನ್ನರು ತೆರಬೇಕಾದ ಬೆಲೆಯೂ ಹೆಚ್ಚುವುದು.

ವಿಯೆಟ್ನಾಮ್, ಅಫ್ಘಾನಿಸ್ತಾನ, ಇರಾಕ್ ಮತ್ತು ಈಗ ಉಕ್ರೇನ್. ಸಾಕಷ್ಟು ಕಾಲಾಂತರಗಳಲ್ಲಿ ಈ ನಾಲ್ಕು ದಾಳಿಗಳು ಸಂಭವಿಸಿವೆ. ಹಾಗಾಗಿ, ಅವುಗಳು ವಿಭಿನ್ನ ಎಂಬಂತೆ ಕಂಡುಬರಬಹುದು. ಆದರೆ, ಬಹುಷಃ ಭವಿಷ್ಯದ ಇತಿಹಾಸಕಾರರು ಅವುಗಳೆಲ್ಲವನ್ನೂ ಸಂಪರ್ಕಿಸುವ ರೇಖೆಯೊಂದನ್ನು ಎಳೆಯಬಹುದು. ತಾವು ‘ಬೃಹತ್ ಶಕ್ತಿ’ ಎಂಬ ಅಮೆರಿಕ ಮತ್ತು ರಶ್ಯಗಳ ಚಿತ್ತಭ್ರಾಂತಿಗೆ ಇಡೀ ಜಗತ್ತು, ಅದರಲ್ಲೂ ಮುಖ್ಯವಾಗಿ ಆ ನಾಲ್ಕು ದೇಶಗಳು ಭಯಾನಕ ಬೆಲೆಯನ್ನು ತೆತ್ತಿವೆ

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News

ಸಂವಿಧಾನ -75